ಟೆಕ್ಸ್ಟ್ ಮೆಸೇಜ್‌ ಟ್ರೆಂಡಿಂಗ್‌ನಲ್ಲಿದ್ದ ಕೀಪ್ಯಾಡ್ ಮೊಬೈಲ್‌ ಕಾಲಘಟ್ಟದ ಕತೆಯಿದು. ಕಾಲ ಮೀರಿದರೂ ಇಲ್ಲಿ ಹೇಳಿರುವ ನಿಜ ಪ್ರೀತಿಯ ಪಯಣ ಆಪ್ತವಾಗುತ್ತದೆ. ‘ಹೃದಯಂ’ ಮಲಯಾಳಂ ಸಿನಿಮಾ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಪ್ರೀತಿ ಒಂದು ರೀತಿಯ ನಿಗೂಢವಾದ ಭಾವನೆ. ಗುಣಿಸಿ ಬಾಗಿಸಿ ಕೂಡಿ ಕಳೆದರೂ ಲೆಕ್ಕಕ್ಕೆ ಸಿಗಲಾರದ್ದು. ಯಾವ ನಿಘಂಟಿನಲ್ಲಿ ಹುಡುಕಿದರೂ ನಿರ್ಧಿಷ್ಟ ಅರ್ಥ ಸಿಗದ ಪದ. ಯಾವ ಅಕ್ಷರಗಳಿಂದಲೂ ಪದಕಟ್ಟಲಾರದ ಕವಿತೆಯಂತೆ. ಹುಟ್ಟಿ ಸಾಯುವ ಮನುಷ್ಯನಲ್ಲಿ ಒಮ್ಮೆ ಹುಟ್ಟಿತೆಂದರೆ ಮತ್ತೆ ಸಾಯಾಲಾರದ್ದು, ಸಾಯಿಸಲಾರದ್ದು ಈ ಪ್ರೀತಿ ಅಂತೇನೇನೊ ಆರ್ಟಿಸ್ಟಿಕ್ಕಾಗಿ ಅಥವಾ ಪೊಯೆಟಿಕ್ಕಾಗಿ ಉದ್ದುದ್ದ ಬರೆದುಬಿಡಬಹುದು. ಆದ್ರೆ ಜೀವನದಲ್ಲಿ ಅದನ್ನು ನಿರ್ವಹಿಸುವುದು ಬಹಳ ಕಷ್ಟ. ಆದ್ರೆ ಈ ‘ಹೃದಯಂ’ ಮಲಯಾಳಂ ಸಿನಿಮಾದಲ್ಲಿ ನಿರ್ದೇಶಕ ವಿನೀತ್‌ ಶ್ರೀನಿವಾಸನ್‌ ಅಧ್ಬುತವಾಗಿ ತಮ್ಮ ಕಥೆಯಲ್ಲಿ ಪಾತ್ರಗಳ ಮುಖೇನ ಇದನ್ನು ನಿರ್ವಹಿಸಿದ್ದಾರೆ.

ತಮಿಳುನಾಡಿನ ಇಂಜಿನಿಯರಿಂಗ್‌ ಕಾಲೇಜೊಂದಕ್ಕೆ ಓದಲು ಮಲಯಾಳಿ ಹುಡುಗರು ಬರುವುದರೊಂದಿಗೆ ಕತೆ ಶುರುವಾಗುತ್ತದೆ. ಕಾಲೇಜು ಕತೆಗಳಲ್ಲಿರಬಹುದಾದ ರ್ಯಾಗಿಂಗ್, ಟೀಸಿಂಗ್‌, ಕ್ಯಾಂಟೀನ್‌ ಕಚ್ಚಾಟ, ಪರೀಕ್ಷೆ ಪಾಸು – ಫೇಲಿನ ಆಚೆಗೂ ಇರಬಹುದಾದ ಜಾಯ್‌ಫುಲ್‌ ಜರ್ನಿಯ ಕತೆಯೊಂದಿಗೆ ಸಾಗಿ ಮುನ್ನಡೆದು, ನಿಜ ಪ್ರೀತಿ ಮತ್ತು ಬದುಕಿನ ಅರ್ಥವನ್ನು ತೆರೆದಿಡುವಂತ ಫೀಲ್‌ ಗುಡ್‌ ಸಿನಿಮಾ. ಇದೂ ಮಾಮೂಲಿ ಅದೇ ಹಳೆಯ ಪ್ರೇಮಕತೆಗಳಂತೆ ಪ್ರೊಪೋಸೂ, ರೊಮ್ಯಾನ್ಸ್‌, ಬ್ರೇಕಪ್‌ ಫೀಲಿಂಗ್‌ನಿಂದಾಚೆಗೆ ಅಲ್ಲೇನೂ ಇರೋಲ್ಲ ಅಂದುಕೊಂಡರೆ ಸುಳ್ಳಾಗಬಹುದು. ಈ ಚಿತ್ರದಲ್ಲಿ ಪ್ರೇಮ ಚಿಗುರುವುದು, ಬೆಳೆಯುವುದು, ಬ್ರೇಕಪ್‌ ಆಗುವುದು, ಮತ್ತೆ ಚಿಗುರುವಂತಹ ಸಹಜತೆಯ ಸನ್ನಿವೇಶಗಳೇ ಬೇರೆ ರೀತಿಯವು.

