ನೈಜ ಘಟನೆ ಆಧರಿತ ಕ್ರೈಂ ಸೀರಿಸ್ ಮತ್ತು ಸಿನಿಮಾಗಳ ನಿರೂಪಣೆ ಮತ್ತು ನಿರ್ವಹಣೆಯನ್ನು ಹೇಗೆ ಮಾಡಬೇಕೆಂಬುದಕ್ಕೆ ‘ಟ್ರಯಲ್ ಬೈ ಫೈರ್’ ಖಂಡಿತಾ ಉತ್ತಮ ನಿದರ್ಶನವಾಗಿ ನಿಲ್ಲಬಲ್ಲದು. ಈ ಸರಣಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಭಾರತೀಯ ಯುದ್ಧ ಸಿನಿಮಾಗಳ ಮಾತು ಬಂದಾಗ ಬಹುತೇಕರಿಗೆ ಮೊದಲು ನೆನಪಾಗುವ ಸಿನಿಮಾ ‘ಬಾರ್ಡರ್’. ಬಹು ತಾರಾಗಣದ, ದೊಡ್ಡ ಬಜೆಟ್‌ನ ಈ ಸಿನಿಮಾ ಬಿಡುಗಡೆಯಾದಾಗ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವ ಜೊತೆಗೆ ಪ್ರಶಸ್ತಿಗಳನ್ನೂ ಬಾಚಿಕೊಂಡಿತ್ತು. ಆದರೆ, ‘ಬಾರ್ಡರ್’ ಸಿನಿಮಾ ಎಂದಾಗ ಅದರ ಈ ಎಲ್ಲಾ ಯಶಸ್ಸಿನ ಜೊತೆಗೆ ನೆನಪಾಗುವುದು – ಅದರಲ್ಲೂ ಮುಖ್ಯವಾಗಿ ದೆಹಲಿ ನಿವಾಸಿಗಳಿಗೆ – ದೆಹಲಿಯ ‘ಉಪಹಾರ್’ ಸಿನಿಮಾ ಮಂದಿರದ ಅಗ್ನಿದುರಂತ.

1997ರ ಜೂನ್ 13ರಂದು ‘ಬಾರ್ಡರ್’ ಬಿಡುಗಡೆಯಾದ ದಿನ ದೆಹಲಿಯ ಅತೀ ದೊಡ್ಡ ಚಿತ್ರಮಂದಿರ ‘ಉಪಹಾರ್’ ನಲ್ಲಿ ಸುಮಾರು 900 ಮಂದಿ ಮಧ್ಯಾಹ್ನದ ಪ್ರದರ್ಶನ ನೋಡಲು ಕಿಕ್ಕಿರಿದು ತುಂಬಿದ್ದರು. ಆಗ ಸಂಭವಿಸಿದ ಭಯಾನಕ ಅಗ್ನಿ ದುರಂತದಲ್ಲಿ 59 ಮಂದಿ ಪ್ರಾಣ ಕಳೆದುಕೊಂಡರೆ, ನೂರಾರು ಮಂದಿ ಗಾಯಗೊಂಡರು. ಒಂದಷ್ಟು ಹೆಚ್ಚುವರಿ ಸೀಟುಗಳ ಆಸೆಗೆ ಬಾಲ್ಕನಿಯ ಬಾಗಿಲುಗಳನ್ನು ಹೊರಗಿನಿಂದ ಮುಚ್ಚಿದ್ದು, ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದು ಇಷ್ಟು ದೊಡ್ಡ ಮಟ್ಟದ ಪ್ರಾಣಹಾನಿಗೆ ಕಾರಣವಾಗಿತ್ತು. ಈಗ 25 ವರ್ಷಗಳ ನಂತರ ಈ ದುರಂತವನ್ನು ಆಧರಿಸಿದ ವೆಬ್ ಸೀರೀಸ್ ‘ಟ್ರಯಲ್ ಬೈ ಫೈರ್’ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಂಡಿದೆ.

