ಅತ್ಯುತ್ತಮ ಪ್ರಾದೇಷಿಕ ಭಾಷಾ ಸಿನಿಮಾ ರಾಷ್ಟ್ರಪ್ರಶಸ್ತಿ ಪಡೆದ ‘ಅಕ್ಷಿ’ ಸಿನಿಮಾ ಡಿಸೆಂಬರ್‌ 3ರಂದು ತೆರೆಕಾಣುತ್ತಿದೆ. ಮನೋಜ್‌ ಕುಮಾರ್ ನಿರ್ದೇಶನದ ಸಿನಿಮಾದಲ್ಲಿ ನೇತ್ರದಾನಕ್ಕೆ ಪ್ರೇರೇಪಿಸುವ ಕತೆಯಿದೆ. ನಿರ್ಮಾಪಕ ಜಾಕ್ ಮಂಜು ಚಿತ್ರವನ್ನು ರಾಜ್ಯದಲ್ಲಿ ವಿತರಣೆ ಮಾಡುತ್ತಿದ್ದಾರೆ.

67ನೇ ರಾಷ್ಟ್ರಪ್ರಶಸ್ತಿ ಸಂದರ್ಭದಲ್ಲಿ ‘ಅಕ್ಷಿ’ ಅತ್ಯುತ್ತಮ ಪ್ರಾದೇಷಿಕ ಭಾಷಾ ಸಿನಿಮಾ ಗೌರವಕ್ಕೆ ಪಾತ್ರವಾಗಿತ್ತು. ಕಲಾದೇಗುಲ ಫಿಲಂಸ್‌ ಬ್ಯಾನರ್‌ನಲ್ಲಿ ಸಿದ್ಧವಾಗಿರುವ ಸಿನಿಮಾ ಇದೇ ಡಿ. 3ಕ್ಕೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ವಿಚಾರ ಹೇಳಿಕೊಳ್ಳಲು ಚಿತ್ರತಂಡ ಮಾಧ್ಯಮದ ಮುಂದೆ ಬಂದಿತ್ತು. ಅಷ್ಟೇ ಅಲ್ಲ, ಪಿಆರ್​ಕೆ ಸಂಸ್ಥೆಯೂ ಈ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿತ್ತು. ಆ ವಿಚಾರವನ್ನು ತಂಡ ನೆನಪು ಮಾಡಿಕೊಂಡಿತು. ಅಗಲಿದ ನಟ ಪುನೀತ್ ಭಾವಚಿತ್ರಕ್ಕೆ ನಮಿಸುವ ಮೂಲಕ ಮಾತುಕತೆ ಆರಂಭವಾಯಿತು. ಚಿತ್ರದ ನಿರ್ಮಾಪಕರಲ್ಲೊಬ್ಬರಾದ ಕಲಾದೇಗುಲ ಶ್ರೀನಿವಾಸ್ ಮಾತನಾಡಿ, ”ಅಕ್ಟೋಬರ್ ತಿಂಗಳ ಎರಡನೇ ವಾರದಲ್ಲಿ ನಾವು ಅಪ್ಪು ಅವರನ್ನು ಭೇಟಿಯಾಗಿದ್ದೆವು, ನಾನು ಸಿನಿಮಾ ನೋಡಬೇಕು ಎಂದು ಅಪ್ಪು ಅವರು ಆಸೆ ಪಟ್ಟರು. ಅಂತೆಯೇ ನಾವು ಅವರಿಗೆ ಖಾಸಗಿ ಲಿಂಕ್ ಒಂದನ್ನು ನೀಡಿದೆವು. ಆದರೆ ಅವರು ಸಿನಿಮಾ ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ. ನನ್ನ ಮನಸ್ಸು ಹೇಳುತ್ತಿದೆ ಅವರು ಸಿನಿಮಾ ನೋಡಿದ್ದಾರೆಂದು. ಒಂದೊಮ್ಮೆ ಅವರು ನೋಡಿಲ್ಲವಾದರೆ ಅವರು ದಾನ ಮಾಡಿರುವ ಕಣ್ಣುಗಳಾದರೂ ‘ಅಕ್ಷಿ’ ಸಿನಿಮಾವನ್ನು ನೋಡುತ್ತವೆ” ಎಂದು ಸುದ್ದಿಗೋಷ್ಠಿಯಲ್ಲಿ ಭಾವುಕರಾದರು.

