ಹಳೇ ಕಾಲದ ಕ್ಯಾಮೆರಾ, ರೆಕಾರ್ಡರ್, ಫ್ರಾಕ್, ಬಣ್ಣದ ರಿಬ್ಬನ್ ಹೀಗೆ ನಾಸ್ಟಾಲ್ಜಿಯಾದಿಂದ ಕೂಡಿದ ಸಿನಿಮಾ ತುಂಬಾ ವಿಶೇಷವಾಗಿದೆ ಎಂದು ಹೇಳುವುದು ಉತ್ಪ್ರೇಕ್ಷೆ ಅನಿಸಿದರೂ ಒಮ್ಮೆ ನೋಡಬಹುದಾದ ಸಿನಿಮಾ. ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲವಾದರೂ ಡ್ಯಾನ್ಸ್ ಚೆಂದವಾಗಿದೆ. ‘ದಿ ಆರ್ಚೀಸ್’ ಸಿನಿಮಾ Netflixನಲ್ಲಿ ಸ್ಟ್ರೀಮ್ ಆಗುತ್ತಿದೆ.
ಜೋಯಾ ಅಖ್ತರ್ ನಿರ್ದೇಶನದ ‘ದಿ ಆರ್ಚೀಸ್’ ಬಹು ನಿರೀಕ್ಷಿತ ಚಿತ್ರ ಎಂದು ಹೇಳಲು ಸಾಧ್ಯವಾಗದೇ ಇದ್ದರೂ ಬಾಲಿವುಡ್ ಸ್ಟಾರ್ ಕಿಡ್‌ಗಳು ಇಲ್ಲಿ ಹೇಗೆ ನಟಿಸಿದ್ದಾರೆ ಎಂಬ ಕುತೂಹಲವಂತೂ ಇತ್ತು. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ‘ದಿ ಆರ್ಚೀಸ್’ ನಾಸ್ಟಾಲ್ಜಿಯಾ ಸಿನಿಮಾ. ಚೆಂದದ ಪೇಟಿಂಗ್‌ನಂತೆ ಕಾಣುವ ಭೂದೃಶ್ಯಗಳು, ಹಳೇ ತಲೆಮಾರುಗಳನ್ನು ನೆನಪಿಸುವ ಉಡುಗೆ, ಇಂಗ್ಲಿಷ್ ಮಿಶ್ರಿತ ಹಿಂದಿ ಮಾತನಾಡುವ ಆಂಗ್ಲೋ ಇಂಡಿಯನ್ ಕುಟುಂಬಗಳು. ಈ ಎಲ್ಲವೂ ನಡೆಯುವುದು ರಿವರ್‌ಡೇಲ್‌ನಲ್ಲಿ. ‘ರಿವರ್‌ಡೇಲ್ ಹೈಸ್ಕೂಲ್‌ನ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಶಾಲೆಯ ಕ್ಯಾಂಟೀನ್ ಅನ್ನು ಜನಪ್ರಿಯ ಸ್ಥಳೀಯ ಕೆಫೆ ನಡೆಸುತ್ತಿಲ್ಲ. ಇದರ ಬದಲಾಗಿ, ಅವರಿಗೆ ಪ್ರಿ ಪ್ಯಾಕ್ಡ್ ಊಟ ನೀಡಲಾಗುತ್ತದೆ’ ಎಂದು ಶಿಕ್ಷಕರು ತಿಳಿಸುತ್ತಾರೆ.
ಪಾಪ್ ಟೇಟ್ಸ್ (ನಿಖಿಲ್ ಕಪೂರ್) ನಡೆಸುತ್ತಿರುವ ಕೆಫೆ ಬಿಟ್ಟು ಬೇರೊಂದನ್ನು ಒಪ್ಪಿಕೊಳ್ಳುವುದು ಕಷ್ಟ. ಪಾಪ್ ಟೇಟ್ಸ್‌ಗೆ ತಮ್ಮ ಆದ್ಯತೆ ಬಗ್ಗೆ ಗೊತ್ತು. ಅದರಲ್ಲಿ ಅವರ ಸ್ಪರ್ಶ ಇದೆ. ಕಾರ್ಪೊರೇಟ್ ಕಂಪನಿಗಳಿಗೆ ಇದೆಲ್ಲ ಅರ್ಥವಾಗುವುದು ಹೇಗೆ ಎಂದು ಹೆಚ್ಚಿನ ವಿದ್ಯಾರ್ಥಿಗಳು ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಈ ಬಗ್ಗೆ ತರಗತಿಯಲ್ಲಿ ಚರ್ಚೆ ನಡೆಯುತ್ತದೆ. ವಿದ್ಯಾರ್ಥಿಗಳಲ್ಲಿ ಒಬ್ಬನಾದ ರೆಗ್ಗೀ (ವೇದಂಗ್ ರೈನಾ) ಅಭಿವೃದ್ಧಿ ಹೆಸರಲ್ಲಿ ಕಾರ್ಪೊರೇಟ್ ಲಾಭ ಮಾಡಲಾಗುತ್ತದೆ ಎನ್ನುತ್ತಾನೆ. ಇನ್ನೊಬ್ಬ ವಿದ್ಯಾರ್ಥಿ ಆರ್ಚಿ (ಅಗಸ್ತ್ಯ ನಂದಾ) ತಾನು ರಾಜಕೀಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ, ಅದಕ್ಕೂ ತನ್ನ ಜೀವನದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಾನೆ. Everything is politics ಎಂಬ ಹಾಡಿನ ಮೂಲಕ ಒಂದಷ್ಟು ವಿಷಯವನ್ನು ನಿರ್ದೇಶಕರು ಇಲ್ಲಿ ದಾಟಿಸುತ್ತಾರೆ.
