ಒಂದು ಸ್ಪೈ ಥ್ರಿಲ್ಲರ್‌ಗೆ ಬೇಕಾದ ಸ್ಟೈಲ್, ಅದ್ಧೂರಿತನ, ನಾವಿನ್ಯತೆ ಎಲ್ಲವೂ ಇದೆ. ಕಣ್ಮನ ಸೆಳೆಯುವ ಎಕ್ಸಾಟಿಕ್ ಲೋಕೇಷನ್‌ಗಳು, ಐಷಾರಾಮಿ ಹೋಟೆಲ್‌ಗಳು, ಪ್ರೈವೇಟ್ ಚಾಪರ್‌ಗಳು, ಶ್ರೀಮಂತಿಕೆ ಬಿಂಬಿಸುವ ಜೀವನ ಶೈಲಿಯ ಚಿತ್ರಣ ಇಲ್ಲಿದೆ. ಸಿನಿಮಟೋಗ್ರಫಿ ಮತ್ತು ಎಡಿಟಿಂಗ್ ಸೀರೀಸ್‌ನ ಶ್ರೀಮಂತಿಕೆಯನ್ನು ಎತ್ತಿ ತೋರಿಸುವ ರೀತಿಯಲ್ಲಿ ಸಮರ್ಪಕವಾಗಿದೆ. ‘The Night manager’ DisneyPlus Hotstarನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಯಾವುದೇ ಜನಪ್ರಿಯ ಸೀರೀಸ್ ಅಥವಾ ಸಿನಿಮಾಗಳನ್ನು ರಿಮೇಕ್ ಮಾಡುವಾಗ ಇರುವ ದೊಡ್ಡ ಅಪಾಯವೆಂದರೆ ಅದನ್ನು ಮೂಲಕ್ಕೆ ಹೋಲಿಸಿ ವಿಮರ್ಶಿಸಲಾಗುತ್ತದೆ ಎಂಬುದು. ಮತ್ತೊಂದು ದೊಡ್ಡ ತೊಂದರೆಯೆಂದರೆ ಮೂಲವನ್ನು ತುಂಬಾ ಇಷ್ಟಪಟ್ಟ ನಿಷ್ಟಾವಂತ ಪ್ರೇಕ್ಷಕರು ರಿಮೇಕ್ ಅನ್ನು ಒಪ್ಪುವಂತೆ ಮತ್ತು ಸ್ವೀಕರಿಸುವಂತೆ ಮಾಡುವುದು ಇನ್ನೂ ಕಷ್ಟ. ಹಾಟ್‌ಸ್ಟಾರ್‌ನಲ್ಲಿ ಇತ್ತೀಚೆಗೆ ಬಿಡುಗಡೆಗೊಂಡಿರುವ ‘ದಿ ನೈಟ್ ಮ್ಯಾನೇಜರ್’, ಈ ಸವಾಲುಗಳ ಜೊತೆ ಜೊತೆಗೆ ಮತ್ತೂ ಒಂದು ಪರೀಕ್ಷೆಯನ್ನೂ ಎದುರಿಸಬೇಕಾಗಿದೆ. ‘ದಿ ನೈಟ್ ಮ್ಯಾನೇಜರ್’ ಬ್ರಿಟಿಷ್ ಲೇಖಕ ಜಾನ್ ಲ ಕರ್ರೆ ಅವರ ಪ್ರಸಿದ್ಧ ಕಾದಂಬರಿ. ಇದನ್ನು 7 ವರ್ಷಗಳ ಹಿಂದೆ ಬಿಬಿಸಿ ಕಿರುತೆರೆಗೆ ಅಳವಡಿಸಿತ್ತು. ಈಗ ಹಿಂದಿ ಭಾಷೆಯಲ್ಲಿ ಇದನ್ನು ನಿರ್ಮಿಸಲಾಗಿದೆ. ಹೀಗಾಗಿ, ಇದು ಮೂಲ ಕೃತಿ ಮತ್ತು ಮೂಲ ಇಂಗ್ಲಿಷ್ ಸೀರೀಸ್‌ನ ಜನಪ್ರಿಯತೆಯ ಜೊತೆಗೆ ಸ್ಪರ್ಧಿಸಬೇಕಿದೆ.

