‘ಹೆಜ್ಜಾರು’, ‘ಬ್ಲಿಂಕ್’, ‘ಮರ್ಫಿ’ ಮೂರೂ ಒಂದೇ ಜಾನರ್‌ನ ಸಿನಿಮಾಗಳು. ಕತೆಗಳು ಬೇರೆಯೇ ಆದರೂ ಮೂರೂ ಕತೆಗಳೂ ಕಾಲಚಕ್ರದ ಹಿಂದೆ ಬಿದ್ದಂಥವು. ಹೀಗೇಕಾಗುತ್ತದೆ? ನಾವು ಬದುಕುತ್ತಿರುವ ಕಾಲದಲ್ಲಿಯೂ ಯಾವುದೋ ಹವಾ ನಮ್ಮನ್ನು ಮೀರಿ ನಮ್ಮನ್ನು ನಿಯಂತ್ರಿಸುತ್ತದೆಯೇ? ನಮ್ಮ ಆಲೋಚನೆಗಳನ್ನು ಪ್ರಚೋದಿಸುತ್ತದೆಯೇ?

ಇದೊಂದು ಅಚ್ಚರಿ. ಒಂದೇ ಭಾಷೆಯಲ್ಲಿ ಒಂದೇ ಇಸವಿಯಲ್ಲಿ (2024) ಒಂದೇ ಆಲೋಚನೆಯ, ಕಥಾ ಎಳೆಯ ಮೂರು ಸಿನಿಮಾಗಳು ಬಂದಿವೆ. ಈ ಅಚ್ಚರಿ ನಡೆದಿರೋದು ನಮ್ಮ ಕನ್ನಡ ಸಿನಿಮಾರಂಗದಲ್ಲೇ! ‘ಹೆಜ್ಜಾರು’, ‘ಬ್ಲಿಂಕ್’, ‘ಮರ್ಫಿ’ ಮೂರೂ ಒಂದೇ ಜಾನರ್‌ನ ಸಿನಿಮಾಗಳು. ‘ಹೆಜ್ಜಾರು’, ಹರ್ಷಪ್ರಿಯ ನಿರ್ದೇಶನದ ಸಿನಿಮಾ. ಒಬ್ಬನ ಬದುಕಿನಲ್ಲಿ ಈಗ ನಡೆಯುತ್ತಿರುವ ಘಟನೆಗಳು ಇನ್ನೊಬ್ಬನ ಬದುಕಲ್ಲಿ ಆಗಲೇ ನಡೆದು ಹೋಗಿವೆ. ಅವನಿಗೆ, ಇವನ ಬದುಕಲ್ಲಿ ಮುಂದೇನಾಗಲಿದೆ ಎಂಬುದು ಗೊತ್ತಾಗುತ್ತದೆ. ಅವನ ಪ್ರೇಯಸಿಯ ಕೊಂದವರ ಪತ್ತೆ ಹಚ್ಚಲು ಇವನ ಪ್ರೇಯಸಿಯ ಕೊಲೆಗೆ ಕಾದಿದ್ದಾನೆ! ಕೊಲೆ ನಡೆಯುತ್ತದೆ. ಕೊಂದವನು ಸಿಗುತ್ತಾನೆ. ಆದರೆ, ಎಂಥ ಕ್ಲೈಮ್ಯಾಕ್ಸ್ ಅದು! ಅಲ್ಲಿಂದ ಅವನು ಇಲ್ಲವಾಗಿ ಇವನು ಅವನಾಗಿ… ಓ ಇದೊಂದು ಅಂತ್ಯವಿಲ್ಲದ ಕಾಲಚಕ್ರದ ನಡುವೆ ಸಿಲುಕಿದವರ ಕತೆ.