ಈ ಕತೆ ನಡೆಯುವುದು 1964ರಲ್ಲಿ. ಇದು ಮುಗ್ಧತೆಯ ಕಾಲ, ಆತ್ಮವಿಶ್ವಾಸದ ಸಮಯ. ಇನ್ನೂ ಮೀಸೆ ಮೂಡದ ಹದಿಹರೆಯದ ಹುಡುಗರು, ಹೊಳಪು ಕಂಗಳ, ಶಾರ್ಟ್ ಹೇರ್ ಹುಡುಗಿಯರು ಹೈಸ್ಕೂಲ್ ಬ್ಯಾಂಡ್‌ನಲ್ಲಿ ಗಿಟಾರ್ ಬಾರಿಸುತ್ತಾರೆ. ಫ್ಲರ್ಟಿಂಗ್ ಮತ್ತು ಡೇಟಿಂಗ್ ಮಾಡುತ್ತಾರೆ. ಸುಂದರವಾಗಿ ಕಾಣುವ ಆರ್ಚೀ ಆಂಡ್ರ್ಯೂಸ್, ಸುಂದರಿಯಾದ ಬೆಟ್ಟಿ ಕೂಪರ್, ಶ್ರೀಮಂತ ಕುಟುಂಬದ ಸ್ಟೈಲಿಶ್ ಹುಡುಗಿ ವೆರೋನಿಕಾ ಲಾಡ್ಜ್, ಯಾವಾಗಲೂ ಹಸಿದಿರುವ ಜಗ್‌ಹೆಡ್ ಜೋನ್ಸ್, ರೆಗ್ಗೀ ಮ್ಯಾಂಟಲ್, ಮೂಸ್, ಎಥೆಲ್ – ಈ ಕಥಾಪಾತ್ರಗಳನ್ನು ಸಿನಿಮಾ ಪರಿಚಯಿಸುತ್ತದೆ. 1941ರಲ್ಲಿ ಅಮೆರಿಕದಲ್ಲಿ ಮುದ್ರಣವನ್ನು ಪ್ರಾರಂಭಿಸಿದ ಮತ್ತು 70 ಮತ್ತು 80 ರ ದಶಕದಲ್ಲಿ ಜನಮನಸ್ಸು ಗೆದ್ದ ಆರ್ಚೀ ಕಾಮಿಕ್ಸ್‌ನ ಕಥೆ ಆಧರಿಸಿದ ಸಿನಿಮಾವೇ ‘ದಿ ಆರ್ಚೀಸ್’.