ಹಿಂದಿಯ ನೈಟ್ ಮ್ಯಾನೇಜರ್, ಜಾನ್ ಅವರ ಕಾದಂಬರಿ ಆಧರಿತ ಎಂದೇ ಹೇಳಿಕೊಂಡಿದ್ದರೂ, ಇದು ಕಾದಂಬರಿಗಿಂತ ಇಂಗ್ಲಿಷ್ ಸೀರೀಸ್‌ಗೆ ಹೆಚ್ಚು ಹತ್ತಿರವಾಗಿದೆ. ಕಾದಂಬರಿ ಸುಮಾರು 30 ವರ್ಷ ಹಳೆಯದು ಮತ್ತು ಶೀತಲ ಸಮರದ ನಂತರದ ದಿನಗಳಲ್ಲಿ ನಡೆಯುವ ಕತೆಯನ್ನು ಹೇಳುತ್ತದೆ. ಬಿಬಿಸಿ ಅದನ್ನು ಪೀರಿಯಡ್ ಸೀರಿಸ್ ಆಗಿಸುವ ಬದಲು, ಅದನ್ನು ಹೊಸ ಕಾಲಮಾನಕ್ಕೆ ತಕ್ಕಂತೆ ಬದಲಿಸಿಕೊಂಡಿತ್ತು. ಹಿಂದಿ ಸೀರೀಸ್ ಆ ಇಂಗ್ಲಿಷ್ ಅವತರಣಿಕೆಯನ್ನೇ ಹೆಚ್ಚು ಅವಲಂಬಿಸಿದ್ದು, ಭಾರತೀಯ ಪರಿಸರಕ್ಕೆ ತಕ್ಕಂತೆ ಕತೆಯಲ್ಲಿರುವ ಸನ್ನಿವೇಶ ಮತ್ತು ಸ್ಥಳಗಳಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆಯಷ್ಟೆ.

ಶಾನ್ ದಾಸ್‌ಗುಪ್ತಾ, ನೌಕಪಡೆಯ ಮಾಜಿ ಅಧಿಕಾರಿ. ಈಗ ಐಷಾರಾಮಿ ಹೊಟೇಲುಗಳಲ್ಲಿ ನೈಟ್ ಮ್ಯಾನೇಜರ್. ಅವನು ಮ್ಯಾನೇಜರ್ ಆಗಿದ್ದ ಹೊಟೇಲ್‌ನಲ್ಲಿ ಸಂಭವಿಸಿದ ಒಂದು ದುರಂತ ಘಟನೆಯಿಂದಾಗಿ, ಪ್ರತಿಷ್ಠಿತ ಉದ್ಯಮಿ ಶೈಲೇಂದ್ರ ರಂಗ್ಟಾ, ತೆರೆಯ ಹಿಂದೆ ಅಕ್ರಮವಾಗಿ ಶಸ್ತ್ರಾಸ್ತ್ರಗಳ ಡೀಲರ್ ಆಗಿರುವ ವಿಷಯ ಶಾನ್‌ಗೆ ತಿಳಿಯುತ್ತದೆ. ಶೈಲೇಂದ್ರ(ಶೆಲ್ಲಿ)ನ ಅಕ್ರಮಗಳನ್ನು ಬಯಲಿಗೆಳೆಯಲೇ ಬೇಕೆಂದು ಆತನ ಹಿಂದೆ ಬಿದ್ದಿರುವ ರಾ ಆಫೀಸರ್ ಲಿಪಿಕಾ, ತನಗೆ ಸಹಾಯ ಮಾಡುವಂತೆ ಶಾನ್‌ನನ್ನು ಕೋರುತ್ತಾಳೆ ಮತ್ತು ಆ ನಿಟ್ಟಿನಲ್ಲಿ ಆತನ ಮನ ಒಲಿಸುತ್ತಾಳೆ. ಶೆಲ್ಲಿಯ ವಿರುದ್ಧ ಅಂಡರ್ ಕವರ್ ಕಾರ್ಯಾಚರಣೆಗೆ ಒಪ್ಪುವ ಶಾನ್, ಆತನ ಅಭೇಧ್ಯ ಕೋಟೆಯೊಳಗೆ ಹೊಕ್ಕು, ಆತನ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗುತ್ತಾನೆ.

