ಪ್ರತಿಷ್ಠಿತ ಕದಂಬ ವಂಶದ ಉತ್ತರಾಧಿಕಾರಿ ಚಿರಂಜೀವಿ ಹಾಗೂ ಸಾಧಾರಣ ಕುಟುಂಬದ ಯುವತಿ ಮೈತ್ರಿ ನಡುವಿನ ಪ್ರೇಮದ ಕತೆ ‘ನೂರು ಜನ್ಮಕೂ’. ಈ ಲವ್‌ಸ್ಟೋರಿಯಲ್ಲಿ ಅತಿಮಾನುಷ ಶಕ್ತಿ, ಅವುಗಳನ್ನು ಹಿಮ್ಮಟ್ಟುವ ದೈವದ ಸನ್ನಿವೇಶಗಳಿವೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೇ ಡಿಸೆಂಬರ್ 23ರಿಂದ ನೂತನ ಧಾರಾವಾಹಿ ‘ನೂರು ಜನ್ಮಕೂ’ ಮೂಡಿಬರಲಿದೆ.
ಕಲರ್ಸ್ ಕನ್ನಡ ವಾಹಿನಿಯಿಂದ ನೂತನ ಧಾರಾವಾಹಿ ‘ನೂರು ಜನ್ಮಕೂ’ ಮೂಡಿಬರಲಿದೆ. ಶ್ರವಂತ್ ರಾಧಿಕಾ ನಿರ್ದೇಶನದ ಧಾರಾವಾಹಿಯಲ್ಲಿ ಹೆಸರಾಂತ ನಟನಟಿಯರ ದಂಡೇ ಇದೆ. ‘ಗೀತಾ’ ಧಾರಾವಾಹಿಯಿಂದ ಜನಪ್ರಿಯತೆ ಗಳಿಸಿದ ಧನುಷ್ ಗೌಡ, ಹಿರಿಯ ನಟಿ ಗಿರಿಜಾ ಲೋಕೇಶ್, ಭಾಗ್ಯಶ್ರೀ, ಬಿ ಎಂ ವೆಂಕಟೇಶ್, ಗಾಯಕಿ ಅರ್ಚನಾ ಉಡುಪ ಮುಖ್ಯಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇವರ ಜೊತೆಗೆ ‘ಮಜಾ ಟಾಕೀಸ್’ ಖ್ಯಾತಿಯ ರೆಮೋ ಕೂಡ ಇರಲಿದ್ದಾರೆ. ನಟಿ ಚಿತ್ರಾ ಶೆಣೈ ತಮ್ಮ ಗುಡ್ ಕಂಪನಿ ಸಂಸ್ಥೆಯಿಂದ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ‘ಇದೊಂದು ಉತ್ಕಟ ಪ್ರೇಮಕತೆ. ಪ್ರತಿಷ್ಠಿತ ಕದಂಬ ವಂಶದ ಉತ್ತರಾಧಿಕಾರಿ ಚಿರಂಜೀವಿ ಮತ್ತು ಸಾಧಾರಣ ಕುಟುಂಬದ ಹುಡುಗಿಯ ನಡುವಿನ ಪ್ರೇಮದ ಕತೆ. ಚಿರಂಜೀವಿ ಅತಿಮಾನುಷ ಶಕ್ತಿಗಳ ಹಿಡಿತಕ್ಕೆ ಸಿಕ್ಕು ನಲುಗುವಾಗ ರಾಘವೇಂದ್ರಸ್ವಾಮಿಯ ಪರಮಭಕ್ತೆಯಾದ ಮೈತ್ರಿ ತನ್ನ ಶ್ರದ್ಧೆ ಹಾಗೂ ನಂಬಿಕೆಗಳ ಮುಖಾಂತರ ಅವನನ್ನು ರಕ್ಷಿಸಲು ಪಣತೊಡುತ್ತಾಳೆ. ಚಿರಂಜೀವಿಯ ಜೀವ ಕಾಪಾಡುತ್ತಲೇ ತಮ್ಮ ಪ್ರೀತಿಯನ್ನೂ ಉಳಿಸಿಕೊಳ್ಳುತ್ತಾಳೆ’ ಎಂದು ಧಾರಾವಾಹಿ ಕುರಿತು ಹೇಳುತ್ತಾರೆ ನಿರ್ದೇಶಕ ಶ್ರವಂತ್ ರಾಧಿಕಾ.
ಚಿಕ್ಕಮಗಳೂರಿನ ಸುಂದರ ಪ್ರಕೃತಿಯ ಹಿನ್ನೆಲೆಯಲ್ಲಿ ಧಾರಾವಾಹಿಯನ್ನು ಚಿತ್ರೀಕರಿಸಲಾಗಿದೆ. ”ನೂರು ಜನ್ಮಕೂ’ ಮಾನವೀಯ ಅಂತಃಕರಣ ಹಾಗೂ ಅತಿಮಾನುಷ ಶಕ್ತಿಗಳ ಅಟ್ಟಹಾಸವನ್ನು ಮುಖಾಮುಖಿಯಾಗಿಸುತ್ತದೆ. ಹಾಗಾಗಿ ರೋಚಕ ತಿರುವುಗಳನ್ನು ಪಡೆಯುತ್ತಾ ವೀಕ್ಷಕರನ್ನು ರಂಜಿಸಲಿದೆ’ ಎನ್ನುವುದು ನಿರ್ಮಾಪಕಿ ಚಿತ್ರಾ ಶೆಣೈ ಅವರ ಮಾತು. ಇದೇ ಡಿಸೆಂಬರ್ 23ರಿಂದ ಪ್ರತಿದಿನ ರಾತ್ರಿ 8.30ಕ್ಕೆ ಧಾರಾವಾಹಿ ಪ್ರಸಾರ ಆರಂಭಿಸಲಿದೆ.