ರಿವರ್‌ಡೇಲ್ ಎಂಬ ಕಾಲ್ಪನಿಕ ಪಟ್ಟಣದಲ್ಲಿನ ಸ್ನೇಹಿತರ ಗುಂಪೇ ಇಲ್ಲಿನ ಕಥಾವಸ್ತು. ಇವೆರೆಲ್ಲರೂ ಪ್ರೌಢಶಾಲೆಯ ಅಂತಿಮ ವರ್ಷದ ವಿದ್ಯಾರ್ಥಿಗಳು, ವಯಸ್ಸು 17, ಹಾಗಾಗಿ ಹುಟ್ಟಿದ್ದು 1947ರಲ್ಲಿ. ಭಾರತ ಸ್ವತಂತ್ರವಾದ ನಂತರ ಭಾರತವನ್ನು ಬಿಟ್ಟು ಹೋಗದೆ ಇಲ್ಲೇ ನೆಲೆಸಿದ ಇಂಗ್ಲೆಂಡ್ ಮೂಲದವರು. ಈ ಸ್ನೇಹಿತರ ಗುಂಪಿನಲ್ಲಿರುವವರು ವೆರೋನಿಕಾ (ಸುಹಾನಾ ಖಾನ್) ಆರ್ಚೀ , ಬೆಟ್ಟಿ (ಖುಷಿ ಕಪೂರ್), ರೆಗ್ಗೀ, ಜಗ್ಹೆಡ್ (ಮಿಹಿರ್ ಅಹುಜಾ), ಎಥೆಲ್ (ಅದಿತಿ ಸೈಗಲ್), ಡಿಲ್ಟನ್ (ಯುವರಾಜ್ ಮೆಂಡಾ). ಸ್ನೇಹಿತರ ಗುಂಪಿನಲ್ಲಿ ನಡೆಯುವ ಪಾರ್ಟಿ, ಔಟಿಂಗ್ ಜತೆಗೆ ನವಿರು ಪ್ರೇಮವನ್ನೂ ಇಲ್ಲಿ ಕಾಣಬಹುದು. ಇವರೆಲ್ಲರ ನೆಚ್ಚಿನ ಜಾಗ ಗ್ರೀನ್ ಪಾರ್ಕ್. ಆಂಗ್ಲೋ ಇಂಡಿಯನ್ ಕುಟುಂಬದಲ್ಲಿ ಮಕ್ಕಳು ಜನಿಸಿದಾಗಲೆಲ್ಲ ಆ ಕುಟುಂಬ ಗ್ರೀನ್ ಪಾರ್ಕ್‌ನಲ್ಲಿ ಗಿಡ ನೆಡುತ್ತದೆ. ಹಾಗೆ ಪ್ರತಿಯೊಬ್ಬರ ಕುಟುಂಬವೂ ಈ ಗ್ರೀನ್ ಪಾರ್ಕ್‌ನಲ್ಲಿ ತಮ್ಮ ಕುಟುಂಬದ ಕುರುಹು ಬಿಟ್ಟಿದೆ. ಅದು ಬರೀ ಪಾರ್ಕ್ ಅಲ್ಲ, ನೆನಪುಗಳ ಬುತ್ತಿ, ಕುಟುಂಬದ ಬೇರು!
ವೆರೋನಿಕಾಳ ತಂದೆಯೂ ಆಗಿರುವ ಶ್ರೀಮಂತ ಉದ್ಯಮಿ, ಹಿರಾಮ್ ಲಾಡ್ಜ್ (ಅಲಿ ಖಾನ್), ಪಟ್ಟಣದ ಮಧ್ಯಭಾಗದಲ್ಲಿರುವ ವಿಸ್ತಾರವಾದ ಉದ್ಯಾನವನವನ್ನು ತೆಗೆದು ಅಲ್ಲಿ ಭವ್ಯವಾದ ಹೋಟೆಲ್ ನಿರ್ಮಿಸಲು ಯೋಜಿಸುತ್ತಾನೆ. ಅವನು ತನ್ನ ಯೋಜನೆಗಳಿಗೆ ಸಣ್ಣದೊಂದು ಪ್ರತಿರೋಧ ಎದುರಿಸಿದಾಗ ಅವರನ್ನೆಲ್ಲ ಹಣ ಕೊಟ್ಟು ಬಾಯಿ ಮುಚ್ಚಿಸುತ್ತಾನೆ. ನಿನ್ನ ಅಪ್ಪನೇ ಇದೆಲ್ಲ ಮಾಡುತ್ತಿರುವುದು ಎಂದು ವೆರೋನಿಕಾಗೆ ಆಕೆಯ ಗೆಳೆಯರು ಹೇಳಿದಾಗ ಆಕೆ ಅಪ್ಪನ ವಿರುದ್ಧ ಸಿಡಿದೇಳುತ್ತಾಳೆ. ಹೇಗಾದರೂ ನಮಗೆ ಗ್ರೀನ್ ಪಾರ್ಕ್ ಅನ್ನು ಉಳಿಸಬೇಕು ಅದಕ್ಕಾಗಿ ಏನು ಮಾಡಬೇಕು ಎಂಬುದರ ಬಗ್ಗೆ ಈ ಗುಂಪು ಯೋಚಿಸುತ್ತದೆ. ಹಾಗೆ ಅವರು ಕಾರ್ಯ ಪ್ರವೃತ್ತರಾಗುತ್ತಾರೆ. ಪತ್ರಿಕಾ ಸ್ವಾತಂತ್ರ್ಯ, ಕಾರ್ಪೊರೇಟ್ ಲಾಬಿ, ಹಸಿರು ಉಳಿಸುವ ಅಭಿಯಾನ ಇವೆಲ್ಲವನ್ನೂ ಸಿನಿಮಾ ಟಚ್ ಮಾಡಿದೆ.
