‘ಹದಿನೇಳೆಂಟು’ ಪಾತ್ರಚಿತ್ರಣ ಮತ್ತು ವ್ಯಕ್ತಿತ್ವಗಳ ಬಾಗುವಿಕೆ (character arc) ಎಷ್ಟು ಅಮೋಘವಾಗಿದೆ ಎಂದರೆ, ಅರ್ಧ ಗಂಟೆಗೊಮ್ಮೆ ಎಂಬಂತೆ ಪಾತ್ರಗಳ ಕುರಿತು ಪ್ರೇಕ್ಷಕರ ಒಲವು ಬದಲಾಗುತ್ತಾ ಹೋಗುತ್ತದೆ. ಸಹಜವಾದ, ನಿತ್ಯವೂ ನಾವು ನೋಡುವ, ನಮ್ಮಲ್ಲೂ ಕಾಣಬಹುದಾದ ಸೂಕ್ಷ್ಮವಾದ ಆದರೆ ದೊಡ್ಡ ಪರಿಣಾಮ ಬೀರಬಲ್ಲ ಬದಲಾವಣೆಗಳಿವು. ಈ ಬದಲಾವಣೆಗಳ ಹಿಂದೆ ಸಾಮಾಜಿಕ ಒತ್ತಡದಿಂದ ಹಿಡಿದು, ವೈಯಕ್ತಿಕ ಹಿತಾಸಕ್ತಿಯ ತನಕ ಹಲವು ಕಾರಣಗಳಿರಬಹುದು. ಆದರೆ, ಇಂತಹ ಸೂಕ್ಷ್ಮ ಬದಲಾವಣೆಗಳನ್ನು ಪಾತ್ರಗಳಲ್ಲಿ ಅಳವಡಿಸಿರುವ ರೀತಿ ಮತ್ತು ಆ ಮೂಲಕವೇ ಕತೆಯನ್ನು ಮುಂದೆ ತೆಗೆದುಕೊಂಡು ಹೋಗುವ ನಿರ್ದೇಶಕರ ರೀತಿ ಅನನ್ಯ.
ಪೃಥ್ವಿ ಕೊಣನೂರು ಅವರ ಚಿತ್ರಗಳಿಗೆ ಅದರದೇ ಆದ ಒಂದು ವಿಶಿಷ್ಟ ಶೈಲಿ ಇದೆ. ಅವರು ಆಯ್ದುಕೊಳ್ಳುವ ವಿಷಯಗಳು ಸಾಮಾಜಿಕ ಪ್ರಸ್ತುತತೆಯಿಂದ ಸೆಳೆದರೆ, ಅವರು ಅದನ್ನು ಎಳೆಎಳೆಯಾಗಿ ಬಿಡಿಸಿಡುವ ರೀತಿ ಕುತೂಹಲಕಾರಿಯಾಗಿರುತ್ತದೆ. ಪೃಥ್ವಿ ತಮ್ಮ ಇತ್ತೀಚಿನ ಚಿತ್ರ ‘ಹದಿನೇಳೆಂಟು’ವಿನಲ್ಲಿ ಮತ್ತಷ್ಟು ಸೂಕ್ಷ್ಮವಾದ ವಿಷಯಗಳನ್ನು ಕೈಗೆತ್ತಿಕೊಂಡಿದ್ದು, ಅಷ್ಟೇ ಸೂಕ್ಷ್ಮವಾಗಿ ಅದರ ಹಲವು ಆಯಾಮಗಳನ್ನು, ಸಂಕೀರ್ಣತೆಯನ್ನು ತೆರೆಯ ಮೇಲೆ ತಂದಿದ್ದಾರೆ. ಬಾಯಿಬಿಟ್ಟು ಹೇಳದೆಯೇ, ಸಾಕಷ್ಟನ್ನು ತಲುಪಿಸುವ ‘ಹದಿನೇಳೆಂಟು’ ತನ್ನ ಶೀರ್ಷಿಕೆಯಲ್ಲೇ ಸಾಕಷ್ಟು ವಿಷಯಗಳನ್ನು ಅಡಗಿಸಿಕೊಂಡಿದೆ.