ಪಾತ್ರ ಪರಿಚಯ, ಪೀಠಿಕೆ ಎಲ್ಲಾ ಮುಗಿದು ಈ ಹಂತಕ್ಕೆ ಬಂದು ಕತೆ ಟೇಕ್ ಆಫ್ ಆಗುತ್ತಿದೆ ಎನ್ನುವಾಗಲೇ ಮೊದಲ ಸೀಸನ್ ಮುಗಿದೇ ಬಿಡುತ್ತದೆ. ಒಟಿಟಿಯಲ್ಲಿ ಸೀರಿಸ್‌ಗಳ ಬಿಡುಗಡೆ ವಿಷಯದಲ್ಲಿ ಇದುವರೆಗೆ ಪಾಲಿಸುತ್ತಿದ್ದ ನಿಯಮವೆಂದರೆ, ವೆಬ್ ಸೀರೀಸ್‌ಗಳಾದರೆ ವರ್ಷಕ್ಕೊಮ್ಮೆ ಸೀಸನ್‌ನ ಎಲ್ಲಾ ಎಪಿಸೋಡ್ ಗಳನ್ನು (ಸಾಮಾನ್ಯವಾಗಿ 10) ಒಂದೇ ಬಾರಿಗೆ ರಿಲೀಸ್ ಮಾಡುವುದು, ಟಿಲಿವಿಷನ್ ಸೀರೀಸ್‌ಗಳಾದರೆ ವಾರಕ್ಕೊಂದರಂತೆ ಬಿಡುಗಡೆ ಮಾಡುವುದು. ಆದರೆ, ಹಾಟ್‌ಸ್ಟಾರ್‌ ಈ ಸಂಪ್ರದಾಯ ಮುರಿದು ಕೇವಲ 4 ಎಪಿಸೋಡುಗಳನ್ನು ಈಗ ಬಿಡುಗಡೆ ಮಾಡಿದ್ದು, ಜೂನ್‌ನಲ್ಲಿ ಮುಂದಿನ ಎಪಿಸೋಡ್‌ಗಳನ್ನು ಬಿಡುಗಡೆ ಮಾಡಲಿದೆ. ಸೀಸನ್‌ನ ಎಲ್ಲಾ ಎಪಿಸೋಡ್‌ಗಳು ಸಿದ್ಧವಾಗುವುದಕ್ಕೆ ಕಾಯದೆ, ರೆಡಿಯಾದ ನಾಲ್ಕು ಕಂತುಗಳನ್ನು ಅವಸರದಲ್ಲಿ ತೋರಿಸಿದಂತೆ ಇದು ಕಾಣುತ್ತದೆ.

ಮೊದಲೇ ಹೇಳಿದಂತೆ ನೈಟ್ ಮ್ಯಾನೇಜರ್ ಭಾರತದ ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ ಮೂಲ ಸೀರೀಸ್‌ನ ಕತೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದೆ. ಬಾಂಗ್ಲಾದೇಶದಲ್ಲಿನ ರೊಹಿಂಗ್ಯಾ ವಲಸಿಗರ ಸಮಸ್ಯೆ, ಶ್ರೀಲಂಕಾ ಸಮಸ್ಯೆಗಳು ಕತೆಯಲ್ಲಿವೆ. ಶಾನ್, ಶೆಲ್ಲಿಯ ಮೇಲೆ ದ್ವೇಷ ಬೆಳೆಸಿಕೊಳ್ಳಲು ಕಾರಣವಾಗುವ ಘಟನೆ ಹಿಂದಿಯಲ್ಲಿ ತುಂಬಾ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಇಂಗ್ಲಿಷ್‌ನ ಸೋಫಿ ಪಾತ್ರ ಇಲ್ಲಿ ಬಾಲ ವಧುವಿನ ರೂಪದಲ್ಲಿ ಶ್ರೀಮಂತ ಉದ್ಯಮಿಗೆ ಮಾರಲ್ಪಟ್ಟ ಪುಟ್ಟ ಹುಡುಗಿ ಸಫೀನಾ ಪಾತ್ರವಾಗಿ ಮಾರ್ಪಟ್ಟಿದೆ ಮತ್ತು ಆಘಾತಕಾರಿ ಅಂತ್ಯದೊಂದಿಗೆ ಮೊದಲ ಎಪಿಸೋಡ್, ಸೀರೀಸ್ ವೀಕ್ಷಣೆ ಮುಂದುವರಿಸಲು ಬೇಕಾದ ಕುತೂಹಲ ಮತ್ತು ಭಾವನಾತ್ಮಕ ಹೈ ಪಾಯಿಂಟ್ ಎರಡನ್ನೂ ಒದಗಿಸುತ್ತದೆ.

