ಶ್ರೇಯಸ್‌ ಹೀರೋ ಆಗಿ ನಟಿಸಿ, ನಿರ್ದೇಶಿಸುತ್ತಿರುವ ‘ಒನ್‌ ಅಂಡ್‌ ಆಫ್‌’ ಸಿನಿಮಾದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಇದೊಂದು ಕಾಮಿಡಿ ಎಂಟರ್‌ಟೇನರ್‌ ಸಿನಿಮಾ. ಮಾನ್ವಿತಾ ಹರೀಶ್‌ ಚಿತ್ರದ ನಾಯಕಿ.

ಯುವ ಸಿನಿಮೋತ್ಸಾಹಿಗಳು ವಿಭಿನ್ನ ಬಗೆಯ ಕಥಾಹಂದರ ‘ಒನ್ ಅಂಡ್ ಆಫ್’ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ‘ರಂಗ್‌ಬಿ ರಂಗಿ’, ‘ಡೇವಿಡ್’, ‘ದಿ ವೇಕೆಂಟ್ ಹೌಸ್’ ಸಿನಿಮಾಗಳ ಖ್ಯಾತಿಯ ಶ್ರೇಯಸ್ ಈ ಚಿತ್ರವನ್ನು ನಿರ್ದೇಶಿಸಿ, ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋಸ್‌ನಲ್ಲಿ Su Lakshmi Films ನಿರ್ಮಾಣ ಸಂಸ್ಥೆಯು ಚಿತ್ರದ ಲೋಗೋ ಹಾಗೂ ಸಿನಿಮಾದ ಫಸ್ಟ್‌ಲುಕ್‌ ಅನಾವರಣ ಮಾಡಿದೆ. ಶ್ರೇಯಸ್ ಚಿಂಗಾ ಈ ಕುರಿತು ಮಾತನಾಡಿ, ‘ಇದು ಕಂಪ್ಲೀಟ್ ಕಾಮಿಡಿ ಸಿನಿಮಾ. ಶೂಟಿಂಗ್ ಶುರುವಾಗಿದೆ. ಮಾನ್ವಿತಾ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರು, ಗೋವಾ ಭಾಗದಲ್ಲಿ ಶೂಟಿಂಗ್ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ಮಣಿಕಾಂತ್ ಕದ್ರಿ ಸರ್ ಸಂಗೀತ ಸಿನಿಮಾಕ್ಕಿದೆ’ ಎನ್ನುತ್ತಾರೆ.

ನಾಯಕನಟಿ ಮಾನ್ವಿತಾ ಹರೀಶ್ ಮಾತನಾಡಿ, ‘ಈ ಸಿನಿಮಾ ಮಾಡಲು ತುಂಬಾ ಕಾರಣಗಳಿವೆ. ಶ್ರೇಯಸ್ ಹೇಳಿದ ಕಥೆ ಇಷ್ಟವಾಯ್ತು. ಶ್ರೇಯಸ್ ಒಳ್ಳೆ ನಟ. ಬರಹಗಾರ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವ ಅನುಭವ. ನನ್ನ ಪಾತ್ರದ ಹೆಸರು ನಿಧಿ. ನಿಧಿ ಟ್ರಬಲ್ ಮೇಕರ್! ಒಂದೊಳ್ಳೆ ಪಾತ್ರ’ ಎಂದಿದ್ದಾರೆ. ‘ಸು-ಲಕ್ಷ್ಮೀ ಫಿಲ್ಮಂಸ್ ಅಂತಾ ಯಾಕೆ ಇಟ್ಟಿದ್ದೇವೆ ಅಂದರೆ ಸು-ಸುಬ್ಬಯ್ಯ ನಮ್ಮ ತಾತ, ಲಕ್ಷ್ಮೀ-ಅಜ್ಜಿ ನಮ್ಮ ಮನೆ ಹೆಸರು ಸುಲಕ್ಷ್ಮೀ. ಹೀಗಾಗಿ ನಮ್ಮ ಪ್ರೊಡಕ್ಷನ್ ಹೌಸ್‌ಗೆ ಈ ಹೆಸರಿಟ್ಟಿದ್ದೇವೆ’ ಎಂದು ನಿರ್ಮಾಪಕ ಚರಣ್‌ ಸುಬ್ಬಯ್ಯ ತಮ್ಮ ಪ್ರೊಡಕ್ಷನ್‌ ಹೌಸ್‌ ಕುರಿತು ಹೇಳುತ್ತಾರೆ. ಸಾಧು ಕೋಕಿಲಾ, ಅನಿನಾಶ್ ಯೆಳಂದೂರ್, ಸುಚೇಂದ್ರ ಪ್ರಸಾದ್, ಸ್ಪರ್ಶ ರೇಖಾ, ಅನಂತು, ಸುಂದರಶ್ರೀ, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್ ಕುಮಾರ್, ಮಹಾಂತೇಶ್ ಹಿರೇಮಠ್, ನಿಕಿತಾ ದೋರ್ತೊಡಿ, ಲಲಿತಾ ನಾಯಕ್, ರೋಹಿತ್ ಅರುಣ್, ಅಮಾನ್, ರಾಖಿ ಭೂತಪ್ಪ ನಟಿಸುತ್ತಿದ್ದಾರೆ. ವಿಶೇಷ ಅಂದರೆ ಸಿನಿಮಾದಲ್ಲಿ ನಾಯಕನಿಗೆ ‘ಕನ್ನಡ’ ಎಂದು ಹೆಸರಿಡಲಾಗಿದೆ.

LEAVE A REPLY

Connect with

Please enter your comment!
Please enter your name here