ಚಿತ್ರದ ಆರಂಭದಲ್ಲಿ ದ್ವಿತೀಯ ಪಿಯುಸಿಯ ಇಬ್ಬರು ವಿದ್ಯಾರ್ಥಿಗಳು, ದೀಪಾ ಮತ್ತು ಹರಿ, ಸಂಜೆ ಎಲ್ಲರೂ ತೆರಳಿದ ಮೇಲೆ ತಮ್ಮದೇ ಕಾಲೇಜಿನ, ಖಾಲಿ ಕೊಠಡಿಯೊಂದರಲ್ಲಿ ಖಾಸಗಿ ಕ್ಷಣಗಳನ್ನು ಕಳೆಯುತ್ತಾರೆ ಮತ್ತು ಅದನ್ನು ವಿಡಿಯೋ ಕೂಡ ಮಾಡುತ್ತಾರೆ. ಈ ಸೆಕ್ಸ್ ವಿಡಿಯೋ ಅಂತರ್ಜಾಲದಲ್ಲಿ ಸೋರಿಕೆಯಾಗಲು ಹೆಚ್ಚು ಸಮಯ ಹಿಡಿಯುವುದಿಲ್ಲ. ವಿದ್ಯಾರ್ಥಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲು ಮುಂದಾಗುವ ಕಾಲೇಜು ಆಡಳಿತ ಮಂಡಳಿ ಹೆತ್ತವರನ್ನು ಕರೆಸುತ್ತದೆ. ನಿಧಾನಕ್ಕೆ ದೀಪಾ ಮತ್ತು ಹರಿಯ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳು ತೆರೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಕತೆಯ ಮೂಲ ಘಟನೆಯೊಂದಿಗೆ ತಳಕು ಹಾಕಿಕೊಂಡೇ ಇರುವ ಈ ಎಲ್ಲಾ ಅಂಶಗಳು, ಸನ್ನಿವೇಶವನ್ನು ಸಂಕೀರ್ಣವಾಗಿಸುತ್ತದೆ.
ಕತೆ ಇದರ ಹಲವು ಮಗ್ಗುಲುಗಳನ್ನು ಪರಿಚಯಿಸುತ್ತಾ, ಹೊಸ ವಿಷಯಗಳನ್ನು ಸೇರಿಸುತ್ತಾ ಹೋದಂತೆ, ಚಿತ್ರ ಹಲವು ದಿಕ್ಕಿನಲ್ಲಿ ಬೆಳೆಯುತ್ತದೆ. ಸಾಮಾಜಿಕ ಸತ್ಯಗಳಿಗೆ ಕನ್ನಡಿ ಹಿಡಿಯುತ್ತಾ, ಆರಂಭದ ಘಟನೆಯನ್ನು ಮೀರಿ ದೊಡ್ಡದಾಗಿ ಬೆಳೆಯುತ್ತದೆ. ಪೃಥ್ವಿ ಎಂದಿನಂತೆ ಡಾಕ್ಯುಮೆಂಟರಿ ಶೈಲಿಯಲ್ಲಿ ಕತೆಯನ್ನು ಹೇಳುತ್ತಾ ಹೋಗುತ್ತಾರೆ. ಆದರೆ, ಅದ್ಭುತವಾದ ಚಿತ್ರಕತೆ, ವೇಗವಾದ ಗತಿ ಮತ್ತು ಬಿಗಿಯಾದ ನಿರೂಪಣೆಯಿಂದ ಒಂದು ಕ್ಷಣ ಕೂಡ ಪ್ರೇಕ್ಷಕರ ಮನಸ್ಸು ಅಲೆದಾಡದಂತೆ ಕಟ್ಟಿ ಹಾಕುತ್ತಾರೆ.
