ಜಯತೀರ್ಥ ನಿರ್ದೇಶನದ ‘ಕೈವ’ ಈ ವಾರ ತೆರೆಕಂಡಿದೆ. ನೈಜ ಘಟನೆ ಆಧರಿಸಿದ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಧನ್ವೀರ್‌ ಮತ್ತು ಮೇಘಾ ಶೆಟ್ಟಿ ನಟಿಸಿದ್ದಾರೆ. ನಾನಿ ನಟನೆಯ ‘ಹಾಯ್‌ ನಾನ್ನ’ ಈ ವಾರದ ಮತ್ತೊಂದು ಪ್ರಮುಖ ಸಿನಿಮಾ. ತಂದೆ – ಮಗಳ ಕತೆಯ ತೆಲುಗು ಚಿತ್ರವಿದು. ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ಮನೋಜ್‌ ಭಾಜಪೈ ಅಭಿನಯದ ‘ಜೋರಮ್‌’ ಹಿಂದಿ ಚಿತ್ರವೂ ಈ ವಾರ ತೆರೆಗೆ ಬಂದಿದೆ.

ಕೈವ | ಕನ್ನಡ | ಧನ್ವೀರ್‌ ಮತ್ತು ಮೇಘಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ ಸಿನಿಮಾ. 1983ರಲ್ಲಿ ಬೆಂಗಳೂರಿನ ತಿಗಳರಪೇಟೆಯಲ್ಲಿ ನಡೆದ ನೈಜ ಘಟನೆ ಆಧರಿಸಿದ ಚಿತ್ರ ಇದಾಗಿದ್ದು, ಬೆಂಗಳೂರಿನ ಕರಗದ ಉಲ್ಲೇಖ ಸಿನಿಮಾದಲ್ಲಿದೆ. ರೌಡಿಸಂ ಜೊತೆ ಒಂದು ಪ್ರೇಮಕಥೆಯೂ ಮೂಡಿಬಂದಿದೆ. ಚಿತ್ರವನ್ನು ಜಯತೀರ್ಥ ನಿರ್ದೇಶಿಸಿದ್ದು, ರವೀಂದ್ರ ಕುಮಾರ್‌ ನಿರ್ಮಿಸಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆ, ಶ್ವೇತ ಪ್ರಿಯಾ ನಾಯಕ್ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ರಾಘು ಶಿವಮೊಗ್ಗ, ಬಿ ಎಂ ಗಿರಿರಾಜ್, ಅಶ್ವಿನ್ ಹಾಸನ್, ದಿನಕರ ತೂಗುದೀಪ, ಜಯರಾಮ್ ಕಾರ್ತಿಕ್ (ಜೆಕೆ), ನಂದ ಗೋಪಾಲ್, ಉಗ್ರಂ ಮಂಜು, ರಮೇಶ್ ಇಂದಿರಾ, ಮಹಾಂತೇಶ ಹಿರೇಮಠ, ಜಾನ್ವಿ ರಾಯಲ, ಬಿ ಎಂ ಗಿರಿರಾಜ್‌ ಚಿತ್ರದಲ್ಲಿ ನಟಿಸಿದ್ದಾರೆ.

