ಆಸ್ಕರ್ ಪುರಸ್ಕೃತ ಸಂಗೀತ ಸಂಯೋಜಕ ಎ ಆರ್ ರೆಹಮಾನ್ ಮತ್ತು ಸಾಯಿರಾ ಬಾನು ದಂಪತಿ ವಿಚ್ಛೇದನ ಪಡೆದಿದ್ದಾರೆ. ರೆಹಮಾನ್ ಅವರು ಇಂದು ತಮ್ಮ ಟ್ವಿಟರ್ ಖಾತೆಯಲ್ಲಿ, ‘ನಮ್ಮ ಬದುಕಿನಲ್ಲಿ ಇದೊಂದು ಕೆಟ್ಟ ಘಳಿಗೆ. ಆತ್ಮೀಯರು ನಮ್ಮ ಖಾಸಗಿತನವನ್ನು ಗೌರವಿಸುತ್ತಾರೆ ಎಂದು ಭಾವಿಸಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಖ್ಯಾತ ಸಂಗೀತ ಸಂಯೋಜಕ ಎ ಆರ್ ರೆಹಮಾನ್ ಮತ್ತು ಸಾಯಿರಾ ಬಾನು ದಾಂಪತ್ಯ ಮುರಿದುಬಿದ್ದಿದೆ. ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದಿದ್ದಾರೆ. 1995ರಲ್ಲಿ ಇವರ ವಿವಾಹ ನೆರವೇರಿತ್ತು. ಈ ದಾಂಪತ್ಯಕ್ಕೆ ಖತೀಜಾ, ರಹೀಮಾ ಮತ್ತು ಅಮೀನ್ ಹೆಸರಿನ ಮೂವರು ಮಕ್ಕಳಿದ್ದಾರೆ. ನಿನ್ನೆ ಸಾಯಿರಾ ಬಾನು ಅವರ ವಕೀಲೆ ವಂದನಾ ಷಾ ಅವರ ಮೂಲಕ ವಿಚ್ಛೇದನದ ಅಧಿಕೃತ ಸುದ್ದಿ ಹೊರಬಿದ್ದಿದೆ. ‘ಮಾನಸಿಕ ಒತ್ತಡಗಳಿಂದಾಗಿ ನಾವು ಈ ನಿರ್ಧಾರ ಕೈಗೊಳ್ಳುತ್ತಿದ್ದೇವೆ’ ಎಂದು ದಂಪತಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಇಂದು (Nov 20) ರೆಹಮಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಕುರಿತಾಗಿ ಭಾವನಾತ್ಮಕ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ‘ನಮ್ಮ ಬದುಕಿನಲ್ಲಿ ಇದೊಂದು ಕೆಟ್ಟ ಘಳಿಗೆ. ಇಬ್ಬರೂ ಒಟ್ಟಿಗಿರುವುದು ಕಷ್ಟಸಾಧ್ಯ ಎನ್ನುವ ಪರಿಸ್ಥಿತಿ ತಲೆದೋರಿದೆ. ಆತ್ಮೀಯರು ನಮ್ಮ ಖಾಸಗಿತನವನ್ನು ಗೌರವಿಸುತ್ತಾರೆ ಎಂದು ಭಾವಿಸಿದ್ದೇನೆ’ ಎಂದು ರೆಹಮಾನ್ ಬರೆದಿದ್ದಾರೆ.
ರೆಹಮಾನ್ ಮತ್ತು ಸಾಯಿರಾ ಮಕ್ಕಳಾದ ಖತೀಜಾ, ರಹೀಮಾ ಮತ್ತು ಅಮೀನ್ ಅವರೂ ತಮ್ಮ Instagram ಖಾತೆಗಳಲ್ಲಿ ಪೋಷಕರ ಅಭಿಪ್ರಾಯವನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ. ‘ನಮ್ಮ ಪೋಷಕರಿಗೆ ಅವರದೇ ಆದ ಆಯ್ಕೆಗಳಿವೆ. ಈ ಸಂದರ್ಭದಲ್ಲಿ ದಯಮಾಡಿ ಕುಟುಂಬದ ಖಾಸಗಿತನವನ್ನು ಗೌರವಿಸಿ’ ಎಂದು ಮಕ್ಕಳು ಕೋರಿದ್ದಾರೆ. ರೆಹಮಾನ್ ಮತ್ತು ಸಾಯಿರಾ ಬಾನು ಮದುವೆಯಾಗಿ 29 ವರ್ಷಗಳೇ ಆಗಿವೆ. ಅವರು ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದೇ ಇಲ್ಲ. ಇತ್ತೀಚೆಗೆ ದಂಪತಿ ಅನಂತ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈಗ ದಂಪತಿಯ ಈ ನಿರ್ಧಾರ ರೆಹಮಾನ್ ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ‘ರಾಯನ್’ ಸಿನಿಮಾದ ಸಂಗೀತ ಮೂಲಕ ಸುದ್ದಿಯಲ್ಲಿದ್ದ ರೆಹಮಾನ್ ಪ್ರಸ್ತುತ ‘ಛಾವಾ’, ‘ಥಗ್ ಲೈಫ್’, ‘ಲಾಹೋರ್ 1947’ ಮತ್ತು ‘Genie’ ಸಿನಿಮಾಗಳ ಸಂಗೀತದಲ್ಲಿ ತೊಡಗಿಸಿಕೊಂಡಿದ್ದಾರೆ.