‘ಡೆವಿಲ್‌’ ಟ್ರೇಲರ್‌ ದರ್ಶನ್‌ ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಎಂದಿನಂತೆ ಅವರು ದರ್ಶನ್‌ರನ್ನು ಸೆಲೆಬ್ರೇಟ್‌ ಮಾಡತೊಡಗಿದ್ದಾರೆ. ಮತ್ತೊಂದೆಡೆ ಚಿತ್ರೋದ್ಯಮದಲ್ಲೂ ಸಂಚಲನ ಉಂಟಾಗಿದೆ.

ಥಿಯೇಟರ್‌ಗೆ ಬಂದಿದ್ದ ದರ್ಶನ್‌ರ ಕೊನೆಯ ಸಿನಿಮಾ ‘ಕಾಟೇರ’. 2023ರ ಡಿಸೆಂಬರ್‌ನಲ್ಲಿ ತೆರೆಕಂಡಿದ್ದ ಈ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಇದಾದ ನಂತರ ದರ್ಶನ್‌ ಅವರ ಬದುಕಿನಲ್ಲಿ ವಿಷಾದಕರ ಬೆಳವಣಿಗೆಗೆ ನಡೆದವು. ‘ಕಾಟೇರ’ ಸಿನಿಮಾದ ಭರ್ಜರಿ ಸಕ್ಸಸ್‌ ನಂತರ ಅವರ ‘ಡೆವಿಲ್‌’ ಸಿನಿಮಾ ಘೋಷಣೆಯಾಯ್ತು. ಮುಹೂರ್ತ ನಡೆದು ಒಂದಷ್ಟು ದಿನಗಳ ಚಿತ್ರೀಕರಣ ನಡೆದಿದ್ದ ಸಂದರ್ಭದಲ್ಲಿ ಕೊಲೆ ಆರೋಪ ಹೊತ್ತು ದರ್ಶನ್‌ ಜೈಲು ಸೇರಿದರು. ಇದು ಅವರ ಅಭಿಮಾನಿಗಳಲ್ಲಿ ಅತೀವ ಬೇಸರ ಉಂಟುಮಾಡಿತ್ತು. ಅಭಿಮಾನಿಗಳಷ್ಟೇ ಅಲ್ಲ, ಉದ್ಯಮಕ್ಕೂ ದೊಡ್ಡ ನಷ್ಟ ಎಂದು ಚಿತ್ರರಂಗದವರು ನೊಂದುಕೊಂಡರು.

ಮಧ್ಯೆ ಜಾಮೀನಿನ ಮೇಲೆ ಹೊರಗೆ ಬಂದ ದರ್ಶನ್‌ ಸಿನಿಮಾದ ಚಿತ್ರೀಕರಣ ಮುಗಿಸಿಕೊಟ್ಟರು. ನಿರ್ದೇಶಕ ಪ್ರಕಾಶ್‌ ವೀರ್‌ ಸಿನಿಮಾ ಪೂರ್ಣಗೊಳಿಸಿ ತೆರೆಗೆ ಸಜ್ಜುಗೊಳಿಸಿದರು. ಇದೀಗ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ದರ್ಶನ್‌ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಟ್ರೇಲರ್‌ ಹಂಚಿಕೊಂಡು ಸಿನಿಮಾವನ್ನು ಎದುರು ನೋಡುತ್ತಿದ್ದಾರೆ. ನೆಚ್ಚಿನ ನಟ ಜೈಲು ಸೇರಿದ್ದರಿಂದ ದುಃಖ ಪಟ್ಟಿದ್ದ ಅವರಿಗೆ ಟ್ರೇಲರ್‌ ಉತ್ಸಾಹ ಮೂಡಿಸಿದೆ. ಎಂದಿನಂತೆ ಅವರು ದರ್ಶನ್‌ರನ್ನು ಸೆಲೆಬ್ರೇಟ್‌ ಮಾಡತೊಡಗಿದ್ದಾರೆ. ಮತ್ತೊಂದೆಡೆ ಚಿತ್ರೋದ್ಯಮದಲ್ಲೂ ಸಂಚಲನ ಉಂಟಾಗಿದೆ. ಸ್ಟಾರ್‌ ಹೀರೋ ದರ್ಶನ್‌ ಸಿನಿಮಾ ಬರುತ್ತಿದೆ ಎಂದು ಥಿಯೇಟರ್‌ ಮಾಲೀಕರೂ ಸಂಭ್ರಮಿಸುತ್ತಿದ್ದಾರೆ.

