ಕನ್ನಡ ಕಿರುತೆರೆಯ ಮೊಟ್ಟಮೊದಲ ಆರೋಗ್ಯ ಕುರಿತಾದ ರಿಯಾಲಿಟಿ ಶೋ ‘ಫಿಟ್ ಬಾಸ್’. ಸಿರಿಕನ್ನಡ ಮತ್ತು ಆಯುಷ್ ಟೀವಿ ಜೊತೆಗೂಡಿ ಈ ಶೋ ರೂಪಿಸಿವೆ. 100 ಕೆಜಿಗಿಂತ ಹೆಚ್ಚು ತೂಕವಿರುವ 21 ಜನರು ಶೋನಲ್ಲಿ ಸ್ಪರ್ಧಿಗಳಾಗಿ ಪಾಲ್ಗೊಂಡಿದ್ದರು. ಇಪ್ಪತ್ತೊಂದು ದಿನ ತಮ್ಮ ದೇಹದ ಅತಿಯಾದ ತೂಕವನ್ನು ಕಡಿಮೆ ಮಾಡಲು ಅವರಿಲ್ಲಿ ಹಲವು ಟಾಸ್ಕ್‌ಗಳನ್ನು ಮಾಡಿದ್ದಾರೆ.
ಸಿರಿಕನ್ನಡ ಮನರಂಜನಾ ವಾಹಿನಿ, ಆಯುಷ್ ಟೀವಿ ಜೊತೆಗೂಡಿ ‘ಫಿಟ್ ಬಾಸ್’ ಆರೋಗ್ಯ ಕುರಿತ ರಿಯಾಲಿಟಿ ಶೋ ರೂಪಿಸಿವೆ. ಇವರಿಗೆ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಕೇಂದ್ರದ ಸಹಯೋಗವಿದೆ. ಕನ್ನಡ ಕಿರುತೆರೆಯ ಮಟ್ಟಿಗೆ ಇದೊಂದು ಹೊಸ ಫಾರ್ಮ್ಯಾಟ್. ಈ ರಿಯಾಲಿಟಿ ಶೋನ ಆಡಿಷನ್‌ನಲ್ಲಿ ಸುಮಾರು 2000 ಜನ ಪಾಲ್ಗೊಂಡಿದ್ದಾರೆ. ಇವರಲ್ಲಿ 100 ಕೆಜಿಗಿಂತ ಹೆಚ್ಚು ತೂಕವಿರುವ 21 ಜನರನ್ನು ಶೋಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇಪ್ಪತ್ತೊಂದು ದಿನ ತಮ್ಮ ದೇಹದ ಅತಿಯಾದ ತೂಕವನ್ನು ಕಡಿಮೆ ಮಾಡಲು ಅವರಿಲ್ಲಿ ಹಲವು ಟಾಸ್ಕ್‌ಗಳನ್ನು ಮಾಡಿದ್ದಾರೆ. ತಮ್ಮ ಆರೋಗ್ಯದ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ನಿವಾರಿಸಿಕೊಳ್ಳುವುದರ ಜೊತೆಗೆ ಆಟ, ಮೋಜು, ಮಸ್ತಿ, ಮತ್ತು ಸ್ನೇಹ ಸಂಬಂಧಗಳ ಮೌಲ್ಯಗಳನ್ನು ರಿಯಾಲಿಟಿ ಶೋನಲ್ಲಿ ಕಲಿತಿದ್ದಾರೆ.
ರಿಯಾಲಿಟಿ ಶೋ ಬಗ್ಗೆ ಮಾತನಾಡುವ ಸಿರಿಕನ್ನಡ ವಾಹಿನಿ ಸಂಸ್ಥಾಪಕ ಸಂಜಯ್ ಶಿಂಧೆ, ‘ಕಳೆದ ಕೆಲವು ವರ್ಷಗಳಿಂದ ನಮ್ಮ ಸಿರಿಕನ್ನಡ ವಾಹಿನಿ ಹಲವು ಜನಪ್ರಿಯ ಮತ್ತು ವಿಶಿಷ್ಟ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಪ್ರಸ್ತುತ ಆಯುಷ್ ಟೀವಿಯ ‘ಫಿಟ್ ಬಾಸ್’ ರಿಯಾಲಿಟಿ ಶೋಗೆ ಸಿರಿಕನ್ನಡ ವಾಹಿನಿ ಕೈ ಜೋಡಿಸಿದೆ. ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಈ ರಿಯಾಲಿಟಿ ಶೋ ಅಕ್ಟೋಬರ್ 16ರಿಂದ ಸೋಮವಾರದಿಂದ ಶುಕ್ರವಾರದವರೆಗೂ ಆಯೂಷ್ ಟಿವಿ ಸಂಜೆ 7ಕ್ಕೆ ಮತ್ತು ಸಿರಿಕನ್ನಡ ವಾಹಿನಿಯಲ್ಲಿ ರಾತ್ರಿ 8ಕ್ಕೆ ಪ್ರಸಾರವಾಗಲಿದೆ’ ಎಂದು ಮಾಹಿತಿ ನೀಡುತ್ತಾರೆ. ಈ ಶೋನ ಗ್ರ್ಯಾಂಡ್ ಫಿನಾಲೆಯಲ್ಲಿ ಸಿನಿಮಾ ತಾರೆಯರಾದ ಗಣೇಶ್, ಅಮೂಲ್ಯ, ರೂಪಿಕಾ ಅತಿಥಿಗಳಾಗಿ ಪಾಲ್ಗೊಂಡಿದ್ದಾರೆ. 21 ದಿನಗಳ ಕಾಲ ಪ್ರತಿ ದಿನ ಮುಂಜಾನೆ 5ರಿಂದ ಯೋಗದೊಂದಿಗೆ ಸಾಧಕರ ದಿನಚರಿ ಪ್ರಾರಂಭವಾಗುತ್ತಿತ್ತು. ವಿವಿಧ ನ್ಯಾಚುರೋಪತಿ ಚಿಕಿತ್ಸೆಗಳು, ಜೊತೆಗೆ ಮನೋರಂಜನಾ ಕಾರ್ಯಕ್ರಮಗಳೊಂದಿಗೆ ಸ್ಪರ್ಧಿಗಳನ್ನು ಕ್ರಿಯಾಶೀಲರನ್ನಾಗಿಡುವುದು ಶೋನ ಫಾರ್ಮ್ಯಾಟ್. ಪ್ರಶಾಂತ್ ಸಂಬರ್ಗಿ ರಿಯಾಲಿಟಿ ಶೋನ ಆರಂಭದ ದಿನ ಹಾಗೂ ಫಿನಾಲೆ ದಿನ ನಿರೂಪಕನಾಗಿ ಕೆಲಸ ಮಾಡಿದ್ದಾರೆ.