ವರ್ಷಗಳ ನಂತರ ಮಾಲಾಶ್ರೀ ನಟಿಸಿರುವ ‘ಮಾರಕಾಸ್ತ್ರ’ ಸಿನಿಮಾ ಇಂದು ತೆರೆಕಂಡಿದೆ. ಪರಿಸರ ಕಾಳಜಿ ಕುರಿತ ‘ಜಲಪಾತ’, ಕರಾವಳಿ ನೇಟಿವಿಟಿಯ ‘ಕುದ್ರು’, ಕೃಷ್ಣ ನಾಡ್ಪಾಲ್‌ ನಿರ್ದೇಶನದ ‘ವೇಷ’ ಇಂದು ಥಿಯೇಟರ್‌ಗೆ ಬಂದಿರುವ ಇತರೆ ಕನ್ನಡ ಸಿನಿಮಾಗಳು. ಪ್ರೇಮಕತೆಯ ‘ಮಧುರಪುಡಿ ಗ್ರಾಮಂ ಆನೆ ನೇನು’, ಥ್ರಿಲ್ಲರ್‌ ‘ತಂತಿರಾಮ್‌’ ತೆಲುಗು ಸಿನಿಮಾಗಳು ಇಂದು ತೆರೆಕಂಡಿವೆ.

ಮಾರಕಾಸ್ತ್ರ | ಕನ್ನಡ | ಚಿತ್ರದಲ್ಲಿ ಮಾಲಾಶ್ರೀ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಬ್ಲಾಕ್‌ ಮ್ಯಾಜಿಕ್‌ ಮೂಲಕ ಜನಸಾಮಾನ್ಯರಿಗೆ ಕಿರುಕುಳ ನೀಡುವ ಗುಂಪಿನ ವಿರುದ್ದ ಆಕ್ಷನ್‌-ಕ್ವೀನ್‌ ಮಾಲಾಶ್ರೀ ಹೇಗೆ ಹೋರಾಡಿದ್ದಾರೆ ಎನ್ನುವುದು ಚಿತ್ರದ ಕಥಾವಸ್ತು. ಸಸ್ಪೆನ್ಸ್‌, ಥ್ರಿಲ್ಲರ್, ಆಕ್ಷನ್‌ ಜಾನರ್‌ ಸಿನಿಮಾ ಎನ್ನುತ್ತಾರೆ ಚಿತ್ರದ ನಿರ್ದೇಶಕ ಗುರುಮೂರ್ತಿ ಸುನಾಮಿ. ಮಾಲಾಶ್ರೀ ಅವರು ವರ್ಷಗಳ ಬಳಿಕ ಈ ಚಿತ್ರದ ಮೂಲಕ ನಟನೆಗೆ ಮರಳಿದ್ದಾರೆ. ನಟರಾಜ್‌ ನಿರ್ಮಾಣದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಆನಂದ್‌ ಆರ್ಯ, ಹರ್ಷಿಕಾ ಪೂಣಚ್ಚ, ಉಗ್ರಂ ಮಂಜು, ಭಗತ್‌ ಸಿಂಗ್‌ ಇದ್ದಾರೆ. ಮಂಜು ಕವಿ ಸಂಗೀತ ಸಂಯೋಜಿಸಿದ್ದಾರೆ.