‘ಟ್ರಯಲ್ ಬೈ ಫೈರ್’ ದೆಹಲಿಯ ಅಂದಿನ ದುರಂತದಲ್ಲಿ ತಮ್ಮ ಇಬ್ಬರೂ ಮಕ್ಕಳನ್ನು ಕಳೆದುಕೊಂಡ ನೀಲಂ ಕೃಷ್ಣಮೂರ್ತಿ ಮತ್ತು ಶೇಖರ್ ಕೃಷ್ಣಮೂರ್ತಿ ಬರೆದಿರುವ ಅದೇ ಹೆಸರಿನ ಕೃತಿಯನ್ನು ಆಧರಿಸಿದ ಸೀರೀಸ್. ಹೀಗಾಗಿ, ಸಹಜವಾಗಿ ಈ ದಂಪತಿಗಳು ಕಥೆಯ ಕೇಂದ್ರದಲ್ಲಿದ್ದರೂ, ಈ ದುರಂತದಲ್ಲಿ ತಮ್ಮ ಹತ್ತಿರದವರನ್ನು ಕಳೆದುಕೊಂಡವರ ಹಾಗು ಆರೋಪಿಗಳ ಕತೆಯೂ ಸೇರಿಕೊಂಡಿದೆ. ನೈಜ ಘಟನೆಯನ್ನು ಆಧರಿಸಿದ ಕ್ರೈಂ ಸೀರೀಸ್ ಗಳು, ಸಿನಿಮಾಗಳು ಸಾಕಷ್ಚಿದ್ದರೂ ಈ ಸೀರಿಸ್ ತುಂಬಾ ಭಿನ್ನವಾಗಿ, ವಿಶಿಷ್ಟವಾಗಿ ಮೂಡಿರುವುದಕ್ಕೆ ಕಾರಣ ಅದನ್ನು ತೆರೆಯ ಮೇಲೆ ತರುವುದರಲ್ಲಿ ತಂಡ ತೋರಿರುವ ಸೂಕ್ಷ್ಮತೆ ಮತ್ತು ವೈಯಕ್ತಿಕ ಬದುಕುಗಳ ಮೂಲಕ ಕತೆ ಹೇಳಿರುವ ವಿಧಾನ. ಎಷ್ಟೋ ವೇಳೆ ದುರಂತವೊಂದರ ಕತೆ ಹೇಳುವಾಗ ಅದನ್ನು ಕ್ರೈಂ ಥ್ರಿಲ್ಲರ್ ಆಗಿಸುವ, ಪ್ರೇಕ್ಷಕರನ್ನು ಹಿಡಿದಿಡುವ ಭರದಲ್ಲಿ ನಿರ್ದೇಶಕರು ಸೂಕ್ಷ್ಮತೆ ಕಳೆದುಕೊಂಡು ಬಿಡುತ್ತಾರೆ. ಪ್ರೇಕ್ಷಕರೂ ಕೂಡ ಅದನ್ನು ಒಂದು ಥ್ರಿಲ್ಲರ್ ರೀತಿ ಆನಂದಿಸಿಬಿಡುತ್ತಾರೆ. ‘ಟ್ರಯಲ್ ಬೈ ಫೈರ್’ ಇಂತಹ ಯಾವುದೇ ರೋಚಕತೆ ಅಥವ ಅನಗತ್ಯ ಮೆಲೋಡ್ರಾಮಗಳನ್ನು ಸೇರಿಸದೆ, ಪ್ರಾಣ ಕಳೆದುಕೊಂಡವರ ಮತ್ತು ಅವರ ಕುಟುಂಬಸ್ಥರ ಭಾವನೆಗಳನ್ನು ಗೌರವಿಸುತ್ತದೆ ಎಂಬುದು ದೊಡ್ಡ ಅಂಶವಾಗಿದೆ.