‘ಹದಿನೇಳೆಂಟು’ ಪಾತ್ರಚಿತ್ರಣ ಮತ್ತು ವ್ಯಕ್ತಿತ್ವಗಳ ಬಾಗುವಿಕೆ (character arc) ಎಷ್ಟು ಅಮೋಘವಾಗಿದೆ ಎಂದರೆ, ಅರ್ಧ ಗಂಟೆಗೊಮ್ಮೆ ಎಂಬಂತೆ ಪಾತ್ರಗಳ ಕುರಿತು ಪ್ರೇಕ್ಷಕರ ಒಲವು ಬದಲಾಗುತ್ತಾ ಹೋಗುತ್ತದೆ. ಹಾಗೆಂದ ಮಾತ್ರಕ್ಕೆ, ವ್ಯಕ್ತಿತ್ವಗಳಲ್ಲಿ ಆಗುವ ಈ ಬದಲಾವಣೆಗಳು ತೀರಾ ನಾಟಕೀಯವಾಗಲೀ, ಅಘಾತಕಾರಿಯಾಗಲೀ ಅಲ್ಲ. ಸಹಜವಾದ, ನಿತ್ಯವೂ ನಾವು ನೋಡುವ, ನಮ್ಮಲ್ಲೂ ಕಾಣಬಹುದಾದ ಸೂಕ್ಷ್ಮವಾದ ಆದರೆ ದೊಡ್ಡ ಪರಿಣಾಮ ಬೀರಬಲ್ಲ ಬದಲಾವಣೆಗಳು. ಈ ಬದಲಾವಣೆಗಳ ಹಿಂದೆ ಸಾಮಾಜಿಕ ಒತ್ತಡದಿಂದ ಹಿಡಿದು, ವೈಯಕ್ತಿಕ ಹಿತಾಸಕ್ತಿಯ ತನಕ ಹಲವು ಕಾರಣಗಳಿರಬಹುದು. ಆದರೆ, ಇಂತಹ ಸೂಕ್ಷ್ಮ ಬದಲಾವಣೆಗಳನ್ನು ಪಾತ್ರಗಳಲ್ಲಿ ಅಳವಡಿಸಿರುವ ರೀತಿ ಮತ್ತು ಆ ಮೂಲಕವೇ ಕತೆಯನ್ನು ಮುಂದೆ ತೆಗೆದುಕೊಂಡು ಹೋಗುವ ನಿರ್ದೇಶಕರ ರೀತಿ ಅನನ್ಯ.
ಸೆಕ್ಸ್ ಟೇಪ್ ಲೀಕ್ ಜೊತೆಗೆ ಆರಂಭವಾಗುವ ಕತೆ ಕೆಲವು ನಿಮಿಷಗಳಲ್ಲೇ ಸಮಾಜದಲ್ಲಿ ಅಂತರ್ಗತವಾಗಿರುವ ಲಿಂಗ ತಾರತಮ್ಯ, ಜಾತಿ ತಾರತಮ್ಯ ಮತ್ತು ಅಂತಸ್ತಿನ ತಾರತಮ್ಯವನ್ನು ಕಣ್ಣಿಗೆ ರಾಚುವಂತೆ ತೋರಿಸುತ್ತದೆ. ಕಾಲೇಜಿನ ಉಪ ಪ್ರಾಂಶುಪಾಲೆ ಸೀತಾ (ರೇಖಾ ಕೂಡ್ಲಿಗಿ) ದೀಪಾಳಿಗೆ ಮೊದಲಿಗೆ ಹೇಳುವ ಮಾತೇ – ‘ಅವನೇನೋ ಗಂಡು ಹುಡುಗ, ನೀನು ಯೋಚನೆ ಮಾಡಬೇಕಿತ್ತಲ್ವಾ?’. ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿರುವ ದೀಪಾ ಮತ್ತು ಕಲಿಕೆಯಲ್ಲಿ ಮುಂದಿರುವ ಹರಿಯ ನಡುವೆ ಕಾಲೇಜಿನ ಸಿಬ್ಬಂದಿಯ ಸಹಾನುಭೂತಿ ತೂಗುವುದು ಹರಿಯ ಕಡೆಗೆ. ಹರಿಯ ತಾಯಿ (ಸುಧಾ ಬೆಳವಾಡಿ) ವಿಷಯ ಗೊತ್ತಾದ ತಕ್ಷಣ ನೀಡುವ ಪ್ರತಿಕ್ರಿಯೆ ಎಂದರೆ, ‘ನನ್ನ ಮಗ ದಿನಾ ಸಂಧ್ಯಾವಂದನೆ ಮಾಡ್ತಾನೆ. ಅವನು ಈ ತರದ ಕೆಲಸ ಎಲ್ಲಾ ಮಾಡೋಕೆ ಸಾಧ್ಯ ಇಲ್ಲ’. ದೀಪಾಳನ್ನು ನೋಡಿ ಆಕೆ ‘ನೀನು ಮನೆಗೆ ಬಂದಾಗ ಎಷ್ಟು ಚೆನ್ನಾಗಿ ನೋಡಿಕೊಂಡೆ. ನೀನು ಈ ಕೆಲಸ ಮಾಡಬಹುದಾ?’ ಎಂದು ಹೇಳುವ ಮೂಲಕ ಘಟನೆಗೆ ದೀಪಾಳನ್ನೇ ಪೂರ್ತಿಯಾಗಿ ಜವಾಬ್ದಾರಿಯಾಗಿಸುತ್ತಾಳೆ.
