ಕನ್ನಡ ಸಿನಿಮಾ | ಭಜರಂಗಿ 2
‘ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು’, ‘ಜೀವಕ್ಕಿಂತ ವಿಚಾರ ದೊಡ್ಡದು’ ಎನ್ನುವ ಫಿಲಾಸಫಿಯ ಆಧಾರದ ಮೇಲೆ ಸಿನಿಮಾ ಕಟ್ಟಿದ್ದಾರೆ ಹರ್ಷ. ಶಿವರಾಜಕುಮಾರ್ ಪಾತ್ರಕ್ಕೆ ಭಿನ್ನ ಆಯಾಮಗಳಿವೆ. ಅನುಭವಿ ನಟ ಸನ್ನಿವೇಶಗಳ ಹದವರಿತು ಅಭಿನಯಿಸಿದ್ದಾರೆ.
ತೆರೆಯ ಮೇಲೆ ಬೇರೆಯದ್ದೇ ಜಗತ್ತು – ಪಾತ್ರಗಳನ್ನು ಸೃಷ್ಟಿಸುವುದು ಮತ್ತು ಅದನ್ನು ಪ್ರೇಕ್ಷಕರಿಗೆ ಕನ್ವಿನ್ಸಿಂಗ್ ಆಗಿ ನಿರೂಪಿಸುವುದು ಬಹುದೊಡ್ಡ ಸವಾಲು. ಅದಕ್ಕೆ ಬೇರೆಯದ್ದೇ ಸಿದ್ಧತೆ ಬೇಕು. ಅನುಭವ, ಸೃಜನಶೀಲತೆ, ದುಬಾರಿ ನಿರ್ಮಾಣ ವೆಚ್ಚ.. ಹೀಗೆ ಹಲವು ಅಂಶಗಳು ಗಣನೆಗೆ ಬರುತ್ತವೆ. ಇಂತಹ ಸವಾಲುಗಳೊಂದಿಗೆ ಸಿನಿಮಾ ಮಾಡಿರುವ ನಿರ್ದೇಶಕ ಹರ್ಷ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದು. ಇಂತಹ ಸಾಹಸಕ್ಕೆ ಮುಂದಾದ ನಿರ್ಮಾಪಕರಿಗೆ ಅಭಿನಂದನೆ ಸಲ್ಲಬೇಕು.
ಸ್ವಾಮೀಜಿಯೊಬ್ಬರು ಸ್ವತಃ ತಾವು ಸಾಕ್ಷಿಯಾದ ವಿದ್ಯಮಾನಗಳನ್ನು ನೆನಪು ಮಾಡಿಕೊಳ್ಳುತ್ತಾ ಕತೆ ಹೇಳುತ್ತಾ ಹೋಗುತ್ತಾರೆ. ಆಗ ಚಿತ್ರದ ಒಂದೊಂದೇ ಪಾತ್ರಗಳು ಪ್ರೇಕ್ಷಕರಿಗೆ ಪರಿಚಯವಾಗುತ್ತಾ ಹೋಗುತ್ತವೆ. ಹರ್ಷ ಅಳವಡಿಸಿರುವ ಈ ನಿರೂಪಣಾ ತಂತ್ರ ಚೆನ್ನಾಗಿದೆ. ಆಂಜಿ ಮತ್ತು ಚಿಣಮಿಣಕಿ ಪಾತ್ರಗಳ ಪರಿಚಯದೊಂದಿಗೆ ‘ನೀ ಸಿಗೊವರೆಗೂ’ ಹಾಡು ಬರುತ್ತದೆ. ಮೂಲತಃ ನೃತ್ಯನಿರ್ದೇಶಕರಾದ ಹರ್ಷ ಈ ಹಾಡನ್ನು ಸೊಗಸಾಗಿ ಕೊರಿಯೋಗ್ರಾಫ್ ಮಾಡಿದ್ದಾರೆ. ಮಧುರ ಸಂಗೀತ, ಗೀತಸಾಹಿತ್ಯ ಮತ್ತು ಉತ್ತಮ ನೃತ್ಯಸಂಯೋಜನೆಯೊಂದಿಗೆ ಈ ಹಾಡು ಬಹುಕಾಲ ನಿಲ್ಲಲಿದೆ. ಆರಂಭದ ಒಂದು ಗಂಟೆ ಪಾತ್ರಗಳನ್ನು ಘನತೆಯಿಂದ ಪರಿಚಯಿಸುವ ನಿರ್ದೇಶಕರು ದ್ವಿತಿಯಾರ್ಧದಲ್ಲಿ ಆ ಎಲ್ಲಾ ಪಾತ್ರಗಳಿಗೆ ಸಿಗಬೇಕಾದಷ್ಟು ಮನ್ನಣೆ ಕೊಡುವಲ್ಲಿ ಎಡವಿದ್ದಾರೆ. ಆರಂಭದಲ್ಲಿ ತಾವು ಇಷ್ಟಪಟ್ಟು ನೋಡಿದ ಶ್ರುತಿ, ಭಾವನಾರ ಪಾತ್ರಗಳೆಲ್ಲಿ ಎನ್ನುವ ಪ್ರಶ್ನೆ ಪ್ರೇಕ್ಷಕರನ್ನು ಕಾಡದಿರದು. ಬಹುಶಃ ಕತೆಯ ಹರವು ಅಷ್ಟು ದೊಡ್ಡದು ಎನ್ನುವುದು ಇದಕ್ಕೆ ಕಾರಣವಿರಬಹುದು.