‘ಉಪಹಾರ್’ ಚಿತ್ರಮಂದಿರದ ಮಾಲಿಕರಾದ ಪ್ರಭಾವಿ ಅನ್ಸಾಲ್ ಸಹೋದರರ ವಿರುದ್ಧ ದುರಂತಕ್ಕೆ ಬಲಿಯಾದವರ ಕುಟುಂಬಸ್ಥರು, ಕೃಷ್ಣಮೂರ್ತಿ ದಂಪತಿಗಳ ನೇತೃತ್ವದಲ್ಲಿ ನಡೆಸಿದ ಸುದೀರ್ಘ ಕಾನೂನು ಹೋರಾಟದ ಹಾದಿಯನ್ನು ಸೀರೀಸ್ ಅನುಸರಿಸುತ್ತದೆ. ಆದರೆ, ಅದು ನ್ಯಾಯಾಲಯ ಅಥವಾ ತನಿಖೆ ಪ್ರಕ್ರಿಯೆಯನ್ನು ಮುಖ್ಯವಾಗಿಟ್ಟುಕೊಳ್ಳುವ ಬದಲು ಸಂತ್ರಸ್ತರ ಮತ್ತು ಅಪರಾಧಿಗಳ ಕಥೆ ಹೇಳುವ ನಿರೂಪಣಾ ತಂತ್ರವನ್ನು ಅನುಸರಿಸುತ್ತದೆ. ಆ ಮೂಲಕವೇ ನಮ್ಮ ಸರ್ಕಾರಿ ವ್ಯವಸ್ಥೆ ಮತ್ತು ಅವ್ಯವಸ್ಥೆಯನ್ನು, ಅಧಿಕಾರ ಮತ್ತು ಹಣದ ದುರುಪಯೋಗವನ್ನು, 24 ವರ್ಷಗಳ ಕಾಲ ನ್ಯಾಯಕ್ಕಾಗಿ ನಡೆದ ಹೋರಾಟವನ್ನು ತೆರೆದಿಡುತ್ತದೆ.

ಈ ಸೀರೀಸ್‌ನ ಅತೀ ದೊಡ್ಡ ಗೆಲುವು ಇರುವುದು ಪಾತ್ರಧಾರಿಗಳ ಅತ್ಯಂತ ಸಮರ್ಥವಾದ ಮತ್ತು ಶಕ್ತವಾದ ಅಭಿನಯದಲ್ಲಿ. ಪ್ರಮುಖ ಪಾತ್ರಗಳಷ್ಟೇ ಅಲ್ಲ ಹಾಗೆ ಬಂದು ಹೀಗೆ ಹೋಗುವ ಪಾತ್ರಗಳೂ ಕೂಡ ಮರೆಯಲಾರದ ಛಾಪು ಮೂಡಿಸುತ್ತವೆ. ಉದಾಹರಣೆಗೆ ತನ್ನ ಹೆಂಡತಿಯಿಂದ ಹಿಡಿದು ಮೊಮ್ಮಗುವಿನವರೆಗೆ ಕುಟುಂಬದ ಎಲ್ಲಾ 7 ಸದಸ್ಯರನ್ನೂ ಕಳೆದುಕೊಂಡ ವೃದ್ಧನೊಬ್ಬನಿಗೆ ಮೃತದೇಹಗಳನ್ನು ಗುರುತಿಸುವಂತೆ ಹೇಳುವ ಒಂದು ನಿಮಿಷದ ಪಾತ್ರದಲ್ಲಿ ಕಾಣಿಸಿಕೊಳ್ಳುವ ಒಬ್ಬ ನರ್ಸ್, ತನ್ನ ಕರ್ತವ್ಯವನ್ನು ನಿರ್ಭಾವುಕವಾಗಿ ನಿರ್ವಹಿಸುತ್ತಲೇ ಒಂದು ಘಳಿಗೆ ಕಣ್ಣು ತುಂಬಿಕೊಳ್ಳುವುದು, ಆಕೆಯ ಗಂಟಲು ಕಟ್ಟುವುದು ಎಷ್ಟು ಪರಿಣಾಮಕಾರಿಯಾಗಿ ಮೂಡಿದೆಯೆಂದರೆ ಆಕೆಯ ಅಭಿನಯ ಮನ ಕಲಕಿಬಿಡುತ್ತದೆ. ಇಂತಹ ಅತ್ಯುತ್ತಮ ಪಾತ್ರಧಾರಿಗಳನ್ನು ಹುಡುಕಿ ತಂದಿರುವುದಕ್ಕೆ ಕಾಸ್ಟಿಂಗ್‌ ಡೈರೆಕ್ಚರ್ ಸಂಜೀವ್ ಮೌರ್ಯ ಅವರನ್ನು ಅಭಿನಂದಿಸಲೇಬೇಕು.