ಹರಿಯ ಹೆತ್ತವರಿಗೆ ವಿಡಿಯೋ ತೋರಿಸಬಾರದೆಂಬ ಸೂಕ್ಷ್ಮತೆ ಪ್ರದರ್ಶಿಸುವ ಕಾಲೇಜು ಮಂದಿ, ದೀಪಾಳ ಮನೆಯವರಿಗೆ ತೋರಿಸುತ್ತದೆ. ಹೀಗೆ… ನಮ್ಮೆಲ್ಲರ ಮನಸ್ಸಿನಲ್ಲಿ ಸುಪ್ತವಾಗಿರುವ ಹಲವು ಪೂರ್ವಾಗ್ರಹಗಳು ಮತ್ತು ತಾರತಮ್ಯಗಳಿಗೆ ಕನ್ನಡಿ ಹಿಡಿಯುವ ಹಲವು ಸಂಭಾಷಣೆಗಳು ಮತ್ತು ದೃಶ್ಯಗಳು ಸಿನಿಮಾದಲ್ಲಿ ಅತ್ಯುತ್ತಮವಾಗಿ ಮೂಡಿ ಬಂದಿದೆ. ಯಾವುದನ್ನೂ ಕಪ್ಪು ಬಿಳುಪಾಗಿ ನೋಡದೆ ನಿರ್ದೇಶಕರು ಎಲ್ಲರ ಮನಸ್ಸು, ಕ್ರಿಯೆ ಮತ್ತು ಉದ್ದೇಶಗಳನ್ನು ಒರೆಗೆ ಹಚ್ಚುತ್ತಾರೆ. ಒಂದೇ ಘಟನೆ ಇಬ್ಬರು ವ್ಯಕ್ತಿಗಳ ಸಾಮಾಜಿಕ ಸ್ಥಿತಿಯನ್ನು ಆಧರಿಸಿ ಬೇರೆಯದೇ ರೀತಿಯಲ್ಲಿ ಪರಿಣಾಮ ಬೀರುವ ಸಂಗತಿಯನ್ನು ಪರಿಣಾಮಕಾರಿಯಾಗಿ ತೋರಿಸುತ್ತದೆ.