ಆದರೆ, ನಂತರದಲ್ಲಿ ಸೀರೀಸ್ ತನ್ನ ವೇಗ ಕಳೆದುಕೊಳ್ಳುತ್ತದೆ. ಆದರೂ, ಆಗಾಗ್ಗೆ ತನ್ನ ಪಥವನ್ನು ಸರಿಪಡಿಸಿಕೊಂಡು ಮುಂದೆ ಸಾಗುತ್ತದೆ. ಕತೆಯ ದೊಡ್ಡ ಕೊರತೆ ಕಾಣುವುದು ಶೆಲ್ಲಿಯಂತಹ ಬುದ್ಧಿವಂತ ಕ್ರಿಮಿನಲ್ ಉದ್ಯಮಿಯೊಬ್ಬ, ಶಾನ್‌ನನ್ನು ತನ್ನ ಆಪ್ತ ವಲಯದೊಳಗೆ ಅಷ್ಟು ಬೇಗ ಬಿಟ್ಟಿಕೊಳ್ಳುತ್ತಾನೆಂಬುದನ್ನು ನಂಬುವುದು ಕಷ್ಚ. ಹೀಗಾಗಿ, ಅದನ್ನು ಪ್ರೇಕ್ಷಕರು ಒಪ್ಪುವಂತೆ ಮಾಡಲು ಬೇಕಾದ ಶಕ್ತ ಕಾರಣಗಳು ಸಮರ್ಥವಾಗಿ ಕತೆಯಲ್ಲಿ ಮೂಡಿಬಂದಿಲ್ಲ. ಹೀಗಾಗಿ, ಮತ್ತೆಲ್ಲಾ ರೀತಿಯಲ್ಲೂ ಚತುರ, ಚಾಲಾಕಿಯಂತಿರುವ ಶೆಲ್ಲಿ ಈ ವಿಷಯದಲ್ಲಿ ಮಾಡುವ ತಪ್ಪು ತೀರಾ ಮುಟ್ಟಾಳತನದಂತೆ ಕಾಣುತ್ತದೆ.

ಬಿಬಿಸಿ ಸೀರೀಸ್‌ನ ದೊಡ್ಡ ಶಕ್ತಿ ಇದ್ದದ್ದು ಅದರ ಪಾತ್ರ ವರ್ಗದಲ್ಲಿ. ಹಿಂದಿ ಸೀರೀಸ್ ಕೂಡ ನಟರ ಆಯ್ಕೆಯಲ್ಲಿ ಗೆದ್ದಿದೆ. ಟಾಮ್ ಹಿಡಲ್ಸ್‌ಟನ್ ತನ್ನ ಪಾತ್ರಕ್ಕೆ ನೀಡಿದ್ದ ಸ್ಮಾರ್ಟ್ ಮತ್ತು ಹ್ಯಾಂಡ್‌ಸಮ್‌ ಲುಕ್ ಅನ್ನು ಆದಿತ್ಯ ರಾಯ್ ಕಪೂರ್ ಕೂಡ ಸಮರ್ಥವಾಗಿ ತೆರೆಯಲ್ಲಿ ಮೂಡಿಸಿದ್ದಾರೆ. ಅವರ ವ್ಯಕ್ತಿತ್ವ ಮತ್ತು ಮುಖಭಾವದಲ್ಲೇ ಇರುವ ಮುಗ್ಧತೆ ಮತ್ತು ಸೌಮ್ಯತೆ ಶಾನ್ ಪಾತ್ರಕ್ಕೊಂದು ಹೊಸ ಆಯಾಮ ನೀಡುತ್ತದೆ. ಐಷಾರಾಮಿ ವಾತಾವರಣದಲ್ಲಿದ್ದು ಅದರ ಭಾಗವಾಗದ, ಅದರ ಪ್ರಭಾವಕ್ಕೆ ಒಳಗಾಗದ, ಬೇಹುಗಾರಿಕೆಯ ಕೆಲಸ ಮಾಡುತ್ತಿದ್ದರೂ ತನ್ನ ಸೂಕ್ಷ್ಮ ಮನಸ್ಸನ್ನು ಕಳೆದುಕೊಳ್ಳದಂತಿರುವ ಪಾತ್ರಕ್ಕೆ ಆದಿತ್ಯ ಹೊಂದುತ್ತಾರೆ. ಕೆಲವು ಭಾವಪೂರ್ಣ ದೃಶ್ಯಗಳಲ್ಲೂ ಅವರು ಗೆಲ್ಲುತ್ತಾರೆ. ಶೆಲ್ಲಿಯ ಪಾತ್ರದೊಳಗೆ ಲೀಲಾಜಾಲವಾಗಿ ಒಂದಾಗಿ ಬಿಟ್ಟಿದ್ದಾರೆ ಅನಿಲ್ ಕಪೂರ್. ಮೂಲದಲ್ಲಿ ಹ್ಯೂ ಲ್ಯಾರಿ ನಿರ್ವಹಿಸಿದ್ದ ಪಾತ್ರಕ್ಕೆ ಅನಿಲ್ ಹೇಳಿ ಮಾಡಿಸಿದಂತಿದ್ದಾರೆ. ತೆರೆಯ ಮೇಲೆ ಎಲ್ಲಿಯೂ ಖಳ ಛಾಯೆ ಇಲ್ಲದಂತೆ ಸ್ಟೈಲಿಷ್ ಕ್ರಿಮಿನಲ್ ರೂಪದಲ್ಲಿ ಅನಿಲ್ ಕಪೂರ್ ಮಿಂಚಿದ್ದಾರೆ.

