ಇಂದು ಅಂತಾರಾಷ್ಟ್ರೀಯ ಮಹಿಳಾ ದಿನ. ಈ ವಿಶೇಷ ದಿನದ ಅಂಗವಾಗಿ ನೆಟ್ಫ್ಲಿಕ್ಸ್ ಓಟಿಟಿ ಪ್ಲಾಟ್ಫಾರ್ಮ್ ವೆಬ್ ಸರಣಿ, ಸಿನಿಮಾಗಳ ಸ್ತ್ರೀ ಪಾತ್ರಗಳು ಮತ್ತು ಕಲಾವಿದೆಯರನ್ನು ಗುರುತಿಸಿ ಸೆಲೆಬ್ರೇಟ್ ಮಾಡುತ್ತಿದೆ.
ಸ್ಟ್ರೀಮಿಂಗ್ ಸರ್ವೀಸಸ್ಗಳು ನಿಸ್ಸಂಶಯವಾಗಿ ಸಿನಿಮಾ ಮತ್ತು ಕತೆ ಹೇಳುವ ರೀತಿಯನ್ನು ರೀಡಿಫೈನ್ ಮಾಡಿವೆ. ಸ್ತ್ರೀ ಪ್ರಧಾನ ಕತೆ, ನಟಿಯರ ವೆಬ್ ಸರಣಿಗಳು ಮಹಿಳೆಯರಿಗೆ ಪ್ರೇರಣೆಯಾಗಿವೆ. ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ನೆಟ್ಫ್ಲಿಕ್ಸ್ ವೆಬ್ ಸರಣಿ ಮತ್ತು ಸಿನಿಮಾಗಳ ನಟಿಯರು ಹಾಗೂ ಅಲ್ಲಿನ ಪ್ರಭಾವಶಾಲಿ ಸ್ತ್ರೀ ಪಾತ್ರಗಳನ್ನು ನೆನಪು ಮಾಡುತ್ತಾ ಸೆಲೆಬ್ರೇಟ್ ಮಾಡುತ್ತಿದೆ. ‘ಹರ್ ಕಹಾನಿ ಹೈ ಜರೂರಿ’ ಶೀರ್ಷಿಕೆಯಡಿ ತಯಾರಾಗಿರುವ ಶೋ ಸ್ಟ್ರೀಮ್ ಆಗುತ್ತಿದೆ. ಇಲ್ಲಿ ನೆಟ್ಫ್ಲಿಕ್ಸ್ ಶೋಗಳು ಮಾತ್ರವಲ್ಲದೆ ಇತರೆ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳ ಸರಣಿ, ನಟಿಯರೂ ಇದ್ದಾರೆ ಎನ್ನುವುದು ವಿಶೇಷ.
ಮಾಧುರಿ ದೀಕ್ಷಿತ್, ನೀನಾ ಗುಪ್ತಾ, ಶ್ವೇತಾ ತ್ರಿಪಾಠಿ, ಮಸಬಾ ಗುಪ್ತಾ, ತಾಪ್ಸಿ ಪನ್ನು, ತಾಹಿರಾ ಕಶ್ಯಪ್, ಕುಶಾ ಕಪಿಲ, ಪ್ರಜಾಕ್ತಾ ಕೋಲಿ, ಮೃಣಾಲ್ ಠಾಕೂರ್, ಅಮೃತಾ ಸುಭಾಷ್, ಸರ್ವೀನ್ ಚಾವ್ಲಾ, ಸರಿತಾ ಪಾಟೀಲ್ ಸೇರಿದಂತೆ ಹಲವರು ವೀಡಿಯೋದಲ್ಲಿದ್ದಾರೆ. ಈ ವೀಡಿಯೋದಲ್ಲಿ, ಅವರ ಫೇವರಿಟ್ ಸ್ತ್ರೀ ಪಾತ್ರಗಳ ಬಗ್ಗೆ ಪ್ರಶ್ನಿಸಲಾಗುತ್ತದೆ. ಹಲವರು ಉತ್ತರಿಸಿದಾಗ, ಕೆಲವು ಉತ್ತರಗಳನ್ನು ‘ಬೀಪ್’ ಮಾಡಲಾಗುತ್ತದೆ. ಅವು ಇತರೆ ಸ್ಟ್ರೀಮಿಂಗ್ ಸರ್ವೀಸಸ್ಗಳ ಹೆಸರುಗಳು. ಶೋನ ಕಂಟೆಂಟ್ ಹೆಡ್ ಈ ‘ಬೀಪ್’ ಶಬ್ಧಗಳನ್ನು ತೆಗೆಯುವಂತೆ ವೀಡಿಯೋ ಎಡಿಟರ್ಗೆ ಸೂಚಿಸುತ್ತಾರೆ. ಈ ಮೂಲಕ ಯಾವುದೇ ಸ್ಟ್ರೀಮಿಂಗ್ ಸರ್ವೀಸಸ್ಗಳ ಗ್ರೇಟ್ ಸ್ಟೋರಿಗಳು ವೀಕ್ಷಕರಿಗೆ ಮಾದರಿಯಾಗಲಿ ಎನ್ನುವ ಸಂದೇಶ ರವಾನೆಯಾಗುತ್ತದೆ. ನೆಟ್ಫ್ಲಿಕ್ಸ್ನ ಈ ಕಾನ್ಸೆಪ್ಟ್ ವೀಕ್ಷಕರಿಗೆ ಇಷ್ಟವಾಗಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ನಡೆಸಿದ ಫೋಟೊಶೂಟ್ ಅನ್ನು ನೆಟ್ಫ್ಲಿಕ್ಸ್ ಹಂಚಿಕೊಂಡಿದೆ. ‘ಮೊದಲು ಕಥಾನಾಯಕನಿಗೆ ಪೂರಕವಾಗಿ ಸ್ತ್ರೀ ಪಾತ್ರಗಳು ರಚನೆಯಾಗುತ್ತಿದ್ದವು. ಈಗ ಓಟಿಟಿ ಕಂಟೆಂಟ್ನಲ್ಲಿ ಮಹಿಳೆ ಕತೆಯ ಭಾಗವಲ್ಲ, ಆಕೆಯೇ ಕತೆ. ಸ್ತ್ರೀ ಕೇಂದ್ರಿತ ಕತೆಗಳು ಮುಂಚೂಣಿಗೆ ಬಂದಿವೆ. ಕ್ರಿಯಾಶೀಲ ಮಹಿಳೆಯರು ಓಟಿಟಿ ವೇದಿಕೆಗಳಲ್ಲಿ ಬರವಣಿಗೆ, ನಿರ್ದೇಶನ ಹಾಗೂ ಇತರೆ ತಾಂತ್ರಿಕ ವಿಭಾಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೇಳಲೇಬೇಕಾದ ಕತೆಯನ್ನು ನಾವೆಲ್ಲರೂ ಸೆಲೆಬ್ರೇಟ್ ಮಾಡಬೇಕಿದೆ. ಈ ಸರಣಿ, ಸಿನಿಮಾಗಳು ಯಾವ ಸ್ಟ್ರೀಮಿಂಗ್ ಸರ್ವೀಸಸ್ಗಳಲ್ಲಿವೆ ಎನ್ನುವುದು ಮುಖ್ಯವಲ್ಲ – ಹರ್ ಕಹಾನಿ ಹೈ ಜರೂರಿ” ಎಂದು ನೆಟ್ಫ್ಲಿಕ್ಸ್ ಹೇಳಿಕೊಂಡಿದೆ.