ಹರಿಯ ಮುಂದೆ ದಾರಿಗಳಿವೆ, ಅದರಲ್ಲಿ ನಡೆಯಲು ಬೇಕಾದ ಸಾಧನಗಳಿವೆ. ದೀಪಾಳಿಗಿರುವುದು ಒಂದೇ ಅವಕಾಶ, ಒಂದೇ ಹಾದಿ. ಇಷ್ಟಿದ್ದೂ, ಕಾಲೇಜು ಹರಿಯ ಕಡೆಗೆ ತೋರುವ ಸಹಾನುಭೂತಿಯನ್ನು ದೀಪಳತ್ತ ತೋರುವುದಿಲ್ಲ. ಏಕೆಂದರೆ, ಸಮಾಜದ ಕೆಳ ಸ್ತರದಲ್ಲಿರುವ ದೀಪಾ, ಅವರ ನಿರೀಕ್ಷೆ ಮತ್ತು ಅಪೇಕ್ಷೆಗೆ ತಕ್ಕಂತೆ ವರ್ತಿಸುವುದಿಲ್ಲ. ತಗ್ಗಿ ಬಗ್ಗಿ ನಡೆಯಬೇಕು, ತನಗೆ ಸಿಕ್ಕಿರುವ ಅವಕಾಶಕ್ಕೆ ಕೃತಜ್ಞಳಾಗಿರಬೇಕು ಎಂದು ಸಮಾಜ ಬಯಸಿದರೆ ಆಕೆ ಕೂದಲಿಗೆ ಬಣ್ಣ ಹಾಕುತ್ತಾಳೆ, ಆಧುನಿಕವೆನಿಸುವ ಉಡುಪು ತೊಡುತ್ತಾಳೆ, ಭವಿಷ್ಯದ ಬಗ್ಗೆ ಆಸೆ, ಆಕಾಂಕ್ಷೆಗಳನ್ನು ಇಟ್ಟಿಕೊಂಡಿದ್ದಾಳೆ, ತನಗೆ ಅವಮಾನವಾಗಿದೆ ಎನಿಸಿದಾಗ ಹೊಡೆದಾಡುತ್ತಾಳೆ, ಅನ್ಯಾಯವಾಗಿದೆ ಎಂದಾಗ ಪ್ರಶ್ನಿಸುತ್ತಾಳೆ. ಇದು ಯಾವುದೂ ಸಮಾಜದ ಪೇಟ್ರೋನೈಸಿಂಗ್ ಬುದ್ಧಿಗೆ ಸಹಿಸಲು ಸಾಧ್ಯವಾಗುವುದಿಲ್ಲ.
ನಿರ್ದೇಶಕರು ಘಟನೆಯ ಸುತ್ತಲೂ ಒಂದೊಂದೇ ಪದರವನ್ನು ಬಿಡಿಸುತ್ತಾ ಹೋದಂತೆ ಸುತ್ತಲಿನ ಜನರು, ಘಟನೆಗಳು ಹೊಸ ಬಣ್ಣ ಪಡೆದುಕೊಳ್ಳುತ್ತಾ ಹೋಗುತ್ತವೆ. ಕಾಲೇಜಿನ ಕ್ರೀಡಾ ಶಿಕ್ಷಕ ಅಬ್ದುಲ್ (ಲಕ್ಷ್ಮಿ ನಾರಾಯಣ) ಜಾತಿಯ ವಿಷಯದಿಂದಾಗಿ ದೀಪಳಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದಾಗ, ಅದು ನಿಜವಲ್ಲ ಎಂದು ವಾದಿಸುವವರಿಗೆ, ನಂತರದಲ್ಲಿ ಸುಪ್ತವಾಗಿ ಆದರೆ, ಬಲವಾಗಿ ಜಾತಿ ತಾರತಮ್ಯ ಕೆಲಸ ಮಾಡಿದೆ ಎಂಬುದರ ಅರಿವಾಗುತ್ತದೆ. ಅದೇ ರೀತಿ ದೀಪಾಳ ಪರವಾಗಿ ನಿಲ್ಲುವ ವಕೀಲೆ, ಸಾಮಾಜಿಕ ಕಾರ್ಯಕರ್ತೆ ಜೆಸ್ಸೆ (ಭವಾನಿ ಪ್ರಕಾಶ್), ಹಾಗೂ ಶಿಕ್ಷಕ ಅಬ್ದುಲ್ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು, ಮರೆ ಮಾಚುವ ಅಥವಾ ಬಗ್ಗಿಸುವ ಕೆಲವು ಸತ್ಯಗಳು ದೀಪಾಳಿಗೆ ಮುಳುವಾಗುತ್ತದೆ.
