ಪಾತ್ರ ಯಾವುದೇ ಇರಲಿ, ಅದನ್ನು ಸಂಪೂರ್ಣ ಅರ್ಥ ಮಾಡಿಕೊಂಡು ಅದರ ಅಂತರಂಗವನ್ನು ಶೋಧಿಸಿ ಅಭಿವ್ಯಕ್ತಿಗೊಳಿಸುವ ಕಲೆ ಅಶ್ವಥ್ ಅವರಿಗೆ ದಕ್ಕಿತ್ತು. ಆದುದರಿಂದಲೇ ಕುಟುಂಬದ ಯಜಮಾನ, ಒಲವಿನ ಸೋದರ, ಜವಾಬ್ದಾರಿಯ ತಂದೆ ಮುಂತಾದ ಸಜ್ಜನಿಕೆಯ ಪಾತ್ರಗಳ ಜೊತೆಗೆ ಖಳನಾಯಕ, ಹಾಸ್ಯ ಪಾತ್ರಗಳಲ್ಲೂ ಅವರು ಸಹಜತೆಯಿಂದ ನಟಿಸಿದರು. ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಕೆ ಎಸ್‌ ಅಶ್ವಥ್‌ (25/03/1925 – 18/01/2010) ಅವರ ಕುರಿತ ಒಂದು ಆಪ್ತ ಬರಹ.

ಸರಿ ಸುಮಾರು ರಾಜ್, ಕಲ್ಯಾಣ್, ಉದಯಕುಮಾರ್‌ ಅವರು ಚಿತ್ರರಂಗ ಪ್ರವೇಶಿಸಿದ ಕಾಲದಲ್ಲೇ ನಾಯಕನಟರಾಗಿ ಆಗಮಿಸಿದ ಕೆ.ಎಸ್. ಅಶ್ವಥ್ ಕನ್ನಡ ಚಿತ್ರರಂಗ ಕಂಡ ಮೇರು ಪ್ರತಿಭೆ. ಸರಳತೆ, ಸಜ್ಜನಿಕೆ ಮತ್ತು ಶಿಸ್ತಿಗೆ ಹೆಸರಾದ ಕರಗದಹಳ್ಳಿ ಸುಬ್ಬರಾಯಪ್ಪ ಅಶ್ವಥ್ ಅವರು ನಾಯಕನಟರಾಗಿ ಹೆಚ್ಚು ಕಾಲ ಉಳಿಯಲಿಲ್ಲ. ಅವರಲ್ಲಿದ್ದ ಶ್ರೀಮದ್ ಗಾಂಭೀರ್ಯವೇ ಪೋಷಕ ಪಾತ್ರಗಳ ಕ್ಷೇತ್ರಕ್ಕೆ ಎಳೆತಂದಿತು ಎಂದು ಕಾಣುತ್ತದೆ. ಅಶ್ವಥ್ ಅವರ ಹಿರಿಯರು ಹೊಳೆನರಸೀಪುರ ತಾಲೂಕಿನ ಕರಗದಹಳ್ಳಿಗೆ ಸೇರಿದವರು.

ಮೈಸೂರಿನಲ್ಲಿ 25/03/1925ರಲ್ಲಿ ಜನಿಸಿದ ಅಶ್ವಥ್ ಅವರು ಇಂಟ‌ರ್ ಮೀಡಿಯೇಟ್‌ವರೆಗೆ ಶಿಕ್ಷಣ ಪಡೆದರು. ಅವರ ಒಲವು ರಂಗಭೂಮಿಯ ಕಡೆಗೆ. ಆಕಾಶವಾಣಿಯಲ್ಲಿ ಸ್ವಲ್ಪ ಕಾಲ ನಾಟಕ ವಿಭಾಗದಲ್ಲಿದ್ದ ಅವರಿಗೆ ಆತ್ಮೀಯ ಸ್ನೇಹಿತರಾಗಿದ್ದ ಎನ್.ಎಸ್. ವಾಮನರಾಯರು ಅಭಿನಯದಲ್ಲಿ ತರಬೇತಿ ನೀಡಿದರು. ಬಳಿಕ ಅವರು ಸರ್ಕಾರಿ ಸೇವೆಗೆ ದಾಖಲಾದರು. ಹವ್ಯಾಸಕ್ಕಾಗಿ ನಾಟಕದಲ್ಲಿ ಪಾತ್ರ ಮಾಡುತ್ತಿದ್ದ ಅವರು ಚಿತ್ರರಂಗ ಸೇರಿದ್ದು ತೀರಾ ಅನಿರೀಕ್ಷಿತ. 1955ರಲ್ಲಿ ನಿರ್ಮಾಣವಾದ ‘ಸ್ತ್ರೀ ರತ್ನ’ ಚಿತ್ರದ ನಿರ್ದೇಶಕ ಸುಬ್ರಹ್ಮಣ್ಯಂ ಅವರು ಅಶ್ವಥ್ ಅವರನ್ನು ನಾಯಕ ಪಾತ್ರದಲ್ಲಿ ಪರಿಚಯಿಸಿದರು. ಅದು ಭಾಗಶಃ ವರ್ಣದಲ್ಲಿದ್ದ ಚಿತ್ರ.

