ರಾಗಿಣಿ ದ್ವಿವೇದಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘Sorry’ ಸಿನಿಮಾದ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಇದು ಕನ್ನಡದ ಮೊದಲ ಸೂಪರ್‌ ಹೀರೋ ಕಾನ್ಸೆಪ್ಟ್‌ ಸಿನಿಮಾ ಎನ್ನುತ್ತಾರೆ ನಿರ್ದೇಶಕ ಬ್ರಹ್ಮ.

“ನಾನು ಚಿತ್ರರಂಗಕ್ಕೆ ಬಂದು ಹನ್ನೊಂದು ವರ್ಷಗಳಾಯಿತು. ಈತನಕ ಹೊಸತು ಎನಿಸಿದ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾ ಬಂದಿದ್ದೀನಿ. ಕಲಾವಿದರು ಸ್ವಲ್ಪ ರಿಸ್ಕ್ ಆದರೂ ಪರವಾಗಿಲ್ಲ, ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಬೇಕು ಎಂಬುದು ನನ್ನ ಅನಿಸಿಕೆ. ನಾನು ಆ ರೀತಿ ಮಾಡಿಕೊಂಡು ಬರುತ್ತಿದ್ದೇನೆ. ನನಗೆ ಮೊದಲಿನಿಂದಲೂ ಸೂಪರ್ ಹೀರೊ ಅಂದರೆ ಇಷ್ಟ. ಈಗ ಅದೇ ಪಾತ್ರ ನನಗೆ ಸಿಕ್ಕಿರುವುದು ಖುಷಿಯಾಗಿದೆ” ಎಂದರು ನಟಿ ರಾಗಿಣಿ ದ್ವಿವೇದಿ. ಅವರ ‘ಸಾರಿ’ ಚಿತ್ರದ ಲಿರಿಕಲ್ ಸಾಂಗ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭ ಮೊನ್ನೆ ನೆರವೇರಿತು.

ಕರ್ನಾಟಕ‌ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ದೇಶಕ ಬ್ರಹ್ಮ ಅವರಿಗೆ ಇದು ಎರಡನೇ ನಿರ್ದೇಶನದ ಸಿನಿಮಾ. ಅವರು ಮಾತನಾಡಿ, “ನಾನು ಮೂಲತಃ ವಿ.ಎಫ್.ಎಕ್ಸ್ ತಂತ್ರಜ್ಞ. ಈ ಹಿಂದೆ ‘ಸಿದ್ದಿ ಸೀರೆ’ ಚಿತ್ರ ನಿರ್ದೇಶಿಸಿದ್ದೆ. ಇದು ಎರಡನೇ ಚಿತ್ರ. ಸೂಪರ್ ಹೀರೊ ಕಾನ್ಸೆಪ್ಟ್ ಚಿತ್ರ. ರಾಗಿಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಕನ್ನಡದ ಮೊದಲ ಸೂಪರ್ ಹೀರೊ ಕಾನ್ಸೆಪ್ಟ್ ನ ಚಿತ್ರ ಎನ್ನಬಹುದು. ಈ ಹಿಂದೆ ಕೆಲವು ಚಿತ್ರ ಬಂದಿದೆ ಎನ್ನುತ್ತಾರೆ. ಆದರೆ ಮೋಷನ್ ಕ್ಯಾಪ್ಚರ್ ವಿಶೇಷ ತಂತ್ರಜ್ಞಾನ ಬಳಿಸಿ ನಿರ್ಮಾಣ ಮಾಡುತ್ತಿರುವ ಮೊದಲ ಸೂಪರ್ ಹೀರೊ ಕಾನ್ಸೆಪ್ಟ್ ನ ಕನ್ನಡ ಚಿತ್ರವಿದು. ಆ ಕುರಿತು ಈಗಾಗಲೇ ಮೇಕಿಂಗ್ ವಿಡಿಯೋ ಸಹ ಬಿಡುಗಡೆ ಮಾಡಿದ್ದೇವೆ” ಎಂದರು.

”ನಾನು ಈ ತನಕ ಐದಾರು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಆದರೆ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಇದೇ ಮೊದಲು. ರಾಗಿಣಿ ಅವರ ಜೊತೆ ಅಭಿನಯಿಸಿದ್ದು ಸಂತಸವಾಗಿದೆ” ಎಂದರು ನಟ ಅರ್ಜುನ್ ಶರ್ಮ. ನವೀನ್ ಕುಮಾರ್ ಚಿತ್ರದ ನಿರ್ಮಾಪಕರು . ಜೈ ಕೃಪಲಾನಿ ಹಾಗೂ ಜೇನ್ ಜಾರ್ಜ್ ಸಹ ನಿರ್ಮಾಪಕರು. ಅಫ್ಜಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜು ಎಮ್ಮಿಗನೂರು ಸಂಗೀತ, ರಾಜೀವ್‌ ಛಾಯಾಗ್ರಹಣ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here