‘ಜೇಮ್ಸ್‌’ ಸಿನಿಮಾದಲ್ಲಿ ಪುನೀತ್‌ರ ಪವರ್‌ಹೌಸ್‌ ಆಕ್ಷನ್‌, ಡ್ಯಾನ್ಸ್‌ ನೋಡಿ ಖುಷಿ ಪಡುವ ಪ್ರೇಕ್ಷಕರಿಗೆ ಅವರಿನ್ನಿಲ್ಲ ಎನ್ನುವ ವಿಷಾದ ಕಾಡದೇ ಇರದು. ಪಕ್ಕಾ ಆಕ್ಷನ್‌ ಸಿನಿಮಾ ಆದ್ದರಿಂದ ಫೈಟ್‌ ಸೀನ್‌ಗಳು ಭರ್ಜರಿಯಾಗಿಯೇ ಇವೆ. ಅಲ್ಲೆಲ್ಲಾ ಪುನೀತ್‌ ಮಿಂಚು ಹರಿಸಿದ್ದಾರೆ. ಅಚ್ಚುಕಟ್ಟಾಗಿ ಸಿನಿಮಾ ಮಾಡಿರುವ ‘ಜೇಮ್ಸ್‌’ ತಂಡಕ್ಕೆ ಅಭಿನಂದನೆ ಸಲ್ಲಬೇಕು.

ಪುನೀತ್‌ ರಾಜಕುಮಾರ್‌ ಅವರ ಕೊನೆಯ ಸಿನಿಮಾ ಎನ್ನುವ ಬೇಸರದಲ್ಲೇ ಜನರು ಥಿಯೇಟರ್‌ಗೆ ಹೋಗುತ್ತಾರೆ. ಪರದೆ ಮೇಲೆ ಸಿನಿಮಾ ನೋಡುವಾಗ ಅಪ್ಪು ನಮ್ಮೊಂದಿಗೇ ಇದ್ದಾರಲ್ವಾ ಎನ್ನುವ ಭಾವ. ಸಿನಿಮಾ ಮುಗಿಯುತ್ತಿದ್ದಂತೆ, ಅಯ್ಯೋ ಅವರು ನಮ್ಮೊಂದಿಗಿಲ್ಲ ಎನ್ನುವ ವೇದನೆಯೊಂದಿಗೆ ಜನರು ಮಾತಿಲ್ಲದೆ ಹೊರಬೀಳುತ್ತಾರೆ. ಚಿಕ್ಕಂದಿನಲ್ಲಿ ಬಾಲನಟನಾಗಿ ಮುದ್ದಾದ ಪಾತ್ರಗಳ ಮೂಲಕ ಜನರನ್ನು ರಂಜಿಸಿದ್ದ ಅವರು ಮುಂದೆ ಪವರ್‌ ಸ್ಟಾರ್‌ ಆಗಿ ಇಷ್ಟವಾದವರು. ‘ನಮ್ಮನೆ ಹುಡ್ಗ’ ಇಮೇಜಿನ ನಟ. ‘ಜೇಮ್ಸ್‌’ ಸಿನಿಮಾದಲ್ಲಿ ಅವರ ಪವರ್‌ಹೌಸ್‌ ಆಕ್ಷನ್‌, ಡ್ಯಾನ್ಸ್‌ ನೋಡಿ ಖುಷಿ ಪಡುವ ಪ್ರೇಕ್ಷಕರಿಗೆ ಅವರಿನ್ನಿಲ್ಲ ಎನ್ನುವ ವಿಷಾದ ಕಾಡದೇ ಇರದು. ಅಚ್ಚುಕಟ್ಟಾಗಿ ಸಿನಿಮಾ ಮಾಡಿರುವ ‘ಜೇಮ್ಸ್‌’ ತಂಡಕ್ಕೆ ಅಭಿನಂದನೆ ಸಲ್ಲಬೇಕು.

“ದೊಡ್ಡ ಪರದೆ ಮೇಲೆ ಲಕ್ಷಾಂತರ ಜನರು ನಮ್ಮನ್ನು ನೋಡ್ತಾರೆ. ಫಿಟ್‌ ಆಗಿರಬೇಕು. ನಟನೆಯಲ್ಲಿ ಫೀಲ್‌, ಡ್ಯಾನ್ಸ್‌ – ಫೈಟ್‌ನಲ್ಲಿ ಶ್ರದ್ಧೆ ಇರಬೇಕು” ಎಂದು ಸಂದರ್ಶನಗಳಲ್ಲಿ ಪುನೀತ್‌ ಹೇಳಿಕೊಳ್ಳುತ್ತಿದ್ದರು. ಕುಟುಂಬದ ಎಲ್ಲಾ ಸದಸ್ಯರೂ ಒಟ್ಟಿಗೇ ಕುಳಿತು ನೋಡಿ ಮೆಚ್ಚುವ ಕತೆಯನ್ನೇ ಅವರು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡುತ್ತಿದ್ದರು. ‘ಜೇಮ್ಸ್‌’ನಲ್ಲಿ ಇವೆಲ್ಲಾ ಕ್ವಾಲಿಟಿಗಳಿವೆ. ವಿಶೇಷವಾಗಿ ಡ್ಯಾನ್ಸ್‌ ಮತ್ತು ಆಕ್ಷನ್‌ನಲ್ಲಿ ಪುನೀತ್‌ ಅವರದ್ದು ಎಂದಿನಂತೆ ಪವರ್‌ಹೌಸ್‌ ಪರ್ಫಾರ್ಮೆನ್ಸ್‌. ಪಕ್ಕಾ ಆಕ್ಷನ್‌ ಸಿನಿಮಾ ಆದ್ದರಿಂದ ಫೈಟ್‌ ಸೀನ್‌ಗಳು ಭರ್ಜರಿಯಾಗಿಯೇ ಇವೆ. ಅಲ್ಲೆಲ್ಲಾ ಪುನೀತ್‌ ಮಿಂಚು ಹರಿಸಿದ್ದಾರೆ.

