ಅಚ್ಚರಿಯ ಬೆಳವಣಿಗೆಯಲ್ಲಿ ನಟಿ ರಮ್ಯ ಅವರು ‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಚಿತ್ರತಂಡಕ್ಕೆ ಲೀಗಲ್‌ ನೋಟೀಸ್‌ ಕಳುಹಿಸಿದ್ದಾರೆ. ಈ ಸಿನಿಮಾದ ಪ್ರೋಮೋಗೆಂದು ಶೂಟ್‌ ಮಾಡಿದ್ದ ತಮ್ಮ ವೀಡಿಯೋ ಕ್ಲಿಪಿಂಗ್‌ಗಳನ್ನು ಟ್ರೈಲರ್‌ ಮತ್ತು ಸಿನಿಮಾದಲ್ಲೂ ಬಳಕೆ ಮಾಡಿದ್ದಾರೆ ಎನ್ನುವುದು ಅವರ ಆರೋಪ.

‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಚಿತ್ರವನ್ನು ನಾಡಿದ್ದು ಜುಲೈ 21ರಂದು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿತ್ತು. ಸಿನಿಮಾ ನೋಡಿ ಅಪಾರವಾಗಿ ಮೆಚ್ಚಿಕೊಂಡ ನಟ ರಕ್ಷಿತ್‌ ಶೆಟ್ಟಿ ಅವರು ತಮ್ಮ ಪರಂವಃ ಬ್ಯಾನರ್‌ನಡಿ ಚಿತ್ರವನ್ನು ಪ್ರಸೆಂಟ್‌ ಮಾಡುತ್ತಿದ್ದಾರೆ. ಈ ಬಿಡುಗಡೆ ತಯಾರಿಗಳ ಮಧ್ಯೆ ಇಂದು ನಟಿ ರಮ್ಯ ಅವರು ಚಿತ್ರತಂಡಕ್ಕೆ ಲೀಗಲ್‌ ನೋಟೀಸ್‌ ಕಳುಹಿಸಿದ್ದಾರೆ. ರಮ್ಯ ಅವರು ಕೂಡ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದೇ ಚಿತ್ರತಂಡ ಹೇಳಿಕೊಂಡಿತ್ತು. ನಟಿ ರಮ್ಯ ಅವರು ತಕರಾರು ತೆಗೆದಿರುವುದು ಇದೇ ವಿಚಾರಕ್ಕೆ. ಚಿತ್ರತಂಡದವರು ತಮ್ಮ ಅನುಮತಿ ಇಲ್ಲದೆ ಪ್ರೋಮೋಗೆ ಶೂಟ್‌ ಮಾಡಿದ ವೀಡಿಯೋ ಕ್ಲಿಪಿಂಗ್‌ಗಳನ್ನು ಟ್ರೈಲರ್‌ ಹಾಗೂ ಸಿನಿಮಾದಲ್ಲಿ ಬಳಕೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಚಿತ್ರದ ಟ್ರೈಲರ್ ಗಮನಸೆಳೆದಿತ್ತು. ನಟಿ ರಮ್ಯ ಈ ಚಿತ್ರದ ಮೂಲಕ ತೆರೆಗೆ ಮರಳುತ್ತಿದ್ದಾರೆ ಎಂದು ನಟಿಯ ಅಭಿಮಾನಿಗಳು ಖುಷಿ ಪಟ್ಟಿದ್ದರು. ಇದೀಗ ರಮ್ಯ ತಾವಿರುವ ದೃಶ್ಯಗಳನ್ನು ಟ್ರೈಲರ್‌ ಮತ್ತು ಸಿನಿಮಾದಿಂದ ತೆಗೆಯಬೇಕೆಂದು ಹೇಳಿದ್ದಾರೆ. ‘ಅನುಮತಿ ಇಲ್ಲದೆ ವೀಡಿಯೋ ತುಣುಕುಗಳನ್ನು ಬಳಕೆ ಮಾಡಿರುವುದು ತಮ್ಮ ಇಮೇಜಿಗೆ ಧಕ್ಕೆ ತಂದಿದೆ. ಕೂಡಲೇ ತಾವಿರುವ ದೃಶ್ಯ, ಫೋಟೊ, ಸುದ್ದಿ ತೆಗೆಯಬೇಕು. ತಮಗಾಗಿರುವ ನಷ್ಟಕ್ಕಾಗಿ ಒಂದು ಕೋಟಿ ರೂಪಾಯಿ ಪರಿಹಾರ ಕೊಡಬೇಕು’ ಎನ್ನುವುದು ನೋಟೀಸ್‌ನ ಒಕ್ಕಣಿ. ನಿತಿನ್‌ ಕೃಷ್ಣಮೂರ್ತಿ ನಿರ್ದೇಶನದ ಚಿತ್ರದ ಅತಿಥಿ ಪಾತ್ರಗಳಲ್ಲಿ ನಟರಾದ ರಕ್ಷಿತ್‌ ಶೆಟ್ಟಿ, ರಿಷಭ್‌ ಶೆಟ್ಟಿ, ದಿಗಂತ್‌ ಹಾಗೂ ಚಿತ್ರನಿರ್ದೇಶಕ ಪವನ್‌ ಕುಮಾರ್‌ ಕಾಣಿಸಿಕೊಂಡಿದ್ದಾರೆ. ನಾಡಿದ್ದು ಬಿಡುಗಡೆಯಾಗಬೇಕಿದ್ದ ಚಿತ್ರಕ್ಕೀಗ ಕಾನೂನಿನ ತೊಡಕು ಎದುರಾಗಿದೆ. ಚಿತ್ರತಂಡ ಯಾವ ರೀತಿ ಪರಿಹಾರ ಕಂಡುಕೊಳ್ಳಲಿದೆ ಎಂದು ನೋಡಬೇಕು.

Previous articleಸ್ಯಾಂಡಲ್‌ವುಡ್‌ ಈ ವಾರ | ಬಿಡುಗಡೆಯಾಗುತ್ತಿರುವ ಸಿನಿಮಾಗಳು
Next article‘ಮಂಗಳವಾರಂ’ ಟೀಸರ್‌ | ಅಜಯ್‌ ಭೂಪತಿ ನಿರ್ದೇಶನದ ಹಾರರ್‌ – ಥ್ರಿಲ್ಲರ್‌ ಸಿನಿಮಾ

LEAVE A REPLY

Connect with

Please enter your comment!
Please enter your name here