ಪ್ರೇಮ ಎಂಬುದು ಸಾಯದೇ ಬೇರೆಯದೇ ಆಗಿ ರೂಪಾಂತರಗೊಂಡು ಬದುಕುತ್ತದಲ್ಲಾ.. ಅದೇ ಈ ಸಿನಿಮಾದ ತಿರುಳು ಮತ್ತು ಗೆಲುವು – ‘ಹೃದಯಂ’
ಮಲಯಾಳಂ ಸಿನಿಮಾ ಡಿಸ್ನೀಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಮಲಯಾಳಂನ ‘ಪ್ರೇಮಂ’, ಕನ್ನಡದ ‘ಕಿರಿಕ್ ಪಾರ್ಟಿ’, ಹಿಂದಿಯ ‘ತ್ರೀ ಈಡಿಯಟ್ಸ್’… ಮಲಯಾಳಂನ ಹೊಸ ಸಿನಿಮಾ ‘ಹೃದಯಂ’ ನೋಡೋವಾಗ ಈ ಎಲ್ಲ ಸಿನಿಮಾಗಳೂ ಅಲ್ಲಲ್ಲಿ ನೆನಪಾಗುತ್ತವೆ. ಪ್ರಣವ್ ಮೋಹನ್ ಲಾಲ್ ನೋಡಲು ಸ್ವಲ್ಪ ನಮ್ ರಕ್ಷಿತ್ ಶೆಟ್ಟಿ ತರವೇ ಕಾಣ್ತಾನೆ. ಅನೇಕ ಕಾಲೇಜು ಸಿನಿಮಾಗಳ ಹಾಗೇ ಇದೂ ಶುರುವಾಗುತ್ತದೆ. ತಮಿಳುನಾಡಿನ ಕಾಲೇಜಿನಲ್ಲಿ ಕಲಿವ ಮಲಯಾಳಂ ಹುಡುಗರು. ಅದೇ ಸೀನಿಯರ್‌ಗಳ ರ್ಯಾಗಿಂಗ್, ನವಿರಾದ ಪ್ರೇಮವೊಂದರ ಮೊಳಕೆ ಇತ್ಯಾದಿ. ಆದರೆ ಆ ಪ್ರೇಮದ ಬ್ರೇಕ್‌ಅಪ್ ಕಾರಣ ಒಂಥರಾ ಚೆನ್ನಾಗಿದೆ. ಅದು ತಪ್ಪು ತಿಳುವಳಿಕೆ ಅಲ್ಲ, ಪ್ರಾಮಾಣಿಕವಾಗಿ ಅವನು ಎದುರಿಗೆ ಚೆಂದದ ಕೆನ್ನೆ ಇತ್ತು, ಹಾಗಾಗಿ ನಾನು ಗರ್ಲ್ ಫ್ರೆಂಡ್ ಇಲ್ಲಾಂತ ಸುಳ್ ಹೇಳಿದೆ ಅನ್ನೋದಿದೆಯಲ್ಲಾ.. ಅದು ಮಾತ್ರ ಸೊಗಸಾದ, ಸಹಜವಾದ ಕಾರಣ ಮತ್ತು ದೃಶ್ಯ.
ಆಮೇಲೂ ಎಲ್ಲ ಸಿನಿಮಾಗಳ ಹಾಗೆ ಅವನು ದೇವದಾಸ್ ಅವತಾರ ತಾಳುತ್ತಾನೆ. ಮನೆಗೆ ಹೋದಾಗ ಗಮನಿಸುವ ಅಪ್ಪ, ಮಗನಿಗೆ ಬುದ್ಧಿ ಹೇಳುವ ದೃಶ್ಯ ಹೃದ್ಯವಾಗಿದೆ. ಮತ್ತೆ ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳೋ ನಾಯಕ ಅರುಣ್, ಸೆಲ್ವಂ ಎಂಬ ಬಡ, ಬುದ್ಧಿವಂತ ಹುಡುಗನ ಸಹಾಯ ಕೇಳುತ್ತಾನೆ. ಸೆಲ್ವಂ ಪಾತ್ರ ಮತ್ತು ಆ ಟೆರೇಸಿನ ಮೇಲೆ ನಡೆವ ಶಿಕ್ಷಣ ಕ್ರಾಂತಿಯ ಅಷ್ಟೂ ದೃಶ್ಯಗಳೂ ಭಾವುಕವೂ, ಸೊಗಸೂ ಆಗಿವೆ. ದರ್ಶನಾ ಎಂಬ ಬ್ರೇಕ್‌ಅಪ್ ಆದ ಹುಡುಗಿ ಮರಳಿ ಬಂದರೂ ಅರುಣ್ ಮರಳಲಾರದಾಗಿರುತ್ತಾನೆ. ಅಲ್ಲಿ ಪ್ರೇಮ ಅಳಿದು ಸ್ನೇಹ ಉಳಿದಿರುತ್ತದೆ.