ಆಸ್ಕರ್ ವಿಜೇತೆ ಒಲೀವಿಯಾ ಕೋಲ್ಮನ್ ನಿರ್ವಹಿಸಿದ್ದ ಪಾತ್ರದಲ್ಲಿ, ಪ್ರತಿಭಾವಂತ ನಟಿ ತಿಲೋತ್ತಮ ಶೋಮ್ ಕಾಣಿಸಿಕೊಂಡಿದ್ದಾರೆ. ಗರ್ಭಿಣಿ ರಾ ಅಫೀಸರ್ ಆಗಿ ನಟಿಸಿರುವ ತಿಲೋತ್ತಮ ಅವರದ್ದು, ಅಧಿಕಾರಶಾಹಿ ಮತ್ತು ಭ್ರಷ್ಟಾಚಾರದಿಂದ ಬೇಸತ್ತ ಪ್ರಾಮಾಣಿಕ ಸರ್ಕಾರಿ ಅಧಿಕಾರಿಯ ಅದೇ ಚರ್ವಿತ ಚರ್ವಣ ಪಾತ್ರವಾದರೂ, ತಮ್ಮ ಅಭಿನಯ ಮತ್ತು ಮ್ಯಾನರಿಸಂ ಮೂಲಕ ಅದಕ್ಕೊಂದು ಅನನ್ಯತೆ ಮತ್ತು ವಿಶಿಷ್ಟತೆ ನೀಡಿದ್ದಾರೆ. ಅವರ ಪಾತ್ರದ ಬರವಣಿಗೆಯೂ ಚೆನ್ನಾಗಿದೆ. ಸೀರೀಸ್ ನ ಹಲವು ಹಾಸ್ಯ ಪ್ರಸಂಗಳನ್ನು ತಿಲೋತ್ತಮ ಅವರ ಪಾತ್ರವೇ ಒದಗಿಸುತ್ತದೆ.

ಒಂದು ಸ್ಪೈ ಥ್ರಿಲ್ಲರ್‌ಗೆ ಬೇಕಾದ ಸ್ಟೈಲ್, ಅದ್ಧೂರಿತನ, ನಾವಿನ್ಯತೆ ಎಲ್ಲವೂ ಇದೆ. ಕಣ್ಮನ ಸೆಳೆಯುವ ಎಕ್ಸಾಟಿಕ್ ಲೋಕೇಷನ್‌ಗಳು, ಐಷಾರಾಮಿ ಹೋಟೆಲ್‌ಗಳು, ಪ್ರೈವೇಟ್ ಚಾಪರ್‌ಗಳು, ಶ್ರೀಮಂತಿಕೆ ಬಿಂಬಿಸುವ ಜೀವನ ಶೈಲಿಯ ಜೊತೆ ಜೊತೆಗೆ ಇಂತಹ ಕತೆಗೆ ಅಗತ್ಯವಾದ ಚೆಂದದ, ಮಾದಕ ಹೆಣ್ಣಾಗಿ ಶೋಭಿತಾ ಧುಲಿಪಾಲ ಕಾಣಿಸಿಕೊಂಡಿದ್ದಾರೆ. ಅವರಿಗೆ ಅಭಿನಯಕ್ಕೆ ಹೆಚ್ಚಿನ ಅವಕಾಶ ದೊರೆತಿಲ್ಲವಾದರೂ, ಸಿಕ್ಕ ಸಣ್ಣ ಎರಡು ಸಂದರ್ಭಗಳನ್ನೇ ಅಚ್ಚುಕಟ್ಟಾಗಿ ಬಳಸಿಕೊಂಡಿದ್ದಾರೆ. ಸಿನಿಮಟೋಗ್ರಫಿ ಮತ್ತು ಎಡಿಟಿಂಗ್ ಸೀರೀಸ್‌ನ ಶ್ರೀಮಂತಿಕೆಯನ್ನು ಎತ್ತಿ ತೋರಿಸುವ ರೀತಿಯಲ್ಲಿ ಸಮರ್ಪಕವಾಗಿದೆ.

