ನಿರ್ದೇಶಕ ಪ್ರೇಮ್‌ ಅವರು ತಮ್ಮ ‘KD’ ಸಿನಿಮಾದ ಮತ್ತೊಂದು ದೊಡ್ಡ ಸುದ್ದಿಯೊಂದಿಗೆ ಮರಳಿದ್ದಾರೆ. ಆನಂದ್‌ ಆಡಿಯೋದವರು ಚಿತ್ರದ ಆಡಿಯೋ ಹಕ್ಕುಗಳನ್ನು 17.70 ಕೋಟಿ ರೂಪಾಯಿ ದಾಖಲೆಯ ಬೆಲೆಗೆ ಖರೀದಿಸಿರುವ ಭರ್ಜರಿ ಸುದ್ದಿಯಿದು! KVN ಪ್ರೊಡಕ್ಷನ್ಸ್‌ ನಿರ್ಮಾಣದ ಚಿತ್ರದ ಹೀರೋ ಆಗಿ ಧ್ರುವ ಸರ್ಜಾ ಅಭಿನಯಿಸುತ್ತಿದ್ದಾರೆ.

ಪ್ರೇಮ್‌ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟಿಸುತ್ತಿರುವ ‘KD’ ಸಿನಿಮಾ ಈ ವರ್ಷಷ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಇದೀಗ ಚಿತ್ರದ ಆಡಿಯೋ ಹಕ್ಕುಗಳು ಭರ್ಜರಿ ಬೆಲೆಗೆ ಬಿಕರಿಯಾಗಿರುವ ಸುದ್ದಿ ಹೊರಬಿದ್ದಿದೆ. ಆನಂದ್‌ ಆಡಿಯೋದವರು 17.70 ಕೋಟಿ ರೂಪಾಯಿ ದುಬಾರಿ ಬೆಲೆಗೆ ಆಡಿಯೋ ಹಕ್ಕುಗಳನ್ನು ಖರೀದಿಸಿದ್ದಾರೆ. ಇನ್ನು, ಅರ್ಜುನ್‌ ಜನ್ಯ ಅವರು ಅತಿ ಹೆಚ್ಚು ಸಮಯ ತೆಗೆದುಕೊಂಡು ಸಂಗೀತ ಸಂಯೋಜಿಸಿರುವ ಚಿತ್ರವಿದು ಎನ್ನುವ ಮಾಹಿತಿಯೂ ಸಿಕ್ಕಿದೆ. ಸ್ವತಃ ಜನ್ಯ ಅವರೇ ಈ ಬಗ್ಗೆ ಮಾತನಾಡಿ, ‘ನಿರ್ದೇಶಕ ಪ್ರೇಮ್‌ ತಮ್ಮ ಚಿತ್ರಗಳಲ್ಲಿ ಸಂಗೀತಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಈ ಬಾರಿ ಭಾರತದ ಉತ್ಕೃಷ್ಟ ಗಾಯಕ – ಗಾಯಕರಿಂದ ಹಾಡಿಸಿದ್ದಾರೆ. ಸಂಗೀತ ಪ್ರೇಮಿಗಳಿಗೆ ಸಿನಿಮಾ ಇಷ್ಟವಾಗಲಿದೆ’ ಎಂದಿದ್ದಾರೆ.

ಮೊನ್ನೆ ನಡೆದ ಚಿತ್ರದ ಕುರಿತಾದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಪ್ರೇಮ್‌, ನಟ ಧ್ರುವ ಸರ್ಜಾ, ಸಂಗೀತ ಸಂಯೋಜಕ ಅರ್ಜುನ್‌ ಜನ್ಯ ಸೇರಿದಂತೆ ಎಲ್ಲರೂ ವಿಂಟೇಜ್‌ ಡ್ರೆಸ್‌ನಲ್ಲಿದ್ದುದು ವಿಶೇಷ. ಇದು 70, 80ರ ದಶಕಗಳಲ್ಲಿ ನಡೆಯುವ ಕತೆ. ಇದಕ್ಕೆ ಹೊಂದುವಂತೆ ಚಿತ್ರತಂಡದವರೂ ವಿಂಟೇಜ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡರು. ಇನ್ನು ಈ ಚಿತ್ರದ ಹಾಡುಗಳಿಗೆ 256 ಪೀಸ್ ಆರ್ಕೆಸ್ಟ್ರಾ ಬಳಸಲಾಗಿದೆ. ಶಾರುಖ್‌ ಖಾನ್ ನಟನೆಯ ‘ಜವಾನ್’ ಚಿತ್ರಕ್ಕೆ 180 ಪೀಸ್ ಆರ್ಕೆಸ್ಟ್ರಾ ಬಳಸಲಾಗಿತ್ತು, ಇದೀಗ ಆ ದಾಖಲೆಯನ್ನು ಕೆಡಿ ಸಿನಿಮಾ ಮುರಿದಿದೆ! ಚಿತ್ರದ ಬಗ್ಗೆ ಮಾತನಾಡಿದ ಪ್ರೇಮ್‌, ‘KD ಚಿತ್ರಕ್ಕೆ ಈವರೆಗೆ 150 ದಿನಗಳ ಚಿತ್ರೀಕರಣ ನಡೆಸಿದ್ದೇವೆ. ಇನ್ನೊಂದು ವಾರದ ಟಾಕಿ ಪೋರ್ಷನ್ ಹಾಗೂ 3 ಹಾಡುಗಳನ್ನು ಶೂಟ್ ಮಾಡಿದರೆ ಚಿತ್ರೀಕರಣ ಮುಗಿಯುತ್ತದೆ. ನೈಜಘಟನೆ ಆಧಾರಿತ ಚಿತ್ರಕ್ಕೆ ಇಪ್ಪತ್ತು ಎಕರೆ ಜಾಗದಲ್ಲಿ ಸೆಟ್ ಹಾಕಿದ್ದೇವೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ಆರು ಕೊರಿಯಾಗ್ರಾಫರ್ಸ್‌ ಕೆಲಸ ಮಾಡುತ್ತಿದ್ದಾರೆ’ ಎಂದಿದ್ದಾರೆ.

ಅದ್ಧೂರಿ ಮೇಕಿಂಗ್‌ನಿಂದ ಸುದ್ದಿಯಾಗಿರುವ ಸಿನಿಮಾ ಡಿಸೆಂಬರ್‌ನಲ್ಲಿ ತೆರೆಕಾಣಲಿದೆ. ಆಗಸ್ಟ್ 16ರ ವರಮಹಾಲಕ್ಷ್ಮಿ ಹಬ್ಬದಂದು ಮುಂಬೈನಲ್ಲಿ ಚಿತ್ರದ ಟೀಸರ್ ಹಾಗೂ 24ಕ್ಕೆ ಚಿತ್ರದ ಮೊದಲ ಹಾಡನ್ನು ಹೈದರಾಬಾದ್‌ನಲ್ಲಿ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದ್ದು. KVN ಪ್ರೊಡಕ್ಷನ್ಸ್‌ ನಿರ್ಮಾಣದಲ್ಲಿ ಸಿನಿಮಾ ತಯಾರಾಗುತ್ತಿದೆ. ಚಿತ್ರಕ್ಕೆ ಪ್ರೇಮ್ ಅವರೇ ಕಥೆ, ಚಿತ್ರಕಥೆ, ಸಂಬಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ರೀಷ್ಮಾ ನಾಣಯ್ಯ ಚಿತ್ರದ ನಾಯಕಿ. ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here