ನಿರ್ದೇಶಕ ಚೇತನ್‌ ಕುಮಾರ್‌ ಆಕ್ಷನ್‌ ಸಿನಿಮಾಗೆ ಬೇಕಾದ ಕತೆಯನ್ನೇ ಮಾಡಿಕೊಂಡಿದ್ದಾರೆ. ಜಾಗತಿಕವಾಗಿ ಆಪರೇಟ್‌ ಮಾಡುವ ಡ್ರಗ್ಸ್‌ ಜಾಲವೊಂದನ್ನು ಮಟ್ಟಹಾಕುವ ಸೈನಿಕನ ಕತೆ. ಸಾಗರದಾಚೆಗೂ ಚಾಚಿರುವ ಭೂಗತ ಪಾತಕಿಗಳ ವ್ಯವಹಾರ, ಗ್ಯಾಂಗ್‌ವಾರ್‌ಗಳಿದ್ದು ಸ್ಟೈಲಿಶ್‌ ಪ್ರಸೆಂಟೇಷನ್‌ಗೆ ಚಿತ್ರದಲ್ಲಿ ಹೆಚ್ಚು ಜಾಗವಿದೆ. ಕಾಶ್ಮೀರದ ಸುಂದರ ದೃಶ್ಯಗಳಿವೆ. ಸ್ನೇಹ – ಸಂಬಂಧಗಳ ಆಪ್ತ ಸನ್ನಿವೇಶಗಳಿವೆ. ದೇಶದ ಗಡಿಯಲ್ಲಿದ್ದ ಸೈನಿಕ ಸಂತೋಷ್‌ ಭೂಗತ ಪಾತಕಿಗಳನ್ನು ಮಟ್ಟ ಹಾಕಲು ನಿರ್ಧಾರ ಕೈಗೊಳ್ಳುವುದೇಕೆ? ಅದಕ್ಕೊಂದು ಫ್ಲಾಶ್‌ಬ್ಯಾಕ್‌ ಇದೆ. ದುಷ್ಟರ ಸಾಲು, ಸಾಲು ಹೆಣಗಳು ಉರುಳುತ್ತವೆ. ಬಹುಶಃ ಪುನೀತ್‌ರ ಹಿಂದಿನ ಯಾವ ಚಿತ್ರಗಳಲ್ಲೂ ಇಷ್ಟೊಂದು ರಕ್ತಪಾತ ಇರಲಿಲ್ಲ. ‘ದುಷ್ಟ ಶಿಕ್ಷಣ, ಶಿಷ್ಟ ರಕ್ಷಣ’ ನೀತಿಯ ಹಿನ್ನೆಲೆಯಲ್ಲಿ ಈ ಅಂಶ ಗೌಣವಾಗುತ್ತದೆ.

‘ಜೇಮ್ಸ್‌’ಗೆ ಡಬ್ಬಿಂಗ್‌ ಬಾಕಿ ಇದ್ದಾಗಲೇ ಪುನೀತ್‌ ನಮ್ಮನ್ನು ಅಗಲಿದರು. ಅವರ ಪಾತ್ರಕ್ಕೆ ಯಾರಿಂದ ಡಬ್‌ ಮಾಡಿಸಬೇಕೆಂದು ಚಿತ್ರತಂಡದಷ್ಟೇ ಅಭಿಮಾನಿಗಳೂ ತಲೆ ಕೆಡಿಸಿಕೊಂಡಿದ್ದರು. ಕೆಲವು ಪ್ರಯತ್ನಗಳ ನಂತರ ಅಂತಿಮವಾಗಿ ಶಿವರಾಜಕುಮಾರ್‌ ಅವರಿಂದ ಡಬ್‌ ಮಾಡಿಸಲಾಯ್ತು. ಪುನೀತ್‌ರ ಪವರ್‌ಫುಲ್‌ ‘ಜೇಮ್ಸ್‌’ ಪಾತ್ರಕ್ಕೆ ಶಿವರಾಜಕುಮಾರ್‌ ತುಂಬಾ ಕಾಳಜಿಯಿಂದ ಡಬ್‌ ಮಾಡಿದ್ದಾರೆ. ಅದ್ಧೂರಿ ಮೇಕಿಂಗ್‌, ಹಿನ್ನೆಲೆ ಸಂಗೀತಕ್ಕೆ ವಾಯ್ಸ್‌ ಸಿಂಕ್‌ ಆಗಿದ್ದು, ಎಲ್ಲಿಯೂ ಪ್ರತ್ಯೇಕವಾಗಿ ಉಳಿಯುವುದಿಲ್ಲ ಎನ್ನುವುದು ಪ್ಲಸ್‌ ಪಾಯಿಂಟ್‌. ಸ್ವತಃ ಶಿವರಾಜಕುಮಾರ್‌ ಅವರಿಗೂ ಈ ವಿಚಾರದಲ್ಲ ಅಳುಕು, ಆತಂಕವಿತ್ತು. ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆಯ ನಂತರ ಅವರೀಗ ನಿರಾಳರಾಗಬಹುದು.

