ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ ತಂಡದಲ್ಲಿ ಸಕ್ರಿಯರಾಗಿದ್ದ ಸಚಿನ್ ರವಿ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. ಅವರ ನಿರ್ದೇಶನದ ‘ಅಶ್ವತ್ಥಾಮ’ ಹಿಂದಿ ಚಿತ್ರದಲ್ಲಿ ಶಾಹೀದ್ ಕಪೂರ್ ಹೀರೋ ಆಗಿ ನಟಿಸಲಿದ್ದಾರೆ. Pooja Entertainment ಬ್ಯಾನರ್ ಅಡಿ ವಿಷ್ಣು ಭಗ್ನಾನಿ, ಜಾಕಿ ಭಗ್ನಾನಿ ಹಾಗೂ ದೀಪ್ತಿಕಾ ದೇಶಮುಖ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ನಿರ್ದೇಶಕ ಸಚಿನ್ ರವಿ ಅವರು ಬಾಲಿವುಡ್ ನಟ ಶಾಹೀದ್ ಕಪೂರ್ ನಟಿಸಲಿರುವ ‘ಅಶ್ವತ್ಥಾಮ: ದಿ ಸಾಗಾ ಕಂಟಿನ್ಯೂಸ್’ ಹಿಂದಿ ಸಿನಿಮಾ ನಿರ್ದೇಶಿಸಲಿದ್ದಾರೆ. ಮುಂಬೈನಲ್ಲಿ ಮಂಗವಾರ ನಡೆದ Prime Video ಕಾರ್ಯಕ್ರಮದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ. ಚಿತ್ರದಲ್ಲಿ ಅಶ್ವತ್ಥಾಮನಾಗಿ ಶಾಹಿದ್ ಕಪೂರ್ ಕಾಣಿಸಿಕೊಳ್ಳಲಿದ್ದಾರೆ. ಅಶ್ವತ್ಥಾಮ ಒಬ್ಬ ಮಹಾನ್ ಯೋಧ ಎಂಬುದು
ತಿಳಿದಿರುವ ಸಂಗತಿ. ಜೊತೆಗೆ ಏಳು ಚಿರಂಜೀವಿಗಳಲ್ಲಿ ಒಬ್ಬ ಎಂಬ ನಂಬಿಕೆಯೂ ಇದೆ. ಅಶ್ವತ್ಥಾಮನಿಗೆ ಸಾವೇ ಇಲ್ಲ ಎಂಬುವುದು ಚಿರಂಜೀವಿಯ ಅರ್ಥ ಎಂದು ಪುರಾಣಗಳಲ್ಲಿದೆ. ಚಿತ್ರವನ್ನು Pooja Entertainment ಬ್ಯಾನರ್ ಅಡಿ ವಿಷ್ಣು ಭಗ್ನಾನಿ, ಜಾಕಿ ಭಗ್ನಾನಿ ಹಾಗೂ ದೀಪ್ತಿಕಾ ದೇಶಮುಖ್ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್ ರವಿ ಅವರು ಹಲವು ವರ್ಷಗಳಿಂದ ರಕ್ಷಿತ್ ಶೆಟ್ಟಿ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ. ಸಂಕಲನ, ಗ್ರಾಫಿಕ್ಸ್ ವಿಭಾಗಗಳಲ್ಲಿ ಪರಿಣತಿ ಇರುವ ಸಚಿನ್ ಇದೀಗ ಬಾಲಿವುಡ್ ಪ್ರವೇಶಿಸಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಸಚಿನ್, ”ಈ ಕಥೆಯಲ್ಲಿ ಅಶ್ವತ್ಥಾಮ ವರ್ತಮಾನದಲ್ಲಿರುವ ನಾಯಕ. ಅಮರತ್ವದ ಪರಿಕಲ್ಪನೆಯನ್ನು ಶೋಧಿಸುವ ಕೆಲಸ ಆತನದ್ದು. ಇಷ್ಟನ್ನಷ್ಟೇ ಹೇಳಬಲ್ಲೆ. ಆದರೆ ಈ ಚಿತ್ರ ಅದ್ಭುತ ಆ್ಯಕ್ಷನ್ ಇರುವ, ಮತ್ತು ಎಲ್ಲಾ ತಲೆಮಾರಿನ ವೀಕ್ಷಕರನ್ನೂ ಸೆಳೆಯಬಲ್ಲ ಚಿತ್ರವಾಗಲಿದೆ. ಅಶ್ವತ್ಥಾಮನಂತೆ ಅಮರತ್ವ ಹೊಂದಿರುವ ವ್ಯಕ್ತಿಗಳನ್ನು ಚಿತ್ರದಲ್ಲಿ ತರುವ ಪ್ರಯತ್ನವೂ ಇರಲಿದೆ. ಕಾಲ್ಪನಿಕ ಸನ್ನಿವೇಶನಗಳ ಅನ್ವೇಷಣೆ ಹಾಗೂ ಅದರ ಸಾಧ್ಯತೆ ಕುರಿತು ಕಥೆ ರಚಿಸಿ, ಸಾಧ್ಯವಾಗಿಸುವುದು ಚಿತ್ರ ನಿರ್ದೇಶಕನಾಗಿ ಸವಾಲಿನ ಕೆಲಸ. ನನ್ನ ಬಾಲ್ಯದಿಂದಲೂ ಅಶ್ವತ್ಥಾಮನ ಪಾತ್ರ ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಈ ಪಾತ್ರದ ಬಗ್ಗೆಯೇ ಚಿತ್ರ ಮಾಡುವ ಯೋಜನೆ ಹೊಂದಿದ್ದೆ. ಕಡೆಗೂ ನನ್ನ ಕಲ್ಪನೆಯ ಚಿತ್ರ ಸೆಟ್ಟೇರುತ್ತಿದೆ ಎಂಬ ಸಂಭ್ರಮ ನನ್ನದು. ಈ ಚಿತ್ರದ ಹಲವು ಕುತೂಹಲಕರ ಅಂಶಗಳ ಕುರಿತು ಶಾಹೀದ್ ಕಪೂರ್ ಜತೆ ಬಹಳಷ್ಟು ಹೊತ್ತು ಕಳೆದಿದ್ದೇನೆ’ ಎಂದಿದ್ದಾರೆ.