ಸಿನಿಕನ್ನಡ ಮನರಂಜನಾ ವಾಹಿನಿ ‘ಅಮೃತ ಘಳಿಗೆ’ ನೂತನ ಧಾರಾವಾಹಿ ಆರಂಭಿಸುತ್ತಿದೆ. ರವಿ ಆರ್ ಗರಣಿ ಕತೆ ರಚಿಸಿದ್ದು ಭಾರತೀಶ್ ಸರಣಿ ನಿರ್ದೇಶಿಸುತ್ತಿದ್ದಾರೆ. ಅಕ್ಟೋಬರ್ 30ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ಕ್ಕೆ ಸೀರಿಯಲ್ ಮೂಡಿಬರಲಿದೆ.
ಕಿರುತೆರೆ ಲೋಕದಲ್ಲಿ ಸೃಜನಾತ್ಮಕ ಕಾರ್ಯಕ್ರಮಗಳ ಮೂಲಕ ಸಿರಿಕನ್ನಡ ವಾಹಿನಿ ಗಮನ ಸೆಳೆಯುತ್ತಿದೆ. ಇದೀಗ ವಾಹಿನಿ ಮತ್ತೊಂದು ಮೆಗಾ ಧಾರಾವಾಹಿಯೊಂದಿಗೆ ವೀಕ್ಷಕರಿಗೆ ರಾಜ್ಯೋತ್ಸವದ ಉಡುಗೊರೆ ನೀಡಲು ಮುಂದಾಗಿದೆ. ಇದೇ ಅಕ್ಟೋಬರ್ 30ರಿಂದ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9 ಗಂಟೆಗೆ ‘ಅಮೃತ ಘಳಿಗೆ’ ಶೀರ್ಷಿಕೆಯ ಹೊಸ ಮೆಗಾ ಧಾರಾವಾಹಿ ಆರಂಭವಾಗಲಿದೆ. ಕಿರುತೆರೆಯ ಖ್ಯಾತ ನಿರ್ದೇಶಕ, ಬರಹಗಾರ ರವಿ ಆರ್ ಗರಣಿಯವರ ಸಾರಥ್ಯದಲ್ಲಿ ಈ ಧಾರಾವಾಹಿಯ ಕಥೆ ಮೂಡಿಬರುತಿದ್ದು, ಹೆಸರಾಂತ ನಿರ್ದೇಶಕರಾದ ಭಾರತೀಶ್ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.
ಕಿರುತೆರೆಯ ಖ್ಯಾತ ಕಲಾವಿದರೊಂದಿಗೆ ಹೊಸ ಕಲಾವಿದರ ಸಂಗಮವಿರುವ ಈ ಧಾರಾವಾಹಿ ವೀಕ್ಷಕರ ಮನ ಮುಟ್ಟುವಂತಿದೆ. ಧಾರಾವಾಹಿಯಲ್ಲಿ ನಾಯಕಿ ಪಾತ್ರ ತುಂಬಾ ವಿಶಿಷ್ಟವಾಗಿದೆ. ಎರಡು ವಿಭಿನ್ನ ನೆಲೆಯ ಕೌಟುಂಬಿಕ ಸಂಘರ್ಷದ ಕಥೆಯಲ್ಲಿನ ತಿರುವುಗಳು ಈ ಮೆಗಾ ಧಾರಾವಾಹಿಗೆ ಹೊಸ ರೂಪ ನೀಡುತ್ತದೆ. ಕೇವಲ ರಿಮೇಕ್ ಮತ್ತು ಅದ್ಧೂರಿತನದಲ್ಲೇ ಕಳೆದು ಹೋಗಿರುವ ಧಾರಾವಾಹಿ ಪ್ರಪಂಚಕ್ಕೆ ಕಥೆಯನ್ನೇ ಮೂಲವಾಗಿಟ್ಟುಕೊಂಡು ಪ್ರೇಕ್ಷಕರ ಮುಂದೆ ಬರುತ್ತಿರೋ ‘ಅಮೃತ ಘಳಿಗೆ’ ಧಾರಾವಾಹಿಗೆ ನೋಡುಗರ ಪ್ರೋತ್ಸಾಹ ಅತ್ಯಗತ್ಯ ಎಂಬುದು ಸಿರಿಕನ್ನಡ ವಾಹಿನಿಯ ಅಭಿಪ್ರಾಯ.