ಕುದ್ರು | ಕನ್ನಡ | ಕರಾವಳಿಯ ಸಂಸ್ಕ್ರತಿ, ಯಕ್ಷಗಾನ, ಹುಲಿ ಕುಣಿತ ಸೇರಿದಂತೆ ಆ ಭಾಗದ ಆಚರಣೆ, ನೇಟಿವಿಟಿಯನ್ನು ಚಿತ್ರದಲ್ಲಿ ನೋಡಬಹುದು. ಎರಡು ವಿಭಿನ್ನ ಧರ್ಮಗಳ ಕುಟುಂಬಗಳ ಮಧ್ಯೆ ಏರ್ಪಡುವ ಕಲಹ, ಮನಸ್ತಾಪ, ದುಃಖವನ್ನು ಕತೆ ಪ್ರಸ್ತುತ ಪಡಿಸುತ್ತಿದೆ. ಭಾಸ್ಕರ್‌ ನಾಯಕ್‌ ನಿರ್ದೇಶನ, ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಹರ್ಷಿತ್‌ ಶೆಟ್ಟಿ, ಫರ್ಹಾನ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಜಲಪಾತ | ಕನ್ನಡ | ಜಲದುರ್ಗ ಎಂಬ ಕರಾವಳಿ ಸಮೀಪದ ಹಳ್ಳಿಯೊಂದರಲ್ಲಿ ನಡೆಯುವ ಘಟನೆಗಳ ಸುತ್ತ ಕತೆ ಹೆಣೆಯಲಾಗಿದೆ. ಅಲ್ಲಿನ ಮುಖಂಡರುಗಳು ಪಂಚಾಯತಿ ನಡೆಸುವ ಸಂದರ್ಭದಲ್ಲಿ ಸ್ಥಳೀಯ ಪ್ರತಿಷ್ಠಿತ ಜೋಡಿದಾರ್‌ ಕುಟುಂಬಗಳ ಭೂಮಿ ಜಗಳವನ್ನು ತೋರಿಸಲಾಗಿದೆ. ವಿದೇಶದಿಂದ ಭಾರತಕ್ಕೆ ಮರಳುವ ಅದೇ ಕುಟುಂಬದ ಯುವಕನೊಬ್ಬನಿಗೆ ವಿರೋಧಿ ಕುಟುಂಬದ ಯುವತಿಯ ಮೇಲಾಗುವ ಪ್ರೇಮದಿಂದ ಅದು ಕಲಹವಾಗಿ ಮಾರ್ಪಡುತ್ತದೆ. ಮುಂದೇನಾಗಲಿದೆ ಎನ್ನುವುದು ಚಿತ್ರದ ಕತೆ. ಚಿತ್ರದಲ್ಲಿ ಮಲೆನಾಡ ಭಾಷಾ ಸೊಗಡು ಇದೆ. ರಮೇಶ್‌ ಬೇಗಾರ್‌ ಚಿತ್ರ ನಿರ್ದೇಶಿಸಿದ್ದಾರೆ. ಪ್ರಮೋದ್‌ ಶೆಟ್ಟಿ, ರಜನೀಶ್‌, ನಾಗಶ್ರೀ ಬೇಗಾರ್‌, ಚಂದ್ರಶೇಖರ್‌, ರವಿಕುಮಾರ್‌, ರೇಖಾ ಪ್ರಮುಖ ಪಾತ್ರಧಾರಿಗಳು. ರವೀಂದ್ರ ತುಂಬರಮನೆ ಚಿತ್ರ ನಿರ್ಮಿಸಿದ್ದಾರೆ.