ಇಲ್ಲಿ ವಿಷಯಗಳನ್ನು ಎಷ್ಟು ಸರಳವಾಗಿಸಿದ್ದಾರೆ, ಪಾತ್ರಗಳು ಎಷ್ಟು ಪ್ರಾಕ್ಟಿಕಲ್ಲಾಗಿ ಮಾತಾಡುತ್ತವೆ ಎನ್ನುವುದರ ಬಗ್ಗೆ ಒಂದು ಉದಾಹರಣೆ ಕೊಡಬಹುದು. ದೃಶ್ಯವೊಂದರಲ್ಲಿ ಹುಡುಗಿಯೊಬ್ಬಳು ತಂದೆಯ ಮುಂದೆ ತನ್ನ ಪ್ರೀತಿಯ ವಿಷಯ ಅರಹುತ್ತಾಳೆ. ಹುಡುಗಿಯ ಅಪ್ಪ, “ಆತನ ಕೆಲಸ ಗ್ಯಾರಂಟಿ ಇಲ್ಲ. ನಾಳೆ ಅವನ ಕೆಲಸ ಇಲ್ಲ ಅಂದರೆ ನಿನ್ನ ಸಾಕೋದಕ್ಕಾಗದೆ ಹೋಗಬಹುದು” ಎಂದು ಬುದ್ದಿ ಹೇಳುತ್ತಾನೆ. ಇವಳು, “ಅವನ್‌ ಯಾಕ್‌ ನನ್ನ ಸಾಕಬೇಕು? ನನ್ನನ್ನು ನಾನೇ ನೋಡ್ಕೋತೀನಿ. ಅವನಿಗೆ ಮುಂದೆ ಅಂತಹ ಪರಿಸ್ಥಿತಿ ಬಂದರೆ ನಾನೇ ಬೇಕಾದ್ರೆ ಅವನನ್ನು ಸಾಕ್ತೀನಿ” ಅಂತಾಳೆ. “ಇಲ್ಲಮ್ಮ ಹೆಣ್ಣು ತನಗಿಂತ ಹೆಚ್ಚು ಸಂಪಾದನೆ ಮಾಡ್ತಾಳೆ ಅನ್ನೋದನ್ನು ಗಂಡು ಸಹಿಸೋಲ್ಲ. ಆ ಕಾಂಪ್ಲೆಕ್ಸ್‌ ಎಲ್ಲಾ ವರ್ಕ್‌ ಆಗಲ್ಲ. ಗಂಡುಮಕ್ಕಳ ಬಗ್ಗೆ ನಿನಗ್‌ ಗೊತ್ತಿಲ್ಲಾ…” ಅಂದರೆ, “ಇಲ್ಲ ಇದು ನಿಮ್ಮ ಜನರೇಷನ್‌ ಥರ ಅಲ್ಲ, ಹಾಗೇನಾದ್ರೂ ಕಾಂಪ್ಲೆಕ್ಸ್‌ ವರ್ಕ್‌ ಆಗ್ಲಿಲ್ಲ ಅಂದ್ರೆ, ಸೆಕೆಂಡ್‌ ಛಾನ್ಸ್‌ ತಗೋತೀನಿ. ಡಿವೋರ್ಸ್‌ ಕೊಟ್ಟು ಬಂದು ನಿನ್ನ ಮನೇಲಿರ್ತೀನಿ” ಎಂದು ತಮಾಷೆಯಾಗಿಯೇ ಕೌಂಟರ್‌ ಕೊಡುತ್ತಾ ಅಪ್ಪನಲ್ಲಿ ಮಾತಾಡಿ ತನ್ನ ಪ್ರೀತಿ ಒಪ್ಪಿಸುತ್ತಾಳೆ.

