ಕನ್ನಡ ಸಿನಿಮಾರಂಗ ಕಂಡ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್. 1933 ಡಿಸೆಂಬರ್ 1ರಂದು ಪಿರಿಯಾಪಟ್ಟಣ ತಾಲೂಕಿನ ಕಣಗಾಲ ಗ್ರಾಮದಲ್ಲಿ ಹುಟ್ಟಿದ ಇವರು, ಕಾದಂಬರಿ, ಸಣ್ಣಕತೆಗಳನ್ನು ತೆರೆಯ ಮೇಲೆ ತಂದವರು. ಅವರ ಜನ್ಮದಿನದ ಸಂದರ್ಭದಲ್ಲಿ ನೀವು ನೋಡಲೇಬೇಕಾದ ಅವರ ಐದು ಸಿನಿಮಾಗಳಿವು.

ಡಿಸೆಂಬರ್ 1 ಪುಟ್ಟಣ್ಣ ಕಣಗಾಲ್ ಅವರ ಹುಟ್ಟುಹಬ್ಬ. ಕನ್ನಡ ಸಿನಿಮಾರಂಗದಲ್ಲಿ ‘ಚಿತ್ರ ಬ್ರಹ್ಮ’ನೆಂಬ ಬಿರುದು ಹೊಂದಿರುವ ಪುಟ್ಟಣ್ಣ ಕಣಗಾಲ್ ಎಂಬ ಸುಬ್ರವೇಷ್ಠಿ ರಾಮಸ್ವಾಮಿ ಸೀತಾರಾಮ ಶರ್ಮ ಹುಟ್ಟಿದ್ದು 1933ರಲ್ಲಿ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಕಣಗಾಲ ಗ್ರಾಮದ ಪುಟ್ಟಣ್ಣ, ಎಸ್ಸೆಸ್ಸೆಲ್ಸಿ ಫೇಲ್ ಆಗಿದ್ದರೂ ನಾಟಕ ಮತ್ತು ಸಿನಿಮಾದ ಹುಚ್ಚು ಎಳವೆಯಲ್ಲೇ ಇತ್ತು. ತಾನು ನಿರ್ದೇಶಕನಾಗಬೇಕು ಎಂಬ ಅದಮ್ಯ ಆಸೆ ಹೊತ್ತ ಪುಟ್ಟಣ್ಣ, ಪಳಗಿದ್ದು ಬಿ ಆರ್ ಪಂತುಲು ಅವರ ಗರಡಿಯಲ್ಲಿ. ಮೊದಲ ಬಾರಿ ‘ಸ್ಕೂಲ್ ಮಾಸ್ಟರ್’ ಎಂಬ ಮಲಯಾಳಂ ಸಿನಿಮಾ ನಿರ್ದೇಶಿಸುವ ಮೂಲಕ ನಿರ್ದೇಶಕನ ಕ್ಯಾಪ್ ಧರಿಸಿದ ಪುಟ್ಟಣ್ಣ ಕನ್ನಡದಲ್ಲಿ ನಿರ್ದೇಶಿಸಿದ ಮೊದಲ ಸಿನಿಮಾ ‘ಬೆಳ್ಳಿ ಮೋಡ’. ಇವರು ಮಲಯಾಳಂನಲ್ಲಿ 6, ತಮಿಳು ಮತ್ತು ತೆಲುಗಿನಲ್ಲಿ ತಲಾ ಮೂರು, ಹಿಂದಿಯಲ್ಲಿ ಒಂದು ಸಿನಿಮಾ ನಿರ್ದೇಶಿಸಿದ್ದಾರೆ.

