ಕನ್ನಡ ನಟ – ನಿರ್ದೇಶಕ ರಾಜ್‌ ಬಿ ಶೆಟ್ಟಿ ಅಭಿನಯದ ಮಲಯಾಳಂ ಸಿನಿಮಾ ‘ಟರ್ಬೋ’ ಟ್ರೇಲರ್‌ ಬಿಡುಗಡೆಯಾಗಿದೆ. ಮಾಲಿವುಡ್‌ ಮೆಗಾ ಸ್ಟಾರ್‌ ಮಮ್ಮೂಟಿ ನಟಿಸಿ, ನಿರ್ಮಿಸಿರುವ ಚಿತ್ರವಿದು. ಟ್ರೇಲರ್‌ನಲ್ಲಿ ‘ವೆಟ್ರಿವೇಲ್‌ ಶಣ್ಮುಗಂ’ ಪಾತ್ರದ ರಾಜ್‌ ಶೆಟ್ಟಿ ಅವರ swag ಇಂಟರೆಸ್ಟಿಂಗ್‌ ಆಗಿದೆ.

ರಾಜ್‌ ಬಿ ಶೆಟ್ಟಿ ಮಲಯಾಳಂ ಚಿತ್ರರಂಗ ಪ್ರವೇಶಿಸಿದ್ದಾರೆ. ‘ಟರ್ಬೋ’ ಮಲಯಾಳಂ ಸಿನಿಮಾದ ‘ವೆಟ್ರಿವೇಲ್‌ ಶಣ್ಮುಗಂ’ ಖಳಪಾತ್ರದಲ್ಲಿ ಮಿಂಚಿದ್ದಾರೆ. ಇದು ಮಾಲಿವುಡ್‌ ಮೆಗಾ ಸ್ಟಾರ್‌ ಮಮ್ಮೂಟಿ ಸಿನಿಮಾ ಎನ್ನುವುದು ವಿಶೇಷ! ನಿನ್ನೆ ದುಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಹೀರೋ ಮಮ್ಮೂಟಿ ಎದುರು ಖಳನಾಗಿ ರಾಜ್‌ ಶೆಟ್ಟಿ ಪಾತ್ರದ swag, ಖದರ್‌ ಸಖತ್ತಾಗಿದೆ. ಮಲಯಾಳಂನಲ್ಲಿ ಪುಲಿಮುರುಗನ್, ಮಧುರೈ ರಾಜದಂತಹ ಸೂಪರ್ ಡೂಪರ್ ಚಿತ್ರಗಳನ್ನು ನೀಡಿದ ನಿರ್ದೇಶಕರಾದ ವೈಶಾಕ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಮಿಥುನ್ ಮ್ಯಾನುವಲ್ ಥಾಮಸ್ ಬರವಣಿಗೆ ಇದೆ. ‘ಮಮ್ಮೂಟಿ ಕಂಪನಿ’ ನಿರ್ಮಿಸಿರುವ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಜೊತೆ ಅಂಜನ ಜಯಪ್ರಕಾಶ್, ತೆಲುಗಿನ ಸುನಿಲ್, ಶಬರೀಶ್ ವರ್ಮಾ, ದಿಲೀಶ್ ಪೋತನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

‘ಒಂದು ಮೊಟ್ಟೆಯ ಕತೆ’ಯ ತಾಜಾ ಕತೆಯೊಂದಿಗೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟವರು ರಾಜ್‌ ಬಿ ಶೆಟ್ಟಿ. ಚೊಚ್ಚಲ ಚಿತ್ರದಲ್ಲೇ ತಾವೊಬ್ಬ ಅತ್ಯುತ್ತಮ ನಟ, ನಿರ್ದೇಶಕ ಎಂದು ಕರೆಸಿಕೊಂಡರು. ಇದಾದ ನಂತರ ನಟನಾಗಿ ಹಲವು ಚಿತ್ರಗಳಲ್ಲಿ ನಟಿಸಿದರು. ಮುಂದೆ ಅವರ ಪ್ರತಿಭೆ ಮತ್ತಷ್ಟು ಬೆಳಗಿದ್ದು ‘ಗರುಡ ಗಮನ ವೃಷಭ ವಾಹನ’ ಚಿತ್ರದಲ್ಲಿ. ಅವರು ನಟಿಸಿ – ನಿರ್ದೇಶಿಸಿದ ಈ ಕ್ರೈಂ – ಥ್ರಿಲ್ಲರ್‌ ಸಿನಿಮಾ cult ಎನಿಸಿಕೊಂಡಿತು. ಭಾರತದ ಖ್ಯಾತ ಚಿತ್ರನಿರ್ದೇಶಕರು ಸಿನಿಮಾ ಮೆಚ್ಚಿ ತಲೆದೂಗಿದರು. ಕಳೆದ ವರ್ಷ ತೆರೆಕಂಡ ಅವರ ‘ಟೋಬಿ’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರಕ್ಕೆ ವಿಮರ್ಶಕರ ಮೆಚ್ಚುಗೆ ಸಿಕ್ಕರೂ ಥಿಯೇಟರ್‌ನಲ್ಲಿ ಬೆಂಬಲ ಸಿಗಲಿಲ್ಲ. ‘ಟರ್ಬೋ’ ಚಿತ್ರದ ಮೂಲಕ ಅವರು ತಮ್ಮ ಪರಿಧಿಯನ್ನು ವಿಸ್ತರಿಸುತ್ತಿದ್ದಾರೆ. ಈ ಸಿನಿಮಾ ಅವರ ವೃತ್ತಿ ಬದುಕಿಗೆ ಮಹತ್ವದ ತಿರುವಾಗಲಿದೆ ಎಂದೇ ಹೇಳಲಾಗುತ್ತಿದೆ.

LEAVE A REPLY

Connect with

Please enter your comment!
Please enter your name here