ಕಾಲೇಜು ಮುಗಿದು ಎಲ್ಲರೂ ಉದ್ಯೋಗಿಗಳಾದಾದ ಎಂಜಿನಿಯರಿಂಗ್ ಬಿಟ್ಟು ಆಕಸ್ಮಿಕವಾಗಿ ಫೊಟೋಗ್ರಫಿಗೆ ಹೋಗುವ ಅರುಣ್ ಅಲ್ಲಿ ಸಿಗುವ ಹುಡುಗಿ, ಮದುವೆ ಸಂಸಾರಸ್ಥ… ಈ ಸಿನಿಮಾ ಒಂದು ಸುಂದರ ಪಯಣದ ಚಿತ್ರಣದಂತಿದೆ. ಎಲ್ಲರಿಗೂ ಅವರವರ ಬದುಕಿನ ಯಾವುದೋ ತುಣುಕು ಈ ಸಿನಿಮಾದ ಒಂದಲ್ಲಾ ಒಂದು ದೃಶ್ಯದಲ್ಲಿ ಕನೆಕ್ಟ್ ಆಗಿಯೇ ಆಗುತ್ತದೆ. ಕೊನೆಗೆ ಜೀವನ ಅಂದ್ರೆ ಹೀಗೇ… ಹೋಗ್ತಾ ಇರಬೇಕು. ಇಷ್ಟೇ.. ಇಲ್ಲಿಗ್ ಮುಗಿದುಹೋಯ್ತು ಅಂತಿರಲ್ಲ ಅದು ಎಂಬ ಸಂದೇಶ ಪರೋಕ್ಷವಾಗಿದೆ ಇದರಲ್ಲಿ. ಪ್ರಣವ್, ದರ್ಶನಾ ಪ್ರಬುದ್ಧವಾಗಿ ನಟಿಸಿದ್ದರೆ, ಕಲ್ಯಾಣಿ ಮುದ್ದುಮುದ್ದಾಗಿಯೇ ಮನಸೆಳೆಯುತ್ತಾಳೆ. ಸೆಲ್ವಂ. ಅರುಣ್ ಸ್ನೇಹಿತ, ಅಡುಗೆಯ ಅಜ್ಜಿ ಎಲ್ಲರೂ ನೆನಪಲ್ಲುಳಿಯುತ್ತಾರೆ.
ಮಗುವಾದ ಕೂಡಲೇ ದರ್ಶನಾಗೆ ಫೋನು ಮಾಡಿ, ಇದನ್ನು ಹೇಳಬೇಕೆನಿಸಿದ್ದು ನಿನಗೆ ಮಾತ್ರ ಅನ್ನುವ ಅರುಣ್, ನಾನು ಮದುವೆಯಾದ್ರೆ ಹೇಗಿರತ್ತೆ? ಇಷ್ಟೇ ಸ್ವಾತಂತ್ರ್ಯ ಇರತ್ತಾ ಅಂತ ಅರುಣನನ್ನು ಕೇಳುವ ದರ್ಶನಾ… ಪ್ರೇಮ ಎಂಬುದು ಸಾಯದೇ ಬೇರೆಯದೇ ಆಗಿ ರೂಪಾಂತರಗೊಂಡು ಬದುಕುತ್ತದಲ್ಲಾ.. ಅದೇ ಈ ಸಿನಿಮಾದ ತಿರುಳು ಮತ್ತು ಗೆಲುವು ಅನಿಸಿತು.