‘ನಾನು ಮತ್ತು ಗುಂಡ’ ಚಿತ್ರದ ಸರಣಿಯಾಗಿ ತಯಾರಾಗುತ್ತಿರುವ ‘ನಾನು ಮತ್ತು ಗುಂಡ 2’ ಸಿನಿಮಾದ ಪ್ರಮುಖ ಪಾತ್ರದಲ್ಲಿ ಸಿಂಬಾ ಹೆಸರಿನ ನಾಯಿ ನಟಿಸಿದೆ. ರಘು ಹಾಸನ್ ನಿರ್ದೇಶನದ ಈ ಚಿತ್ರಕ್ಕಾಗಿ ಸ್ವತಃ ಸಿಂಬಾ ಡಬ್ಬಿಂಗ್ ಮಾಡಿದೆ. ಡಬ್ಬಿಂಗ್ ಸ್ಟುಡಿಯೋದಲ್ಲಿ ನಾಯಿಯನ್ನು ಕರೆದೊಯ್ದು ಡಬ್ ಮಾಡಿಸಿರುವ ಪ್ರಯತ್ನ ಭಾರತೀಯ ಸಿನಿಮಾ ಸಂದರ್ಧದಲ್ಲೇ ಮೊದಲು ಎನ್ನುತ್ತಾರೆ ಚಿತ್ರದ ನಿರ್ದೇಶಕ ರಘು ಹಾಸನ್.
ರಾಕೇಶ್ ಅಡಿಗ ಮತ್ತು ಸಿಂಬಾ ಹೆಸರಿನ ನಾಯಿ ‘ನಾನು ಮತ್ತು ಗುಂಡ 2’ ಸಿನಿಮಾದ ಪ್ರಮುಖ ಪಾತ್ರಧಾರಿಗಳು. ರಘು ಹಾಸನ್ ನಿರ್ದೇಶನದ ಇದು ಯಶಸ್ವೀ ‘ನಾನು ಮತ್ತು ಗುಂಡ’ ಸಿನಿಮಾದ ಸೀಕ್ವೆಲ್. ಈ ಸಿನಿಮಾ ಮೂಲ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲೂ ತೆರೆಗೆ ಬರಲಿದೆ. ಈಗಾಗಲೇ ಚಿತ್ರೀಕರಣ ಮುಗಿದು ಡಬ್ಬಿಂಗ್ ಕೆಲಸ ಶುರುವಾಗಿದೆ. ಸಿಂಬಾ ನಾಯಿಯನ್ನು ರೆಕಾರ್ಡಿಂಗ್ ಸ್ಟುಡಿಯೋಗೆ ಕರೆತಂದು ಡಬ್ ಮಾಡಿಸಿದ್ದಾರೆ. ನಿರ್ದೇಶಕ ರಘು ಹಾಸನ್ ಮಾತನಾಡಿ, ‘ಸಿಂಬಾನ ಒರಿಜಿನಲ್ ಸೌಂಡ್ ರೆಕಾರ್ಡ್ ಮಾಡುತ್ತಿದ್ದೇವೆ. ಎಮೋಷನಲ್ ಸೀನ್‌ಗಳಲ್ಲೂ ಸಿಂಬಾ ಡಬ್ಬಿಂಗ್ ಮಾಡುತ್ತಿದೆ. ಪ್ರತಿ ಜಾತಿಯ ನಾಯಿಯದೂ ಒಂದೊಂದು ರೀತಿ ಧ್ವನಿ ಇರುತ್ತದೆ. ಹಾಗಾಗಿಯೇ ನಾವು ನಮ್ಮ ಗುಂಡನ ಪಾತ್ರ ಮಾಡಿರೋ ಸಿಂಬಾನಿಂದಲೇ ಡಬ್ಬಿಂಗ್ ಮಾಡಿಸುತ್ತಿದ್ದೇವೆ’ ಎನ್ನುತ್ತಾರೆ.
ಈ ಹಿಂದೆ ಪಾರ್ಟ್ 1 ನಲ್ಲೂ ಸಿಂಬಾ ತನ್ನ ಪಾತ್ರಕ್ಕೆ ಧ್ವನಿ ಕೊಟ್ಟಿತ್ತು. ಕಳೆದ ಬಾರಿ ಸಿಂಬಾಗೆ ಡಬ್ ಮಾಡಲು ಹೆಚ್ಚಿನ ಅವಕಾಶಗಳು ಇರಲಿಲ್ಲ. ಆದರೆ ಈ ಬಾರಿ ಸಿಂಬಾ ಪಾತ್ರವೇ ಹೈಲೈಟ್ ಆದ್ದರಿಂದ ಡಬ್ಬಿಂಗ್‌ಗೆ ಹೆಚ್ಚು ಅವಕಾಶ ಸಿಕ್ಕಿದೆ. ಭಾರತದಲ್ಲಿ ಇಲ್ಲೀವರೆಗೂ ಇಂಥದ್ದೊಂದು ಪ್ರಯತ್ನ ನಡೆದಿರಲಿಲ್ಲ ಎನ್ನುವುದು ಚಿತ್ರದ ನಿರ್ಮಾಪಕರೂ ಆದ ರಘು ಹಾಸನ್ ಅವರ ಮಾತು. ಡಬ್ಬಿಂಗ್ ಕೆಲಸ ಮುಗಿದಾಕ್ಷಣ ಚಿತ್ರದ DI ಮತ್ತು RR ಕೆಲಸ ಶುರುವಾಗುತ್ತವಂತೆ. ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಆರ್ ಪಿ ಪಟ್ನಾಯಕ್ ಸಂಗೀತ, ರುತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತ, ತನ್ವಿಕ್ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ, ರಾಘು ಅವರ ನೃತ್ಯನಿರ್ದೇಶನವಿದೆ.