‘ಸ್ತ್ರೀ ರತ್ನ’ ಚಿತ್ರ ಬಿಡುಗಡೆಯ ನಂತರ ಚಿತ್ರರಂಗವನ್ನೇ ನಂಬಿ ಬದುಕಲು ಸರ್ಕಾರಿ ನೌಕರಿ ತೊರೆದ ಅಶ್ವಥ್ ಎದುರಿಸಿದ್ದು ಅಪಾರ ಕಷ್ಟ ಕಾರ್ಪಣ್ಯಗಳನ್ನು, ಆ ಕಾಲದಲ್ಲಿ ಈಗಿನಷ್ಟು ಕನ್ನಡ ಚಿತ್ರಗಳೂ ತಯಾರಾಗುತ್ತಿರಲಿಲ್ಲ. ಚಿತ್ರಗಳಿಗೆ ಇಷ್ಟೊಂದು ದೊಡ್ಡ ಮಾರುಕಟ್ಟೆಯೂ ಇರಲಿಲ್ಲ. ಆದರೂ ಅಭಿನಯವನ್ನೇ ವೃತ್ತಿ ಮಾಡಿಕೊಳ್ಳಲು ಅವರು ಮದರಾಸಿನಲ್ಲಿ ನೆಲೆಸಿದರು. ‘ಸ್ತ್ರೀ ರತ್ನ’ದ ನಂತರ ‘ಕಚದೇವಯಾನಿ’, ‘ಕೋಕಿಲವಾಣಿ’ (1956) ಮತ್ತು ‘ಚಿಂತಾಮಣಿ’ (1957) ಚಿತ್ರಗಳಲ್ಲಿ ನಾಯಕನಟರಾಗಿ ಅಭಿನಯಿಸಿದರು. ಅವರ ಮೊದಲ ನಾಲ್ಕು ಚಿತ್ರಗಳಲ್ಲಿ ನಾಯಕಿಯಾಗಿದ್ದವರು ಬಿ. ಸರೋಜಾದೇವಿ. 1958ರಲ್ಲಿ ಬಿಡುಗಡೆಯಾದ ಅಣ್ಣತಂಗಿ’ ಚಿತ್ರದಲ್ಲಿ ಎರಡನೇ ನಾಯಕನಾಗಿ ಅಭಿನಯಿಸಿದ ಅಶ್ವಥ್ ಒಂದು ಡ್ಯೂಯೆಟ್ ಕೂಡ ಹಾಡಿದ್ದಾರೆ. ಪ್ರಾಯಶಃ ‘ಶಿವಲಿಂಗಸಾಕ್ಷಿ’ ಅವರು ನಾಯಕನಾಗಿ ಅಭಿನಯಿಸಿದ ಕೊನೆಯ ಚಿತ್ರ.

