ಕನ್ನಡ ಚಿತ್ರರಂಗದ ಸ್ಟೈಲಿಶ್ ಹೀರೋ ಸುದೀಪ್ ಅವರ ‘ಹೆಬ್ಬುಲಿ’ ಹೇರ್ಸ್ಟೈಲ್ ಸಖತ್ ಫೇಮಸ್. ತಮ್ಮ ಶಾಲೆಯ ಮಕ್ಕಳಿಗೆ ಈ ಹೇರ್ಸ್ಟೈಲ್ ಮಾಡ್ಬೇಡಿ ಎಂದು ಸರ್ಕಾರಿ ಮುಖ್ಯ ಶಿಕ್ಷಕರೊಬ್ಬರು ಸೆಲೂನ್ ಮಾಲೀಕರಿಗೆ ಪತ್ರ ಬರೆದಿದ್ದಾರೆ! ಈ ಪತ್ರವೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸ್ಯಾಂಡಲ್ವುಡ್ ಸ್ಟೈಲಿಶ್ ನಟರಲ್ಲಿ ಕಿಚ್ಚ ಸುದೀಪ್ ಮುಂಚೂಣಿಯಲ್ಲಿದ್ದಾರೆ. ಅವರಿಗೆ ಎಲ್ಲಾ ವಯೋಮಾನದ ಅಭಿಮಾನಿಗಳಿದ್ದಾರೆ. ಸುದೀಪ್ರ ಸಿನಿಮಾಗಳನ್ನು ಟ್ರೆಂಡ್ನ ರೀತಿ ಪಾಲೋ ಮಾಡುತ್ತಾರೆ. ಅದರಲ್ಲೂ ಸುದೀಪ್ ಅಭಿಮಾನಿಗಳಿಗೆ ಅವರ ಕಾಸ್ಟ್ಯೂಮ್ಸ್ ಮತ್ತು ಹೇರ್ಸ್ಟೈಲ್ ಮೇಲೆ ವಿಶೇಷ ಗಮನವಿರುತ್ತದೆ. 2017ರಲ್ಲಿ ಸುದೀಪ್ ಅವರ ‘ಹೆಬ್ಬುಲಿ’ ಚಿತ್ರ ಬಿಡುಗಡೆಯಾದಾಗ ಅವರ ಹೇರ್ಸ್ಟೈಲ್ಗೆ ಅಭಿಮಾನಿಗಳು ಫಿದಾ ಆಗಿದ್ದರು. ಅಂದಿನಿಂದ ‘ಹೆಬ್ಬುಲಿ’ ಸಿನಿಮಾದ ಕಿಚ್ಚನ ಹೇರ್ಸ್ಟೈಲ್ ‘ಹೆಬ್ಬುಲಿ ಹೇರ್ ಕಟ್’ ಎಂದೇ ಪ್ರಸಿದ್ದಿಯಾಗಿದೆ.
ಈ ಸಿನಿಮಾ ತೆರೆಕಂಡು ಆರು ವರ್ಷವಾದರೂ ಈ ಹೇರ್ಸ್ಟೈಲ್ನ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಈಗಲೂ ಯುವಕರ ಮತ್ತು ಚಿಕ್ಕಮಕ್ಕಳ ನೆಚ್ಚಿನ ಹೇರ್ಸ್ಟೈಲ್ ಇದು. ಆದರೆ ಇದೇ ವಿಚಾರವಾಗಿ ಸರ್ಕಾರಿ ಶಾಲೆಯ ಹೆಡ್ ಮಾಸ್ಟರ್ ಒಬ್ಬರು ಸಲೂನ್ ಮಾಲೀಕನಿಗೆ ಪತ್ರ ಬರೆದಿದ್ದಾರೆ! ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಲಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಹೆಡ್ ಮಾಸ್ಟರ್, ಸಲೂನ್ ಮಾಲೀಕರಿಗೆ, ”ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ‘ಹೆಬ್ಬುಲಿ’ ಹೇರ್ ಕಟ್ ಮಾಡಬೇಡಿ. ಒಂದು ವೇಳೆ ಅದೇ ಹೇರ್ಸ್ಟೈಲ್ ಮಾಡಲು ಅವರು ಒತ್ತಾಯಿಸಿದರೆ ಶಾಲಾ ಸಿಬ್ಬಂದಿಗಳ ಗಮನಕ್ಕೆ ಅಥವಾ ಅವರ ಪೋಷಕರ ಗಮನಕ್ಕೆ ತರಬೇಕು” ಎಂದು ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಈ ಪತ್ರವೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.