https://youtu.be/mi2sSum9JQg

ವೇಷ | ಕನ್ನಡ | ಚಿತ್ರವು ಪ್ರೀತಿ ಮತ್ತು ಪ್ರತೀಕಾರದ ಕಥೆಯಾಗಿದ್ದು, ಸಿನಿಮಾದ ನಾಯಕ-ನಾಯಕಿ ಇಬ್ಬರಿಗೂ ಅವರ ಪ್ರೀತಿಗೆ ಕುಟುಂಬದಿಂದ ಸಹಕಾರ ಸಿಗದೇ ಪರಸ್ಪರ ದೂರಾಗುತ್ತಾರೆ. ನಂತರ ನಾಯಕ ಇದರ ವಿರುದ್ದ ಹೇಗೆ ಪ್ರತೀಕಾರ ತೀರಿಸಿಕೊಳ್ಳುತ್ತಾನೆಂಬುದು ಸಿನಿಮಾದಲ್ಲಿದೆ. ‘ಮಜಾ ಭಾರತ’ ಕಿರುತೆರೆ ಕಾರ್ಯಕ್ರಮದ ಖ್ಯಾತ ಕಲಾವಿದರಾದ ಪ್ರಿಯಾಂಕ ಕಾಮತ್‌ ಮತ್ತು ಮಂಜು ಪಾವಗಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. Hamsini Creations ಬ್ಯಾನರ್ ಅಡಿ ರಾಘವೇಂದ್ರ ಡಿಜಿ ಅವರೇ ನಿರ್ಮಿಸಿ ನಾಯಕನಾಗಿ ನಟಿಸಿದ್ದಾರೆ. ಕೃಷ್ಣ ನಾಡ್ಪಾಲ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ನಿಧಿ ಮಾರೋಲಿ, ಸೌಖ್ಯ ಗೌಡ, ಶಿಲ್ಪಾ ಕುಮಟಾ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಮಧುರಪುಡಿ ಗ್ರಾಮಂ ಆನೆ ನೇನು | ತೆಲುಗು | ಈ ಸಿನಿಮಾವು ಹಳ್ಳಿಯೊಂದರ ಪ್ರೇಮಕಥಾಹಂದರ ಹೊಂದಿದೆ. ಚಿತ್ರದ ನಾಯಕ ಶಿವಕಾಂತನೇನಿ ಮತ್ತು ನಾಯಕಿ ಕ್ಯಾತಲಿನ್ ನಡುವಿನ ಪ್ರೀತಿಗೆ ವಿರೋಧ ವ್ಯಕ್ತಪಡಿಸುವ ಆ ಹಳ್ಳಿಯ ಜನರು ಅವರ ಮಧ್ಯೆ ಕ್ರೂರವಾಗಿ ನಡೆದುಕೊಳ್ಳುತ್ತಾರೆ. ನಾಯಕ ಈ ಘಟನೆಯಿಂದ ಬೇಸತ್ತು ಇವರಿಗೆ ವಿರೋಧ ವ್ಯಕ್ತಪಡಿಸಿದ ಒಬ್ಬಬ್ಬರನ್ನೇ ಕ್ರೂರವಾಗಿ ಕೊಲ್ಲುತ್ತಾ ಬರುತ್ತಾನೆ. ಈ ಚಿತ್ರವನ್ನು ಮಲ್ಲಿ ನಿರ್ದೇಶಿಸಿದ್ದು, Light House Cine Magic ಬ್ಯಾನರ್‌ ಅಡಿಯಲ್ಲಿ ಕೆ ಎಸ್ ಶಂಕರ ರಾವ್, ಆರ್ ವೆಂಕಟೇಶ್ವರ ರಾವ್ ನಿರ್ಮಿಸಿದ್ದಾರೆ. ಮಣಿ ಶರ್ಮಾ ಸಂಗೀತ ಸಂಯೋಜಿಸಿದ್ದು, ಗೌತಮ್ ರಾಜು ಸಂಕಲನ, ಸುರೇಶ್ ಭಾರ್ಗವ್ ಛಾಯಾಗ್ರಣವಿದೆ.