ಸಾಮಾನ್ಯವಾಗಿ ಫ್ಯಾಂಟಸಿಗೆ ಐತಿಹಾಸಿಕ ಕಲ್ಪಿತ ಕತೆಗಳನ್ನು ಹೆಣೆದುಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ನಿರ್ಧಿಷ್ಟ ಕಾಲಘಟ್ಟಕ್ಕೆ ಬದ್ಧರಾಗಿ ಕತೆ ನಿರೂಪಿಸಬೇಕೆನ್ನುವ ಚೌಕಟ್ಟು ಇರುವುದಿಲ್ಲ. ಇಲ್ಲಿ ನಿರ್ದೇಶಕ ಹರ್ಷ ಆಯುರ್ವೇದ ಔಷಧ ಪದ್ಧತಿಯನ್ನು ಸಾರಿದ ಧನ್ವಂತರಿ ಮೂಲಜನಾಂಗವನ್ನು ಆಧರಿಸಿ ಕತೆ ಮಾಡಿದ್ದಾರೆ. ವಿದ್ಯೆ ಇದ್ದು ವಿವೇಕ ಇಲ್ಲದ ಈ ಮುಗ್ಧ ಜನರು, ಇವರನ್ನು ಮಾದಕ ದ್ರವ್ಯ ತಯಾರಿಕೆಗೆ ಬಳಕೆ ಮಾಡಿಕೊಳ್ಳುವ ದುಷ್ಟ ಪಾತ್ರಗಳೊಂದಿಗೆ ಕತೆ ಸಾಗುತ್ತದೆ. ಈ ಮೂಲಕ ಡ್ರಗ್ ಮಾಫಿಯಾ ಪುರಾತನ ಕಾಲದಿಂದಲೂ ಚಾಲ್ತಿಯಲ್ಲಿತ್ತು ಎನ್ನುವುದನ್ನು ನಿರ್ದೇಶಕರು ಅನುಮೋದಿಸಿದ್ದಾರೆ. ಎರಡು ಭಿನ್ನ ಶೇಡ್‌ಗಳೊಂದಿಗೆ ನಾಯಕ ಈ ದುಷ್ಟರನ್ನು ಎದುರುಗೊಳ್ಳುತ್ತಾನೆ. ಅಲ್ಲಿ ಆತ್ಮಗಳ ಅನುಸಂಧಾನವೂ ಇದೆ. ಪ್ರೇಕ್ಷಕರ ನಿರೀಕ್ಷೆಯಂತೆ ಅಂತಿಮವಾಗಿ ‘ದುಷ್ಟ ಶಿಕ್ಷಣ ಶಿಷ್ಟ ರಕ್ಷಣ’ ಸಾಕಾರಗೊಳ್ಳುತ್ತದೆ. ಕೊನೆಯಲ್ಲಿ ‘ಆಂಜಿ’ ಪಾತ್ರದ ವಿಶಿಷ್ಟ ನೋಟದೊಂದಿಗೆ ನಿರ್ದೇಶಕ ಹರ್ಷ ‘ಭಜರಂಗಿ 3’ ಸರಣಿ ಸಿನಿಮಾ ಮಾಡುವ ಸೂಚನೆ ಕೊಟ್ಟಿದ್ದಾರೆ.
