‘ದ ಸೂಟ್’ ಅನ್ನೋದು ಬದುಕು ಹಾಗೂ ಭಾವನೆಗಳ ಸಂಗಮವಂತೆ. ಈ ಸಿನಿಮಾದಲ್ಲಿ ಸೂಟೇ ಕಥಾನಾಯಕ. ಚಿತ್ರದಲ್ಲಿ ಸೂಟ್ನ ಪಾತ್ರವೇನು ಅನ್ನೋದು ಮೇ 17ರಂದು ತಿಳಿಯಲಿದೆ.
ನಾವು ನಿತ್ಯ ಧರಿಸುವ ಉಡುಗೆಗಳಲ್ಲಿ ಸೂಟ್ಗೆ ಅದರದ್ದೇ ಆದ ವಿಶೇಷತೆ ಇದೆ. ಈ ಸೂಟ್ ಕುರಿತಾಗಿಯೇ ‘ದ ಸೂಟ್’ ಎಂಬ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಒಂದು ತೆರೆಗೆ ಬರಲು ಸಜ್ಜಾಗಿದೆ. ಇತ್ತೇಚೆಗಷ್ಟೆ ಆನಂದ್ ಆಡಿಯೋ ಮೂಲಕ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಪ್ರೀತಿ, ನಂಬಿಕೆ ದ್ರೋಹ, ಬಾಲ್ಯದ ಘಟನೆಗಳ ನಡುವೆ ಬರುವ ಸೂಟ್ ಒಂದು ಸಸ್ಪೆನ್ಸ್ ಸೈಕಲಾಜಿಕ್ ಥ್ರಿಲ್ಲರ್ ಅನಿಸುತ್ತೆ. ಮೇ 17ಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದೆ. ಮಾಲತಿ ಗೌಡ ಹಾಗೂ ರಾಮಸ್ವಾಮಿ ನಿರ್ಮಿಸಿರುವ ಈ ಸಿನಿಮಾಗೆ ಎಸ್ ಭಗತ್ ರಾಜ್ ಅವರ ನಿರ್ದೇಶನವಿದೆ.
ಬಾಲಿವುಡ್ನಿಂದ ಬಂದಿರುವ ಕಮಲ್ ಪ್ರಮುಖಪಾತ್ರದಲ್ಲಿ ನಟಿಸಿರುವ ‘ದ ಸೂಟ್’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗಷ್ಟೆ ನಡೆದಿದ್ದು, ಶಾಸಕ ಗೋಪಾಲಯ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್, ಪ್ರಶಾಂತ್ ಚಕ್ರವರ್ತಿ ಭಾಗಿಯಾಗಿ ಶುಭ ಕೋರಿದರು. ಸಿನಿಮಾದ ಟ್ರೇಲರ್ ವೀಕ್ಷಿಸಿರುವ ನಟ ಧ್ರುವ ಸರ್ಜಾ ಅವರು ಚಿತ್ರ ಯಶಸ್ವಿಯಾಗಲಿ ಎಂದು ವಿಡಿಯೋ ಮೂಲಕ ಹಾರೈಸಿದ್ದಾರೆ. ಈ ಚಿತ್ರದಲ್ಲಿ ಕಮಲ್, ಉಮೇಶ್ ಬಣಕಾರ್, ವಿ ನಾಗೇಂದ್ರ ಪ್ರಸಾದ್, ಜೋಸೆಫ್, ಸುಜಯ್, ಭೀಷ್ಮ ರಾಮಯ್ಯ, ಗಡ್ಡ ವಿಜಿ, ಪ್ರಣಯ ಮೂರ್ತಿ ಸೇರಿದಂತೆ ಐವತ್ತಕ್ಕೂ ಅಧಿಕ ಕಲಾವಿದರು ನಟಿಸಿದ್ದಾರೆ.
ನಿರ್ದೇಶಕ ಎಸ್ ಭಗತ್ ರಾಜ್ ಮಾತನಾಡಿ, ‘ಖ್ಯಾತ ನಟ, ನಿರ್ದೇಶಕ ಕಾಶಿನಾಥ್ ಅವರ ಬಳಿ ನಿರ್ದೇಶನ ಕಲಿತಿದ್ದೇನೆ. ಅವರು ನನ್ನ ಗುರುಗಳು . ‘ದ ಸೂಟ್’ ನನ್ನ ಮೊದಲ ನಿರ್ದೇಶನದ ಚಿತ್ರ. ಸೂಟ್ ಬದುಕು ಹಾಗೂ ಭಾವನೆಗಳ ಸಂಗಮ. ನಮ್ಮ ಚಿತ್ರಕ್ಕೆ ಸೂಟೇ ಕಥಾನಾಯಕ. ಕಥೆ ಕೇಳಿದ ಕೆಲವರು ಈ ವಿಷಯ ಕೇಳಿ ಆಶ್ಚರ್ಯಪಟ್ಟಿದ್ದು ಉಂಟು. ಆದರೆ ನಮ್ಮ ಚಿತ್ರದಲ್ಲಿ ಸೂಟ್ನ ಪಾತ್ರವೇನು? ಎಂಬುದು ಮೇ 17 ರಂದು ತಿಳಿಯಲಿದೆ. ಸೂಟ್ ಅನ್ನು ಬರೀ ಬಟ್ಟೆಯಂತೆ ತೋರಿಸಿಲ್ಲ. ಮನುಷ್ಯನ ಹೊರಗಿನ ಮನಸ್ಸನ್ನು ಸೂಟ್ನ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದೇನೆ. ಚಿತ್ರಕ್ಕೆ ಅತಿಥಿದೇವೋಭವ ಎಂಬ ಅಡಿಬರಹವಿದೆ. ಚಿತ್ರದ ಪ್ರಚಾರವನ್ನು ವಿನೂತನವಾಗಿ ಮಾಡಿದ್ದೇವೆ. ನಮ್ಮ ಚಿತ್ರದಲ್ಲಿ ಮೂರು ಕಿರಣಗಳಿದೆ. ಸಂಗೀತ ನಿರ್ದೇಶಕ ಕಿರಣ್ ಶಂಕರ್, ಛಾಯಾಗ್ರಾಹಕ ಕಿರಣ್ ಹಂಪಾಪುರ ಹಾಗೂ ರೇಖಾಚಿತ್ರಗಳ ಮೂಲಕ ನಮ್ಮ ಚಿತ್ರಕ್ಕೆ ಕಿರಣ್ ಅವರು ಜೀವ ತುಂಬಿದ್ದಾರೆ’ ಎಂದಿದ್ದಾರೆ.