ನೀಲಂ ಕೃಷ್ಣಮೂರ್ತಿಯ ಪಾತ್ರದಲ್ಲಿ, ರಾಜಶ್ರೀ ದೇಶಪಾಂಡೆ ವರ್ಷದ ಆರಂಭದಲ್ಲೇ ಈ ವರ್ಷದ ಅತ್ಯುತ್ತಮ ಅಭಿನಯಗಳಲ್ಲಿ ಒಂದು ಎಂದು ನಿಸ್ಸಂಶಯವಾಗಿ ಹೇಳಬಹುದಾದಂತೆ ನಟನೆ ನೀಡಿದ್ದಾರೆ. ತನ್ನಿಬ್ಬರು ಹದಿಹರೆಯದ ಮಕ್ಕಳನ್ನು ಕಳೆದುಕೊಂಡು, ಅದನ್ನು ಮರೆತು ಮುಂದೆ ಸಾಗುವ ಪ್ರಯತ್ನವನ್ನೂ ಮಾಡದೆ, ತನ್ನ ಮಕ್ಕಳ ಸಾವಿಗೆ ಕಾರಣರಾದವರಿಗೆ ಶಿಕ್ಷೆ ಕೊಡಿಸಬೇಕೆಂಬುದನ್ನು ಮಾತ್ರ ತನ್ನ ಜೀವನದ ಗುರಿಯಾಗಿಸಿಕೊಂಡು ದಶಕಗಳ ಕಾಲ ಅದಕ್ಕಾಗಿಯೇ ಬದುಕಿಬಿಡುವ ಅಥವಾ ಬದುಕುವುದನ್ನೇ ಬಿಡುವ ನೀಲಂ ಪಾತ್ರದ ಅಗಾಧ ನೋವನ್ನು, ರೋಷವನ್ನು, ಕ್ರೋಧವನ್ನು ರಾಜಶ್ರೀ ತಾವೇ ಜೀವಿಸಿದಂತೆ ಅಭಿನಯಿಸಿದ್ದಾರೆ. ಒಂದು ದೃಶ್ಯವನ್ನು ಉದಾಹರಿಸಬೇಕೆಂದರೆ ತನ್ನ ಮಕ್ಕಳ ಜೊತೆ ಸಿನಿಮಾ ನೋಡಲು ಹೋಗಿದ್ದ ತನ್ನ ಗೆಳತಿಯ ಮಗ ಬದುಕಿಯೇ ಇದ್ದಾನೆಂಬುದು ನೀಲಂಗೆ ತಿಳಿಯುತ್ತದೆ. ತನ್ನ ಮಕ್ಕಳ ಹೆಣವನ್ನು ಮುಂದಿಟ್ಟಕೊಂಡು ಕುಳಿತಿರುವಾಗ ಗೊತ್ತಾದ ಈ ಸತ್ಯ ನೀಲಂಳಲ್ಲಿ ಉಂಟುಮಾಡುವ ಅಸೂಯೆಯನ್ನು, ಅಸಹನೆಯನ್ನು ಒಂದೂ ಮಾತಿಲ್ಲದೆ, ಕೇವಲ ತನ್ನ ಮುಖಭಾವದಲ್ಲಿ ರಾಜಶ್ರೀ ಮನೋಜ್ಞವಾಗಿ ತೋರಿಸುತ್ತಾರೆ.

