‘ಕಾಂತಾರ’ ಸಿನಿಮಾ ನಟ, ನಿರ್ದೇಶಕ ರಿಷಭ್ ಶೆಟ್ಟಿ ಅವರಿಗೆ ಅಮೆರಿಕ ಕನ್ನಡಿಗರು ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಗೌರವ ನೀಡಿ ಪುರಸ್ಕರಿಸಿದ್ದಾರೆ. ವಾಷಿಂಗ್ಟನ್ ನಗರದ ಪ್ಯಾರಾಮೌಂಟ್ ಥಿಯೇಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಿಷಭ್ ಅವರನ್ನು ಪುರಸ್ಕರಿಸಲಾಯ್ತು.
ನಟ, ನಿರ್ದೇಶಕ ರಿಷಭ್ ಶೆಟ್ಟಿ ಇತ್ತೀಚೆಗೆ ಪತ್ನಿ ಪ್ರಗತಿ ಶೆಟ್ಟಿ ಅವರೊಂದಿಗೆ ಅಮೆರಿಕದ ವಾಷಿಂಗ್ಟನ್‌ನ ಸಿಯಾಟೆಲ್‌ಗೆ ಭೇಟಿ ನೀಡಿದ್ದರು. ಅಲ್ಲಿನ ಪ್ರತಿಷ್ಠಿತ ಪ್ಯಾರಾಮೌಂಟ್ ಥಿಯೇಟರ್‌ನಲ್ಲಿ ರಿಷಬ್ ಶೆಟ್ಟಿ ಅವರಿಗೆ ‘ವಿಶ್ವ ಶ್ರೇಷ್ಠ ಕನ್ನಡಿಗ 2023’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯನ್ನು ಅಲ್ಲಿನ ಸಹ್ಯಾದ್ರಿ ಕನ್ನಡ ಸಂಘ ಹಾಗೂ ವಾಷಿಂಗ್ಟನ್ ರಾಜ್ಯದ ಕನ್ನಡಿಗರಾದ ಮನು ಗೌರವ್ ಮತ್ತು ತಂಡದವರು ಪ್ರಧಾನ ಮಾಡಿ ಗೌರವಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸೆನೆಟರ್ ಡಾ ದೆರೀಕ್ ಟ್ರಸ್ಫರ್ಡ್, ‘ಕಾಂತಾರ’ ಯೂನಿವರ್ಸಲ್ ಸಿನಿಮಾ ಎಂದು ಶ್ಲಾಘಿಸಿದರು. ರಿಷಭ್ ತಮ್ಮನ್ನು ಪುರಸ್ಕರಿಸಿದ ಅಮೆರಿಕ ಕನ್ನಡಿಗರಿಗೆ ಧನ್ಯವಾದ ಅರ್ಪಿಸಿ ಮಾತನಾಡಿದರು.
ಹನಿಯೊಳಗೊಂದು ಸಾಗರವೇ ಇರುವಂತೆ, ಕನ್ನಡವನ್ನು ಹೃದಯದಲ್ಲಿಟ್ಟುಕೊಂಡು ದೂರದ ಅಮೇರಿಕಾದಲ್ಲಿ ನೆಲೆಸಿರುವ ಸಹಸ್ರಾರು ಹೆಮ್ಮೆಯ ಕನ್ನಡಿಗರ ಸಮ್ಮುಖದಲ್ಲಿ –
— Rishab Shetty (@shetty_rishab) June 28, 2023
ಸಹ್ಯಾದ್ರಿ ಕನ್ನಡ ಸಂಘದ ವತಿಯಿಂದ ವಾಷಿಂಗ್ಟನ್‌ನ ಸಿಯಾಟಲ್ನಲ್ಲಿ “ವಿಶ್ವ ಶ್ರೇಷ್ಠ ಕನ್ನಡಿಗ 2023” ಪ್ರಶಸ್ತಿ ನೀಡಿದ್ದಾರೆ. ಈ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಾನು ಸದಾ ಆಭಾರಿ.… pic.twitter.com/sP0BCgt1Oj
ಪ್ಯಾರಾಮೌಂಟ್ ಥಿಯೇಟರ್‌ಗೆ 95 ವರ್ಷಗಳ ಇತಿಹಾಸವಿದೆ. ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸೇರಿದಂತೆ ಸಾಕಷ್ಟು ಗಣ್ಯರು ಈ ಸ್ಥಳದಲ್ಲಿ ಭಾಷಣ ಮಾಡಿದ್ದಾರೆ. ಅನೇಕ ಹೆಸರಾಂತ ಕಲಾವಿದರ ಕಾರ್ಯಕ್ರಮಗಳು ಇಲ್ಲಿ ನಡೆದಿವೆ. ಇಂತಹ ಇತಿಹಾಸವಿರುವ ಪ್ಯಾರಾಮೌಂಟ್ ಥಿಯೇಟರ್‌ನಲ್ಲಿ ರಿಷಭ್ ಅವರಿಗೆ ಗೌರವ ಸಂದಿರುವುದು ವಿಶೇಷ. ಚಿನ್ನದ ಲೇಪನ ಹೊಂದಿರುವ ಈ ಟ್ರೋಫಿ, ಸುಮಾರು ಐದು ಕೆಜಿ ತೂಕವಿದೆ. ಸಮಾರಂಭದಲ್ಲಿ 1800ಕ್ಕೂ ಅಧಿಕ ಕನ್ನಡಿಗರು ಭಾಗಿಯಾಗಿದ್ದರು.