ಈ ವರ್ಷದ ಆರಂಭದಲ್ಲೇ ಹಿಟ್ ಸಿನಿಮಾ ಕೊಟ್ಟು ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟ ತೇಜ ಸಜ್ಜಾ. ‘ಹನುಮಾನ್’ ಸಿನಿಮಾ ಬ್ಲಾಕ್‌ಬಸ್ಟರ್ ಆದ ಬೆನ್ನಲ್ಲೇ ಈಗ ತೇಜ ತಮ್ಮ ಹೊಸ ಸಿನಿಮಾ ಪ್ರಕಟಿಸಿದ್ದಾರೆ.
ಭರ್ಜರಿ ಯಶಸ್ಸು ಕಂಡ ‘ಹನುಮಾನ್’ ಸಿನಿಮಾದ ನಾಯಕ ನಟ ತೇಜ ಸಜ್ಜಾ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮತ್ತೊಮ್ಮೆ ಮಿಂಚಲಿರುವ ತೇಜಾಗೆ ‘ಕಾರ್ತಿಕೇಯ’, ‘ಕಾರ್ತಿಕೇಯ-2’ , ‘ಧಮಾಕ’ ಸೇರಿದಂತೆ ಹಲವು ಹಿಟ್ ಚಿತ್ರ ಕೊಟ್ಟಿರುವ ಸ್ಟಾರ್ ನಿರ್ದೇಶಕ ಕಾರ್ತಿಕ್ ಗಟ್ಟಮನೇನಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಜೋಡಿಯ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಝಲಕ್ ಅನಾವರಣಗೊಂಡಿದೆ. ಚಿತ್ರಕ್ಕೆ ‘ಮಿರಾಯ್’ ಎಂದು ಟೈಟಲ್ ಕೊಡಲಾಗಿದೆ.
‘ಹನುಮಾನ್’ ಸಿನಿಮಾದಲ್ಲಿ ದೈವಿಕ ಶಕ್ತಿ ಪಡೆದು ಸೂಪರ್ ಹೀರೋ ಪಾತ್ರದಲ್ಲಿ ಮಿಂಚಿದ್ದ ತೇಜ ಈಗ ‘ಮಿರಾಯ್’ ಚಿತ್ರದಲ್ಲಿ ಸೂಪರ್ ಯೋಧನಾಗಿ ರಂಜಿಸಲಿದ್ದಾರೆ. ಸೋಶಿಯಲ್ ಫ್ಯಾಂಟಸಿ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ದುಷ್ಟರನ್ನು ಸಂಹರಿಸುವ ಸೂಪರ್ ಯೋಧನಾಗಿ ಮಿಂಚಲಿದ್ದಾರೆ. ಪೋಸ್ಟರ್‌ನಲ್ಲಿ ಲಾಠಿ ಹಿಡಿದು ನಿಂತ ತೇಜ ಸರ್ಜಾ ಲುಕ್ ಸಖತ್ ಕ್ಯಾಚಿಯಾಗಿದೆ. ‘ಮಿರಾಯ್’ ಎಂದರೆ ಭವಿಷ್ಯ ಎಂದರ್ಥ. ಅಶೋಕ ಚಕ್ರವರ್ತಿ ಹಾಗೂ ಆತನ 9 ರಹಸ್ಯದ ಕಥೆಯನ್ನು ಬಿಚ್ಚಿಡುವ ‘ಮಿರಾಯ್’ ಸಿನಿಮಾ ಒಂದೊಳ್ಳೆ ವಿಷ್ಯುವಲ್ ಟ್ರೀಟ್ ನೀಡಲಿದೆ.
‘ಹನುಮಾನ್ ಇಷ್ಟು ಪ್ರೀತಿ ಕೊಟ್ಟ ಪ್ರೇಕ್ಷಕರಿಗೆ ಧನ್ಯವಾದ. ಸಿನಿಪ್ರಿಯರನ್ನು ರಂಜಿಸಲೆಂದೇ ನಿತ್ಯ ಕಷ್ಟುಪಟ್ಟು ಸಿನಿಮಾ ಮಾಡುತ್ತಿದ್ದೇವೆ. ‘ಮಿರಾಯಿ’ ಚಿತ್ರವನ್ನು ದೊಡ್ಡ ಮಟ್ಟದಲ್ಲೇ ಪ್ಲಾನ್ ಮಾಡಿದ್ದೇವೆ. ನಿರ್ದೇಶಕ ಕಾರ್ತಿಕ್ ಜತೆ ಸೇರಿ ಕೆಲಸ ಮಾಡುತ್ತಿರುವುದು ತುಂಬಾ ಖುಷಿ ನೀಡಿದೆ. ಕಾರ್ತಿಕ್ ನನಗೆ 10 ವರ್ಷಗಳ ಪರಿಚಯ. ಸಿನಿಮಾಗೆ ನಿಮ್ಮ ಬೆಂಬಲ ಇರಲಿ’ ಎಂದು ತೇಜ ಸಜ್ಜಾ ಹೇಳಿದ್ದಾರೆ.
‘ಮಿರಾಯ್’ ಸಿನಿಮಾಗಾಗಿ ತೇಜ ಸಜ್ಜಾ ಕೋಲು ಕಾಳಗ ಕಲಿತಿದ್ದಾರೆ. ಪ್ರತಿ ಫ್ರೇಮ್ ಅನ್ನು ಕಾರ್ತಿಕ್ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಗೌರ ಹರಿ ಸಂಗೀತ ಸಿನಿಮಾಗೆ ತೂಕ ಹೆಚ್ಚಿಸಿದೆ. ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿಯಡಿ ಟಿಜಿ ವಿಶ್ವಪ್ರಸಾದ್ ‘ಮಿರಾಯ್’ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಾರ್ತಿಕ್ ಗಟ್ಟಮನೇನಿ ಅವರೇ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮಣಿಬಾಬು ಕರಣಂ ಅವರ ಸಂಭಾಷಣೆ ಇದೆ. ಈ ಪ್ಯಾನ್ ಇಂಡಿಯಾ ಸಿನಿಮಾವನ್ನು ಮುಂದಿನ ವರ್ಷ ಏಪ್ರಿಲ್ 18ಕ್ಕೆ ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ.