ಉತ್ತರ ಕರ್ನಾಟಕ ಸೊಗಡಿನ ಕತೆ, ಸಂಗೀತ, ಸಂಭಾಷಣೆಯುಳ್ಳ ‘ಸೋಮು ಸೌಂಡ್ ಇಂಜಿನಿಯರ್’ ಚಿತ್ರದ ‘ಛಂದಸ್ಸಿನ ಚೆಂದದಲ್ಲಿ’ ಹಾಡು ಬಿಡುಗಡೆಯಾಗಿದೆ. ಅಭಿ ಚೊಚ್ಚಲ ನಿರ್ದೇಶನದ ಈ ಸಿನಿಮಾದ ನಾಯಕಿಯಾಗಿ ನಿವಿಷ್ಕಾ ಪಾಟೀಲ್ ನಟಿಸಿದ್ದಾರೆ.
ಅಭಿ ಚೊಚ್ಚಲ ನಿರ್ದೇಶನದ ‘ಸೋಮು ಸೌಂಡ್ ಇಂಜಿನಿಯರ್’ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿದೆ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಈಗ ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಧನಂಜನ್ ರಂಜನ್ ಸಾಹಿತ್ಯ ರಚಿಸಿರುವ ‘ಛಂದಸ್ಸಿನ ಚೆಂದದಲ್ಲಿ’ ಪ್ರೇಮಗೀತೆ A2 ಮ್ಯೂಸಿಕ್‌ನಲ್ಲಿ ಅನಾವರಣಗೊಂಡಿದೆ. ಸಿದ್ದಾರ್ಥ್ ಬೆಳ್ಮಣ್ಣು ಮತ್ತು ಮೇಘನಾ ಭಟ್ ದನಿಯಲ್ಲಿ ಹಾಡು ಮೂಡಿಬಂದಿದ್ದು, ಚರಣ್ ರಾಜ್ ಸಂಗೀತ, ಶಿವ ಸೇನಾ ಛಾಯಾಗ್ರಹಣವಿದೆ. ಈ ಹಾಡಿನಲ್ಲಿ ನಾಯಕ ಶ್ರೇಷ್ಠ ಹಾಗೂ ನಾಯಕಿ ನಿವಿಷ್ಕಾ ಪಾಟೀಲ್ ಕಾಣಿಸಿಕೊಂಡಿದ್ದಾರೆ. ‘ಸಲಗ’ ಸಿನಿಮಾದ ‘ಕೆಂಡ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶ್ರೇಷ್ಠ ಈ ಸಿನಿಮಾದಲ್ಲಿ ನಾಯಕನಾಗಿ ಪಾತ್ರ ನಿರ್ವಹಿಸಿದ್ದಾರೆ. ಬೆಳಗಾವಿ ಮೂಲದ ನಿವಿಷ್ಕಾ ಪಾಟೀಲ್ ಚಿತ್ರದ ನಾಯಕಿ.
ಜಹಾಂಗೀರ್, ಅಪೂರ್ವ, ಯಶ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕ್ರಿಸ್ಟೋಪರ್ ಕಿಣಿ ಚಿತ್ರವನ್ನು ನಿರ್ಮಿಸಿದ್ದು, ಮಾಸ್ತಿ ಸಂಭಾಷಣೆ, ದೀಪು ಎಸ್ ಕುಮಾರ್ ಸಂಕಲನ ನಿರ್ವಹಿಸಿದ್ದಾರೆ. ಈ ಸಿನಿಮಾ ಹಳ್ಳಿ ಕಥೆಯಾಗಿದ್ದು, ಅದರಲ್ಲಿಯೂ ಉತ್ತರ ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆಯುವ ಕತೆಯನ್ನು ಒಳಗೊಂಡಿದೆ. ಸಿನಿಮಾವನ್ನು ಇಳಕಲ್, ಗಂಜಿಹಾಳ, ಕೂಡಲ ಸಂಗಮಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಉತ್ತರ ಕರ್ನಾಟಕ ಭಾಗದ ಸಂಸ್ಕೃತಿ, ಭಾಷೆ, ಉತ್ತರ ಕರ್ನಾಟಕದ ಜವಾರಿ ಸಂಗೀತ, ಸ್ಥಳೀಯ ಹಾಡುಗಳು ಜತೆಗೆ ಸ್ಥಳೀಯರನ್ನೇ ಬಳಸಿಕೊಂಡು ಸಿನಿಮಾ ಮಾಡಲಾಗಿದೆ. ಸೆನ್ಸಾರ್ ಪಾಸಾಗಿರುವ ಚಿತ್ರ ಮಾರ್ಚ್ 15ಕ್ಕೆ ತೆರೆಕಾಣಲಿದೆ.