ಮನೆಗೆ ಬರುವ ಮಗನನ್ನು ಗಮನಿಸುವ ಅಪ್ಪ – ಅಮ್ಮ, ಮಗನೇನೋ ಗೊಂದಲದಲ್ಲಿರಬಹುದು ಎಂದರಿತು ಮಗನಿಗೆ ಬುದ್ಧಿ ಹೇಳುವ ದೃಶ್ಯ ಮತ್ತು ಕಾಲೇಜು ದಿನಗಳಲ್ಲಿ ದರ್ಶನಾಳೊಂದಿಗೆ ಬ್ರೇಕಪ್‌ ನಂತರ ಅರುಣ್‌, ಮಾಯ ಎನ್ನುವ ಹುಡುಗಿಯ ಪ್ರೀತಿಯಲ್ಲಿರುತ್ತಾನೆ. ಆಗ ಮತ್ತೊಮ್ಮೆ ದರ್ಶನಾ ಸಂಧಿಸಿದರೂ ಮತ್ತೆ ಒಂದಾಗಲು ಸಾಧ್ಯವಾಗುವುದಿಲ್ಲ. ಅದನ್ನು ಇಲ್ಲಿ ವಿವರಿಸುವುದು ಅಸಾಧ್ಯವೇ. ಯಾಕೆಂದರೆ ಅವರಿಬ್ಬರ ಪ್ರೀತಿಯ ಘಾಡತೆಯನ್ನು, ಉಳಿಸಿಕೊಳ್ಳುವ ಸಂಬಂಧಗಳನ್ನು, ಬದುಕುವ ರೀತಿಯನ್ನು ನಾವು ಹೇಗೆ ವರ್ಣಿಸಿ ಬರೆದೂ ಅರ್ಥವಾಗದೇ ಉಳಿಯಬಹುದು. ಅದು ಏಕೆ? ಏನು? ಎಂಬುದನ್ನು ಚಿತ್ರದಲ್ಲಿ ನೋಡಿ ತಿಳಿದು ಅನುಭವಿಸುವುದೇ ಒಳ್ಳೆಯದು. ದರ್ಶನಾಳಿಗೆ ತಾನು ಅಂದು ಅರುಣ್‌ನನ್ನು ಕ್ಷಮಿಸಿದ್ದರೆ, ನಾನೇ ಆ ಸ್ಥಾನದಲ್ಲಿರಬಹುದಿತ್ತು ಎಂದುಕೊಳ್ಳುವ ದೃಶ್ಯ, ಮಗುವಾದ ಕೂಡಲೇ ದರ್ಶನಾಗೆ ವಿಡಿಯೋ ಕಾಲ್‌ ಮಾಡಿ ಮೌನದಿಂದಿರುವ ಕೆಲವೇ ಕ್ಷಣಗಳು ಪ್ರೇಕ್ಷಕನಲ್ಲಿ ಮತ್ತೇನೇನೋ ಆಲೋಚನೆ ಹುಟ್ಟಿಸಬಹುದು.