ಶೇಖರ್ ಕೃಷ್ಣಮೂರ್ತಿಯ ಪಾತ್ರದಲ್ಲಿ ಅಭಯ್ ಡಿಯೋಲ್ ನೀಡಿರುವ ಅಭಿನಯ ಅವರ ಚಿತ್ರಜೀವನದಲ್ಲೇ ಮೈಲುಗಲ್ಲಾಗುವಂತಿದೆ. ಹಾಗೆ ನೋಡಿದರೆ, ನೀಲಂಗಿಂತ ಹೆಚ್ಚು ಸಂಕೀರ್ಣವಾದ ಪಾತ್ರದ ವ್ಯಾಪ್ತಿ ಶೇಖರ್ ಪಾತ್ರಕ್ಕಿದೆ. ದುರಂತದ ಅಗ್ನಿಜ್ವಾಲೆಯಲ್ಲೇ ಸಿಕ್ಕಿಕೊಂಡಿರುವ, ಅದರಿಂದ ಹೊರಬಂದು ಸಾಮಾನ್ಯ ಜೀವನ ನಡೆಸಲು ನಿರಾಕರಿಸುವ, ತಾನು ಕಳೆದುಕೊಂಡ ಮಕ್ಕಳ ನೆನಪಲ್ಲೇ ಅವರಿಗೆ ಸಿಗಬೇಕಾದ ನ್ಯಾಯಕ್ಕಾಗಿ ಹೋರಾಡುವುದು ಮಾತ್ರವೇ ತನ್ನ ಜೀವನ ಎಂದು ನಿರ್ಧರಿಸಿರುವ ಹೆಂಡತಿಯೊಂದಿಗೆ ಸಹಬಾಳ್ವೆ ನಡೆಸುವ ಶೇಖರ್ ಮನಸ್ಥಿತಿಯನ್ನು, ಆತನ ತುಮುಲ, ಗೊಂದಲಗಳನ್ನು ನಿರ್ದೇಶಕರು ಆತನ ಪಾತ್ರದಲ್ಲಿ ಸಮರ್ಥವಾಗಿ ಚಿತ್ರಿಸಿದ್ದಾರೆ. 24 ವರ್ಷಗಳ ಕಾಲ, ದಿನದ 24 ಗಂಟೆಯೂ ಒಂದೇ ವಿಷಯ ಯೋಚಿಸುತ್ತಾ, ಅದಕ್ಕಾಗಿ ಕೆಲಸ ಮಾಡುತ್ತಾ, ಉಳಿದೆಲ್ಲಾ ಭಾವನೆ ಮತ್ತು ಸ್ಪಂದನೆಗಳನ್ನು ಮರೆತು ಕಲ್ಲಾದಂತೆ ಇರುವುದು ನೀಲಂಗೆ ಉಸಿರಿನಷ್ಟೇ ಸಹಜವಾಗಿ ಬಿಟ್ಟಿರುವಾಗ, ಶೇಖರ್ ಆಗೊಮ್ಮೆ ಈಗೊಮ್ಮೆ ದುರಂತವನ್ನು ಮರೆಯಲು, ‘ಮೂವ್ ಆನ್’ ಆಗಲು ಯತ್ನಿಸುವುದು. ಮನಸ್ಪೂರ್ತಿ ನಗಲು ಯತ್ನಿಸುವುದು ಆದರೆ ಆ ಮೂಲಕ ತನ್ನ ಮಕ್ಕಳ ನೆನಪಿಗೆ, ಪತ್ನಿಗೆ ದ್ರೋಹ ಎಸಗುತ್ತಿದ್ದೇನೇನೋ ಎಂದು ತಳಮಳಿಸುವುದು – ಹೀಗೆ ಶೇಖರ್ ಪಾತ್ರದ ಸಂಕೀರ್ಣತೆಗಳನ್ನು, ಬದಲಾವಣೆಗಳನ್ನು ಅಭಯ್ ತಮ್ಮ ಇಡೀ ದೇಹವನ್ನು ಬಳಸಿಕೊಂಡು ಅಭಿವ್ಯಕ್ತಿಸಿದ್ದಾರೆ.