‘ರಾಜಕುಮಾರ’ ಚಿತ್ರದ ನಂತರ ಇಲ್ಲಿ ಎರಡನೇ ಬಾರಿ ನಟಿ ಪ್ರಿಯಾ ಆನಂದ್‌ ಅವರು ಪುನೀತ್‌ಗೆ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಮೊದಲಾರ್ಧದಲ್ಲಿ ನಾಯಕಿ ಪಾತ್ರಕ್ಕೆ ಸ್ಕೋಪ್‌ ಇದೆ. ಆಕ್ಷನ್‌ ಮಧ್ಯೆ ಸಾಧುಕೋಕಿಲ ಅವರ ನಾಲ್ಕಾರು ಸನ್ನಿವೇಶಗಳು ಸಂದರ್ಭವನ್ನು ತಿಳಿಯಾಗಿಸುತ್ತವೆ. ರಂಗಾಯಣ ರಘು, ಅವಿನಾಶ್‌, ಶ್ರೀಕಾಂತ್‌, ಶರತ್‌ ಕುಮಾರ್‌, ಮುಖೇಶ್‌ ರಿಷಿ, ಚಿಕ್ಕಣ್ಣ, ಹರ್ಷ, ತಿಲಕ್‌, ಸುಚೇಂದ್ರಪ್ರಸಾದ್‌ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ವರನಟ ಡಾ.ರಾಜ್‌ರ ಮೂವರು ಪುತ್ರರೂ ಒಂದೇ ಚಿತ್ರದಲ್ಲಿ ನಟಿಸಬೇಕೆನ್ನುವುದು ಅಭಿಮಾನಿಗಳ ಆಸೆಯಾಗಿತ್ತು. ಅದು ಈಡೇರಲಿಲ್ಲ. ಆದರೆ ‘ ಜೇಮ್ಸ್‌’ನಲ್ಲಿ ಶಿವರಾಜಕುಮಾರ್‌ ಮತ್ತು ರಾಘವೇಂದ್ರ ರಾಜಕುಮಾರ್‌ ನಟಿಸಿದ್ದಾರೆ. ಇವರಿಬ್ಬರ ಪಾತ್ರಗಳು ಕತೆಗೆ ಪೂರಕವಾಗಿವೆ.

ಚಿತ್ರದಲ್ಲಿ ಸಾಹಸ ಸಂಯೋಜಕರ ಕೆಲಸಕ್ಕೆ ಹೆಚ್ಚು ಅಂಕಗಳು ಸಲ್ಲಬೇಕು. ನಿರ್ದೇಶಕ ಚೇತನ್‌ ಕುಮಾರ್‌ ಸಾಹಸ ನಿರ್ದೇಶಕರನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಆಕ್ಷನ್‌ ಸಿನಿಮಾಗೆ ಅಗತ್ಯವಿದ್ದ ಛಾಯಾಗ್ರಹಣ, ಸಂಕಲನ ಮತ್ತು ಹಿನ್ನೆಲೆ ಸಂಗೀತವೂ ಅಚ್ಚುಕಟ್ಟಾಗಿದೆ. ಸಿನಿಮಾ ಮುಗಿದ ನಂತರ ಪರದೆ ಮೇಲೆ ಪುನೀತ್‌ ಸಿನಿಮಾ ಮತ್ತು ಸಾರ್ವಜನಿಕ ಬದುಕಿನ ಅವರ ಸಾಧನೆ – ಸ್ಮರಣೆ ಕಾಣಿಸುತ್ತದೆ. ಬೆಳ್ಳಿಪರದೆ ಮೇಲೆ ಹಾಗೂ ತೆರೆಯಾಚೆಗೂ ಪುನೀತ್‌ ನೆನಪಾಗುವುದು ತಮ್ಮ ನಿಷ್ಕಲ್ಮಶ, ಮುಗ್ಧ ನಗುವಿನೊಂದಿಗೆ. ಮುಂದೆ ಹೊಸ ಸಿನಿಮಾಗಳಲ್ಲಿ ಅವರ ಆ ನಗು ನೋಡಲು ಸಾಧ್ಯವಾಗದು ಎನ್ನುವುದಷ್ಟೇ ಬೇಜಾರು.

LEAVE A REPLY

Connect with

Please enter your comment!
Please enter your name here