1960ರ ನಂತರ ಅಶ್ವಥ್ ಅವರು ನಿಧಾನವಾಗಿ ಪೋಷಕ ಪಾತ್ರಗಳತ್ತ ಹೊರಳಿದರು. ಇದೊಂದು ಬಗೆಯಲ್ಲಿ ಅವರ ಪ್ರತಿಭಾಪ್ರಕಾಶಕ್ಕೆ ಅವಕಾಶ ಮಾಡಿಕೊಟ್ಟಿತೆಂದೇ ಹೇಳಬೇಕು. ಅಲ್ಲಿಂದಾಚೆಗೆ ಅವರು ವಿಭಿನ್ನ ಬಗೆಯ ಪಾತ್ರಗಳಿಗೆ ಜೀವ ತುಂಬುತ್ತಾ ಕನ್ನಡ ಪ್ರೇಕ್ಷಕರಿಗೆ ತೀರಾ ಪರಿಚಿತರಾದರು. ಅಶ್ವಥ್ ಅವರು ಇದ್ದರೆಂದರೆ ಉತ್ತಮ ಅಭಿನಯವಿದೆ ಎಂದೇ ಭಾವಿಸುವಂತಾಯಿತು. ಪಂತುಲು ಅವರ ‘ಗಾಳಿಗೋಪುರ’ ಪಾತ್ರದಿಂದ ಶಾಶ್ವತವಾಗಿ ಪೋಷಕ ಪಾತ್ರಗಳಿಗೆ ಮೀಸಲಾದ ಅಶ್ವಥ್ ಅವರಿಗೆ ಆ ಚಿತ್ರ ಅಪಾರ ಕೀರ್ತಿಯನ್ನು ತಂದುಕೊಟ್ಟಿತು.

ಆರಂಭದಲ್ಲಿ ಹೆಚ್ಚಾಗಿ ತಯಾರಾಗುತ್ತಿದ್ದ ಭಕ್ತಿ ಪ್ರಧಾನ ಮತ್ತು ಪೌರಾಣಿಕ ಚಿತ್ರಗಳಲ್ಲಿ ಅಶ್ವಥ್ ಅವರು ಹೆಚ್ಚು ಕಡಿಮೆ ‘ನಾರದ’ನ ಪಾತ್ರಕ್ಕೆ ಮೀಸಲಾದರು. (ಮಹಿಷಾಸುರ ಮರ್ಧಿನಿ, ಸ್ವರ್ಣಗೌರಿ, ಭಕ್ತಪ್ರಹ್ಲಾದ, ದಶಾವತಾರ, ನಾಗಾರ್ಜುನ ಮುಂತಾದವು). ಸಾಮಾಜಿಕ ಚಿತ್ರಗಳ ಯುಗ ಆರಂಭವಾದ ನಂತರ ಕೌಟುಂಬಿಕ ಚಿತ್ರಗಳೇ ಪ್ರಧಾನವಾಗಿ ತಯಾರಾಗುತ್ತಿದ್ದವು. ಅಂತಹ ಚಿತ್ರಗಳಲ್ಲಿ ತಂದೆ, ಅಣ್ಣ, ಮಲಮಗನಾಗಿ ನೋಯುವ ಪಾತ್ರಗಳು ಅನಿವಾರ್ಯವಾಗಿದ್ದವು. ಆಗ ಅಶ್ವಥ್‌ರವರು ಅಂಥ ಪೋಷಕ ಪಾತ್ರಗಳನ್ನು ನಿರ್ವಹಿಸಲು ಬೇಡಿಕೆಯ ನಟರಾದರು.

ಪಾತ್ರ ಯಾವುದೇ ಇರಲಿ, ಅದನ್ನು ಸಂಪೂರ್ಣ ಅರ್ಥ ಮಾಡಿಕೊಂಡು ಅದರ ಅಂತರಂಗವನ್ನು ಶೋಧಿಸಿ ಅಭಿವ್ಯಕ್ತಿಗೊಳಿಸುವ ಕಲೆ ಅಶ್ವಥ್ ಅವರಿಗೆ ದಕ್ಕಿತ್ತು. ಆದುದರಿಂದಲೇ ಕುಟುಂಬದ ಯಜಮಾನ, ಒಲವಿನ ಸೋದರ, ಜವಾಬ್ದಾರಿಯ ತಂದೆ ಮುಂತಾದ ಸಜ್ಜನಿಕೆಯ ಪಾತ್ರಗಳ ಜೊತೆಗೆ ಖಳನಾಯಕ, ಹಾಸ್ಯ ಪಾತ್ರಗಳಲ್ಲೂ ಅವರು ಸಹಜತೆಯಿಂದ ನಟಿಸಿದರು. ಅಶ್ವಥ್ ಅವರ ಪ್ರತಿಭೆಯ ಅಭಿವ್ಯಕ್ತಿಗೆ ವಿಶಾಲ ಹರವಿನ ಪಾತ್ರಗಳೇ ಆಗಬೇಕೆಂಬ ಕಟ್ಟುಪಾಡು ಇರಲಿಲ್ಲ. ಸಣ್ಣ ಪಾತ್ರವೂ ಚಿರಕಾಲ ನೆನಪಿನಲ್ಲುಳಿಯುವಂತೆ ಮಾಡಬಲ್ಲ ಮಾಂತ್ರಿಕ ಶಕ್ತಿ ಅವರಿಗಿತ್ತು.. ‘ಶುಭಮಂಗಳ’ ಚಿತ್ರದ ಗೂರಲು ರೋಗದ ವೈದ್ಯನ ಪಾತ್ರದಲ್ಲಿನ ಅವರ ಅಭಿನಯ ಈ ಮಾತಿಗೆ ಸಾಕ್ಷಿ.