ಮರೀಚಿ | ಕನ್ನಡ | ವಿಜಯ ರಾಘವೇಂದ್ರ ಹೀರೋ ಆಗಿ ನಟಿಸಿರುವ ಥ್ರಿಲ್ಲರ್‌. ಐವರು ಪೊಲೀಸ್‌ ಅಧಿಕಾರಿಗಳ ಕೊಲೆಗಳ ಸುತ್ತ ಹೆಣೆದ ಕಥಾಹಂದರ. ವಿಜಯ ರಾಘವೇಂದ್ರ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಚಿತ್ರದ ನಾಯಕಿ ಸೋನು ಗೌಡ. ಸಿದ್ದು ಕತೆ, ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ. ಅಭಿ ದಾಸ್‌, ಸ್ಪಂದನಾ ಸೋಮಣ್ಣ, ಆರ್ಯನ್‌, ಶ್ರುತಿ ಪಾಟೀಲ್‌, ಗೋಪಾಲ ಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಜೋರಮ್‌ | ಹಿಂದಿ | ಈ ಸೈಕಲಾಜಿಕಲ್ ಥ್ರಿಲ್ಲರ್ ಚಲನಚಿತ್ರದಲ್ಲಿ ಸ್ಥಳಾಂತರಗೊಂಡ ಮಾನಸಿಕ ರೋಗಿ ‘ದಸ್ರು’ (ಮನೋಜ್‌ ಬಾಜಪೇಯಿ) ತನ್ನ ಮೂರು ತಿಂಗಳ ಮಗುವನ್ನು ಹಾಗೂ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೋರಾಡುತ್ತಾನೆ. ಜಾರ್ಖಂಡ್‌ ರಾಜ್ಯವನ್ನೇ ಮುಖ್ಯ ವಸ್ತುವಾಗಿಟ್ಟುಕೊಂಡಿರುವ ಈ ಕಥೆಯಲ್ಲಿ ರಾಜಕೀಯ ಮತ್ತು ಸಾಮಾಜಿಕ ಅಸಮಾನತೆಗಳು, ಬುಡಕಟ್ಟುಸಮುದಾಯಗಳಿಗಾಗಿರುವ ಅನ್ಯಾಯ ಮತ್ತು ಅರಣ್ಯನಾಶದಂತಹ ಸಮಸ್ಯೆಗಳನ್ನು ತೋರಿಸಲಾಗಿದೆ. ಜಾರ್ಖಂಡ್‌ ರಾಜ್ಯದಿಂದ ವಲಸೆ ಬಂದ ಅನೇಕ ವಲಸಿಗರು ಮುಂಬೈನಲ್ಲಿ ಕಟ್ಟಡ ಕಟ್ಟುವ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಚಿತ್ರದಲ್ಲಿ ಮೊಹಮ್ಮದ್ ಜೀಶನ್, ಅಯ್ಯೂಬ್ ಸ್ಮಿತಾ ತಾಂಬೆ, ಮತ್ತು ಮೇಘಾ ಮಾಥುರ್ ಪ್ರಮುಖ ಪಾತ್ರಗಳಲ್ಲಿ ಹಾಗೂ ತನ್ನಿಷ್ಠ ಚಟರ್ಜಿ ಮತ್ತು ರಾಜಶ್ರೀ ದೇಶಪಾಂಡೆ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು Zee Studios ಸಹಯೋಗದೊಂದಿಗೆ ಆಸಿಮಾ ಆವಸ್ತಿ, ದೇವಶೀಶ್ ಮಖಿಜ ಮತ್ತು ಅನುಪಮಾ ಬೋಸ್ ನಿರ್ಮಿಸಿದ್ದಾರೆ.