ಸೀರೀಸ್‌ನ ಬಹುತೇಕ ಎಲ್ಲಾ ಎಪಿಸೋಡ್‌ಗಳು ದುರಂತಕ್ಕೆ ಸಂಬಂಧಿಸಿದ ಒಂದು ಕುಟುಂಬದ ಮೇಲೆ ಹೆಚ್ಚು ಕೇಂದ್ರೀಕೃವಾಗಿದ್ದುಕೊಂಡು, ಮುಖ್ಯ ನಿರೂಪಣೆಯನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಬಹುತೇಕ ಬಾಲ್ಕನಿಯಲ್ಲೇ ಹೆಚ್ಚು ಸಾವು ಸಂಭವಿಸಿದ್ದ ಕಾರಣ ಸಂತ್ರಸ್ತ ಕುಟುಂಬಗಳೆಲ್ಲಾ ಮೇಲ್ಮಧ್ಯಮ ವರ್ಗದವರೇ ಅನಿಸುವಾಗ ತನ್ನ ಕುಟುಂಬದ ಎಲ್ಲಾ 7 ಸದಸ್ಯರನ್ನೂ ಕಳೆದುಕೊಂಡ ಸೆಕ್ಯುರಿಟಿ ಗಾರ್ಡ್ ಕಿಶನ್ ಪಾಲ್ (ಯಶವಂತ್ ವಾಸ್ನಿಕ್) ಕತೆ ಎರಡನೇ ಎಪಿಸೋಡ್‌ನಲ್ಲಿ ಪ್ರಮುಖವಾಗಿ ಬರುತ್ತದೆ. ಶವಗಳನ್ನು ಸಾಲಾಗಿ ತನ್ನ ಪುಟ್ಟ ಗೂಡಿನಲ್ಲಿಟ್ಟುಕೊಂಡು, ಅಂತ್ಯಕ್ರಿಯೆಗೆ ಬೇಕಾದ ಹಣ ಒದಗಿಸಲು ಒದ್ದಾಡುತ್ತಾ, ಶವಗಳನ್ನು ದೆಹಲಿಯ ಬೇಸಗೆಯಿಂದ ರಕ್ಷಿಸಲು ಹೆಣಗುವ ಕಿಶನ್ ಪಾಲ್ ನೋವು ಹೃದಯ ಒಡೆಯುವಂತೆ ಮೂಡಿಬಂದಿದೆ.

