ಇನ್ನು ಮುಂದೆ ತಮ್ಮ ಹೆಸರಿನ ಜೊತೆ ‘ಉಲಗನಾಯಗನ್‌’ ಬಿರುದು ಬೇಡ ಎಂದಿದ್ದಾರೆ ನಟ ಕಮಲ ಹಾಸನ್‌. ಈ ಕುರಿತು ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ನಲ್ಲಿ ಅವರು ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ಈ ಹಿಂದೆ ಕಾಲಿವುಡ್‌ನ ಮತ್ತೆ ಕೆಲವು ಹೀರೋಗಳು ತಮಗೂ ಬಿರುದು – ಬಾವಲಿ ಬೇಡ ಎಂದ ಉದಾಹರಣೆಗಳಿವೆ.

ಜಗತ್ತಿನಾದ್ಯಂತ ಸಿನಿಮಾ ಪ್ರೇಮಿಗಳು ಕಮಲ್ ಹಾಸನ್ ಅವರನ್ನು ಪ್ರೀತಿಯಿಂದ ‘ಉಲಗನಾಯಗನ್’ ಎಂದೇ ಕರೆಯುತ್ತಾರೆ. ಆದರೆ ಉಲಗನಾಯಗನ್ ಎಂಬ ಬಿರುದನ್ನು ನನ್ನ ಹೆಸರಿನ ಮುಂದೆ ಬಳಸಬೇಡಿ. ನನ್ನನ್ನು ಕಮಲ ಹಾಸನ್, ಕಮಲ್ ಅಥವಾ ಕೆಎಚ್ ಎಂದು ಕರೆಯಿರಿ ಎಂದು ಹಿರಿಯ ನಟ ತಮ್ಮ ಅಭಿಮಾನಿಗಳಲ್ಲಿ ವಿನಂತಿ ಮಾಡಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟರಿಗೆ ಹಲವು ಬಿರುದು ಬಾವಲಿ ನೀಡುವುದುಂಟು. ಇನ್ನು ಕೆಲವು ಕಲಾವಿದರು ಅವರು ನಟಿಸಿದ ಸಿನಿಮಾಗಳ ಹೆಸರಿನೊಂದಿಗೆ ಗುರುತಿಸಿಕೊಳ್ಳುತ್ತಾರೆ. ತಮಿಳುನಾಡಿನಲ್ಲಿ ಜನರಿಗೆ ಸಿನಿಮಾ ಕ್ರೇಜ್ ತುಸು ಜಾಸ್ತಿಯೇ ಇದೆ. ಸಿನಿಮಾ ಹೀರೋಗಳನ್ನು ಅತಿಯಾಗಿ ಪ್ರೀತಿಸುವ ಈ ಜನರು ನಾಯಕ ನಟರಿಗೆ ಅಭಿಮಾನದಿಂದ ವಿವಿಧ ಬಿರುದುಗಳನ್ನು ನೀಡಿ ಗೌರವಿಸುತ್ತಾರೆ. ಇದೀಗ ಕಮಲ್ ಹಾಸನ್ ಅಭಿಮಾನಿಗಳು ತಮಗೆ ನೀಡಿರುವ ಬಿರುದುಗಳನ್ನು ಕೈ ಬಿಡುವ ನಿರ್ಧಾರ ತೆಗೆದುಕೊಂಡಿದ್ದು ತನ್ನನ್ನು ಹೆಸರಿನಿಂದ ಸಂಬೋಧಿಸಿದರೆ ಸಾಕು ಎಂದಿದ್ದಾರೆ. ಈ ಕುರಿತು ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ನಲ್ಲಿ ಅವರು ಪತ್ರವೊಂದನ್ನು ಹಂಚಿಕೊಂಡಿದ್ದಾರೆ. ಪತ್ರದಲ್ಲಿನ ಒಕ್ಕಣಿ ಹೀಗಿದೆ…

ನಮಸ್ಕಾರ,
ನನ್ನನ್ನು ‘ಉಲಗನಾಯಗನ್’ ಎಂದು ಕರೆದಿದ್ದಕ್ಕಾಗಿ ನಾನು ನಿಮಗೆ ಯಾವಾಗಲೂ ಕೃತಜ್ಞನಾಗಿದ್ದೇನೆ. ಆತ್ಮೀಯ, ಗೌರವಾನ್ವಿತ ಸಹೋದ್ಯೋಗಿಗಳು ಮತ್ತು ಅಭಿಮಾನಿಗಳಿಂದ ನಾನು ಅಂತಹ ಮನ್ನಣೆಯನ್ನು ಸ್ವೀಕರಿಸುತ್ತೇನೆ, ನನ್ನ ಮೇಲಿನ ನಿಮ್ಮ ಪ್ರೀತಿ ಇನ್ನೂ ನನ್ನನ್ನು ವಿನಮ್ರಗೊಳಿಸುತ್ತದೆ. ಇದು ನನಗೆ ತುಂಬಾ ಸಂತೋಷವನ್ನೂ ನೀಡುತ್ತದೆ.

