ಮಾಲಿವುಡ್‌ನ ಖ್ಯಾತ ನಟ ಮೋಹನ್‌ಲಾಲ್ ಪುತ್ರ ಪ್ರಣವ್ ಅಭಿನಯದ ‘ಹೃದಯಂ’ ಮಲಯಾಳಂ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ವಿನೀತ್ ಶ್ರೀನಿವಾಸನ್ ನಿರ್ದೇಶನದ ಚಿತ್ರದಲ್ಲಿ ಕಲ್ಯಾಣಿ ಪ್ರಿಯದರ್ಶನ್‌ ಮತ್ತು ದರ್ಶನಾ ರಾಜೇಂದ್ರನ್‌ ನಾಯಕಿಯರು. 2022ರ ಜನವರಿಯಲ್ಲಿ ಸಿನಿಮಾ ತೆರೆಗೆ ಬರಲಿದೆ.

“ನನ್ನ ಪುತ್ರನ ಹೊಸ ಸಿನಿಮಾ ‘ಹೃದಯಂ’ ಟೀಸರ್ ಬಿಡುಗಡೆ ಮಾಡಲು ತುಂಬಾ ಖುಷಿಯಾಗುತ್ತಿದೆ. ನನ್ನಂತೆ ನೀವು ಕೂಡ ಈ ಟಿಸರ್ ಇಷ್ಟಪಡುತ್ತೀರಿ ಎನ್ನುವ ವಿಶ್ವಾಸವಿದೆ” ಎನ್ನುವ ಒಕ್ಕಣಿಯೊಂದಿಗೆ ಹಿರಿಯ ನಟ ಮೋಹನ್‌ಲಾಲ್ ‘ಹೃದಯಂ’ ಮಲಯಾಳಂ ಚಿತ್ರದ ಟೀಸರ್ ಟ್ವೀಟ್ ಮಾಡಿದ್ದಾರೆ. ಅವರ ಪುತ್ರ ಪ್ರಣವ್‌ ಚಿತ್ರದ ಹೀರೋ ಆಗಿ ನಟಿಸಿದ್ದು, ಕಲ್ಯಾಣಿ ಪ್ರಿಯದರ್ಶನ್‌ ಮತ್ತು ದರ್ಶನಾ ರಾಜೇಂದ್ರನ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕಲ್ಯಾಣಿ ಪ್ರಿಯದರ್ಶನ್‌ ಅವರು ನಟ ಪ್ರಣವ್‌ಗೆ ಆತನ ರೊಮ್ಯಾಂಟಿಕ್ ಲೈಫ್ ಬಗ್ಗೆ ವಿಚಾರಿಸುವ ಸೀನ್‌ನೊಂದಿಗೆ ಟೀಸರ್ ಶುರುವಾಗುತ್ತದೆ. “ಏನಾದರೂ ವಿಶೇಷ ಇತ್ತೇ?” ಎಂದು ಆಕೆ ಪ್ರಶ್ನಿಸುತ್ತಾಳೆ. ಪ್ರಣವ್‌ ಕಾಲೇಜಿನ ದಿನಗಳ ನೆನಪುಗಳಿಗೆ ಜಾರುತ್ತಾನೆ. ಆಗ ನಟಿ ದರ್ಶನಾ ರಾಜೇಂದ್ರನ್‌ ಜೊತೆಗಿನ ಪ್ರಣವ್‌ ಸನ್ನಿವೇಶಗಳು ಕಾಣಿಸುತ್ತವೆ. ಚೆನ್ನೈನಲ್ಲಿ ಸಿನಿಮಾ ಚಿತ್ರಿಸಲಾಗಿದೆ. ಸಿನಿಮಾ ವೀಕ್ಷಿಸುವ ಪ್ರೇಕ್ಷಕರು ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿ ಕಾಣಿಸುತ್ತವೆ. ವಿನೀತ್‌ ಶ್ರೀನಿವಾಸನ್‌ ನಿರ್ದೇಶನದ ಸಿನಿಮಾ 2022ರ ಜನವರಿಯಲ್ಲಿ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here