ತಂತಿರಾಮ್ | ತೆಲುಗು | ಮಾಂತ್ರಿಕ, ಆಧ್ಯಾತ್ಮಿಕ ಶಕ್ತಿಗಳ ಕುರಿತಾದ ಕತೆಯ ಸಿನಿಮಾ. ಆಚಾರ್ಯ ಸುಧರ್ಮನ್ (ಸಿದ್ಧಿಕ್) ಒಬ್ಬ ನಿಗೂಢ ಸಂತ. ಅವನು ಮಂತ್ರಗಳು ಮತ್ತು ಪೂಜೆಯ ಮೂಲಕ ತನ್ನ ಅಲೌಕಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾನೆ. ವಿಕ್ರಮಶಿಲಾ ಎಂಬ ಭಯಾನಕವಾದ ದೊಡ್ಡ ಏಕಾಂಗಿ ಪರ್ವತದ ತುದಿಯಲ್ಲಿ ಇವನು ವಾಸಿಸುತ್ತಿರುತ್ತಾನೆ. ಕಥೆಯಲ್ಲಿ ಆಗ ತಾನೆ ಮದುವೆಯಾಗಿದ್ದ ಜೋಡಿಗಳಿಬ್ಬರು ಇದರಿಂದ ಬೇರೆಯಾಗಿ ನೋವು, ಸಂಕಟ ಅನುಭವಿಸುತ್ತಾರೆ. ಮುಂದೇನಾಗಲಿದೆ ಎಂದು ಸಿನಿಮಾ ತೋರಿಸಲಿದೆ. ಈ ಚಿತ್ರವನ್ನು ಮುತ್ಯಾಲ ಮೆಹರ್ ದೀಪಕ್ ನಿರ್ದೇಶಿಸಿದ್ದು, Cinema Bandi Productions ಬ್ಯಾನರ್‌ ಅಡಿ ಶ್ರೀಕಾಂತ್ ಕಂಡ್ರೆಗುಲ ನಿರ್ಮಿಸಿದ್ದಾರೆ. ಶಾಬಾಜ್ ಎಂ ಎಸ್, ವಿನೀತ್ ಪೊನ್ನೂರು ಚಿತ್ರಕಥೆ ಬರೆದಿದ್ದಾರೆ. ಅಜಯ ಅರಸದ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಶ್ರೀಕಾಂತ್ ಗುರ್ರಂ, ಪ್ರಿಯಾಂಕಾ ಶರ್ಮಾ, ಅವಿನಾಶ್ ಯಳಂದೂರು, ಜಿನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಇಂಬಾಮ್‌ | ಮಲಯಾಳಂ | ಯುವ ವ್ಯಂಗ್ಯಚಿತ್ರಕಾರ ನಿಧಿನ್ ಮತ್ತು ಹಳೆಯ ಪ್ರಕಾಶನ ‘ಶಬ್ದಮ್’ ಸಂಸ್ಥೆಯ ಐವತ್ತೈದು ವರ್ಷದ ಮಾಲೀಕ ಕರುಣಾಕರನ್ ಮತ್ತು ಅದೇ ಕಛೇರಿಯ ಲೇಡಿ ಪ್ರೂಫ್-ರೀಡರ್ ಕಾತಂಬರಿಯೊಂದಿಗಿನ ಭಾವನಾತ್ಮಕ ಮತ್ತು ಅನ್ಯೋನ್ಯತೆಯ ಕಥೆಯ ಸುತ್ತ ಕತೆ ಸುತ್ತುತ್ತದೆ. ಈ ಚಲನಚಿತ್ರವನ್ನು ಶ್ರೀಜಿತ್ ಚಂದ್ರನ್ ನಿರ್ದೇಶಿಸಿದ್ದಾರೆ ಮತ್ತು ದೀಪಕ್ ಪರಂಬೋಲ್, ದರ್ಶನ ಸುದರ್ಶನ್, ಲಾಲು ಅಲೆಕ್ಸ್ ಮತ್ತು ಮೀರಾ ವಾಸುದೇವನ್, ಇರ್ಷಾದ್ ಮತ್ತು ಲಾಲ್ ಜೋಸ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. Mampra Cinemas ಬ್ಯಾನರ್‌ ಅಡಿ ಡಾ ಮ್ಯಾಥ್ಯೂ ಮಾಂಪ್ರ ಸಿನಿಮಾ ನಿರ್ಮಿಸಿದ್ದಾರೆ. ಕುರಿಯಾಕೋಸ್ ಫ್ರಾನ್ಸಿಸ್ ಕುಡಸ್ಸೆರಿಲ್ ಸಂಗೀತ ಸಂಯೋಜಿಸಿದ್ದು, ಪಿ ಎಸ್ ಜಯಹರಿ ಹಿನ್ನಲೆ ಸಂಗೀತ ರಚಿಸಿದ್ದಾರೆ.

