ಮಾಡೆಲಿಂಗ್ ಯುವಕ ರೋಹಿತ್‌ ನಟನೆಯ ‘ರಕ್ತಾಕ್ಷ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ವಾಸುದೇವ ಎಸ್ ಎನ್ ನಿರ್ದೇಶನದ ಆಕ್ಷನ್‌ ಚಿತ್ರವಿದು. ನಟ ವಿಜಯ ರಾಘವೇಂದ್ರ ಮತ್ತು ನಟಿ ಸುಮನ್‌ ನಗರ್‌ಕರ್‌ ಟ್ರೇಲರ್‌ ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ವಾಸುದೇವ ಎಸ್‌ ಎನ್‌ ನಿರ್ದೇಶನದ ‘ರಕ್ತಾಕ್ಷ’ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಮೂಲತಃ ರೂಪದರ್ಶಿಯಾದ ರೋಹಿತ್‌ ಈ ಚಿತ್ರದ ಮೂಲಕ ಹೀರೋ ಆಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ನಟ ವಿಜಯ ರಾಘವೇಂದ್ರ ಮತ್ತು ನಟಿ ಸುಮನ್‌ ನಗರ್‌ಕರ್‌ ಟ್ರೇಲರ್‌ ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ವಿಜಯ ರಾಘವೇಂದ್ರ ಅವರು ಟ್ರೇಲರ್‌ ಮೆಚ್ಚಿ ಮಾತನಾಡಿ, ‘ಕತೆ ಬಗ್ಗೆ ಕಡಿಮೆ ಗೊತ್ತಿದ್ದರೆ ಒಳ್ಳೇದು. ಕತೆ ಹೆಚ್ಚು ಬಿಟ್ಟು ಕೊಟ್ಟರೂ ಕಷ್ಟ. ಕತೆಯ ಸುಳಿವೇ ಇಲ್ಲದೇ ಊಹಾಪೋಹ ಮಾಡಿಕೊಂಡು ಥಿಯೇಟರ್‌ಗೆ ಬರುವ ತರ ಮಾಡಿದರೂ ಕಷ್ಟ. ಯಾಕೆಂದರೆ ಜನ ಈಗ ಎಷ್ಟರ ಮಟ್ಟಿಗೆ ಮುಂದುವರೆದಿದ್ದಾರೆ ಎಂದರೆ ಸಣ್ಣ ಟ್ರೇಲರ್, ಟೀಸರ್ ತಮ್ಮದೇ ಕಲ್ಪನೆ‌ ಮೂಲಕ ಥಿಯೇಟರ್‌ಗೆ ಬರ್ತಾರೆ. ಕತೆ ಅವರದ್ದು ಆದರೆ ಒಪ್ಪಿಕೊಳ್ಳುತ್ತಾರೆ. ಕತೆ ಬೇರೆಯದದ್ದಾರೆ ನಾವು ಅಂದುಕೊಂಡು ಬಂದ ಕಥೆಯಲ್ಲ ಎಂದು ಬೇಜಾರಾಗುತ್ತಾರೆ. ಆದರೆ ಸಣ್ಣ ಎಳೆ, ಜನರ ನಂಬಿಕೆ ವಿಶ್ವಾಸ ಗೆಲ್ಲುವುದು ಸಿನಿಮಾದ ಮುಖಾಂತರ ಗೆಲ್ಲುವುದು ಸಾಹಸ. ಅಂತಹ ಸಾಹಸಕ್ಕೆ ರೋಹಿತ್ ಕೈ ಹಾಕಿದ್ದಾರೆ. ಬಹಳ ಚೆನ್ನಾಗಿ ಟ್ರೇಲರ್ ಮೂಡಿಬಂದಿದೆ’ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.