ಅಶ್ವಥ್ ಅವರು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಶ್ವಥ್‌ರವರು ಅಭಿನಯದ ಚಿರಕಾಲ ನೆನಪಿನಲ್ಲಿ ಉಳಿಯುವ ಪಾತ್ರಗಳು ಹಲವು ಚಿತ್ರಗಳಲ್ಲಿವೆ. ‘ಬೆಳ್ಳಿಮೋಡ’ ಚಿತ್ರದ ಸದಾಶಿವರಾಯರ ಪಾತ್ರ ಅಂಥದ್ದೊಂದು. ಹೆಂಡತಿ ಮತ್ತು ಒಬ್ಬಳೇ ಮಗಳಿರುವ ಸುಪ್ತ ಸಂಸಾರದಲ್ಲಿ ತುಂಟತನವನ್ನೇ ಮೈಗೂಡಿಸಿಕೊಂಡ ತಂದೆಯಾಗಿ ಹೆಂಡತಿ ಸಾಯುವಾಗ ಹಳೆಯ ಗತಲೋಕಕ್ಕೆ ಜಾರುವ ಸನ್ನಿವೇಶದಲ್ಲಿ ಅವರ ಅಭಿನಯ ಅಮೋಘ. ‘ನಾಗರಹಾವು’ ಚಿತ್ರದ ಚಾಮಯ್ಯ ಮೇಷ್ಟ್ರು ಪಾತ್ರದಲ್ಲಿ ಅಶ್ವಥ್, ಅ ಪಾತ್ರದಲ್ಲೇ ಲೀನವಾಗಿದ್ದರು. ಸಂತಾನವಿಲ್ಲದ ಮಾಸ್ತರ್ ತನ್ನ ಪ್ರೀತಿಯ -ತಂಟೆಕೋರ ವಿದ್ಯಾರ್ಥಿಯೊಬ್ಬನೊಡನೆ ಬೆಳೆಸಿಕೊಳ್ಳುವ ಮಾನವೀಯ ಸಂಬಂಧಗಳು, ಅವುಗಳಿಂದ ಎದುರಾಗುವ ಸಾಮಾಜಿಕ ತೊಡಕುಗಳು ಮತ್ತು ಸಾಮಾಜಿಕ ಸಂಬಂಧಗಳ ಸಿಕ್ಕು ಬಿಡಿಸುವ ಯತ್ನದಲ್ಲಿ ದುರಂತ ಕಾಣುವ ಪಾತ್ರವನ್ನು ಅಶ್ವಥ್ ನಿರ್ವಹಿಸಿದ ರೀತಿ ಬೆರಗುಗೊಳಿಸಿತ್ತು.