ಆದರೆ, ಅಲ್ಲಾಗುವುದೇ ಬೇರೆ. ಅರುಣ್‌, ತಾನು ತಂದೆಯಾದೆ… ಇದನ್ನು ಮೊದಲು ಹೇಳಬೇಕೆನಿಸಿದ್ದು ನಿನಗೆ ಮಾತ್ರ ಎನ್ನುವಾಗ.. ದರ್ಶನಾ ತಾನು ಮದುವೆಯಾಗೋಣ ಎಂದಿಕೊಂಡಿದ್ದೇನೆ. ಮದುವೆಯ ನಂತರ ಈಗಿರುವ ಸ್ವಾತಂತ್ರ್ಯ ಇರಲು ಸಾಧ್ಯವಾ? ಅಂತ ಅರುಣನನ್ನು ಕೇಳುವಾಗ ಪ್ರೇಕ್ಷಕರು ರೋಮಾಂಚನಗೊಳ್ಳಬಹುದು. ಪ್ರೇಮ ರೂಪಾಂತರಗೊಂಡು ಎರಡೂ ಪಾತ್ರಗಳಲ್ಲೂ ಬದುಕುತ್ತದಲ್ಲ ಅದೂ ಸಹಜ ಬದುಕಿನಲ್ಲಿ ಇರಬಹುದಾದಂತ ಇಂತಹ ಸಾಧ್ಯತೆಗಳ ನಿರೂಪಣೆ ಪ್ರೇಕ್ಷಕನಿಗೆ ಆಪ್ತವಾಗುತ್ತದೆ. ನಾಯಕ ಅರುಣ್‌, ದರ್ಶನಾ ಎನ್ನುವ ಹುಡುಗಿಯನ್ನು ಪ್ರೀತಿಸಿ ಬ್ರೇಕಪ್‌ ಆಗಿ ದೇವದಾಸನಂತೆ ಗಡ್ಡಬಿಟ್ಟು ಕುಡಿಯುತ್ತಾ ಕಾಲ ಕಳೆಯುತ್ತಿದ್ದವನು, ಅವನೇ ಅವನನ್ನ ಗಮನಿಸಿಕೊಂಡು ಸುತ್ತಲ ಸಮಾಜ ನೋಡಿ ಬದಲಾಗುತ್ತಾ ಮತ್ತೆ ತನ್ನ ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳುವಂತಹ ಸನ್ನಿವೇಶಗಳು, ಸೆಲ್ವ ಎನ್ನುವ ಅದ್ಭುತವಾದ ಪಾತ್ರ, ಅದರ ವ್ಯಕ್ತಿತ್ವ ಮತ್ತು ಧ್ಯೇಯೊದ್ದೇಶಗಳು ಪ್ರೇಕ್ಷಕರಿಗೆ ಚಿತ್ರಕ್ಕೆ ಆಪ್ತವಾಗುವಂತೆ ಮಾಡುತ್ತಾ ಮನಸೂರೆಗೊಳಿಸುವುದಲ್ಲದೆ ಚಿತ್ರದಿಂದಾಚೆಗೂ ಸ್ಫೂರ್ತಿ ತುಂಬುತ್ತವೆ ಎಂದರೂ ತಪ್ಪಿಲ್ಲ.

ಮೂರನೇ ಅಧ್ಯಾಯ ಎನ್ನಬಹುದಾದ ಭಾಗದಲ್ಲಿ ಕಾಲೇಜು ಮುಗಿದು ಎಲ್ಲರೂ ಉದ್ಯೋಗಸ್ಥರಾಗಿರುತ್ತಾರೆ. ಸ್ನೇಹಿತರೆಲ್ಲ ಅವರ ಗುರಿ ಮತ್ತು ಬದುಕಿನೊಂದಿಗೆ ಸಾಗುತ್ತಿರುವಾಗ, ಅರುಣ್‌ ತನ್ನೊಳಗಿನ ಆಸಕ್ತಿಯಿಂದಲೋ, ಅವನಿಗೆ ಅದರಲ್ಲಿರುವ ಸಂತೋಷದಿಂದಲೋ ಟ್ರಾವೆಲಿಂಗ್‌ ಫೋಟೋಗ್ರಫಿಯಲ್ಲಿ ಮುಳುಗಿರುತ್ತಾನೆ. ನಂತರ ಆಕಸ್ಮಿಕವಾಗಿ ಬಸ್ಸಿನಲ್ಲಿ ಸಂಧಿಸೋ ಪಾತ್ರದಿಂದ ಮತ್ತೊಂದು ತಿರುವು ಪಡೆದುಕೊಳ್ಳುತ್ತಾ ವೆಡ್ಡಿಂಗ್ ಫೊಟೋಗ್ರಫಿಯತ್ತ ಜಾರುತ್ತಾನೆ. ಆ ಅಧ್ಯಾಯದಲ್ಲಿ ಸಿಗುವ ಮತ್ತೊಂದು ಹುಡುಗಿ, ಅವಳ ಕಂಡೊಡನೇ ಮೂಡುವ ಪ್ರೇಮ, ಸ್ನೇಹಪೂರ್ವಕ ಸುತ್ತಾಟವೆಲ್ಲ ಮುಂದಿವರೆದು ಮದುವೆ ಸಂಸಾರ ಹೀಗೆ ಸಾಗಿ ಕತೆ ಕೊನೆಯಾಗುತ್ತದೆ. ಈ ಸಿನಿಮಾದಲ್ಲಿ ಏನೆಲ್ಲಾ ನಡೆದರೂ ಮೊದಲ ಪ್ರೀತಿ ಮತ್ತು ಕಾಲೇಜಿನ ಗೆಳೆಯರು ಎಲ್ಲವನ್ನೂ ಹಿಡಿದಿಟ್ಟುಕೊಂಡು ಹೆಣೆದಿರುವ ಕತೆ ಮತ್ತು ನಿರೂಪಣೆ ವಿಶೇಷ ಅನಿಸುತ್ತದೆ. ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ಕೆಲವು ದೃಶ್ಯಗಳು ಅವರವರ ಬದುಕಿನ ಯಾವುದೋ ಒಂದು ಘಟ್ಟದಲ್ಲಿ ಎದುರಾಗಿದ್ದ ಸನ್ನೀವೇಶವೇ ಎಂದೆನಿಸಬಹುದು.