ನಟಿ ಸುಮನ್‌ ನಗರ್‌ಕರ್‌ ಅವರ ಪತಿ ಈ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅತಿಥಿಯಾಗಿ ಪಾಲ್ಗೊಂಡಿದ್ದ ಸುಮನ್‌, ‘ಟ್ರೇಲರ್ ತುಂಬಾ ಇಂಟ್ರೆಸ್ಟಿಂಗ್ ಆಗಿದೆ. ಸರಣಿ ಕೊಲೆ ಇದೆ ಅನ್ನೋ ಕ್ಲ್ಯೂ ಇದೆ. ಮೂರ್ನಾಲ್ಕು ಜನ ಹೀರೋಯಿನ್ ಇರುವುದು ಗೊತ್ತಾಗುತ್ತದೆ. ನನ್ನ ಪತಿ ಪೊಲೀಸ್ ಪಾತ್ರದಲ್ಲಿ ಮಾಡಿದ್ದಾರೆ. ಅವರು ನನಗೆ ಚಿತ್ರದ ಕತೆ ಹೇಳಿಲ್ಲ. ಈ ರೀತಿಯ ಮಿಸ್ಟರಿ ಸ್ಟೋರಿಯನ್ನು ಥಿಯೇಟರ್‌ನಲ್ಲಿ ನೋಡಿ‌’ ಎಂದರು. ವಕೀಲ ಹರ್ಷ ಮುತಾಲಿಕ್ ಮಾತಾನಾಡಿ, ‘ರೋಹಿತ್ ಅವರನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ. ಚಿಕ್ಕ ವಯಸ್ಸಿನಲ್ಲೇ ಮಾಡೆಲಿಂಗ್‌ನಲ್ಲಿ ಸಾಧನೆ ಮಾಡಿದ್ದಾರೆ. ನನ್ನ ಊರಿನ ಹುಡುಗ ಅನ್ನೋದು ವಿಶೇಷ. ಎಲ್ಲರಕ್ಕೆ ಬೆಳೆಯಲಿ’ ಎಂದು ಹಾರೈಸಿದರು.

ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗುತ್ತಿರುವ ರೋಹಿತ್‌, ‘ಹಾರ್ಡ್‌ವರ್ಕ್ ಮಾಡಿ‌ ಇಲ್ಲಿಗೆ ಬಂದಿದ್ದೇನೆ. ರಂಗಭೂಮಿ ಅನುಭವ ನಟನೆಗೆ ನೆರವಾಗಿದೆ. ಕನ್ನಡ ಚಿತ್ರರಂಗ ಒಂದು ಹೆಮ್ಮರ. ಈ ಹೆಮ್ಮರದಲ್ಲಿ ನಾನು ಒಂದು ಚಿಕ್ಕ ಹಸಿರು ಎಲೆಯಾಗಿದ್ದರೆ ನನ್ನ ಲೈಫ್ ಸಾರ್ಥಕ. ಉತ್ತರ ಕರ್ನಾಟಕಕ್ಕೆ ನೂರಾರು ವರ್ಷಗಳ ಕಲೆ ಇತಿಹಾಸವಿದೆ. ಬಹಳಷ್ಟು ಕಲಾವಿದರು ಬಂದಿದ್ದಾರೆ. ಅಲ್ಲಿನವರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಬೇಕು’ ಎಂದರು. ಅವರು ಹೀರೋ ಆಗಿ ನಟಿಸುವುದರ ಜೊತೆ ತಮ್ಮದೇ ಸಾಯಿ ಪ್ರೊಡಕ್ಷನ್ ಹೌಸ್ ನಿರ್ಮಾಣ ಸಂಸ್ಥೆ ಮೂಲಕ ‘ರಕ್ತಾಕ್ಷ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ವಾಸುದೇವ ಎಸ್ ಎನ್ ಅವರಿಗೂ ಇದು ಮೊದಲ ನಿರ್ದೇಶನ. ಧೀರೇಂದ್ರ ದಾಸ್ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಪ್ರಮೋದ್‌ ಶೆಟ್ಟಿ, ರೂಪಾ ರಾಯಪ್ಪ, ಅರ್ಚನಾ ಕೊಟ್ಟಿಗೆ, ರಚನಾ ದಶರತ್, ನಿವೀಕ್ಷ ನಾಯ್ಡು, ಗುರುದೇವ ನಾಗರಾಜ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೇ ಜುಲೈ 26ಕ್ಕೆ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here