‘ಬ್ಲಿಂಕ್’, ಶ್ರೀನಿಧಿ ನಿರ್ದೆಶನದ ಕತೆ. ಅವರಿಗಿನ್ನೂ ಚಿಕ್ಕ ವಯಸ್ಸು. ಅವರ ವಯಸ್ಸಿಗೆ ಮೀರಿದ ಕಥಾನಕ! ಇದರಲ್ಲಂತೂ ಟೈಮ್ ಟ್ರಾವೆಲನ್ನು ಹಿಡಿದು ಹಲವು ಪದರಗಳನ್ನು ತೋರಿಸಿದ್ದಾರೆ. ಎರಡೆರಡು ಸಲ ನೋಡಿದರೆ ಒಂದು ಹಂತಕ್ಕೆ ಅರ್ಥವಾಗುವಷ್ಟು ಸಂಕೀರ್ಣ ಕಥಾನಕ. ತಾಯಿಯನ್ನೇ ಮೋಹಿಸುವ ಮಗ… ಕಾಲ ಪವಾಹದ ವಿಚಿತ್ರ ಪಯಣ. ಮತ್ತೊಂದು ಸಿನಿಮಾ ‘ಮರ್ಫಿ’, ಆಕಸ್ಮಿಕವಾಗಿ 2024ರಲ್ಲಿ ಬದುಕುತ್ತಿರೋ ಒಬ್ಬ 1996ರಲ್ಲಿ ಬದುಕ್ತಿರೋ ಒಬ್ಬಳೊಂದಿಗೆ ಕನೆಕ್ಟ್‌ ಆಗಿಬಿಡ್ತಾನೆ. ಹಾಗೆ ಕನೆಕ್ಟ್ ಮಾಡಿಸೋ ಮೀಡಿಯಂ ಒಂದು ಹಳೇ ರೇಡಿಯೋ. ಇದು interesting. ಆ ಹುಡುಗನ ತಂದೆಯ ಪ್ರೇಯಸಿ ಆಕೆ. ಅವನ ಅಪ್ಪ ಈಗಿಲ್ಲ. ಅವಳನ್ನು ಮದುವೆಯೂ ಆಗಿಲ್ಲ. ಆದರೆ ಅದಾಗಲೇ 28 ವರ್ಷ ಮುಂದೆ ಬದುಕ್ತಿರೋ ಅವನಿಗೆ ಎಲ್ಲವೂ ಗೊತ್ತಿದೆ. ಹಳೆಯ ಘಟನೆಗಳನ್ನು ಬದಲಿಸಿದರೆ? ಇವಳು ಅವನನ್ನು ಮದುವೆ ಆದರೆ? ಆಕ್ಸಿಡೆಂಟ್ ತಡೆದರೆ? ನಡೆದದ್ದೆಲ್ಲ ಸುಳ್ಳಾಗಿ ಅಪ್ಪ ಮರಳಬಹುದಲ್ಲವಾ? ಹಾಗೆ ಕಾಲದಲ್ಲಿ ಕೈಯಾಡಿಸಲು ಹೊರಡುತ್ತಾರೆ ಇಬ್ಬರೂ… ಆದರೆ ಒಂದು ಹಂತದಲ್ಲಿ ಅದು ಬಂದು ನಿಲ್ಲುವ ಒಂದು ಘಟ್ಟದಲ್ಲಿ ಅದು ಒಬ್ಬರ ಬಲಿ ಕೇಳುತ್ತದೆ. ತನ್ನ ಚೌಕಾಬಾರಾದಲ್ಲಿ ಕಾಯಿ ಹೊಡೆದೇ ಮುಂದೆ ಹೋಗಬೇಕು ಎಂದು ಹೇಳುತ್ತದೆ ಕಾಲದ ಆಟ. ಯಾವುದನ್ನೂ ಬದಲಿಸಲು ಆಗುವುದಿಲ್ಲ. ಆದರೆ ಆ ಸಂಪರ್ಕ ಸತ್ಯ. ಇದು ವಿಪರೀತ ಕಾಲ್ಪನಿಕತೆ, ಸಿನಿಮೀಯತೆ ಎನಿಸಿದರೂ ಕನೆಕ್ಟ್‌ ಆಗುವ ಅಂಶ ಕಾಲದ ಕೆದಕುವಿಕೆ, ಕೆಣಕುವಿಕೆ.

ಒಂದೊಂದು ಕತೆಯೂ ಬೇರೆಯೇ ಆದರೂ ಮೂರೂ ಕತೆಗಳೂ ಕಾಲಚಕ್ರದ ಹಿಂದೆ ಬಿದ್ದಂಥವು. ಹೀಗೇಕಾಗುತ್ತದೆ? ನಾವು ಬದುಕುತ್ತಿರುವ ಕಾಲದಲ್ಲಿಯೂ ಯಾವುದೋ ಹವಾ ನಮ್ಮನ್ನು ಮೀರಿ ನಮ್ಮನ್ನು ನಿಯಂತ್ರಿಸುತ್ತದೆಯೇ? ನಮ್ಮ ಆಲೋಚನೆಗಳನ್ನು ಪ್ರಚೋದಿಸುತ್ತದೆಯೇ? ಯಾಕೆ ಮೂರು ಹೊಸ ನಿರ್ದೇಶಕರು ಒಂದೇ ಇಸವಿಯಲ್ಲಿ ಕಾಲಚಕ್ರದ ಕತೆಯನ್ನೇ ಮಾಡಿದರು? ಮೂವರೂ ಭೇಟಿಯಾಗಿ ಮಾತಾಡಿದರೆ ಚೆನ್ನಾಗಿರುತ್ತದೆ! ‘ಮರ್ಫಿ’ ನೋಡಿದ ನಂತರ ಕನ್ನಡ, ತಮಿಳು, ಮಲಯಾಳಂ ಎಲ್ಲದರಲ್ಲೂ ಇದೇ ಎರಡು ವರ್ಷದಿಂದೀಚಿಗೆ ನನ್ನ ಮಿತಿಯಲ್ಲಿ ನೋಡಿದ ಕಾಲವನ್ನು ತಿರುಮುರುಗಾಗಿಸುವ ಸಿನಿಮಾಗಳ ನೆನಪಾಯ್ತು‌, ಅಚ್ಚರಿಯಾಯ್ತು. ಕುತೂಹಲವೂ ಹೆಚ್ಚಾಯ್ತು. ಎಷ್ಟೆಂದರೆ, ಮಧ್ಯರಾತ್ರಿ ‘ಮರ್ಫಿ’ ನೋಡಿ ಮುಗಿಸಿ TIME TRAVEL ಬಗೆಗಿನ ಸಿನಿಮಾಗಳಿಗಾಗಿ ಗೂಗಲ್ ತಡಕಾಡಿದೆ. ಮುಖ್ಯವಾಗಿ ನಿಜಕ್ಕೂ ಟೈಂ ಟ್ರಾವೆಲಿಂಗ್ ಸಾಧ್ಯವೇ? ವಿಜ್ಞಾನ ಏನು ಹೇಳುತ್ತದೆ ಎಂದು ಹುಡುಕಿದೆ.