ಹಾಯ್‌ ನಾನ್ನ | ತೆಲುಗು | ಚಿತ್ರಕಥೆಯು ತಂದೆ-ಮಗಳ ಬಾಂಧವ್ಯದ ಸುತ್ತ ಸುತ್ತುತ್ತದೆ. ಕೇವಲ ತಂದೆಯ ಆಶ್ರಯದಲ್ಲಿ ಬೆಳೆದ, ತಾಯಿ ಪ್ರೀತಿ ತಿಳಿಯದ, ತಾಯಿಗಾಗಿ ಪರಿತಪಿಸುವ, ತನ್ನ ಪುಟ್ಟ ಮಗುವಿಗೆ ಒಂದು ಕಲ್ಪನಾ ಲೋಕವನ್ನು ನಾನಿ ಕಟ್ಟಿ ಕೊಟ್ಟಿರುತ್ತಾನೆ. ತಂದೆ – ಮಗಳು ಯಾವಾಗಲೂ ಕಥೆ ಹೇಳಿಕೊಳ್ಳುವ ಮೂಲಕ ತಮ್ಮ ಕನಸಿನ ಲೋಕವನ್ನು ನೆನೆಸಿಕೊಳ್ಳುತ್ತಿರುತ್ತಾರೆ. ಮೃಣಾಲ್‌ ಆಕಸ್ಮಿಕವಾಗಿ ನಾನಿ ಮತ್ತು ಮಗುವನ್ನು ಭೇಟಿಯಾಗುತ್ತಾಳೆ. ತನ್ನ ತಾಯಿಯನ್ನು ಕಲ್ಪಿಸಿಕೊಳ್ಳುವಾಗ ಬೇಬಿ ಕಿಯಾರಾ ಮೃಣಾಲ್‌ನನ್ನು ಕಲ್ಪಿಸಿಕೊಳ್ಳುತ್ತಾಳೆ. ಕ್ರಮೇಣ ಮೃಣಾಲ್‌ ನಾನಿಯನ್ನು ಪ್ರೀತಿಸಲು ಆರಂಭಿಸುತ್ತಾಳೆ. ಆದರೆ ಇದನ್ನು ವಿರೋಧಿಸುವ ನಾನಿ ತನ್ನ ಮಗಳಿಗಾಗಿ ಅವಳ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾನಾ? ಅಥವಾ ತಿರಸ್ಕರಿಸುತ್ತಾನಾ? ಎಂಬುದು ಕತೆ. ಶೃತಿ ಹಾಸನ್‌, ಜಯರಾಂ, ಹಿಮಾಯತ್‌ ರೆಹಮಾನ್‌, ಅಂಗದ್ ಸಿಂಗ್ ಬೇಡಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಲನಚಿತ್ರವನ್ನು Vyra Entertainments ಬ್ಯಾನರ್‌ ಅಡಿಯಲ್ಲಿ ಮೋಹನ್ ಚೆರುಕುರಿ (Sivm)ಮತ್ತು ಡಾ ವಿಜಯೇಂದ್ರ ರೆಡ್ಡಿ ಟೀಗಾಲ ನಿರ್ಮಿಸಿದ್ದಾರೆ. ಸಾನು ಜಾನ್ ವರ್ಗೀಸ್ ಛಾಯಾಗ್ರಹಣ, ಪ್ರವೀಣ್ ಆಂಥೋನಿ ಸಂಕಲನ, ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಮೂಲ ತೆಲುಗು ಸೇರಿದಂತೆ ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಂಡಿದೆ.

ಅವಳ್ ಪೇಯರ್‌ ರಜಿನಿ | ಮಲಯಾಳಂ | ಈ ಚಲನಚಿತ್ರ ಎರಡು ದಂಪತಿಗಳ ಸುತ್ತ ಸುತ್ತುತ್ತದೆ. ಅವರು ಮಾಡುವ ಒಂದು ಅಪಘಾತದಿಂದ ಅವರ ಸುಗಮ ಜೀವನಕ್ಕೆ ಅಡ್ಡಿಯಾಗುತ್ತದೆ. ಇದರಿಂದ ಅನೇಕ ನಿಗೂಢ ಘಟನೆಗಳು ಅವರ ಬದುಕಿನಲ್ಲಿ ಸಂಭವಿಸುತ್ತದೆ. ಚಿತ್ರದ ಶೀರ್ಷಿಕೆಯಲ್ಲಿ ಸೂಚಿಸಿದಂತೆ ನಟ ರಜನೀಕಾಂತ್ ಅವರಿಗೆ ಸಂಬಂಧಿಸಿದ ಕೆಲವು ಅಂಶಗಳು ಚಿತ್ರದಲ್ಲಿವೆ. ಈ ಮಿಸ್ಟರಿ ಥ್ರಿಲ್ಲರ್ ಚಿತ್ರದಲ್ಲಿ ರೆಬಾ ಮೋನಿಕಾ ಜಾನ್, ಸೈಜು ಕುರುಪ್, ಅಶ್ವಿನ್ ಕುಮಾರ್, ಕರುಣಾಕರನ್ ಮತ್ತು ಶಾನ್ ರೋಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿರ್ದೇಶಕ ವಿನಿಲ್ ಚಿತ್ರದ ಕಥೆಯನ್ನು ಸಹ ರಚಿಸಿದ್ದಾರೆ. ಈ ದ್ವಿಭಾಷಾ ಸಿನಿಮಾಗೆ ಡೇವಿಡ್ ಕೆ ರಾಜನ್ ಅವರ ತಮಿಳು ಸಂಭಾಷಣೆಗಳನ್ನು ಬರೆದಿದ್ದು, ಫಹಾದ್ ಫಾಸಿಲ್ ಅಭಿನಯದ ʼಟ್ರಾನ್ಸ್‌ʼ ಚಿತ್ರದ ಕಥೆ ಬರಹಗಾರರಾದ ವಿನ್ಸೆಂಟ್ ವಡಕ್ಕನ್ ಅವರು ಮಲಯಾಳಂ ಸಂಭಾಷಣೆಗಳನ್ನು ಬರೆದಿದ್ದಾರೆ. Navarasa Films ಬ್ಯಾನರ್‌ ಅಡಿಯಲ್ಲಿ ಶ್ರೀಜಿತ್ ಕೆಎಸ್ ಮತ್ತು ಬ್ಲೆಸ್ಸಿ ಶ್ರೀಜಿತ್ ಚಿತ್ರವನ್ನು ನಿರ್ಮಿಸಿದ್ದಾರೆ. ಆರ್ ಆರ್ ವಿಷ್ಣು ಛಾಯಾಗ್ರಹಣ, ದೀಪು ಜೋಸೆಫ್ ಸಂಕಲನವಿದೆ.