ಪುಟ್ಟಣ್ಣ ಕಣಗಾಲ್ ಕನ್ನಡ ಸಿನಿಮಾರಂಗಕ್ಕೆ ನೀಡಿದ ಕೊಡುಗೆ ಅನನ್ಯ. ಕಾದಂಬರಿ, ಸಣ್ಣ ಕತೆಗಳನ್ನು ಆಧರಿಸಿ ಸಿನಿಮಾ ಮಾಡಿದ ಪುಟ್ಟಣ್ಣ ಸ್ತ್ರೀ ಪ್ರಧಾನ ಚಿತ್ರಗಳಿಗೆ ಒತ್ತುಕೊಟ್ಟವರು. ಆ ಕಾಲದಲ್ಲಿ ತಮ್ಮ ಸಿನಿಮಾಗಳಲ್ಲಿ ವಿಭಿನ್ನ ರೀತಿಯ ಕಥಾವಸ್ತುಗಳನ್ನು ತೆರೆಗೆ ತಂದವರು. ವಿಶೇಷವಾಗಿ ಹೇಳಬೇಕೆಂದರೆ ಅವರ ಯಾವುದೇ ಸಿನಿಮಾದ ಕಥಾವಸ್ತು ಪುನರಾವರ್ತನೆಯಾಗಲಿಲ್ಲ. ಅವರ ಸಿನಿಮಾದಲ್ಲಿನ ಹಾಡುಗಳು ಅರ್ಥಗರ್ಭಿತವಾಗಿರುತ್ತಿತ್ತು. ಅವರು ಬಳಸುವ ದೃಶ್ಯರೂಪಕಗಳು ವಿಭಿನ್ನವಾಗಿರುತ್ತಿತ್ತು. ಸಿನಿಮಾ ಚಿತ್ರಕತೆ, ತಾಂತ್ರಿಕತೆಯಲ್ಲಿ ವಿಶಿಷ್ಟ ಪ್ರಯೋಗಗಳನ್ನು ಮಾಡಿ ಕನ್ನಡ ಸಿನಿಮಾ ಜಗತ್ತನ್ನು ಮತ್ತಷ್ಟು ವಿಸ್ತರಿಸಿದವರು ಪುಟ್ಟಣ್ಣ ಕಣಗಾಲ್. ಪುಟ್ಟಣ್ಣ ಈ ಜಗತ್ತಿನಿಂದ ಮರೆಯಾಗಿ 39 ವರ್ಷಗಳು ಕಳೆದಿದ್ದರೂ ಅವರು ನಿರ್ದೇಶಿಸಿದ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಮೇರುಕೃತಿಯಾಗಿಯೇ ಉಳಿದುಕೊಂಡಿದೆ.

ಮಿಸ್ ಮಾಡದೇ ನೋಡಿ ಈ ಐದು ಚಿತ್ರಗಳು

ನಾಗರಹಾವು (1972) | ತರಾಸು ಅವರ ‘ಸರ್ಪ ಮತ್ಸರ’, ‘ಎರಡು ಹೆಣ್ಣು ಒಂದು ಗಂಡು’ ಮತ್ತು ‘ನಾಗರಹಾವು’ ಈ ಮೂರು ಕಾದಂಬರಿಗಳನ್ನು ಸೇರಿಸಿ ಪುಟ್ಟಣ್ಣನವರೇ ‘ನಾಗರಹಾವು’ ಸಿನಿಮಾಗೆ ಚಿತ್ರಕತೆ ಬರೆದಿದ್ದರು. ವಿಷ್ಣುವರ್ಧನ್, ಅಂಬರೀಶ್, ಆರತಿ, ಶುಭಾ ತಾರಾಗಣದಲ್ಲಿದ್ದ ಈ ಸಿನಿಮಾ ಹಿಟ್ ಆಗಿತ್ತು. ನಾವು ಈಗಲೂ ಈ ಚಿತ್ರದ ‘ಬಾರೇ ಬಾರೇ ಚಂದದ ಚೆಲುವಿನ ತಾರೇ’, ‘ಹಾವಿನ ದ್ವೇಷ ಹನ್ನೆರಡು ವರುಷ’, ‘ಕನ್ನಡ ನಾಡಿನ ವೀರ ರಮಣಿಯ’ ಹಾಡುಗಳನ್ನು ಗುನುಗುತ್ತಿರುತ್ತೇವೆ.

ಎಡಕಲ್ಲು ಗುಡ್ಡದ ಮೇಲೆ (1973) | ಭಾರತೀಸುತ ಅವರು ಬರೆದ ‘ಎಡಕಲ್ಲು ಗುಡ್ಡದ ಮೇಲೆ’ ಕಾದಂಬರಿಯನ್ನು ಆಧರಿಸಿದ ಈ ಸಿನಿಮಾ ಮಾನವನ ಲೈಂಗಿಕತೆ ಮತ್ತು ಅಗತ್ಯಗಳ ನಿರ್ಭೀತ ಅನ್ವೇಷಣೆಯಾಗಿದೆ. ಜಯಂತಿ ಮತ್ತು ಆರತಿಯವರ ಅದ್ಭುತ ನಟನೆಯ ಚಿತ್ರ ಆಗ ಬಾಕ್ಸ್ ಆಫೀಸ್ ಹಿಟ್ ಆಗಿತ್ತು. ಈ ಸಿನಿಮಾದ ‘ವಿರಹಾ ನೂರು ನೂರು ತರಹ’, ‘ಸಂತೋಷ ಆಹಾ.. ಸಂತೋಷ ಓಹೋ…’, ಎವರ್‌ಗ್ರೀನ್‌ ಸಾಂಗ್ಸ್‌.