ಸಿನಿಮಾ ಕಲೆ ಒಬ್ಬ ವ್ಯಕ್ತಿಗೆ ಸೀಮಿತವಾಗಿಲ್ಲ, ನಾನು ಆ ಮಹಾನ್ ಕಲೆಯ ವಿದ್ಯಾರ್ಥಿ ಮಾತ್ರ. ನಾನು ನನ್ನನ್ನು ಸುಧಾರಿಸಲು, ಕಲಿಯಲು ಮತ್ತು ಸದಾ ಬೆಳೆಯಲು ಬಯಸುತ್ತೇನೆ. ಯಾವುದೇ ರೀತಿಯ ಸೃಜನಶೀಲ ಅಭಿವ್ಯಕ್ತಿಯಂತೆ ಸಿನಿಮಾ ಎಲ್ಲರಿಗೂ ಸೇರಿದ್ದು. ಅಸಂಖ್ಯಾತ ಕಲಾವಿದರು, ತಂತ್ರಜ್ಞರು ಮತ್ತು ಪ್ರೇಕ್ಷಕರ ಸಹಕಾರವು ಚಲನಚಿತ್ರವನ್ನು ವೈವಿಧ್ಯಮಯ, ಶ್ರೀಮಂತ ಮತ್ತು ನಿರಂತರವಾಗಿ ವಿಕಸನಗೊಳ್ಳುವ
ಕಥೆಗಳ ನಿಜವಾದ ಪ್ರತಿಬಿಂಬವಾಗಿಸುತ್ತದೆ.

ಕಲೆಗಿಂತ ಮೇಲೆ ಕಲಾವಿದನನ್ನು ಹೊಗಳಬಾರದು ಎಂಬುದು ನನ್ನ ವಿನಮ್ರ ನಂಬಿಕೆ. ನನ್ನ ಕುಂದುಕೊರತೆ ಮತ್ತು ನನ್ನನ್ನು ಸುಧಾರಿಸುವ ನನ್ನ ಪ್ರಯತ್ನಗಳ ಬಗ್ಗೆ ನಾನು ನಿರಂತರವಾಗಿ ತಿಳಿದುಕೊಳ್ಳಲು ಬಯಸುತ್ತೇನೆ. ಆದ್ದರಿಂದ ಗಂಭೀರ ಚಿಂತನೆ ಮಾಡಿದ ನಂತರ ನಾನು ‘ಉಲಗನಾಯಗನ್’ನಂತಹ ಬಿರುದು ಅಥವಾ ವಿಶೇಷಣಗಳನ್ನು ಕೈ ಬಿಡಲು ನಿರ್ಧರಿಸಿದ್ದೇನೆ. ನನ್ನ ಎಲ್ಲಾ ಅಭಿಮಾನಿಗಳು, ಮಾಧ್ಯಮಗಳು, ಚಲನಚಿತ್ರ ಬಂಧುಗಳು, ಪಕ್ಷದ ಕಾರ್ಯಕರ್ತರು ಮತ್ತು ಭಾರತದ ಸಹೋದರ ಸಹೋದರಿಯರು ನನ್ನನ್ನು ಇನ್ನು ಮುಂದೆ ಕಮಲ್ ಹಾಸನ್ ಅಥವಾ ಕಮಲ್ ಅಥವಾ ಕೆಹೆಚ್ ಎಂದು ಕರೆಯಬೇಕು ಎಂದು ವಿನಮ್ರವಾಗಿ ಕೇಳಿಕೊಳ್ಳುತ್ತೇನೆ

ವರ್ಷಗಳಿಂದ ನೀವು ನನಗೆ ತೋರಿಸಿದ ಪ್ರೀತಿ ಮತ್ತು ಪ್ರಾಮಾಣಿಕತೆಗೆ ಧನ್ಯವಾದಗಳು. ಮಾನವೀಯತೆ ಮತ್ತು ಈ ಸುಂದರ ಕಲಾಪ್ರಕಾರದ ಸಿನಿಮಾದ ಮುಂದೆ ಎಲ್ಲರೂ ಸಮಾನರಾಗಿರಬೇಕು ಎಂಬ ವಿನಮ್ರ ಬಯಕೆಯೇ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಕಾರಣ. ನಾನು ವಿನಮ್ರನಾಗಿದ್ದು, ನನ್ನ ಉದ್ದೇಶಗಳಿಗೆ ಬದ್ದನಾಗಿರಲು ಬಯಸುತ್ತೇನೆ.