ಸೌಲಭ್ಯ ವಂಚಿತರ ಪರವಾಗಿ ಕಾನೂನು ಇದೆ ಎನಿಸಿದರೆ, ಕಾನೂನಿನ ತಾಂತ್ರಿಕ ಅಂಶಗಳಿಗೆ ಅದರ ದಿಕ್ಕನೇ ಬದಲಿಸುವ ಶಕ್ತಿಯೂ ಇದೆ ಎಂಬುದನ್ನು ಸಿನಿಮಾ ಹೇಳುತ್ತದೆ. ದಲಿತೆ ದೀಪಾಳ ಪರವಾಗಿರುವ ಕಾನೂನು ಒಂದೇ ದಿನದಲ್ಲಿ, ಒಂದು ಸಣ್ಣ ಅಂಶದಿಂದಾಗಿ ಸಂಪೂರ್ಣ ಆಕೆಯ ವಿರುದ್ಧವಾಗಿ ಬಿಡುತ್ತದೆ. ಮೊದಲಿಗೆ ಕರುಣಾಳು ಆದರೆ ಅಸಹಾಯಕ ಎನಿಸುವ ಪ್ರಾಂಶುಪಾಲ ಮುಂದುವರಿದಂತೆ ದುರ್ಬಲ ಮತ್ತು ಅವಕಾಶವಾದಿ ಎನಿಸುತ್ತಾರೆ. ಪೂರ್ವಾಗ್ರಹ ಪೀಡಿತೆ, ಸಮಯಸಾಧಕಿ ಎನಿಸುವ ಉಪ ಪ್ರಾಂಶುಪಾಲೆ, ಕೊನೆಗೆ ನ್ಯಾಯವಾಗಿದ್ದನ್ನು ಮಾಡಲು
ನಿರ್ಧರಿಸುತ್ತಾಳೆ.
ಮೊದಲಿಗೆ ದಲಿತಪರ ಕಾನೂನಿನಿಂದಾಗಿ ತೊಂದರೆಗೆ ಒಳಗಾದವರು ಎನಿಸುವ ಹರಿಯ ಹೆತ್ತವರು, ನಂತರದಲ್ಲಿ ಕಲ್ಲು ಹೃದಯದವರಂತೆ, ತಮ್ಮ ಮಗನ ತಪ್ಪಿನ ಅರಿವಿದ್ದೂ ದೀಪಾಳ ಭವಿಷ್ಯಕ್ಕೆ ಕೊನೆ ಹಾಡಲು ಹಿಂಜರಿಯುವುದಿಲ್ಲ. ಹೀಗೆ, ಕ್ಷಣಕ್ಷಣಕ್ಕೂ ಬದಲಾಗುವ ಡೈನಾಮಿಕ್ಸ್ ಮತ್ತು ಈಕ್ವೇಷನ್‌ಗಳು ಕತೆಯನ್ನು ವಾಸ್ತವಿಕ, ಆಸಕ್ತಿದಾಯಕ ಮತ್ತು ಹೆಚ್ಚು ಆಳವಾಗಿಸಿವೆ. ಈ ಎಲ್ಲದರ ನಡುವೆ ತಮ್ಮದು ಪ್ರೇಮ ಎಂದು ನಂಬಿರುವ ದೀಪ ಮತ್ತು ಹರಿ, ಪರಸ್ಪರರೆಡೆಗಿನ ತಮ್ಮ ಪ್ರಾಮಾಣಿಕತೆಯನ್ನು, ಬದ್ಧತೆಯನ್ನು, ಒಲವನ್ನು ಉಳಿಸಿಕೊಳ್ಳಲು ಯತ್ನಿಸುತ್ತಾರೆ. ಆದರೆ, ಕೊನೆಗೂ ಒತ್ತಡಕ್ಕೆ ಸಿಲುಕಿ ಸಾಂಕೇತಿಕ ದೃಶ್ಯವೊಂದರಲ್ಲಿರುವಂತೆ ಬಾಗಿಲಿನ ಒಳಗೆ ಹೊರಗೆ ಉಳಿದುಬಿಡುತ್ತಾರೆ. ಮೊದಲು ಎಲ್ಲಿಯೂ ಅವರ ಒಡನಾಟದ ಬಗ್ಗೆ ಮಾತನಾಡದ ನಿರ್ದೇಶಕರು ಕೊನೆಯಲ್ಲೊಂದು ಮಾಂಟಾಜ್ ಮೂಲಕ ಪ್ರೇಕ್ಷಕರ ಮನಕಲಕುತ್ತಾರೆ.
