ನಂದೀಶ್‌ ನಿರ್ದೇಶನದ ‘ರುದ್ರ ಗರುಡ ಪುರಾಣ’ ಸಿನಿಮಾದ ಟೀಸರ್‌ ರಿಲೀಸ್‌ ಆಗಿದೆ. ನಟ ಶಿವರಾಜಕುಮಾರ್‌ ಟ್ರೇಲರ್‌ ಲಾಂಚ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದು ಎರಡು ಉಪಕಥೆಗಳೊಂದಿಗೆ ಹೆಣೆದಿರುವ ಚಿತ್ರಕಥೆ. ರಿಷಿ ಮತ್ತು ಪ್ರಿಯಾಂಕಾ ತಿಮ್ಮೇಶ್‌ ಮುಖ್ಯಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ರಿಷಿ ಮತ್ತು ಪ್ರಿಯಾಂಕಾ ತಿಮ್ಮೇಶ್‌ ನಟನೆಯ ‘ರುದ್ರ ಗರುಡ ಪುರಾಣ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಇದು ಎರಡು ಉಪಕಥೆಗಳನ್ನಿಟ್ಟುಕೊಂಡ ಹೆಣೆದ ಚಿತ್ರಕಥೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ನಂದೀಶ್‌. ಅವರು ಚಿತ್ರದ ಬಗ್ಗೆ ಹೇಳುತ್ತಾ, ‘1955ರಲ್ಲಿ ನ್ಯೂಯಾರ್ಕ್‌ನಿಂದ ಮಿಯಾನ್ ಸಿಟಿಗೆ ಹೊರಟಿದ್ದ 914 ವಿಮಾನ ಮಿಸ್ ಆಗುತ್ತದೆ. ವಿಮಾನದ ಸುಳಿವು ಸಿಕ್ಕಿರುವುದಿಲ್ಲ. ಇದಾದ ಮೂವತ್ತು ವರ್ಷಗಳ (1985ರಲ್ಲಿ) ನಂತರ ಮತ್ತೆ ಆ ವಿಮಾನ ವಾಪಸ್ ಬರುತ್ತದೆ! ಅದು ಹೇಗೆ…? ಹಾಗೂ ಒಬ್ಬ ರಾಜ ಇಡೀ ಭೂಮಂಡಲನೇ ಗೆಲ್ಲಬೇಕು ಅಂತ ಆಸೆಯಿಂದ ತನ್ನ‌ ಪಕ್ಕದ ದೇಶದ ಮೇಲೆ ಯುದ್ದಕ್ಕೆ ಹೋಗಿ‌ ಲಕ್ಷಾಂತರ ಜನರನ್ನು ಕೊಂದು ಜಯ‌ ಸಾಧಿಸಿರುತ್ತಾನೆ.‌ ಅವರ ಸುತ್ತ ಒಂದು ಕತೆಯಿದೆ.‌ ಈ ಎರಡು ಉಪಕಥೆಗಳೇ ನಮ್ಮ‌ ಚಿತ್ರದ ಕಥೆಗೆ ಸ್ಪೂರ್ತಿ’ ಎನ್ನುತ್ತಾರೆ.

‘ಕವಲುದಾರಿ’ ಚಿತ್ರದ ನಂತರ ರಿಷಿ ಇಲ್ಲಿ ಮತ್ತೊಮ್ಮೆ ಪೊಲೀಸ್‌ ಪಾತ್ರದಲ್ಲಿ ನಟಿಸಿದ್ದಾರೆ. ‘ನಮ್ಮ‌ ಸುತ್ತಮುತ್ತ ನಡೆಯುವ ಅನೇಕ ಸಮಸ್ಯೆಗಳನ್ನಿಟ್ಟುಕೊಂಡು ನಂದೀಶ್ ಈ ಚಿತ್ರದ ಕಥೆ ಮಾಡಿದ್ದಾರೆ. ರುದ್ರ ನನ್ನ ಪಾತ್ರದ ಹೆಸರು. ವಿಶೇಷವಾದ ಕತೆ’ ಎನ್ನುತ್ತಾರೆ ರಿಷಿ. ನಟಿ ಪ್ರಿಯಾಂಕಾ ತಿಮ್ಮೇಶ್‌ ಅವರಿಗೆ ಇದು ಎರಡನೇ ಸಿನಿಮಾ. ಬಹುಭಾಷಾ ನಟ ವಿನೋದ್‌ ಆಳ್ವಾ ಅವರು ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಜೇಕಬ್ ವರ್ಗೀಸ್‌ ಹಾಗೂ ನಾನು ಸ್ನೇಹಿತರು. ಜೇಕಬ್ ಅವರ ಜೊತೆಗೆ ಕೆಲಸ ಮಾಡುತ್ತಿದ್ದಾಗಿನಿಂದಲೂ ನನಗೆ ನಂದೀಶ್ ಪರಿಚಯ.‌‌ ನಂದೀಶ್ ಈ ಚಿತ್ರದ ಕಥೆ ಹೇಳಿದಾಗ ಇಷ್ಟವಾಯಿತು’ ಎನ್ನುತ್ತಾರೆ ಆಳ್ವಾ. ಕೆ ಎಸ್ ಶ್ರೀಧರ್, ಗಿರೀಶ್ ಶಿವಣ್ಣ, ಶಿವರಾಜ ಕೆ ಆರ್ ಪೇಟೆ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅಶ್ವಿನಿ ಲೋಹಿತ್‌ ನಿರ್ಮಾಣದ ಚಿತ್ರಕ್ಕೆ ಕೆಪಿ ಸಂಗೀತ ಸಂಯೋಜನೆ, ಸಂದೀಪ್‌ ಕುಮಾರ್‌ ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆಯಿದೆ.

LEAVE A REPLY

Connect with

Please enter your comment!
Please enter your name here