ಬಿರುದು ಕೈಬಿಟ್ಟ ತಮಿಳು ಹೀರೋಗಳು

ಅಜಿತ್ ಕುಮಾರ್ | ತಮಿಳು ಹೀರೋ ಅಜಿತ್ ಕುಮಾರ್ ಕೂಡಾ ತಮ್ಮ ಹೆಸರಿನ ಜತೆ ಬಿರುದು ಸೇರಿಸಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಅಜಿತ್ ಅವರಿಗೆ ಅವರ ಅಭಿಮಾನಿಗಳು ಅಲ್ಟಿಮೇಟ್ ಸ್ಟಾರ್, ಥಲಾ (Thala) ಎಂಬ ಬಿರುದುಗಳನ್ನು ನೀಡಿದ್ದರು. ತಮ್ಮನ್ನು ಅಜಿತ್ ಕುಮಾರ್, ಅಜಿತ್ ಅಥವಾ ಎಕೆ ಎಂದಷ್ಟೇ ಕರೆದರೆ ಸಾಕು ಎಂದು ಅಜಿತ್ ವರ್ಷಗಳ ಹಿಂದೆಯೇ ಮನವಿ ಮಾಡಿದ್ದರು.

ಧನುಷ್ | ನಟ ಧನುಷ್ ಅವರ 36ನೇ ಹುಟ್ಟುಹಬ್ಬದ ಕೆಲವು ದಿನಗಳ ಮೊದಲು ನಿರ್ಮಾಪಕ ಕಲೈಪುಲಿ ಎಸ್ ಥಾನು, ‘ಇಳಯ ಸೂಪರ್ ಸ್ಟಾರ್’ ಎಂಬ ಬಿರುದು ನೀಡಿದ್ದರು. ಇದನ್ನು ನಿರಾಕರಿಸಿದ ಧನುಷ್, ನನಗೆ ಯಾವುದೇ ಬಿರುದು ಬೇಡ. ಸಿನಿಮಾ ರಂಗದಲ್ಲಿ ಒಬ್ಬರೇ ಒಬ್ಬ ಸೂಪರ್ ಸ್ಟಾರ್, ಅದು ರಜನಿಕಾಂತ್ ಎಂದಿದ್ದರು.

ಜಯಂ ರವಿ | ನಟ ರವಿ ಅವರ ಮೊದಲ ಚಿತ್ರ ‘ಜಯಂ’. ಅಲ್ಲಿಂದ ಅವರ ಹೆಸರಿಗೆ ಜಯಂ ಸೇರಿಕೊಂಡಿತು. ನಂತರದ ವರ್ಷಗಳಲ್ಲಿ ಅವರಿಗೆ ‘ಇಲಂ ಪುಯಲ್’ ಎಂಬ ಬಿರುದು ನೀಡಿದ್ದರೂ ಅವರು ಅವರು ಅದನ್ನು ಸ್ವೀಕರಿಸಿಲ್ಲ.

ಸೂರ್ಯ | ನಟ ಸೂರ್ಯ ಅವರನ್ನು ಅವರ ಅಭಿಮಾನಿಗಳು ಪ್ರೀತಿಯಿಂದ ‘ನಡಿಪಿನ್ ನಾಯಕನ್’ (Nadippin Nayagan) ಎಂದು ಕರೆದಿದ್ದರು. ಇದು ಸೂರ್ಯ ಅವರಿಗೆ ಇಷ್ಟವಾಗಿರಲಿಲ್ಲ. ತಮ್ಮನ್ನು ಸೂರ್ಯ ಎಂದೇ ಕರೆದರೆ ಸಾಕು. ನನಗೆ ಹಾಗೆ ಕರೆಯುವುದು ಇಷ್ಟ ಎಂದು ಹೇಳಿದ್ದಾರೆ.

ವಿಶಾಲ್ | ಸಾಮಾಜಿಕ ಕಳಕಳಿಯ ಸಿನಿಮಾಗಳಲ್ಲಿ ಕಾಣಿಸಿಕೊಂಡ ನಂತರ ನಟ ವಿಶಾಲ್ ಅವರಿಗೆ ‘ಪುರುಚ್ಚಿ ದಳಪತಿ’ ಎಂಬ ಬಿರುದು ನೀಡಲಾಗಿತ್ತು. ಕೆಲವು ಸಿನಿಮಾಗಳಲ್ಲಿ ತಮ್ಮ ಹೆಸರಿನ ಜತೆ ಇದನ್ನು ಬಳಸಿದ ನಂತರ ಅವರು ಈ ಬಿರುದು ಕೈ ಬಿಟ್ಟಿದ್ದರು. 2023ರಲ್ಲಿ ತೆರೆಕಂಡ ‘ಮಾರ್ಕ್ ಆಂಟನಿ’ ಚಿತ್ರದ ಪ್ರಚಾರದ ಹೊತ್ತಲ್ಲಿ ವಿಶಾಲ್ ಅವರ ಹೆಸರು ಜತೆ ಈ ಬಿರುದು ಮತ್ತೆ ಸೇರಿತ್ತು.

LEAVE A REPLY

Connect with

Please enter your comment!
Please enter your name here