‘ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು’, ‘ಜೀವಕ್ಕಿಂದ ವಿಚಾರ ದೊಡ್ಡದು’ ಎನ್ನುವ ಫಿಲಾಸಫಿಯ ಆಧಾರದ ಮೇಲೆ ಸಿನಿಮಾ ಕಟ್ಟಿದ್ದಾರೆ ಹರ್ಷ. ಚಿತ್ರಕಥೆಯನ್ನು ಇನ್ನಷ್ಟು ಬಿಗಿಗೊಳಿಸಿದ್ದಿದ್ದರೆ ಸಿನಿಮಾ ಇನ್ನೂ ಚೆನ್ನಾಗಿ ರೂಪುಗೊಳ್ಳುತ್ತಿತ್ತು. ಕಾಡುಜನರು, ಕಾಸ್ಟ್ಯೂಮ್, ಸಂಭಾಷಣೆಯಲ್ಲಿ ಕೇಳಿಸುವ ಇಂಗ್ಲೀಷ್… ಕತೆಯಲ್ಲಿ ಇವೆಲ್ಲಾ ಹೇಗೆ ಸಾಧ್ಯ ಎಂದು ಕೆಲವೆಡೆ ಅನಿಸುವುದುಂಟು. ಫ್ಯಾಂಟಸಿ ಚಿತ್ರವಾದ್ದರಿಂದ ಇಲ್ಲಿ ಲಾಜಿಕ್ ಹುಡುಕಕೂಡದು. ಹೀರೋ ಶಿವರಾಜಕುಮಾರ್ ಎರಡು ಭಿನ್ನ ಶೇಡ್‌ಗಳಲ್ಲಿ ಉತ್ಸಾಹದಿಂದ ಅಭಿನಯಿಸಿದ್ದಾರೆ. ಮುಗ್ಧರಿಗೆ ಮಿಡಿಯುವ ಸಮಾಧಾನಿಯಾಗಿ, ಅಮಾಯಕ ಪ್ರೇಮಿಯಾಗಿ, ಆಕ್ಷನ್ ಹೀರೋ ಆಗಿ.. ಶಿವರಾಜಕುಮಾರ್ ಪಾತ್ರಕ್ಕೆ ಭಿನ್ನ ಆಯಾಮಗಳಿವೆ. ಅನುಭವಿ ನಟ ಸನ್ನಿವೇಶಗಳ ಹದವರಿತು ನಟಿಸಿದ್ದಾರೆ. ಇನ್ನು ನಟಿಯರಾದ ಶ್ರುತಿ ಮತ್ತು ಭಾವನಾ ಅವರಿಗೆ ನಿಸ್ಸಂಶಯವಾಗಿ ಅವರ ವೃತ್ತಿಬದುಕಿನಲ್ಲೇ ವಿಶಿಷ್ಟ ಪಾತ್ರಗಳಿವು. ಚಿತ್ರದ ನಾಲ್ಕು ಪ್ರಮುಖ ಪಾತ್ರಗಳಲ್ಲಿ ಅಜಾನುಬಾಹು ಪ್ರಸನ್ನ, ಗಿರೀಶ್, ಚೆಲುವರಾಜು ಮತ್ತು ಲೋಕಿ ಇದ್ದಾರೆ. ‘ಭಜರಂಗಿ ಲೋಕಿ’ ಈಗಾಗಲೇ ಪರಿಚಿತರು. ಇನ್ನುಳಿದ ಮೂವರನ್ನು ನಿರ್ದೇಶಕ ಹರ್ಷ ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಉತ್ತಮ ಸ್ಕ್ರೀನ್‌ಪ್ರಸೆನ್ಸ್‌ನಿಂದಾಗಿ ಈ ಮೂವರು ಪಾತ್ರಧಾರಿಗಳೂ ಪ್ರೇಕ್ಷಕರ ನೆನಪಿನಲ್ಲುಳಿಯುತ್ತಾರೆ. ಫ್ಯಾಂಟಸಿ ಚಿತ್ರ ಕಟ್ಟಲು ನಿರ್ದೇಶಕರಿಗೆ ಹೆಗಲು ಕೊಟ್ಟಿರುವ ಸಂಗೀತ ಸಯೋಜಕ ಅರ್ಜುನ್ ಜನ್ಯಾ, ಛಾಯಾಗ್ರಾಹಕ ಸ್ವಾಮಿ, ಕಲಾ ನಿರ್ದೇಶಕ ರವಿ ಸಂತೇಹಕ್ಲು, ಮೇಕಪ್ ಕಲಾವಿದ ಪ್ರಕಾಶ್ ಗೋಕಾಕ್ ಅವರ ಉತ್ತಮ ಕಾರ್ಯನಿರ್ವಹಣೆಗೆ ಅಭಿನಂದನೆ ಸಲ್ಲಬೇಕು.
ನಿರ್ಮಾಪಕರು : ಜಯಣ್ಣ ಮತ್ತು ಭೋಗೇಂದ್ರ | ನಿರ್ದೇಶಕ : ಎ.ಹರ್ಷ | ಛಾಯಾಗ್ರಹಣ : ಸ್ವಾಮಿ ಜೆ. ಗೌಡ | ಸಂಗೀತ : ಅರ್ಜುನ್ ಜನ್ಯ | ಕಲಾ ನಿರ್ದೇಶನ : ರವಿ ಸಂತೇಹಕ್ಲು | ತಾರಾಬಳಗ : ಶಿವರಾಜಕುಮಾರ್, ಭಾವನಾ, ಶ್ರುತಿ, ಸೌರವ್ ಲೋಕಿ, ಚೆಲುವರಾಜು ಇತರರು