ಕನಸು ಮತ್ತು ವಾಸ್ತವಗಳ ನಡುವಿನ ಪಯಣ ‘ಬ್ಲ್ಯಾಂಕ್‌’. ಜಯ್‌ ನಿರ್ದೇಶನದ ಚಿತ್ರದಲ್ಲಿ ನಟಿ ಕೃಷಿ ತಾಪಂದ ಅವರ ಪಾತ್ರಕ್ಕೆ ಮೂರು ಶೇಡ್‌ಗಳಿವೆ. ಪ್ರಯೋಗಾತ್ಮಕ ಸಿನಿಮಾ ಎಂದು ಕರೆಸಿಕೊಂಡಿರುವ ‘ಬ್ಲ್ಯಾಂಕ್‌’; ಫೆಬ್ರವರಿ 25ರಂದು ತೆರೆಕಾಣಲಿದೆ.

“ನಮ್ಮ ಚಿತ್ರ ಒಮ್ಮೆಗೇ ಅರ್ಥವಾಗುವುದು ಕಷ್ಟ. ನಾಲ್ಕು ಮುಖ್ಯ ಪಾತ್ರಗಳ ಮೂಲಕ ಚಿತ್ರ ಸಾಗುತ್ತದೆ. ಇದು ಕನಸು ಹಾಗೂ ವಾಸ್ತವಗಳ ನಡುವಿನ ಪಯಣ ಎನ್ನಬಹುದು. ಒಟ್ಟಿನಲ್ಲಿ ಹೇಳಬೇಕೆಂದರೆ ‘ಲೂಸಿಯಾ’, ‘ಉಳಿದವರು ಕಂಡಂತೆ’ ರೀತಿಯ ಸಿನಿಮಾ ಅನ್ನಬಹುದು. ಒಳ್ಳೆಯ ತಂಡದೊಂದಿಗೆ ಒಳ್ಳೆಯ ಸಿನಿಮಾ ಮಾಡಿದ್ದೇನೆ” ಎನ್ನುತ್ತಾರೆ ‘ಬ್ಲ್ಯಾಂಕ್‌’ ಚಿತ್ರದ ನಿರ್ದೇಶಕ ಎಸ್‌.ಜಯ್‌. ಈ ಸೈಕಾಲಾಜಿಕಲ್‌ ಥ್ರಿಲ್ಲರ್‌ನಲ್ಲಿ ಕೃಷಿ ತಾಪಂದ ಮುಖ್ಯಪಾತ್ರದಲ್ಲಿದ್ದಾರೆ. “ನಾನು ಈವರೆಗೂ ಮಾಡಿರದ ಪಾತ್ರವಿದು. ಮೂರು ಶೇಡ್ ಗಳಲ್ಲಿ ಪಾತ್ರ ಸಾಗುತ್ತದೆ. ಇದೊಂದು ಅದ್ಭುತ ಚಿತ್ರ ಎನ್ನುವುದಕ್ಕಿಂತ ಪ್ರಯೋಗಾತ್ಮಕ ಚಿತ್ರ. ಪ್ರೇಕ್ಷಕರನ್ನು ಸೆಳೆಯುವಂತಹ ಸಾಕಷ್ಟು ಅಂಶಗಳು ಚಿತ್ರದಲ್ಲಿದೆ” ಎನ್ನುವುದು ನಟಿ ಕೃಷಿ ಮಾತು.

‘ಬ್ಲಾಂಕ್’ ಸಿನಿಮಾ ಫೆಬ್ರವರಿ 25ರಂದು ತೆರೆಕಾಣುತ್ತಿದೆ. “ಬೇರೆ ಭಾಷೆಗಳಲ್ಲಿ ವಿಭಿನ್ನ ಕಥಾಹಂದರದ ಚಿತ್ರಗಳು ಬರುತ್ತವೆ, ನಮ್ಮಲ್ಲಿ ಬರುವುದಿಲ್ಲ ಎನ್ನುತ್ತಾರೆ. ಇತ್ತೀಚೆಗೆ ಕನ್ನಡದಲ್ಲೂ ಅಂತಹ ಸಾಕಷ್ಟು ಚಿತ್ರಗಳು ಬರುತ್ತಿವೆ. ಇದು ಪ್ರೇಕ್ಷಕರಿಗೆ ನಿರಾಸೆ ಮಾಡದ ಚಿತ್ರ ಎಂದಷ್ಟೇ ಹೇಳುತ್ತೇನೆ” ಎಂದು ಭರವಸೆ ನೀಡುತ್ತಾರೆ ಚಿತ್ರದ ನಿರ್ಮಾಪಕ ಮಂಜುನಾಥ್ ಪ್ರಸನ್ನ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪ್ರಶಾಂತ್‌ ಸಿದ್ದಿ, “ನಿರ್ದೇಶಕರು ಹೇಳಿದ ಕಥೆ ನನಗೆ ನಿಜಕ್ಕೂ ಅರ್ಥವಾಗಲಿಲ್ಲ. ಚಿತ್ರದ ನಾಲ್ಕು ಮುಖ್ಯ ಪಾತ್ರಗಳ ಜೊತೆ ನನ್ನ ಪಾತ್ರವಿದೆ. ನಾಲ್ಕು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ” ಎಂದು ತಮ್ಮ ಪಾತ್ರದ ರೂಪುರೇಷೆ ಬಗ್ಗೆ ಪರಿಚಯಿಸಿಕೊಳ್ಳುತ್ತಾರೆ. ಜೆ.ಪಿ.ಮ್ಯಾನ್ ಛಾಯಾಗ್ರಹಣ, ಶ್ರೀಶಾಸ್ತ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಪೂರ್ಣಚಂದ್ರ ಮೈಸೂರು, ಭರತ್ ಹಾಸನ್, ರಶ್ ಮಲ್ಲಿಕ್, ಸುಚೇಂದ್ರ ಪ್ರಸಾದ್, ಪ್ರಶಾಂತ್ ಸಿದ್ದಿ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here