70ರ ದಶಕದ ಆರಂಭದ ಕಾಲಘಟ್ಟದಲ್ಲಿ ನಡೆಯುತ್ತದೆ ‘ಗದ್ದಾರ್ 2’ ಕತೆ. ಪಾಕಿಸ್ತಾನದಲ್ಲಿ ಸೆರೆಯಾಗಿರುವ ಪುತ್ರನನ್ನು ನಾಡಿಗೆ ಕರೆತರುವ ತಾರಾ ಸಿಂಗ್ ಹೋರಾಟದ ಚಿತ್ರಣವಿದು. ಬ್ಲಾಕ್ ಬಸ್ಟರ್ ‘ಗದ್ದಾರ್’ ತೆರೆಕಂಡ 22 ವರ್ಷಗಳ ನಂತರ ಈ ಹಿಂದಿ ಚಿತ್ರದ ಸರಣಿ ತೆರೆಗೆ ಬರುತ್ತಿದೆ. ಆಗಸ್ಟ್ 11ರಂದು ಸಿನಿಮಾ ತೆರೆಕಾಣಲಿದೆ.
ಅನಿಲ್ ಶರ್ಮಾ ನಿರ್ದೇಶನದಲ್ಲಿ ಸನ್ನಿ ಡಿಯೋಲ್ ನಟಿಸಿರುವ ‘ಗದ್ದಾರ್ 2’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. 22 ವರ್ಷಗಳ ಹಿಂದೆ ತೆರೆಕಂಡ ‘ಗದ್ದಾರ್’ ಚಿತ್ರದಲ್ಲಿ ಭಾರತ ಮತ್ತು ಪಾಕಿಸ್ತಾನ್ ವಿಭಜನೆಯ ಹಿನ್ನೆಲೆಯಲ್ಲಿ ಕತೆ ಹೇಳಲಾಗಿತ್ತು. ತಾರಾ ಸಿಂಗ್ (ಸನ್ನಿ ಡಿಯೋಲ್) ಮತ್ತು ಪಾಕಿಸ್ತಾನ್ ಯುವತಿ ಸಕೀನಾ (ಅಮೀಶಾ ಪಟೇಲ್) ಪ್ರೇಮಕತೆ ಅದು. ಈಗ ಸರಣಿಯಲ್ಲಿ 1971ರ ಭಾರತ – ಪಾಕಿಸ್ತಾನ್ ಯುದ್ಧದ ಹಿನ್ನೆಲೆಯಲ್ಲಿ ಕತೆ ಮಾಡಿದ್ದಾರೆ ನಿರ್ದೇಶಕ ಅನಿಲ್ ಶರ್ಮಾ. ಪುತ್ರ ಜೀತೆಗಾಗಿ (ಉತ್ಕರ್ಷ್ ಶರ್ಮಾ) ಪಾಕಿಸ್ತಾನಕ್ಕೆ ತೆರಳಿ ಅಲ್ಲಿನ ಸೈನ್ಯದೊಂದಿಗೆ ತಾರಾ ಸಿಂಗ್ ಸೆಣೆಸುವ ಕತೆಯಿದೆ.
ಪಾಕಿಸ್ತಾನ್ ಬೀದಿಗಳಲ್ಲಿನ ಪ್ರತಿಭಟನೆಯೊಂದಿಗೆ ಟ್ರೈಲರ್ ಶುರುವಾಗುತ್ತದೆ. ಭಾರತೀಯ ಸೈನ್ಯದ ಅಧಿಕಾರಿಯೊಬ್ಬ, ಪಾಕಿಸ್ತಾನ್ ವಿರುದ್ಧ ಭಾರತದ ಯುದ್ಧ ನಡೆಯಲಿದೆ ಎನ್ನುವ ಸೂಚನೆ ನೀಡುತ್ತಾನೆ. ‘ನಿನಗೆ ತಾರಾ ಸಿಂಗ್ ಯಾರೆಂದು ಗೊತ್ತಿಲ್ಲ. ನಿನ್ನ ಶತ್ರುವನ್ನು ಕೇಳು ಹೇಳುತ್ತಾನೆ’ ಎಂದು ತಾರಾ ಸಿಂಗ್ ಪಾಕಿಸ್ತಾನಿ ಸೈನಿಕರನ್ನು ಸದೆಬಡಿಯುತ್ತಾನೆ. ಟೀಸರ್‌ನಲ್ಲಿ ಚಿತ್ರದ ನಾಯಕಿ ಅಮೀಶಾ ಪಟೇಲ್ ಇರಲಿಲ್ಲ. ಈಗ ಟ್ರೈಲರ್‌ನಲ್ಲಿ ಸಕೀನಾ ಪಾತ್ರವಿದೆ. ತಾರಾ ಸಿಂಗ್ – ಸಕೀನಾ ಪುತ್ರ ಜೀತೆನನ್ನು ಪಾಕಿಸ್ತಾನಿ ಸೈನ್ಯ ಒತ್ತೆಯಾಳನ್ನಾಗಿಸಿಕಂಡು ಹಿಂಸಿಸುತ್ತದೆ. ಪುತ್ರನ ರಕ್ಷಣೆಗೆ ಬರುವ ತಾರಾಸಿಂಗ್ ಸೈನ್ಯದೊಂದಿಗೆ ಏಕಾಂಗಿ ಹೋರಾಟ ನಡೆಸುತ್ತಾನೆ. ಚಿತ್ರದಲ್ಲಿ Intense action ಇರುವ ಸೂಚನೆ ನೀಡುತ್ತದೆ ಟ್ರೈಲರ್. ‘ಗದ್ದಾರ್’ ಸಿನಿಮಾ ನಿರ್ದೇಶಿಸಿದ್ದ ಅನಿಲ್ ಶರ್ಮಾ ಅವರೇ ಸೀಕ್ವೆಲ್ ನಿರ್ದೇಶಿಸಿದ್ದು ಆಗಸ್ಟ್ 11ರಂದು ಸಿನಿಮಾ ತೆರೆಕಾಣಲಿದೆ.