‘ನಾಗರಹಾವು’ ಚಿತ್ರದ ಯಶಸ್ಸಿಗೆ ಅಶ್ವಥ್‌ರ ಅಭಿನಯವೂ ಸಾಥಿಯಾಗಿತ್ತು. ಅಂಥ ಮತ್ತೊಂದು ಮಹತ್ವದ ಪಾತ್ರ ‘ಸರ್ವಮಂಗಳ’ದ ಉಬ್ಬು ಹಲ್ಲಿನ ಸುಬ್ಬರಾಯನ ಪಾತ್ರ. ತನಗಿಂತಲೂ ಕಿರಿಯಳಾದ ಸರ್ವಮಂಗಳೆಯನ್ನು ಬಯಸಿ ಮದುವೆಯಾಗಿ ಅವಳನ್ನು ಅಪಾರವಾಗಿ ಪ್ರೀತಿಸುವ ಕುರೂಪಿ ಸುಬ್ಬರಾಯ ಕೊನೆಗೆ ಅವಳಿಗಾಗಿ ಮರುಗುವ, ನಟರಾಜ – ಮಂಗಳೆಯರ ನಡುವಿನ ಸಂಬಂಧ ತಿಳಿದೂ ಪರಿತಪಿಸುವ ಅಸಹಾಯಕ ವ್ಯಕ್ತಿಯ ಪಾತ್ರವನ್ನು ಅಶ್ವಥ್ ಅವರು ನಿಭಾಯಿಸಿರುವ ರೀತಿಯೇ ಅಚ್ಚರಿ ಮೂಡಿಸುತ್ತದೆ. ಅಶ್ವಥ್‌ರವರ ಸುಂದರ ಮುಖವನ್ನು ಕುರೂಪಿ ಪಾತ್ರಕ್ಕೆ ಸರಿಹೊಂದಿಸಲು ಹೆಣಗಾಡುತ್ತಿರುವಾಗ ಉಬ್ಬುಹಲ್ಲನ್ನು ಸ್ವತಃ ಅಶ್ವಥ್‌ರವರೇ ಅಳವಡಿಸಿಕೊಂಡರಂತೆ! ಪಾತ್ರದ ಸರ್ವ ಲಕ್ಷಣವನ್ನು ಅರಿಯಲು ಅಶ್ವಥ್‌ರವರು ಪಡುತ್ತಿದ್ದ ಪ್ರಯತ್ನಕ್ಕೆ ಅದು ಸಾಕ್ಷಿ. ‘ಗೆಜ್ಜೆಪೂಜೆ’ ಸಂಪ್ರದಾಯ ಚಿತ್ರದಲ್ಲಿ ಕುಟುಂಬದ ಯಜಮಾನವಾಗಿಯೂ ಮಾನವೀಯ ಸಂಬಂಧಗಳಿಗೆ ತುಡಿವ ವ್ಯಕ್ತಿಯಾಗಿ ಅಶ್ವಥ್ ನೀಡಿದ ಅಭಿನಯವೂ ಅಷ್ಟೆ ಸಂಯಮಪೂರ್ಣವಾಗಿತ್ತು.

ಅಶ್ವಥ್‌ರವರ ಪ್ರತಿಭೆಯ ಮತ್ತೊಂದು ಮುಖ ಕನ್ನಡಿಗರಿಗೆ ಪರಿಚಯವಾದದ್ದು ‘ಕಸ್ತೂರಿ ನಿವಾಸ’ ಚಿತ್ರದಲ್ಲಿ. ಒಂದೆಡೆ ರಾಜ್, ಮತ್ತೊಂದೆಡೆ ಜಯಂತಿ ಅವರು ಮೇರು ಮಟ್ಟದ ಅಭಿನಯವನ್ನು ಆ ಚಿತ್ರದಲ್ಲಿ ನೀಡಿದ್ದರೆ, ಅಶ್ವಥ್, ಸೇವಕ ರಾಮಯ್ಯನ ಪಾತ್ರದ ಮೂಲಕ ತಮ್ಮ ಸಹಜಾಭಿನಯದಿಂದಲೇ ಅಭಿನಯಕ್ಕೊಂದು ಹೊಸ ಭಾಷ್ಯ ಬರೆದರು. ‘ಕಸ್ತೂರಿ ನಿವಾಸ’ದ ಏಳು-ಬೀಳುಗಳಿಗೆ ಸಾಕ್ಷಿಯಾಗುತ್ತಾ, ತನ್ನ ಯಜಮಾನನ ದುರಂತದ ಹಾದಿಯನ್ನು ಹಿಂಬಾಲಿಸುತ್ತಾ ಸಾಗುವ ರಾಮಯ್ಯನ ಸಂಕೀರ್ಣ ಮನಸ್ಥಿತಿಗೆ ಅಶ್ವಥ್ ಕನ್ನಡಿ ಹಿಡಿದಿದ್ದರು. ಕಡತ ಎತ್ತಿಕೊಂಡು ನಡುಬಗ್ಗಿಸಿ ಯಜಮಾನನನ್ನು ಹಿಂಬಾಲಿಸುತ್ತಾ, ಯಜಮಾನನಿಗೆ ಹಾಲು ನೀಡಿ ಅವನ ಅಂತರಂಗವನ್ನು ಅರಿಯಲು ತಣ್ಣಗೆ ಪ್ರಯತ್ನಿಸುತ್ತಾ ಸಂಯಮಮೂರ್ತಿಯಾದ ರಾಮಯ್ಯ ಯಜಮಾನನ ಸಾವಿನ ನಂತರ ಅಬ್ಬರಿಸುವ ಪರಿ, ಪಾತ್ರವೊಂದರ ಒಳತೋಟಿಗಳನ್ನು ಸಮರ್ಥವಾಗಿ ಬಿಂಬಿಸುವ ಅಶ್ವಥ್‌ರವರ ಪ್ರತಿಭೆಗೆ ಸಾಕ್ಷಿಯಾಗಿದೆ. ‘ಉಯ್ಯಾಲೆ’ಯ ಪುಸ್ತಕದ ಹುಳು ಶೇಷಗಿರಿ, ಅವರ ಅಪ್ರತಿಮ ಪ್ರತಿಭೆಗೆ ಸಾಕ್ಷಿಯಾದ ಮತ್ತೊಂದು ಪಾತ್ರ. ಹಾಗೆಯೇ ಪ್ರತಿಷ್ಠೆಗಾಗಿ ಕೊಲೆಮಾಡಿ ಬಳಿಕ ಪಾಪಪ್ರಜ್ಞೆಯಲ್ಲಿ ನೋಯುವ ತಂದೆ ಮತ್ತು ನ್ಯಾಯಾಧೀಶನಾಗಿ ಕ್ರಮವಾಗಿ ‘ಸೀತಾ’ ಮತ್ತು ‘ನ್ಯಾಯವೇ ದೇವರು’ ಚಿತ್ರಗಳಲ್ಲಿ ಅಶ್ವಥ್ ಅವರು ನೀಡಿರುವ ಮನೋಜ್ಞ ಅಭಿನಯ ಮರೆಯುವುದು ಸಾಧ್ಯವೆ?

