ಇದೇ ಥರ ಕಥೆಯಿರುವ ಅನೇಕ ಸಿನಿಮಾಗಳಲ್ಲಿ ಕಥೆ ಓಡುವಾಗ ಅಲ್ಲೆಲ್ಲೋ ಮೂಲ ಎಳೆಯನ್ನೇ ಮರೆತರಾ ಅಂತ ಅನ್ನಿಸುತ್ತದೆ. ಇಲ್ಲಿ ಹಾಗಾಗಿಲ್ಲ. ಮಧ್ಯೆ ಮಧ್ಯೆ ಬರುವ ಇತರೆ ಎಳೆಗಳೂ ಕಥೆಯ ಫ್ರೇಮಿನಿಂದಾಚೆಗೆ ಹೋಗುವುದಿಲ್ಲ. – ಕಳೆದ ವಾರ ತೆರೆಕಂಡ ‘ತೂತು ಮಡಿಕೆ’ ಕಂಟೆಂಟ್ ಸಿನಿಮಾ ಎಂದು ಕರೆಸಿಕೊಂಡಿದೆ.
ನೇರವಾಗಿ ವಿಷಯಕ್ಕೆ ಬಂದರೆ ಹೊಸಬರ ಚಿತ್ರ ಅಂತ ಈ ಸಿನಿಮಾಗೆ ರಿಯಾಯಿತಿ ಕೊಡುವ ಅವಶ್ಯಕತೆಯಿಲ್ಲ. ಏಕೆಂದರೆ ಕಥೆ ಹೇಳುವುದರಲ್ಲಿ ನಾವು ಯಾರಿಗೂ ಕಮ್ಮಿಯಿಲ್ಲ ಅಂತಲೇ ಮೊದಲ ದೃಶ್ಯದಿಂದ ಹಿಡಿದು ಕಡೆಯ ದೃಶ್ಯದವರೆಗೆ ಊಹಿಸಲಾಗದ ರೀತಿಯಲ್ಲಿ ಕಥೆ ಹೆಣೆದಿದ್ದಾರೆ. ನಮ್ಮ ಚಿತ್ತ ಅತ್ತಿತ್ತ ಕೊಂಚವೂ ಹೊರಳದ ಹಾಗೆ ಕುತೂಹಲಕಾರಿಯಾಗಿಯೇ ಚಿತ್ರಕಥೆ ಸಾಗುತ್ತದೆ.
ಕೊರೋನಾ ಲಾಕ್ಡೌನಿನ ಸಮಯದಲ್ಲಿ ಬೇರೆ ಬೇರೆ ಚಿತ್ರರಂಗಗಳ ಸಿನಿಮಾಗಳನ್ನು ನೋಡಿದ ಪ್ರೇಕ್ಷಕನಿಗೆ ನಮ್ಮಲ್ಲಿ ಈ ಥರದ ಕಥೆ ಹೇಳುವ ತಂತ್ರಗಳು ಬೇಕು ಅಂತ ಖಂಡಿತವಾಗಿ ಅನ್ನಿಸಿರುತ್ತದೆ. ಅಂಥ ಬಯಕೆಯನ್ನು ತಣಿಸಲೆಂದೇ ಈ ಸಿನಿಮಾ ಬಂದಿದೆ. ನಿರ್ದೇಶಕ ಚಂದ್ರಕೀರ್ತಿಯವರಿಗೆ ಅಭಿನಂದನೆ ಸಲ್ಲಿಸಲೇಬೇಕು. ಅವರು ಇಲ್ಲಿ ನಿರ್ದೇಶಕನಷ್ಟೇ! ಏಕೆಂದರೆ ಸಿನಿಮಾದೊಳಗೆ ಅವರು ನಾಯಕನಂತೆ ಕಂಡರೂ ಇತರೆ ಪಾತ್ರಗಳ ಜೊತೆ ಒಬ್ಬರಾಗಿದ್ದಾರೆ. ತಮ್ಮದೇ ಕಥೆಯೊಳಗೆ ತಾವೇ ನಾಯಕನಾದರೂ ಕೊಂಚವೂ ಅಜೀರ್ಣವಾಗುವಂತೆ ಹೀರೋಯಿಸಮ್ಮನ್ನು ತೋರಿಸಬಾರದು ಅನ್ನುವ ಸೂಕ್ಷ್ಮ ವಿಚಾರದ ಅರಿವಿದೆ. ಹೀಗಾಗಿಯೇ ಇಲ್ಲಿ ಕೇವಲ ಕಥೆ ನಮ್ಮನ್ನು ಮೊದಲಿಂದ ಕಡೆಯವರೆಗೆ ಕೈಹಿಡಿದು ಸಾಗುತ್ತದೆ. ಚಿತ್ರಕಥೆ ಬರೆದವರು ಎ.ಎಸ್.ಜಿ, ಡಾಲರ್ ಮತ್ತು ಚಂದ್ರಕೀರ್ತಿ. ಅವರ ಸಿನಿಮಾ ಪ್ರೀತಿ ಇಲ್ಲಿ ಹಳೆಯ ಮಾದರಿಗೆ ಜೋತುಬೀಳದೆ ಸಿನಿಮಾ ಕುತೂಹಲಕಾರಿಯಾಗುವಂತೆ ಚಿತ್ರಕಥೆ ಕಥೆ ಕಟ್ಟಲು ಸಹಕಾರಿಯಾಗಿದೆ.