ಐನ್‌ಸ್ಟೀನ್‌ ತನ್ನ ಬೆಳಕಿ‌ನ ಸಿದ್ಧಾಂತದಲ್ಲಿ ಹೇಳಿದ್ದು ಅಪ್ಪಟ ಸೈನ್ಸ್‌. ಅದರ ಪ್ರಕಾರ ಹೀಗೆ ಹಿಂದಕ್ಕೂ ಮುಂದಕ್ಕೂ ಹೋಗಿ ಮನುಷ್ಯರನ್ನು ಮಾತಾಡಿಸೋದೆಲ್ಲ ಅಸಾಧ್ಯ. 1895ರಲ್ಲಿ ಹೆಚ್ ಜಿ ವೇಲ್ ಬರೆದ ‘ಟೈಂ ಮಷೀನ್’ ಪುಸ್ತಕ ಅದೆಷ್ಟು ಸಿನಿಮಾಗಳಲ್ಲಿ ಏನೆಲ್ಲಾ ರೂಪಾಂತರ ಹೊಂದಿತೋ? ಕೆಲವು ಥಿಯರಿಗಳು ಮುಂದಕ್ಕಾದರೂ ಹೋಗಬಹುದು, ಹಿಂದಕ್ಕೆ ಅಸಾಧ್ಯ ಎನ್ನುತ್ತವೆ. ಆದರೆ ಈ ಟೈಂ ಟ್ರಾವೆಲ್‌ನ ದಾಯಾದಿ ಅನ್ನಬಹುದಾದ ಪುನರ್ಜನ್ಮದ ಕತೆಗಳ ಕುರಿತೂ ಗೂಗಲ್ ಎಷ್ಟೋ ನಿಜದ ಉದಾಹರಣೆಗಳನ್ನು ಹೇಳುತ್ತದೆ.

ಬಾಂಟಮ್ 1994ರಲ್ಲಿ ಬರೆದ ‘ಬ್ಲಾಕ್ ಹೋಲ್ & ಬೇಬಿ ಯೂನಿವರ್ಸೆಸ್’ನಲ್ಲಿ, ‘ಟೈಂ ಟ್ರಾವೆಲ್ಲೂ ಇಲ್ಲ ಮಣ್ಣೂ ಇಲ್ಲ. ಹೊಸಕಾಲದಿಂದ ಹಳೇ ಕಾಲಕ್ಕೆ ಟೂರ್ ಹೋಗ್ ಬರೋಕಾಗಲ್ಲ’ ಅಂತಾನೆ. ನೀವೇನೇ ಹೇಳಿ, ನಂಬಲಸಾಧ್ಯವೆನಿಸುವ ಪುನರ್ಜನ್ಮ, ಟೈಂ ಟ್ರಾವೆಲ್, ಅನ್ಯಗ್ರಹಜೀವಿಗಳು ಇವೆಲ್ಲಾ ಬಹಳ ಆಸಕ್ತಿಕರ ಅನಿಸುವುದಂತೂ ಹೌದು. ಇತ್ತೀಚಿಗೆ ವಿಜ್ಞಾನಿ ನಂಬಿ ನಾರಾಯಣ್, ಅನ್ಯಗ್ರಹಜೀವಿಗಳು ಇವೆ ಎಂದಿದ್ದರು ಒಂದು ಸಂದರ್ಶನದಲ್ಲಿ. ಕನ್ನಡದಲ್ಲಿ ಮೂವರು ನಿರ್ದೆಶಕರು (ಅಕ್ಕಪಕ್ಕದ ಭಾಷೆಗಳ ನಿರ್ದೇಶಕರೂ) ಏಕಕಾಲದಲ್ಲಿ ಕಾಲದ ಕುರಿತ ಸಿನಿಮಾ ಮಾಡಿದ್ದು ಕೇವಲ ಕಾಕತಾಳೀಯ ಅನ್ನೋಣವೇ?

LEAVE A REPLY

Connect with

Please enter your comment!
Please enter your name here