‘ಬಿಗ್‌ಬಾಸ್‌’ ಖ್ಯಾತಿಯ ಶಶಿ ಬೆಳ್ಳಿತೆರೆಗೆ ಪರಿಚಯವಾಗುತ್ತಿರುವ ‘ಮೆಹಬೂಬಾ’ ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದೆ. ಕೃಷಿ ಸಚಿವ ಚೆಲುವರಾಯಸ್ವಾಮಿ ಅವರು ಪೋಸ್ಟರ್‌ ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಅನೂಪ್‌ ಆಂಥೋನಿ ನಿರ್ದೇಶಿಸಿರುವ ಚಿತ್ರದ ನಾಯಕಿಯಾಗಿ ಪಾವನಾ ನಟಿಸಿದ್ದಾರೆ.

‘ಬಿಗ್‌ಬಾಸ್’ ಖ್ಯಾತಿಯ ಶಶಿ ಹುಟ್ಟುಹಬ್ಬದ ಅಂಗವಾಗಿ ಅವರು ಹೀರೋ ಆಗಿ ನಟಿಸಿರುವ ‘ಮೆಹಬೂಬಾ’ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಕೃಷಿ ಸಚಿವ ಚೆಲುವರಾಯಸ್ವಾಮಿ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈ ಕುರಿತು ಮಾತನಾಡಿದ ಸಚಿವರು, ‘ಮೆಹಬೂಬಾ ಸಿನಿಮಾವನ್ನು ಶಶಿ ಅವರೇ ನಿರ್ಮಿಸಿ ನಾಯಕರಾಗಿ ನಟಿಸಿದ್ದಾರೆ. ಲಾಭ, ನಷ್ಟ ಹಾಗೂ ಹೆಸರು ಅವರದ್ದೇ. ರಾಜ್ಯದ ಜನ ಆಶೀರ್ವಾದ ಮಾಡಬೇಕು. ನಾಯಕಿ ನನ್ನ ಗೆಳೆಯನ ಮಗಳು. ಇಬ್ಬರಿಗೂ ಯಶಸ್ಸು ಸಿಗಲಿ’ ಎಂದರು. ಹೀರೋ ಶಶಿ ಮಾತನಾಡಿ ‘ಮೆಹಬೂಬಾ ನನಗೆ ಎಮೋಷನಲ್ ಜರ್ನಿ. ಒಂದು ವಿಷಯವನ್ನು ಜನರಿಗೆ ತಲಿಪಿಸಬೇಕು ಎನ್ನುವುದು ನಮ್ಮ ಅಜೆಂಡಾ ಆಗಿರುತ್ತದೆ. ಎಷ್ಟೇ ಸಿನಿಮಾಗಳು ಬಂದರು. ಹೆಸರು ಮಾಡೋದು 10 ರಿಂದ 15 ಸಿನಿಮಾಗಳಷ್ಟೆ. ಆ ಸಿನಿಮಾಗಳಲ್ಲಿ ನಮ್ಮದೊಂದು ಆಗಲಿ ಎನ್ನುವುದು ನಮ್ಮ ಕನಸು’ ಎಂದರು.

ನಿರ್ದೇಶಕ ಅನೂಪ್ ಆಂಥೋನಿ ಮಾತನಾಡಿ, ‘ಅದ್ಭುತ ಲವ್ ಸ್ಟೋರಿ ಚಿತ್ರದಲ್ಲಿದೆ. ಶಶಿ ಸರ್ ಲಾಂಚ್ ಆಗುತ್ತಿದ್ದಾರೆ. ಪಾವನಾ ಮೇಡಂ ಪಾತ್ರಕ್ಕೆ ತುಂಬಾ ಸ್ಕೋಪ್‌ ಇದೆ. ಒಟ್ಟು 5 ಹಾಡು ಈ ಸಿನಿಮಾದಲ್ಲಿವೆ’ ಎಂದರು. ಕೇರಳದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಚಿತ್ರಕಥೆ ಮಾಡಲಾಗಿದೆ. ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಾಗುತ್ತಿವೆ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ. ಮ್ಯಾಥ್ಯೂಸ್‌ ಮನು ಸಂಗೀತ ನಿರ್ದೇಶನವಿರುವ ಚಿತ್ರದ ಹಾಡುಗಳನ್ನು ಯೋಗರಾಜ್ ಭಟ್ ಮತ್ತು ರಘು ಶಾಸ್ತ್ರಿ ರಚಿಸಿದ್ದಾರೆ. ಸಂಭಾಷಣೆ ರಘು ಶಾಸ್ತ್ರಿ ಅವರದೆ. ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ, ಕಲೈ ನೃತ್ಯನಿರ್ದೇಶನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here