ಧಕ್‌ ಧಕ್‌ | ಹಿಂದಿ | ನಾಲ್ಕು ಮಹಿಳಾ ಬೈಕ್‌ ರೈಡರ್‌ಗಳ ಯಾನದ ಕಥೆಯ ಸಾರವೇ ಈ ಚಲನಚಿತ್ರ. ಈ ನಾಲ್ವರು ಒಬ್ಬರಿಗಿಂತ ಒಬ್ಬರು ವಿಭಿನ್ನ ಮನಸ್ಥಿತಿ ಹೊಂದಿರುತ್ತಾರೆ. ಇವರು ಜಗತ್ತಿನ ಅತ್ಯಂತ ಎತ್ತರದ ಮೋಟಾರು ಸಂಚರಿಸಬಲ್ಲ ರಸ್ತೆ ಖರ್ದುಂಗ್ಲಾ ಪಾಸ್‌ನಲ್ಲಿ ಬೈಕ್‌ ಓಡಿಸುವ ಸಾಹಸಕ್ಕೆ ಮುಂದಾಗುತ್ತಾರೆ. ರತ್ನ ಪಾಠಕ್ ಷಾ, ಬೈಕರ್ ದಿಯಾಳ ನಾನಿ ಪಾತ್ರದಲ್ಲಿ ನಟಿಸಿದ್ದಾರೆ. ತಮ್ಮದೇ ಶೈಲಿಯಲ್ಲಿ ಹಾಸ್ಯ ಸಂಭಾಷಣೆಗಳನ್ನು ಹೇಳಿ ಎಲ್ಲರನ್ನು ನಗಿಸುತ್ತಿರುತ್ತಾರೆ. ಟ್ರಾವೆಲ್ ಬ್ಲಾಗರ್ ಸ್ಕೈ ಪಾತ್ರವನ್ನು ಫಾತಿಮಾ ಸನಾ ಶೇಖ್ ನಿರ್ವಹಿಸಿದ್ದಾರೆ. ಪಾರಿಜಾತ ಜೋಶಿ ಮತ್ತು ತರುಣ್ ದುಡೇಜಾ ಸಿನಿಮಾಗೆ ಚಿತ್ರಕಥೆ ಬರೆದಿದ್ದು, Viacom18 Media ಬ್ಯಾನರ್‌ ಅಡಿಯಲ್ಲಿ ಕೆವಿನ್ ವಾಜ್, ಅಜಿತ್ ಅಂಧಾರೆ, ತಾಪ್ಸಿ ಪನ್ನು, ಪ್ರಾಂಜಲ್ ಖಂಡಿಯಾ, ಆಯುಷ್ ಮಹೇಶ್ವರಿ ಸಿನಿಮಾ ನಿರ್ಮಿಸಿದ್ದಾರೆ.