ನಿರ್ದೇಶಕ ಮನೋಜ್ ಕುಮಾರ್ ಮಾತನಾಡಿ, “ಈ ಕಥೆ ಹುಟ್ಟಿದ್ದಕ್ಕೆ ಕಾರಣವೇ ವರನಟ ರಾಜಕುಮಾರ್‌. ನನ್ನ ಊರು ಹಾಸನ ಜಿಲ್ಲೆಯ ಬೇಲೂರು. ರಾಜಕುಮಾರ್‌ ಅವರು ನಿಧನರಾದ ದಿನಗಳಲ್ಲಿ ನಾನು ಆಗ ಊರಿನಲ್ಲಿದ್ದೆ. ಅವರು ಇನ್ನಿಲ್ಲ ಅಂತ ಜನರು ದುಃಖ ಪಡುತ್ತಿದ್ದ ಹೊತ್ತಲೇ ಅವರು, ಕಣ್ಣನ್ನು ದಾನ ಮಾಡಿದ್ರಂತೆ ಅಂತ ಅಚ್ಚರಿ ವ್ಯಕ್ತಪಡಿಸುತ್ತಿದ್ರು. ಆ ಸಂಬಂಧವಾಗಿ ಸಾಕಷ್ಟು ಸುದ್ದಿಗಳು ಬಂದಿದ್ದವು. ಅದು ನನಗೆ ಒಂಥರ ಕಾಡತೊಡಗಿತು. ನೇತ್ರದಾನ ಅನ್ನೋದು ಹೇಗೆ ಇನ್ನೊಬ್ಬರ ಬದುಕಲ್ಲಿ ಬೆಳಕು ನೀಡುತ್ತದೆ ಅಂತ ಕುತೂಹಲ ಮೂಡಿಸಿತು. ಅದನ್ನೇ ಇಟ್ಟುಕೊಂಡು ನಾನು ಈ ಕಥೆ ಬರೆದೆ. ಮುಂದೆ ಶ್ರೀನಿವಾಸ್‌ ಅವರು ಒಂದೊಳ್ಳೆಯ ಸಿನಿಮಾ ಮಾಡೋಣ ಅಂತ ಹೊರಟಾಗ ಅವರಿಗೆ ಈ ಕಥೆ ಹೇಳಿದೆ. ಅವರಿಗೂ ಇಷ್ಟ ಆಯ್ತು. ಇದೀಗ ಸಿನಿಮಾ ಆಗಿ ಪ್ರಶಸ್ತಿಯನ್ನೂ ಪಡೆದಿದೆ” ಎಂದರು.

ನಿರ್ಮಾಪಕ ಜಾಕ್ ಮಂಜು ಈ ಸಿನಿಮಾ ವಿತರಣೆ ಮಾಡುತ್ತಿದ್ದಾರೆ. “ನನಗೆ ಸಿನಿಮಾ ಇಷ್ಟವಾಯಿತು, ಈ ಸಿನಿಮಾವನ್ನು ಹೆಚ್ಚಿನ ಜನರಿಗೆ ತೋರಿಸಬೇಕೆಂಬ ಉದ್ದೇಶದಿಂದ ಸಿನಿಮಾ ವಿತರಣೆ ಮಾಡುತ್ತಿದ್ದೇನೆ. ಸಿನಿಮಾ ನೋಡುವಾಗ ನನಗೆ ಡಾ.ರಾಜಕುಮಾರ್, ಪುನೀತ್ ರಾಜಕುಮಾರ್ ಅವರುಗಳೇ ನೆನಪಾಗುತ್ತಿದ್ದರು. ಈ ಸಿನಿಮಾ ನೋಡಿದ ಬಳಿಕ ನನ್ನ ಮಗನೇ ನನ್ನ ಬಳಿ ಬಂದು ನೇತ್ರದಾನ ಮಾಡುವುದಾಗಿ ಹೇಳಿದ. ಪ್ರಶಸ್ತಿ ವಿಜೇತ ಸಿನಿಮಾಗಳಿಗೆ ಚಿತ್ರಮಂದಿರ ನೀಡಿ ಎಂದು ಕೇಳಿಕೊಳ್ಳುವ ಸ್ಥಿತಿಯಲ್ಲಿ ನಾವಿದ್ದೇವೆ. ಕಮರ್ಷಿಯಲ್ ಸಿನಿಮಾಗಳಿಗೂ ಜನ ಬರದ ಸ್ಥಿತಿಯಲ್ಲಿ ನಾವಿದ್ದೇವೆ. ಹೀಗಿರುವಾಗ ಪ್ರಶಸ್ತಿ ವಿಜೇತ ಸಿನಿಮಾ ಎಂದು ಬೇರೆ ದೃಷ್ಟಿಯಲ್ಲಿ ನೋಡುವ ಅಗತ್ಯವಿಲ್ಲ” ಎಂಬುದು ಜಾಕ್ ಮಂಜು ಮಾತು. ಸಿನಿಮಾದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ ನಟಿಸಿದ್ದಾರೆ. ನಟಿ ಇಳಾ ವಿಟ್ಲಾ, ಬಾಲ ನಟರಾದ ಮಿಥುನ್‌, ನಾಗರಾಜ್‌ , ಕಸ್ತೂರಿ ಸೇರಿದಂತೆ ಮತ್ತಿತರರು ಚಿತ್ರದಲ್ಲಿದ್ದಾರೆ. ಮುಕುಲ್‌ ಗೌಡ ಛಾಯಾಗ್ರಹಣ ಮಾಡಿದ್ದಾರೆ. ಶ್ರೀನಿವಾಸ್‌ ಜತೆಗೆ ರವಿ ಹಾಗೂ ರಮೇಶ್‌ ಬಂಡವಾಳ ಹಾಕಿದ್ದಾರೆ. ಕಲಾದೇಗುಲ ಶ್ರೀನಿವಾಸ್ ಸಂಗೀತವಿದೆ.

LEAVE A REPLY

Connect with

Please enter your comment!
Please enter your name here