ಹೇಗಿದೆ ಟ್ರೇಲರ್‌? | ‘ಮಿಲನ’ ಸಿನಿಮಾ ಖ್ಯಾತಿಯ ನಿರ್ದೇಶಕ ಪ್ರಕಾಶ್‌ ವೀರ್‌ ಅವರು ಈ ಹಿಂದೆ ಫ್ಯಾಮಿಲಿ ಸಿನಿಮಾಗಳನ್ನು ಮಾಡಿದವರು. ಮಾಸ್‌ ಹೀರೋ ದರ್ಶನ್‌ರಿಗೆ ಹೇಗೆ ಸಿನಿಮಾ ಮಾಡಿರಬಹುದು ಎನ್ನುವ ಕುತೂಲಹವಂತೂ ಇದ್ದೇ ಇದೆ. ಟ್ರೇಲರ್‌ನಲ್ಲಿ ದರ್ಶನ್‌ ಅವರ ಪಾತ್ರದ ಚಿತ್ರಣ ಇಂಟರೆಸ್ಟಿಂಗ್‌ ಆಗಿದೆ. ಕೊಂಚ ನೆಗೆಟೀವ್‌ ಇಮೇಜ್‌ ಇದ್ದಂತಿದ್ದರೂ, ಅಲ್ಲೊಂದು ಟ್ವಿಸ್ಟ್‌ ಇರಬಹುದು ಎಂದು ಊಹಿಸಬಹುದಾಗಿದೆ. ಸಾಕಷ್ಟು ಮಾಸ್‌ ಎಲಿಮೆಂಟ್ಸ್‌ ಇವೆ ಎನ್ನುವುದು ಡೈಲಾಗ್‌, ಫೈಟ್ಸ್‌ ಸನ್ನಿವೇಶಗಳಿಂದ ತಿಳಿದುಬರುತ್ತದೆ.

ನಿರ್ದೇಶಕ ಪ್ರಕಾಶ್‌ ಅವರು ಮಾತ್ರ ಎಲ್ಲಿಯೂ ಚಿತ್ರದ ಕತೆಯ ಎಳೆಯನ್ನು ಬಿಟ್ಟುಕೊಟ್ಟಿಲ್ಲ. ಪೊಲಿಟಿಕಲ್‌ ಡ್ರಾಮಾದಂತೆ ತೋರುವ ಚಿತ್ರದ ಪ್ರಮುಖ ಖಳಪಾತ್ರದಲ್ಲಿ ಹಿಂದಿ ನಟ ಮಹೇಶ್‌ ಮಂಜ್ರೇಕರ್‌ ಕಾಣಿಸುತ್ತಾರೆ. ‘ಕ್ಷಣಕ್ಕೊಂದು ಬಣ್ಣ, ಗಳಿಗೆಗೊಂದು ವೇಷ’ ಎಂದು ನಾಯಕನ ಕುರಿತಾಗಿ ನಾಯಕಿ ಹೇಳುವ ಡೈಲಾಗ್‌ ಕೇಳಿಸುತ್ತದೆ. ನಾಯಕಿ ಪಾತ್ರದ ಬಗ್ಗೆ ನಿರ್ದಿಷ್ಟ ಚಿತ್ರಣ ಸಿಗುವುದಿಲ್ಲ. ಅಚ್ಯುತ್‌ ಕುಮಾರ್‌ ಪಾತ್ರಕ್ಕೆ ಸಾಕಷ್ಟು ಸ್ಕೋಪ್‌ ಇದ್ದಂತಿದೆ. ‘ಸೂರ್ಯಂಗೆ ತುಂಬ ಹೊತ್ತು ಗ್ರಹಣ ಹಿಡಿಯಲ್ಲ, ನಾನ್‌ ಬರ್ತಿದೀನಿ ಚಿನ್ನ!’ ಎನ್ನುವ ಡೈಲಾಗ್‌ನೊಂದಿಗೆ ಮುಕ್ತಾಯವಾಗುವ ಟ್ರೇಲರ್‌ ಸಿನಿಮಾಗೆ ಚೆಂದದ ಇನ್ವಿಟೇಷನ್‌ ಕೊಡುತ್ತದೆ.

LEAVE A REPLY

Connect with

Please enter your comment!
Please enter your name here