ಕೊನೆಯಲ್ಲಿ ತೋರಿಸುವ ಜೂನ್‌ನಲ್ಲಿ ಬರಲಿರುವ ಮುಂಬರುವ ಎಪಿಸೋಡ್‌ಗಳ ಕುರಿತ ಟ್ರೈಲರ್, ಭಾರೀ ನಿರೀಕ್ಷೆ ಮೂಡಿಸುವಂತಿದೆ. ಭವಿಷ್ಯದ ಕಂತುಗಳು ಮೈನವಿರೇಳಿಸುವ ಸನ್ನಿವೇಶಗಳು, ರೋಚಕ ಆ್ಯಕ್ಷನ್ ಸೀಕ್ವೆನ್ಸ್ ಗಳು, ಕುತೂಹಲಕಾರಿ ತಿರುವುಗಳಿಂದ ತುಂಬಿರುವ ಸೂಚನೆಯನ್ನು ಟ್ರೈಲರ್ ನೀಡುತ್ತದೆ. ಆದರೆ, ಕೇವಲ ನಾಲ್ಕು ಕಂತು ತೋರಿಸಿ ಉಳಿದ ಎಪಿಸೋಡ್‌ಗಳನ್ನು ಈಗಲೇ ಬಿಡುಗಡೆ ಮಾಡದಿರುವ ತಂತ್ರ ಹಿನ್ನೆಡೆಯಾಗುವ ಸಾಧ್ಯತೆ ಇದೆ. ಏಕೆಂದರೆ ಈಗಾಗಲೇ, ಇಂಗ್ಲಿಷ್ ಸೀರೀಸ್ ನೋಡಿರುವ ಪ್ರೇಕ್ಷಕರಿಗೆ ಮೂರು ತಿಂಗಳ ನಂತರ ಮತ್ತೆ ಮರಳಿ ಬಂದು ನೋಡುವ ಉಮೇದು ಉಳಿಯುವುದು ಅನುಮಾನ. ಅಂತಹ ಹೊಸತನವಾಗಲೀ, ಕಳೆದುಕೊಳ್ಳಬಾರದ ಅನುಭವನ್ನಾಗಲಿ ಹಿಂದಿ ಸೀರೀಸ್ ನೀಡುವುದಿಲ್ಲ. ಇನ್ನು ಮೂಲ ಸೀರೀಸ್ ನೋಡದವರು, ಕುತೂಹಲ ತಡೆಯಲಾರದೆ ಒಟಿಟಿಯಲ್ಲೇ ಲಭ್ಯವಿರುವ ಇಂಗ್ಲಿಷ್ ಸೀರಿಸ್ ನಲ್ಲೇ ಉಳಿದ ಭಾಗಗಳನ್ನು ನೋಡಿ ಮುಗಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ, ಅತ್ಯುತ್ತಮ ಭಾಗವನ್ನು ಜೂನ್‌ಗೆ ಮೀಸಲಿಡುವ ತಂತ್ರ ತಿರುಗುಬಾಣವಾಗಬಹುದು.

Previous articleನಿರೂಪಣೆಗೆ ಹೊಸ ಭಾಷೆ ಮತ್ತು ಲಯ
Next article4ನೇ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ ನಾಮಿನೇಷನ್ ಘೋಷಣೆ

LEAVE A REPLY

Connect with

Please enter your comment!
Please enter your name here