ಹಾಸ್ಯನಟನಾಗಿ ಜನಪ್ರಿಯತೆ ಗಳಿಸಿದ್ದ ಸುನೀಲ್ ಇತ್ತೀಚಿನ ವರ್ಷಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜ ಕಲೈ ಕುಮಾರ್ ನಿರ್ದೇಶನದ ಕನ್ನಡ ಚಿತ್ರದೊಂದಿಗೆ ಅವರೀಗ ಸ್ಯಾಂಡಲ್ವುಡ್ ಪ್ರವೇಶಿಸುತ್ತಿದ್ದಾರೆ. ಪ್ರಜ್ವಲ್ ದೇವರಾಜ್ – ಶೃತಿ ಹರಿಹರನ್ ಈ ಸಿನಿಮಾದ ಮುಖ್ಯಭೂಮಿಕೆಯ ಕಲಾವಿದರು.
ಪ್ರಜ್ವಲ್ ದೇವರಾಜ್ ಮತ್ತು ಶೃತಿ ಹರಿಹರನ್ ಅಭಿನಯಿಸುತ್ತಿರುವ ನೂತನ ಕನ್ನಡ ಚಿತ್ರದಲ್ಲಿ ಖ್ಯಾತ ತೆಲುಗು ನಟ ಸುನೀಲ್ (ಇಂದುಕುರಿ ಸುನಿಲ್ ವರ್ಮ) ನಟಿಸಲಿದ್ದಾರೆ. ಇತ್ತೀಚಿನ ‘ಜೈಲರ್’, ‘ಮಾವೀರನ್’, ‘ಮಾರ್ಕ್ ಆಂಟನಿ’ ಮುಂತಾದ ಸಿನಿಮಾಗಳಲ್ಲಿ ನಟಿಸಿ, ಜನಪ್ರಿಯತೆ ಗಳಿಸಿರುವ ಸುನೀಲ್ ಈಗ ಕನ್ನಡಕ್ಕೆ ಪದಾರ್ಪಣೆ ಮಾಡಿದ್ದಾರೆ. ನೃತ್ಯ ನಿರ್ದೇಶಕ ರಾಜ ಕಲೈ ಕುಮಾರ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಈ ಸಿನಿಮಾವನ್ನು Rajalakshmi Entertainment ಬ್ಯಾನರ್ ಅಡಿ ಪ್ರತಿಭಾ ನರೇಶ್ ನಿರ್ಮಾಣ ಮಾಡುತ್ತಿದ್ದಾರೆ. ನವೆಂಬರ್ ಮೊದಲ ವಾರದಲ್ಲಿ ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, ಸದ್ಯ ಚಿತ್ರತಂಡ ಲೊಕೇಶನ್ ಹುಡುಕಾಟದಲ್ಲಿದೆ. ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲು ಚಿತ್ರತಂಡ ಯೋಜನೆ ರೂಪಿಸಿಕೊಂಡಿದೆ.
ಸುಮಾರು 180ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಸುನೀಲ್ ಅವರು ‘ಜೈಲರ್’ ಸಿನಿಮಾದ ನಂತರ ವಿಶಾಲ್ ಅಭಿನಯದ ‘ಮಾರ್ಕ್ ಆಂಟನಿ’ ಚಿತ್ರದಲ್ಲಿ ಕಾಣಿಸಿಕೊಂಡು ಖ್ಯಾತಿ ಗಳಿಸಿದರು. ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಸುದೀಪ್ ಅವರ ‘ಮ್ಯಾಕ್ಸ್’ ಚಿತ್ರದಲ್ಲೂ ಅವರು ನಟಿಸಲಿದ್ದಾರೆ ಎನ್ನಲಾಗಿದೆ. ‘ಹೆಡ್ ಬುಷ್’ ಚಿತ್ರದ ನಂತರ ಶ್ರುತಿ ಹರಿಹರನ್ ಅವರು ಮತ್ತೆ ಈ ಚಿತ್ರದೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಪ್ರಜ್ವಲ್ ದೇವರಾಜ್ ಜೊತೆಗೆ ‘ಮಾದ ಮತ್ತು ಮಾನಸಿ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಇತ್ತೀಚೆಗಷ್ಟೇ ಪ್ರಜ್ವಲ್ ನಟನೆಯ ‘ತತ್ಸಮ ತದ್ಭವ’ ತೆರೆಗೆ ಬಂದಿತ್ತು. ಇದರ ಜೊತೆಗೆ ಅವರ ಸಾಲುಸಾಲು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ‘ಗಣ’, ‘ಮಾಫಿಯಾ’ ಸಿನಿಮಾಗಳು ಬಿಡುಗಡೆಯಾಗಬೇಕಿವೆ. ‘ಮಾಫಿಯಾ’ ನಿರ್ದೇಶಕ ಲೋಹಿತ್ ಜತೆಗೆ ಮತ್ತೊಂದು ಸಿನಿಮಾದಲ್ಲೂ ಪ್ರಜ್ವಲ್ ನಟಿಸುತ್ತಿದ್ದಾರೆ. PAN India ಸಿನಿಮಾ ‘ಜಾತರೆ’ಯಲ್ಲೂ ಪ್ರಜ್ವಲ್ ನಟಿಸಲಿದ್ದಾರೆ.