ಕನ್ನಡ ಕಿರುತೆರೆ ಮತ್ತು ಸಿನಿಮಾ, ಆಂಕರ್ಸ್‌, ಮಾಡೆಲ್‌ಗಳಿಗಾಗಿ QPL ಕ್ರಿಕೆಟ್‌ ಪಂದ್ಯಾವಳಿ ಆಯೋಜನೆಗೊಳ್ಳುತ್ತಿದೆ. ಮೊನ್ನೆ QPL ಲೋಗೋ ಬಿಡುಗಡೆಯಾಗಿದೆ. ಈ ಪಂದ್ಯಾವಳಿಯಿಂದ ಸಂಗ್ರಹವಾದ ಹಣವನ್ನು ನಟನಾ ಪ್ರತಿಭೆಗಳಿಗೆ ನೆರವಾಗುವ ‘ರಂಗಸೌರಭ’ ತಂಡದ ಕೆಲಸಗಳಿಗೆ ವಿನಿಯೋಗಿಸುವುದು ಆಯೋಜಕರ ಉದ್ದೇಶ.

ಕಳೆದ ಕೆಲವು ವರ್ಷಗಳಿಂದೀಚೆಗೆ ಕನ್ನಡ ಚಿತ್ರರಂಗದಲ್ಲಿ ಹಲವು ಕ್ರಿಕೆಟ್‌ ಪಂದ್ಯಾವಳಿಗಳು ಆಯೋಜನೆಗೊಳ್ಳುತ್ತಿವೆ. ಸಿಸಿಎಲ್, ಕೆಸಿಸಿ, ಟಿಪಿಎಲ್ ಸೇರಿದಂತೆ ಹಲವು ಕ್ರಿಕೆಟ್ ಟೂರ್ನ್‌ಮೆಂಟ್‌ಗಳಿವೆ. ಆದರೆ ಕಿರುತೆರೆ ಹಾಗೂ ಹಿರಿತೆರೆ ನಟಿಯರಿಗಾಗಿ ಕ್ರಿಕೆಟ್ ಪಂದ್ಯಾವಳಿ ಇರಲಿಲ್ಲ. ಹೀಗಾಗಿ ಕ್ರಿಯೇಟಿವ್ ಫ್ರೆಂಡ್ಸ್ ಕಂಪನಿ, ಕ್ವೀನ್ ಪ್ರೀಮಿಯರ್ ಲೀಗ್ ಶೀರ್ಷಿಕೆಯಡಿ ಪಂದ್ಯಾವಳಿ ನಡೆಸಲಿದೆ. ಈ‌ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕನ್ನಡ ಸಿನಿಮಾ ಮತ್ತು ಸೀರಿಯಲ್ ನಟಿಯರು ಆಂಕರ್ಸ್, ಮಾಡೆಲ್‌ಗಳು ಭಾಗವಹಿಸಲು ವೇದಿಕೆ‌ ಕಲ್ಪಿಸಿಕೊಡಲಾಗಿದೆ. ಅದರ ಭಾಗವಾಗಿ QPLನ ಲೋಗೋ ಬಿಡುಗಡೆ ಕಾರ್ಯಕ್ರಮ ಮೊನ್ನೆ ನಡೆಯಿತು. ಕರವೇ ಅಧ್ಯಕ್ಷ ನಾರಾಯಣ ಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ ಎನ್ ಸುರೇಶ್, ಉದ್ಯಮಿ ಮಲ್ಲಣ್ಣ, ಅಂತರಾಷ್ಟ್ರೀಯ ಕ್ರಿಕೆಟರ್‌ಗಳಾದ ಪುಷ್ಪ ಕುಮಾರ್‌, ವೃಂದಾ ದಿನೇಶ್‌, ಪ್ರತ್ಯೂಷಾ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಲೋಗೋ ಬಿಡುಗಡೆ ಮಾಡಿದ ಮಾಜಿ ಟೆಸ್ಟ್‌ ಕ್ರಿಕೆಟರ್‌ ಪುಷ್ಪ ಕುಮಾರ್‌, ‘ಕ್ರಿಕೆಟ್ ಹುಡುಗರಿಗೆ ಮಾತ್ರ ಎನ್ನುವ ಕಾಲವಿತ್ತು. ಆದರೆ ನಾವು ಅಂದು ಛಲ ಬಿಡದೆ ಆಡಿದ್ದೇವೆ. ಮಹಿಳೆಯರಿಗಾಗಿ ಈ ರೀತಿ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿರುವುದು ಖುಷಿಯಾಗಿದೆ’ ಎಂದರು. ನಟ ಹಾಗೂ QPL ಮೆಂಟರ್ ಆಗಿರುವ ಪ್ರಮೋದ್ ಶೆಟ್ಟಿ ಮಾತನಾಡಿ, ‘ಜೂನ್ ತಿಂಗಳಲ್ಲಿ QPL ಪಂದ್ಯಾವಳಿ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ಕಲಾವಿದರ ಜೊತೆಗೆ ಆಂಕರ್ಸ್, ಮಾಡೆಲ್‌ಗಳಿಗೆ ಇಲ್ಲಿ ಕ್ರಿಕೆಟ್ ಆಡಲು ಅವಕಾಶವಿದೆ. ಇವರನ್ನು ನೋಡಿಕೊಂಡು ಹೊಸ ಜನರೇಷನ್ ಕ್ರಿಕೆಟ್ ಆಡಲು ಪ್ರೇರಣೆಯಾಗಲಿ. ಈ ಪಂದ್ಯಾವಳಿಯಿಂದ ಸಂಗ್ರಹವಾದ ಹಣವನ್ನು ನನ್ನ ತಂಡ ‘ರಂಗಸೌರಭ’ಕ್ಕೆ‌ ಮೀಸಲಿಡಲಾಗುತ್ತದೆ. ಶಾಲಾ ಕಾಲೇಜು ಮಟ್ಟದಿಂದಲೇ ಹಲವು ಪ್ರತಿಭೆಗಳನ್ನು ರಂಗಭೂಮಿಗೆ ಕರೆತಂದು ನಟನೆಯನ್ನು ಕಲಿಸುವ ಕೆಲಸವನ್ನು ರಂಗಸೌರಭ ಮಾಡುತ್ತಿದೆ. ಹೀಗಾಗಿ QPLನಿಂದ ಬಂದ ಲಾಭವನ್ನು ಇಲ್ಲಿಗೆ ನೀಡಲಾಗುತ್ತದೆ. ಈ ಪಂದ್ಯಾವಳಿ ಯಶಸ್ವಿಯಾಗಲು ನಟಿಯರು ಕೈಜೋಡಿಸಬೇಕು’ ಎಂದರು.