ಭಗವಾನ್ ಭರೋಸೆʼ | ಹಿಂದಿ | ಏಷ್ಯನ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ‘ಫ್ಲೇಮ್ ಪ್ರಶಸ್ತಿ’ ಪಡೆದುಕೊಂಡ ಚಲನಚಿತ್ರವಿದು. ಚಿತ್ರವು ಇಬ್ಬರು ಅಸಾಧಾರಣ ಪ್ರತಿಭೆ ಹೊಂದಿರುವ ಬಾಲಕರ ಸುತ್ತ ಸುತ್ತುತ್ತದೆ. ಅವರ ನೆರೆ ಹೊರೆಯವರು ಅವರ ನಂಬಿಕೆ ಮತ್ತು ವಿಭಿನ್ನ ಆಲೋಚನೆಗಳನ್ನು ನಿರಂತರವಾಗಿ ಪ್ರಶ್ನಿಸಿ ಅವರಿಗೆ ನೋವು ಮಾಡುತ್ತದೆ. ‘ಕಳೆದುಹೋದ ಬಾಲ್ಯದ ಕಥೆʼ (A Story Of Lost Childhood) ಎಂಬ ಅಡಿಬರಹ ಹೊಂದಿದೆ. ಈ ಚಲನಚಿತ್ರವನ್ನು ಶಿಲಾದಿತ್ಯ ಬೋರಾ ನಿರ್ದೇಶಿಸಿ, ನಟಿಸಿದ್ದಾರೆ. ಸಿನಿಮಾವು ಭಾರತ, ಉತ್ತರ ಅಮೆರಿಕಾ, ಯುಕೆ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ದೇಶಗಳ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. PVR INOX Pictures ವಿತರಣಾ ಸಂಸ್ಥೆಯು ಭಾರತದಲ್ಲಿ ಸಿನಿಮಾ ಬಿಡುಗಡೆ ಮಾಡಲಿದೆ. Rhythm Boyz Entertainment ಸಿನಿಮಾವನ್ನು ವಿಶ್ವದಾದ್ಯಂತ ಪ್ರಸ್ತುತ ಪಡಿಸಲಿದೆ. ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಮಯಾಂಕ್ ಬಾವಾ ಮತ್ತು ಮಹೇಶ್ ಶರ್ಮಾ ನಟಿಸಿದ್ದಾರೆ. ಪ್ರಸನ್ನ ವಿತಾನಗೆ, ಶಿಲಾದಿತ್ಯ ಬೋರಾ, ಮಿಲಪ್‌ಸಿನ್ಹ್ ಜಡೇಜಾ, ಕೆ.ಕೆ.ರಾಧಾಮೋಹನ್, ಸಂಯುಕ್ತಾ ಗುಪ್ತಾ ಮತ್ತು ಶಿಲ್ಪಿ ಅಗರ್ವಾಲ್ ಈ ಸಿನಿಮಾ ನಿರ್ಮಿಸಿದ್ದಾರೆ.

ಗುತ್ಲೀ ಲಾಡೂ | ಹಿಂದಿ | ಚಲನಚಿತ್ರವು ಕಸಗುಡಿಸುವವನ ಮಗನ ಸುತ್ತ ಸುತ್ತುತ್ತದೆ. ಅವನು ಶಾಲೆಯ ತರಗತಿಗಳ ಕಿಟಕಿಯಿಂದಲೇ ಪಾಠ ಕೇಳಿ ಅತ್ಯಂತ ಬುದ್ದಿವಂತ ಬಾಲಕನಾಗಿರುತ್ತಾನೆ. ಹಾಗೂ ಶಾಲೆಗೆ ಹೋಗಲು ಬಯಸುತ್ತಾನೆ. ಆದರೆ ಧಾರ್ಮಿಕ ಮತ್ತು ಸಾಮಾಜಿಕ ಶೋಷಣೆಗಳಿಗೊಳಗಾಗಿ ಸಮಾಜದಲ್ಲಿ ನಿರ್ಭಂಧಿಸಲ್ಪಪಡುತ್ತಾನೆ. ತಾವೂ ಸಹ ಸಮಾಜದ ತಾರತಮ್ಯದ ಕಹಿ ಅನುಭವ ಹೊಂದಿದ್ದ ಒಳ್ಳೇ ಮನಸ್ಸಿನ ಮುಖ್ಯೋಪಾಧ್ಯಾಯರೊಬ್ಬರು ಈ ಹುಡುಗನನ್ನು ಗಮನಿಸಿ. ಆ ಚಿಕ್ಕ ಹುಡುಗನ ಕನಸನ್ನು ನನಸಾಗಿಸುತ್ತಾರೆಯೇ? ಎಂಬುದೇ ಚಿತ್ರಕಥೆ. ಈ ಚಿತ್ರವನ್ನು ಇಶ್ರತ್ ಆರ್ ಖಾನ್ ನಿರ್ದೇಶಿಸಿದ್ದು, Panorama Studios ಬ್ಯಾನರ್‌ನಡಿ ಪ್ರದೀಪ್ ರಂಗವಾನಿ ನಿರ್ಮಿಸಿದ್ದಾರೆ.

LEAVE A REPLY

Connect with

Please enter your comment!
Please enter your name here