ಅಶ್ವಥ್‌ರವರನ್ನು ಪ್ರೇಕ್ಷಕವರ್ಗ ಕಂಡದ್ದು ಮಧ್ಯಮ ವರ್ಗದ ತಂದೆಯ ಪಾತ್ರಗಳಲ್ಲಿ. ಪ್ರೇಕ್ಷಕರೊಡನೆ ನೇರವಾಗಿ ಸಂವಾದಕ್ಕಿಳಿಯುವಷ್ಟು ಸಹಜವಾಗಿ ಅವರು ತಂದೆಯ ಪಾತ್ರ ನಿರ್ವಹಿಸುತ್ತಿದ್ದರು. ಅಶ್ವಥ್‌ರವರ ಪ್ರತಿಭೆಗೆ ಸವಾಲಾಗಬಲ್ಲ ಪಾತ್ರಗಳ ಸೃಷ್ಟಿ ಕೊನೆಕೊನೆಗೆ ಕಡಿಮೆಯಾಗಿ ಹೋಯಿತು. ಪ್ರೇಕ್ಷಕರ ಅಭಿರುಚಿಯಂತೆಯೇ ನಿರ್ದೇಶಕರು ಪೋಷಕ ಪಾತ್ರಗಳನ್ನು ಕಡೆಗಣಿಸಿದರು. ನಾಯಕ-ನಾಯಕಿಯರೇ ವಿಜೃಂಭಿಸತೊಡಗಿದ ನಂತರ ಅಶ್ವಥ್‌ರವರಂಥ ಅಭಿಜಾತ ನಟರು ಬೇಡವಾದರು. ಕೊನೆಗೆ ಚಲನಚಿತ್ರರಂಗದ ವರ್ತನೆಯಿಂದ ಬೇಸತ್ತು ನಾಲ್ಕು ದಶಕಗಳ ಚಿತ್ರರಂಗದ ಕರಳುಬಳ್ಳಿ ಸಂಬಂಧವನ್ನು ಕತ್ತರಿಸಿಕೊಂಡರು. ಪಾತ್ರ ಮತ್ತು ಬದುಕಿನಲ್ಲಿ ‘ನಮ್ಮವರೇ’ ಆಗಿದ್ದ, ನಮ್ಮ ಸಂಸ್ಕೃತಿಯ ವಕ್ತಾರನಂತಿದ್ದ ಅಶ್ವಥ್‌ರವರ ನಿರ್ಧಾರ ಕನ್ನಡ ಚಿತ್ರರಂಗ ನಮ್ಮತನದಿಂದ ದೂರಸರಿದಿದ್ದ ವಿದ್ಯಮಾನಕ್ಕೆ ಸಂಕೇತವೆನಿಸಿತ್ತು.

LEAVE A REPLY

Connect with

Please enter your comment!
Please enter your name here