‘ಗೀತಾ’ ಸೀರಿಯಲ್‌ ಖ್ಯಾತಿಯ ಕಿರುತೆರೆ ನಟಿ ಭವ್ಯಾ ಗೌಡ ಮಾತನಾಡಿ, ‘ಈ ಕಾನ್ಸೆಪ್ಟ್ ನನ್ನ ಮೈಂಡ್‌ನಲ್ಲಿ ತುಂಬಾ ತಿಂಗಳುಗಳಿಂದ ಇತ್ತು. RCB ಹುಡ್ಗೀರು ಯಾವಾಗ ಕಪ್ ಎತ್ತಿದರೋ ಆಗ ನಮ್ಮ ಜೋಶ್ ಜಾಸ್ತಿಯಾಯ್ತು. ಹೆಣ್ಮಕ್ಕಳು ಯಾವುದಕ್ಕೂ ಕಡಿಮೆ ಇಲ್ಲ ಅನ್ನೋದನ್ನು ತೋರಿಸಲು ಶುರು ಮಾಡಿದ್ದೇವೆ. ಈ ಕ್ರಿಕೆಟ್ ಪಂದ್ಯಾವಳಿಯನ್ನೂ ಒಂದೊಳ್ಳೆ ಉದ್ದೇಶದೊಂದಿಗೆ ಮಾಡುತ್ತಿದ್ದೇವೆ. ಬ್ಯಾಟು ಬಾಲ್ ಹಿಡಿದು ಫೀಲ್ಡ್‌ಗೆ ಇಳಿಯುತ್ತಿದ್ದೇವೆ. ಗಂಡುಮಕ್ಕಳು ಚಿಯರ್ ಅಪ್ ಮಾಡಲು ರೆಡಿಯಾಗಿ’ ಎಂದರು. ಕ್ವೀನ್ ಪ್ರೀಮಿಯರ್ ಲೀಗ್ ಆಯೋಜಕರ ಬಳಗದಲ್ಲಿ ಮಹೇಶ್ ಕುಮಾರ್, ಪ್ರಮೋದ್ ಶೆಟ್ಟಿ, ಭವ್ಯ ಗೌಡ, ಸಾತ್ವಿಕ್, ಸಂತೋಷ್, ಚೇತನ್, ಸಚಿನ್ ಹಾಗೂ ಪ್ರೇಮ್ ಇದ್ದಾರೆ. ಸದ್ಯ QPL ಲೋಗೋ ಲಾಂಚ್ ಕಾರ್ಯಕ್ರಮ ನಡೆದಿದ್ದು, ಮುಂದಿನ ದಿನಗಳಲ್ಲಿ auction, ಜೆರ್ಸಿ ಲಾಂಚ್, ಟ್ರೋಫಿ ಬಿಡುಗಡೆ ಮಾಡಲಾಗುವುದಾಗಿ ಆಯೋಜಕರು ತಿಳಿಸುತ್ತಾರೆ.

LEAVE A REPLY

Connect with

Please enter your comment!
Please enter your name here