ಮತ್ತೊಂದರಲ್ಲಿ ಕಾನೂನು ಸಮರಕ್ಕೆ ಸಜ್ಜಾಗಿ ನಿಂತ ಸಂತ್ರಸ್ತರ ಕುಟುಂಬಕ್ಕೆ ಬೆದರಿಕೆ ಒಡ್ಡುವ ನೀರಜ್ ಸೂರಿ (ಆಶಿಶ್ ವಿದ್ಯಾರ್ಥಿ) ಕುಟುಂಬದ ಕತೆ ಇದ್ದರೆ, ಮತ್ತೊಂದರಲ್ಲಿ ಈ ದುರಂತಕ್ಕೆ ಒಬ್ಬನನ್ನು ಹೊಣೆಯಾಗಿಸಿ ತಪ್ಪಿಸಿಕೊಳ್ಳುವ ದೊಡ್ಡವರ ಪ್ರಯತ್ನದಲ್ಲಿ ಸಿಕ್ಕಿಕೊಂಡು ಜೈಲು ಸೇರುವ ವಿದ್ಯುತ್ ಇಲಾಖೆ ನೌಕರ ವೀರ್ ಸಿಂಗ್ (ರಾಜೇಶ್ ತೈಲಾಂಗ್) ಕುಟುಂಬದ ಕತೆ ಇದೆ. ಇನ್ನೊಂದರಲ್ಲಿರುವ ಸೇನೆಯ ನಿವೃತ್ತ ಅಧಿಕಾರಿ ಕ್ಯಾಪ್ಟನ್ ಹರ್ದೀಪ್ ಬೇಡಿ ದಂಪತಿಗಳ ಕತೆ ಮುಖ್ಯ ಕಥಾ ಹಂದರಕ್ಕೆ ಅಷ್ಟೇನೂ ಅಗತ್ಯವಿರಲಿಲ್ಲ ಎನಿಸಿದರೂ, ಬೇಡಿ ದಂಪತಿಗಳಾಗಿ ಅನುಪಮ್ ಖೇರ್ ಮತ್ತು ರತ್ನಾ ಪಾಠಕ್ ಶಾ ಅದ್ಭುತ ನಟನೆ, ಅವರ ಸಂಬಂಧ ಮತ್ತು ವ್ಯಕ್ತಿತ್ವಕ್ಕಿರುವ ಹಲವು ಆಯಾಮಗಳು ಮತ್ತು ಪದರಗಳನ್ನು ಹೆಣೆದಿರುವ ರೀತಿ ಆ ಎಪಿಸೋಡ್ ಅನ್ನೂ ಕೂಡ ಮುಖ್ಯವಾಗಿಸುತ್ತದೆ. ದುರಂತದ ವಿಸ್ಕೃತ ಚಿತ್ರಣವನ್ನು ಮೊದಲಿಗೆ ತೋರಿಸದೆ, ಕೊನೆಯ ಎಪಿಸೋಡ್ ನಲ್ಲಿ ನೀಡಿರುವುದರಿಂದ, ಥಿಯೇಟರ್ ಒಳಗೆ ಸಿಲುಕಿಕೊಂಡ ಆ ಎಲ್ಲಾ ಪಾತ್ರಗಳ ಜೊತೆ ಇನ್ನೂ ಆಳವಾದ ರೀತಿಯಲ್ಲಿ ಕನೆಕ್ಟ್‌ ಆಗಲು ಪ್ರೇಕ್ಷಕರಿಗೆ ಸಾಧ್ಯವಾಗುತ್ತದೆ.

ಸೀರೀಸ್‌ನ ಮುಖ್ಯ ನಿರ್ದೇಶಕರಾಗಿರುವ ಪ್ರಶಾಂತ್ ನಾಯರ್ ದುರಂತವೊಂದರ ಕತೆಯನ್ನು ತೆರೆಗೆ ಅಳವಡಿಸುವಾಗ ತೋರಿಸಿರುವ ಸಂಯಮ ಮತ್ತು ಸೂಕ್ಷ್ಮತೆ ಅಭಿನಂದನಾರ್ಹ. ನೈಜ ಘಟನೆ ಆಧರಿತ ಕ್ರೈಂ ಸೀರಿಸ್ ಮತ್ತು ಸಿನಿಮಾಗಳ ನಿರೂಪಣೆ ಮತ್ತು ನಿರ್ವಹಣೆಯನ್ನು ಹೇಗೆ ಮಾಡಬೇಕೆಂಬುದಕ್ಕೆ ‘ಟ್ರಯಲ್ ಬೈ ಫೈರ್’ ಖಂಡಿತಾ ಉತ್ತಮ ನಿದರ್ಶನವಾಗಿ ನಿಲ್ಲಬಲ್ಲದು.

LEAVE A REPLY

Connect with

Please enter your comment!
Please enter your name here