ಪಾತ್ರದ ಜಟಿಲತೆಗಳನ್ನು ಸರಿಯಾಗಿ ಅರಿತು ಅಭಿನಯಿಸಿರುವ ಶೆರ್ನಿಲ್ ಭೋಸ್ಲೆ ಪ್ರೇಕ್ಷಕರ ಮನಸ್ಸಿನಲ್ಲಿ ದೀಪಾ ಆಗಿ ಉಳಿಯುತ್ತಾರೆ. ಹರಿ ಪಾತ್ರದಲ್ಲಿ ನಟಿಸಿರುವ ನೀರಜ್ ಮ್ಯಾಥ್ಯು ತನ್ನ ಪಾತ್ರಕ್ಕಿರುವ ಅಧೀನತೆಯನ್ನು ಸಮರ್ಥವಾಗಿ ತೆರೆಯ ಮೇಲೆ ತಂದಿದ್ದಾರೆ. ನಾಗೇಂದ್ರ ಶಾ, ಲಕ್ಷ್ಮಿ ನಾರಾಯಣ, ಭವಾನಿ ಪ್ರಕಾಶ್ ತಮ್ಮ ತಮ್ಮ ಪಾತ್ರಗಳಿಗೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ಪ್ರಾಂಶುಪಾಲೆ ಸೀತಾ ಪಾತ್ರದಲ್ಲಿ ರೇಖಾ ಕೂಡ್ಲಿಗಿ ಅವರದ್ದು ಅದ್ಭುತ ನಟನೆ. ಪೃಥ್ವಿ ತಮ್ಮ ಚಿತ್ರಗಳಲ್ಲಿ ಆದಷ್ಟು ತಮ್ಮೊಂದಿಗೆ ಕೆಲಸ ಮಾಡಿದ ಹಳೆ ನಟರು ಮತ್ತು ತಾಂತ್ರಿಕ ವರ್ಗವನ್ನೇ ಉಳಿಸಿಕೊಳ್ಳಲು ಯತ್ನಿಸುತ್ತಾರೆ ಎನಿಸುತ್ತದೆ ಮತ್ತು ಒಂದೇ ಶೈಲಿಯಲ್ಲಿ ಸಾಗುತ್ತಾರೆ. ಹೀಗಾಗಿ, ಮೇಕಿಂಗ್ ಬಹುತೇಕ ಒಂದೇ ರೀತಿ ಇರುತ್ತದೆ. ಚಿತ್ರದ ಸಿನಿಮಾಟೋಗ್ರಫಿ ನೋಡಿದಾಗ ಇದು ಫೌಂಡ್ ಫೂಟೇಜ್ ಚಿತ್ರವೇನೋ ಎನಿಸಿದರೂ ಆಶ್ಚರ್ಯವಿಲ್ಲ. ಅದು ಅವರು ಮಾಡುವ ಸಿನಿಮಾದ ಒಟ್ಟು ಭಾವಕ್ಕೆ ಹೊಂದುತ್ತದೆಯಾದರೂ, ಸಿನಿಮಾದ ಇತರ ಹಲವು ಸಾಧ್ಯತೆಗಳನ್ನು ಬಳಸಿಕೊಂಡು ಕತೆ ಹೇಳಲು ಯತ್ನಿಸಿದರೆ, ಚಿತ್ರ ತಾಂತ್ರಿಕವಾಗಿಯೂ ಸೆಳೆಯಬಲ್ಲದು.