https://youtu.be/hqsiIHvApyw

ಎ ರಂಜಿತ್ ಸಿನಿಮಾ | ಮಲಯಾಳಂ | ಈ ಸಿನಿಮಾದಲ್ಲಿ ವಿಶಿಷ್ಟ ವಿಧಾನದಲ್ಲಿ ಕಥೆ ವಿವರಿಸಿದ್ದಾರೆ. ನಿರೂಪಣೆಯು ಮೂರನೇ ವ್ಯಕ್ತಿಯ ರೂಪದಲ್ಲಿ ಇರುವುದರಿಂದ, ಇಡೀ ಸನ್ನಿವೇಶವು ಏನೆಂದು ಸುಲಭವಾಗಿ ಅರ್ಥೈಸಿಕೊಳಲು ತುಸು ಕಷ್ಟವೆನಿಸಬಹುದು. ಕಥೆ ಎಲ್ಲವನ್ನೂ ನಿಗೂಢವಾಗಿ ಇರಿಸಿದೆ. ರೋಮ್ಯಾಂಟಿಕ್-ಕ್ರೈಮ್-ಸೈಕಲಾಜಿಕಲ್-ಸಸ್ಪೆನ್ಸ್‌-ಥ್ರಿಲ್ಲರ್ ಕಥೆಯನ್ನು ಈ ಚಲನಚಿತ್ರ ಒಳಗೊಂಡಿದೆ. ಚಿತ್ರದಲ್ಲಿ ಆಸಿಫ್ ಅಲಿ ಪಾತ್ರವು ಹೆಚ್ಚು ಪ್ರಯೋಗಾತ್ಮಕವಾಗಿದೆ. ನಮಿತಾ ಪ್ರಮೋದ್, ಹನ್ನಾ ರೆಜಿ ಕೋಶಿ, ಜ್ಯುವೆಲ್ ಮೇರಿ, ಹರಿಶ್ರೀ ಅಶೋಕನ್, ಅಜು ವರ್ಗೀಸ್, ಕೊಟ್ಟಾಯಂ ರಮೇಶ್ ಮತ್ತು ಶೋಭಾ ಮೋಹನ್ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಮನೋಜ್ ಸಿ ಎಸ್ ಸಂಕಲನ, ಸುನೋಜ್ ವೇಲಾಯುಧನ್ ಮತ್ತು ಕುಂಜುನ್ನಿ ಎಸ್ ಕುಮಾರ್ ಅವರ ಛಾಯಾಗ್ರಹಣ, ಮಿಧುನ್ ಅಶೋಕನ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರವನ್ನು ನಿಶಾದ್ ಪೀಚಿ ಮತ್ತು ಬಾಬು ಜೋಸೆಫ್ ಅಂಬಟ್ಟು ನಿರ್ಮಿಸಿದ್ದಾರೆ.

LEAVE A REPLY

Connect with

Please enter your comment!
Please enter your name here