ಇಡೀ ಸಿನಿಮಾದಲ್ಲಿರುವುದು ಎರಡು ಹಾಡುಗಳಷ್ಟೇ ಅಂದರೆ ನಿರ್ದೇಶಕರು ಸಿದ್ಧಸೂತ್ರಗಳಿಗೆ ಜೋತುಬಿದ್ದಿಲ್ಲ ಅನ್ನುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಎರಡೂ ಹಾಡುಗಳು ಕ್ಯಾಚಿ ಆಗಿವೆ. ಒಂದು ನಿತಿನ್ ನಾರಾಯಣ್ ಸಾಹಿತ್ಯ ರಚಿಸಿರುವ ಶೀರ್ಷಿಕೆ ಗೀತೆ, ಮತ್ತೊಂದು ಚೇತನ್ (ಜೇಮ್ಸ್) ಬರೆದ ಮೆಲೊಡಿ. ಹಾಡುಗಳಿಗೆ ಸೇರಿದಂತೆ ಸಿನಿಮಾದ ಹಿನ್ನೆಲೆ ಸಂಗೀತ ಪರಿಣಾಮಕಾರಿಯಾಗಿದೆ. ಕ್ಲೈಮ್ಯಾಕ್ಸ್ ದೃಶ್ಯವೊಂದರಲ್ಲಿ ಬರುವ ಆ ಹಿನ್ನೆಲೆ ಸಂಗೀತ ಇದ್ದಕ್ಕಿದ್ದಂತೆ ಸಿನಿಮಾದ ಫೀಲ್ ಅನ್ನೇ ಬದಲಿಸುತ್ತದೆ. ಸಿನಿಮಾದ ಸಂಗೀತ ನಿರ್ದೇಶಕ ಸ್ವಾಮಿನಾಥನ್.
ಕಲಾವಿದ ಗಿರೀಶ್ ಶಿವಣ್ಣ ಅವರು ಚಂದ್ರಕೀರ್ತಿಯ ಜೊತೆ ನಡೆಯುತ್ತಲೇ ಪ್ರೇಕ್ಷಕರನ್ನು ನಕ್ಕುನಗಿಸುತ್ತಾರೆ. ಸಿನಿಮಾದುದ್ದಕ್ಕೂ ಬರುವ ತಿಳಿಹಾಸ್ಯ ನಮ್ಮನ್ನು ನಗಿಸುತ್ತಲೇ ಗಂಭೀರವಾದ ಕುತೂಹಲಕಾರಿ ಕಥೆಯೊಂದನ್ನು ಹೇಳಲು ಸಜ್ಜಾಗುತ್ತದೆ. ಕಥೆಗೆ ತಕ್ಕಂತೆ ಹಾಸ್ಯವನ್ನು ತಮ್ಮ ಸಂಭಾಷಣೆಯಲ್ಲಿ ಹದವಾಗಿ ಬೆರೆಸಿರುವ ರಘು ನಿಡುವಳ್ಳಿ ಅವರದು ಇತ್ತೀಚೆಗಿನ ಎಲ್ಲ ಹಿಟ್ ಸಿನಿಮಾಗಳಲ್ಲಿ ಕಂಡುಬರುತ್ತಿರುವ ಹೆಸರು. ಸಾಲು ಸಾಲು ಚಿತ್ರಗಳಲ್ಲಿ ತಮ್ಮ ಹೆಸರು ಕಾಣಿಸಿಕೊಳ್ಳುತ್ತಿದ್ದರೂ ತಾವಾಯಿತು ತಮ್ಮ ಕೆಲಸವಾಯಿತು ಅಂತ ಅದರತ್ತ ಗಮನವಹಿಸುತ್ತಿರುವ ರಘು ಅವರ ಕೆಲಸ ಚಿತ್ರದಿಂದ ಚಿತ್ರಕ್ಕೆ ಪಕ್ವಗೊಳ್ಳುತ್ತ ಇನ್ನಷ್ಟು ಖುಶಿ ಕೊಡುತ್ತಿದೆ. ಏಕೆಂದರೆ ಅವರ ಸಂಭಾಷಣೆಯಲ್ಲಿ ಹೊಸತನ ಕಾಣಿಸುತ್ತಿದೆ.