ಕಳೆದ ವರ್ಷ ಮೊದಲ ಬಾರಿಗೆ ಈ ಚಿತ್ರ ನೋಡಿ, ಸ್ನೇಹಿತರ ಜೊತೆ ಚರ್ಚಿಸುತ್ತಿದ್ದಾಗ, ಪೃಥ್ವಿ ತಮ್ಮ ಸಿನಿಮಾಗಳ ಮೂಲಕ ಸಮಸ್ಯೆ ಗುರುತಿಸಿದರೂ, ಶೋಷಿತರ ಪರವಾಗಿ ಗಟ್ಟಿ ಧ್ವನಿ ಎತ್ತುವುದಿಲ್ಲ ಎಂಬ ಅಭಿಪ್ರಾಯವೊಂದು ಕೇಳಿಬಂದಿತ್ತು. ಈಗ ಮತ್ತೊಮ್ಮೆ ನೋಡಿದಾಗ ಅನಿಸಿದ್ದೆಂದರೆ, ಸಮಾಜವನ್ನು ಕಪ್ಪು ಬಿಳುಪಲ್ಲಿ ತೋರಿಸಿದಾಗ ಯಾರೂ ತಮ್ಮಲ್ಲಿ ಅಡಗಿರುವ ಸೂಕ್ಷ್ಮವಾದ ದುಷ್ಟತನವನ್ನು ಗುರುತಿಸುವುದೇ ಇಲ್ಲ. ತಮ್ಮೊಳಗಿರುವ ಅಂತಹ ಗ್ರೇ ಏರಿಯಾಗಳ ಅರಿವು ಹಲವರಿಗೆ ಇರುವುದೂ ಇಲ್ಲ. ನಾವು ಜಾತಿ ಭೇದ ಮಾಡೋದಿಲ್ಲಪ್ಪ ಎಂದೇ ಎಲ್ಲರ ನಂಬಿಕೆ. ಆದರೆ, ನಮಗೇ ಅರಿವಲ್ಲದೆ ನಮ್ಮೊಳಗಿರುವ ಪೂರ್ವಾಗ್ರಹ, ಅಸೂಕ್ಷ್ಮತೆ, ವೈಯಕ್ತಿಕ ರಾಜಕೀಯ, ಸಾಮಾಜಿಕ ಒತ್ತಡ ಇವೆಲ್ಲವೂ ಕ್ಯಾಷುವಲ್ ಸೆಕ್ಸಿಸಂ, ಕ್ಯಾಷುವಲ್ ಕ್ಯಾಸ್ಟಿಸಂ ರೂಪದಲ್ಲಿ ಹೊರಬರುತ್ತಲೇ ಇರುತ್ತವೆ.
ಸಿನಿಮಾಗಳಲ್ಲಿ ಅಸ್ಪೃಶ್ಯತೆ ಪಾಲಿಸುವ, ಜಾತಿವಾದಿ ಖಳರನ್ನು ಪ್ರಶ್ನಿಸುವಷ್ಟೇ ಮುಖ್ಯವಾಗುತ್ತದೆ, ಈ ರೀತಿಯ ಅಸೂಕ್ಷತೆಗಳನ್ನು ಪ್ರದರ್ಶಿಸುವ ಖಳರಲ್ಲದವರನ್ನು ಪ್ರಶ್ನಿಸುವುದು. ಇಂತಹ ಎಲ್ಲಾ ‘ನಾವು ಒಳ್ಳೆಯವರು, ಸಮಾನತೆಯನ್ನು ಪಾಲಿಸುವವರು’ ಎಂದು ನಂಬಿರುವವರಿಗೆ ‘ಹದಿನೇಳೆಂಟು’ ಸಣ್ಣ ಛಡಿಯೇಟು ಕೊಡುತ್ತದೆ. ಅದನ್ನು ಗುರುತಿಸುವ ಸೂಕ್ಷ್ಮತೆ ಇದ್ದವರಿಗೆ ಅರಿವಾಗುತ್ತದೆ. ತಕ್ಕಡಿ ಆಚೆ ಈಚೆ ತೂಗಿದರೂ, ನಿರ್ದೇಶಕರು ಕೊನೆಗೆ ಏನು ಹೇಳುತ್ತಾರೆಂಬುದಕ್ಕೆ, ದೀಪಾಳ ಫ್ರೇಮ್‌ನೊಂದಿಗೆ ಸಿನಿಮಾ ಕೊನೆಗೊಳ್ಳುವುದು ಸಾಕ್ಷಿ.