ರಂಗನಾಯಕಿ (1981) | ರಂಗಭೂಮಿ ಕಲಾವಿದೆಯ ಕತೆ ಹೇಳುವ ಆರತಿ ನಟನೆಯ ಈ ಚಿತ್ರ ಪುಟ್ಟಣ್ಣನವರ ನಿರ್ದೇಶನದ ಉತ್ತಮ ಸಿನಿಮಾಗಳಲ್ಲೊಂದು. ಈಡಿಪಸ್ ಕಾಂಪ್ಲೆಕ್ಸ್‌ನಂತಹ ವಿಷಯವನ್ನು ಹೊಂದಿರುವ ಈ ಸಿನಿಮಾದಲ್ಲಿನ ‘ಮಂದಾರ ಪುಷ್ಪವು ನೀನು’, ‘ಸಿಂಧೂರ ಪ್ರತಿಮೆಯು ನೀನು’ ಹಾಡುಗಳನ್ನು ಮರೆಯಲಾದೀತೇ?

ಶರಪಂಜರ (1971) | ಪ್ರಸವಾನಂತರದ ಖಿನ್ನತೆ, ಪರಹೆಣ್ಣಿನ ಸಂಗ, ಪುರುಷಾಹಂಕಾರ ಮೊದಲಾದ ವಿಷಯಗಳನ್ನು ಪುಟ್ಟಣ್ಣ ‘ಶರಪಂಜರ’ ಸಿನಿಮಾ ಮೂಲಕ ತೋರಿಸಿದ್ದಾರೆ. ಕಲ್ಪನಾ, ಲೀಲಾವತಿ, ಗಂಗಾಧರ್ ನಟನೆಯ ಈ ಸಿನಿಮಾ ಹೆಣ್ಣು ಮನಸ್ಸಿನ ಸೂಕ್ಷ್ಮಗಳನ್ನು ಪರದೆ ಮೇಲೆ ತಂದ ಚಿತ್ರವಾಗಿತ್ತು. ಈ ಸಿನಿಮಾದ ‘ಕೊಡಗಿನ ಕಾವೇರಿ, ನೀ ಬೆಡಗಿನ ವಯ್ಯಾರಿ’, ‘ಹದಿನಾಲ್ಕು ವರುಷ ವನವಾಸದಿಂದ ಮರಳಿ ಬಂದಳು ಸೀತೆ’ ನಿಮಗೆ ನೆನಪಿರಬೇಕಲ್ಲವೇ?

ಕಥಾ ಸಂಗಮ (1976) | ಮೂರು ವಿಭಿನ್ನ ಕಥೆಗಳನ್ನು ಒಳಗೊಂಡಿರುವ ಸಂಕಲನ ಚಿತ್ರ ‘ಕಥಾ ಸಂಗಮ’. ಗಿರಡ್ಡಿ ಗೋವಿಂದರಾಜ್ ಅವರ ಹಂಗು, ವೀಣಾ ಯಲ್ಬುರ್ಗಿಯವರ ಅತಿಥಿ ಮತ್ತು ಈಶ್ವರ ಚಂದ್ರ ಅವರ ಮುನಿತಾಯಿ ಸಣ್ಣ ಕಥೆಗಳನ್ನು ಆಧರಿಸಿದ ‘ಕಥಾ ಸಂಗಮ’ ಸಿನಿಮಾ ನೈತಿಕತೆ, ವಿಷಾದ ಮತ್ತು ಸಾಮಾಜಿಕ ನಿಯಮಗಳ ವಿಷಯಗಳನ್ನು ಪರಿಶೋಧಿಸುತ್ತದೆ. ಈ ಚಿತ್ರದ ಮೂಲಕವೇ ಸೂಪರ್‌ಸ್ಟಾರ್ ರಜನಿಕಾಂತ್ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದು.

LEAVE A REPLY

Connect with

Please enter your comment!
Please enter your name here