ಸಿಕ್ಕಾಪಟ್ಟೆ ಖುಶಿ ಕೊಟ್ಟಿದ್ದು ಇದೇ ಮೊದಲ ಬಾರಿಗೆ ಹೆಚ್ಚು ಸಮಯ ಪರದೆಯಲ್ಲಿ ಕಾಣಿಸಿಕೊಂಡ ನರೇಶ್ ಭಟ್ ಅವರನ್ನು ನೋಡಿದಾಗ. ಕಿರುಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರ ಪ್ರತಿಭೆಗೆ ಇದೀಗ ಸರಿಯಾದ ವೇದಿಕೆಗಳು ಸಿಗುತ್ತಿವೆ. ಅವರ ಪ್ರತಿಭೆಯನ್ನು ಇನ್ನಷ್ಟು ಕಂಟೆಂಟ್ ಸಿನಿಮಾಗಳ ನಿರ್ದೇಶಕರು ಬಳಸಿಕೊಳ್ಳಲಿ. ಒಬ್ಬರಾ, ಇಬ್ಬರಾ….? ನಂದಗೋಪಾಲ್, ಪ್ರಮೋದ್ ಶೆಟ್ಟಿ, ಶಂಕರ್ ಅಶ್ವಥ್, ನಾಯಕಿ ಪಾವನ ಹೀಗೆ ಅನೇಕ ಕಲಾವಿದರಿದ್ದರೂ ಎಲ್ಲರಿಗೂ ಸಮಾನ ಅವಕಾಶ ಸಿಕ್ಕಿದೆ. ಆ ಪುಟ್ಟ ಹುಡುಗನೂ ಸಿನಿಮಾ ಮುಗಿಯುವಷ್ಟರಲ್ಲಿ ನಮ್ಮ ಮನಸ್ಸು ಗೆದ್ದಿರುತ್ತಾನೆ.
ಇದೇ ಥರ ಕಥೆಯಿರುವ ಅನೇಕ ಸಿನಿಮಾಗಳಲ್ಲಿ ಕಥೆ ಓಡುವಾಗ ಅಲ್ಲೆಲ್ಲೋ ಮೂಲ ಎಳೆಯನ್ನೇ ಮರೆತರಾ ಅಂತ ಅನ್ನಿಸುತ್ತದೆ. ಇಲ್ಲಿ ಹಾಗಾಗಿಲ್ಲ. ಮಧ್ಯೆ ಮಧ್ಯೆ ಬರುವ ಇತರೆ ಎಳೆಗಳೂ ಕಥೆಯ ಫ್ರೇಮಿನಿಂದಾಚೆಗೆ ಹೋಗುವುದಿಲ್ಲ. ಒಟ್ಟಾರೆ ಹೇಳಬೇಕೆಂದರೆ ಸಂಪೂರ್ಣ ಮನರಂಜನೆಯನ್ನೇ ಗಮನದಲ್ಲಿಟ್ಟುಕೊಂಡು ಆಸ್ಥೆಯಿಂದ ಕಥೆ ಕಟ್ಟಿದ ಚಿತ್ರ ‘ತೂತುಮಡಿಕೆ’. ಒಂದೇ ಒಂದು ನಿಮಿಷವೂ ಬೋರ್ ಹೊಡೆಸುವುದಿಲ್ಲ. ನಾನು ಎಷ್ಟು ನಿರೀಕ್ಷೆ ಮಾಡಿ ಥಿಯೇಟರಿಗೆ ಕಾಲಿಟ್ಟೆನೋ ಅದಕ್ಕಿಂತ ಹೆಚ್ಚು ಸಿನಿಮಾ ಇಷ್ಟವಾಯಿತು. ಸಿನಿಮಾ ಮುಗಿದ ಮೇಲೆ ಅಲ್ಲಿ ನೋಡಿದ ಎಲ್ಲರ ಅಭಿಪ್ರಾಯ ಇದೇ ಆಗಿತ್ತು. ಮನರಂಜನೆಯನ್ನೇ ಬಯಸಿ ಬರುವ ಪ್ರೇಕ್ಷಕನಿಗೆ ಖಂಡಿತ ಈ ಸಿನಿಮಾ ನಿರಾಶೆ ಮಾಡುವುದಿಲ್ಲ.