ಪ್ರಣವ್ ಮತ್ತು ದರ್ಶನಾ, ಮಾಯಾ ಪಾತ್ರಗಳಲ್ಲಿ ಅನ್ನೂ, ಕಲ್ಯಾಣಿ ಎಲ್ಲರೂ ಪ್ರಬುದ್ಧ ಅಭಿನಯ ನೀಡಿದ್ದಾರೆ. ಮಾಯಾಳ ಮುಗ್ದತೆ ಮತ್ತು ನಿತ್ಯಾಳ ಸೌಂದರ್ಯ, ಸೆಲ್ವಂ ಪಾತ್ರದ ವ್ಯಕ್ತಿತ್ವ, ಅಡುಗೆಯ ಅಜ್ಜಿ, ಅರುಣ್‌ ಗೆಳೆಯನ ಪಾತ್ರದಲ್ಲಿ ಆಂಟನಿ ಎಲ್ಲರೂ ನೆನಪಲ್ಲುಳಿಯುತ್ತಾರೆ. ಈ ಸಿನಿಮಾದ ಕಾಲಾವಧಿ ಹತ್ತು ನಿಮಿಷಕ್ಕೆ ಕಡಿಮೆ ಮೂರು ಗಂಟೆ. ಚಿತ್ರವನ್ನು ಮೂರು ಭಾಗವಾಗಿ ವಿಂಗಡಿಸಬಹುದು. ಮೂರೂ ಬಾಗವು ಪ್ರೇಕ್ಷಕನಿಗೆ ಇಷ್ಟವಾಗಬಹುದು. ಅಷ್ಟೇ ಚೆನ್ನಾಗಿದೆ ಕೂಡ. ಅಲ್ಲಲ್ಲಿ ‘ಕೆಲವು ದಿನಗಳ ನಂತರ’ ಹಾಗೂ ಮತ್ತಿತರೆ ಟೆಕ್ಸ್ಟ್‌ ಬೇಕಿರಲಿಲ್ಲ. ಚಿತ್ರದ ಕೊನೆಯ ಬಾಗಕ್ಕೆ ಬಂದಾಗ ಮೊದಲ ಬಾಗ ಮರೆತೇ ಹೋಯ್ತು ಎನಿಸಿದರೂ ಕತೆ, ಚಿತ್ರಕಥೆಯಷ್ಟೇ ಸೊಗಸಾದ ಸಂಗೀತ ಮತ್ತು ಛಾಯಗ್ರಹಣವಿರುವ ‘ಹೃದಯಂ’ ಪ್ರೇಕ್ಷಕರ ಉಪಪ್ರಜ್ಞೆಯಲ್ಲಿ ಅಳಿಯದೆ ಉಳಿಯಬಹುದಾದ ಪ್ರೇಮಕತೆಯ ಸಿನಿಮಾ ಅನಿಸಬಹುದು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಂಡ ಸಿನಿಮಾ ಪ್ರಸ್ತುತ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

Previous articleವಾರಾಹಿ ಪ್ರೊಡಕ್ಷನ್‌ ಹೌಸ್‌ ಕನ್ನಡ – ತೆಲುಗು ಸಿನಿಮಾ; ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಹೀರೋ
Next articleಯುದ್ಧದ ಹಿಂದೆ ನಡೆಯುವ ವ್ಯಾಪಾರದ ನೈಜ ಚಿತ್ರಣ ‘ವಾರ್ ಡಾಗ್ಸ್’

LEAVE A REPLY

Connect with

Please enter your comment!
Please enter your name here