ಇಲ್ಲಿ ಗೆಳೆತನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಆರ್ಚಿ ಎಂಬ ಆ ಯುವಕ ವೆರೋನಿಕಾ ಮತ್ತು ಬೆಟ್ಟಿಯನ್ನು ಏಕಕಾಲದಲ್ಲಿ ಪ್ರೀತಿಸುತ್ತಿರುತ್ತಾನೆ. ಅವನಿಗೆ ಇಬ್ಬರೂ ಇಷ್ಟ. ಬೆಟ್ಟಿಯ ಹುಟ್ಟುಹಬ್ಬದಂದು ಆಕೆ ಆರ್ಚಿಗೆ ಕಿಸ್ ಮಾಡುತ್ತಾಳೆ. ಇತ್ತ ವೆರೋನಿಕಾ ರಜಾಕಾಲ ಕಳೆಯಲು ಹೋಗಿದ್ದಾಗ ಆರ್ಚಿಗೆ ಕಿಸ್ ಮಾಡುತ್ತಿರುವುದನ್ನು ನೋಡಿ ಬೆಟ್ಟಿ ಬೇಸರ ಮಾಡಿಕೊಳ್ಳುತ್ತಾಳೆ. ಆದರೆ ಪ್ರೇಮದ ಮುಂದೆ ಅವರಿಬ್ಬರೂ ಆಯ್ಕೆ ಮಾಡಿಕೊಂಡಿದ್ದು ಗೆಳೆತನವನ್ನು. ಬೆಟ್ಟಿ ಮತ್ತು ವೆರೋನಿಕಾಳ ಗೆಳೆತನ ನಡುವೆ ಯಾರೂ ಬರುವುದು ಬೇಡ ಎಂದು ಅವರು ತೀರ್ಮಾನಿಸುತ್ತಾರೆ.
ಈ ಹದಿಹರೆಯದವರೆಲ್ಲರೂ ಸೇರಿ ಗ್ರೀನ್ ಪಾರ್ಕ್ ಉಳಿಸುತ್ತಾರೆ. ಮಕ್ಕಳ ಈ ಹೋರಾಟ ಕಂಡ ಕಾರ್ಪೋರೇಟ್ ಉದ್ಯಮಿಯ ಮನಸ್ಸೂ ಬದಲಾಗುತ್ತದೆ. ಇಲ್ಲಿ ಫೈಟ್‌ಗಳಿಲ್ಲ. ಎಲ್ಲವನ್ನೂ ಪ್ರೀತಿಯಿಂದಲೇ ಗೆಲ್ಲಲಾಗುತ್ತದೆ. ಪರಸ್ಪರ ನಂಬಿಕೆಗಳು ಇಲ್ಲಿ ಕೈ ಹಿಡಿಯುತ್ತದೆ ಎಂಬುದನ್ನು ತೋರಿಸಲಾಗುತ್ತದೆ. ಹಳೇ ಕಾಲದ ಕ್ಯಾಮೆರಾ, ರೆಕಾರ್ಡರ್, ಫ್ರಾಕ್, ಬಣ್ಣದ ರಿಬ್ಬನ್ ಹೀಗೆ ನಾಸ್ಟಾಲ್ಜಿಯಾದಿಂದ ಕೂಡಿದ ಸಿನಿಮಾ ತುಂಬಾ ವಿಶೇಷವಾಗಿದೆ ಎಂದು ಹೇಳುವುದು ಉತ್ಪ್ರೇಕ್ಷೆ ಅನಿಸಿದರೂ ಒಮ್ಮೆ ನೋಡಬಹುದಾದ ಸಿನಿಮಾ. ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲವಾದರೂ ಡ್ಯಾನ್ಸ್ ಚೆಂದವಾಗಿದೆ. ‘ದಿ ಆರ್ಚೀಸ್’ ಸಿನಿಮಾದ ಮೂಲಕ ಅಗಸ್ತ್ಯಾ ನಂದಾ, ಖುಷಿ ಕಪೂರ್ ಮತ್ತು ವೇದಾಂಗ್ ರೈನಾ ಭರವಸೆ ಮೂಡಿಸಿದ್ದಾರೆ. ಇನ್ನುಳಿದಂತೆ ಸುಹಾನಾಳ ಸ್ಕೇಟಿಂಗ್ ಸ್ಕಿಲ್ ನೋಡಿ ವಾಹ್ ಎಂದು ಹೇಳಬಹುದು.