ಮಕ್ಕಳ ಸಂಸಾರದ ವ್ಯಾಜ್ಯ ಬಿಡಿಸಲು ಬಂದ ದಂಪತಿಗಳಿಗೆ ತಮ್ಮದೇ ದಾಂಪತ್ಯದ ಒಳನೋಟ ದಕ್ಕುತ್ತಾ ಹೋಗುತ್ತದೆ. ತಾವು ಎಲ್ಲಿ ಎಡವಿದ್ದೇವೆ ಎಂದು ತಿಳಿಯುತ್ತದೆ. ಮೂರೂ ಜೋಡಿಗಳ ನಡುವಿನ ಸಂಬಂಧಗಳ ಮಜಲು ಸಾಮಾನ್ಯ ಜನಜೀವನದಲ್ಲಿ ನಡೆಯುವಂತದ್ದೇ ಆದ್ದರಿಂದ ವೀಕ್ಷಕ ತನ್ನನ್ನು ತಾನೇ ಕಥೆಯಲ್ಲಿ ನೋಡಿಕೊಳ್ಳುತ್ತಾ ಹೋಗುತ್ತಾನೆ. ‘ಮಾಸ್ಟರ್‌ಪೀಸ್‌’ ಮಲಯಾಳಂ ಸರಣಿ DisneyPlus Hotstarನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಶ್ರೀಜಿತ್ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಸ್ಯ ಸರಣಿ ‘ಮಾಸ್ಟರ್ ಪೀಸ್’. ಹಿಂದಿನ ಮತ್ತು ಇಂದಿನ ತಲೆಮಾರಿನ ಸಂಬಂಧಗಳ ಕತೆಯಿದು. ಈಗಾಗಲೇ ಈ ಸರಣಿಯ ಕುರಿತಾಗಿ ವೀಕ್ಷಕರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸರಣಿಯಲ್ಲಿ ನಿತ್ಯ ಮೆನನ್ ಮತ್ತು ಶರಾಫುದ್ದೀನ್ ಮುಖ್ಯ ಪಾತ್ರಗಳಲ್ಲಿ ಇದ್ದಾರೆ. ಒಟ್ಟು 5 ಸಂಚಿಕೆಗಳನ್ನು ಈ ಸರಣಿ ಹೊಂದಿದೆ. ಸರಣಿ ಹೇಗಿದೆ ನೋಡೋಣ ಬನ್ನಿ.

ಈ ಸರಣಿಯ ಪ್ರೊಮೊ ವೀಡಿಯೊಗಳು, ಟೀಸರುಗಳು ಶುರುವಾದಾಗಲೇ ಇದೊಂದು ಹಾಸ್ಯಮಯ ಸರಣಿ ಎನ್ನುವ ಅಂಶ ಸಾಬೀತಾಗಿತ್ತು ಆದರೆ ಇಷ್ಟೊಂದು ಅತಿರೇಕದ ಹಾಸ್ಯ ಮತ್ತು ಅಭಿನಯ ಇರಬಹುದು ಎಂಬ ಕಲ್ಪನೆ ಇರಲಿಕ್ಕಿಲ್ಲ. ಸರಣಿ ಆರಂಭದಲ್ಲೇ ಮೊದಲನೇ ಸಂಚಿಕೆಯಲ್ಲೇ ಇದರಲ್ಲಿ ಏನಿರಬಹುದು ಎನ್ನುವ ಬಗ್ಗೆ ಒಂದು ಸೂಚನೆ ಸಿಕ್ಕಿಬಿಡುತ್ತದೆ. ಹಾಸ್ಯದ ನಾಗಾಲೋಟಕ್ಕೆ ಪ್ರೇಕ್ಷಕರನ್ನು ನಿರ್ದೇಶಕರು ಸಿದ್ಧಪಡಿಸುತ್ತಾ ಹೋಗುತ್ತಾರೆ.

ರಿಯಾ ಮತ್ತು ಬಿನೋಯ್ ಇಬ್ಬರೂ ದಂಪತಿಗಳು. ಅವರವರದ್ದೇ ಸಮಸ್ಯೆಯ ಸುಳಿಯಲ್ಲಿ ಇರುವವರು. ಶುರುವಿನಲ್ಲೇ ಗಂಡ ಹೆಂಡಿರ ಜಗಳದೊಂದಿಗೆ ಇವರಿಬ್ಬರ ಪಾತ್ರ ಪರಿಚಯವಾಗುತ್ತದೆ. ರಿಯಾ, ಬಿನೋಯ್‌ಗೆ ಚಾಕು ತೋರಿಸಿ ಹೆದರಿಸುವ ಮಟ್ಟಕ್ಕೂ ಹೋಗುತ್ತಾಳೆ. ವಿಷಯ ಎಲ್ಲೆ ಮೀರುತ್ತಿದ್ದಂತೆ ಇಬ್ಬರ ಅಪ್ಪ ಅಮ್ಮನ ಮನೆಗೆ ವಿಚಾರ ತಿಳಿದು ಜಗಳ ಇತ್ಯರ್ಥ ಮಾಡುವ ಉದ್ದೇಶದಿಂದ ಬಂದಿಳಿಯುತ್ತಾರೆ.

ರಿಯಾಳ ತಂದೆ ಕುರಿಯನ್ ಮತ್ತು ಬಿನೋಯ್ ತಾಯಿ ಅನ್ನಿಯಮ್ಮ ಬಹಳ ಹಠಮಾರಿ ಸ್ವಭಾವದವರು. ತಮ್ಮ ಇಚ್ಛೆಯ ಪ್ರಕಾರವೇ ಮಕ್ಕಳು ವರ್ತಿಸಬೇಕೆಂದು ಪಟ್ಟು ಹಿಡಿಯುವವರು. ಇವರಿಬ್ಬರ ನಡುವಿನ ಸಂಘರ್ಷವೇ ಅತಿಯಾಗಿ ಇಬ್ಬರೂ ಅವರವರ ಪಂಗಡದವರೇ ಶ್ರೇಷ್ಠ ಎನ್ನುವುದನ್ನು ಸಾಬೀತು ಮಾಡಲು ನಿಲ್ಲುತ್ತಾರೆ. ರಿಯಾಳ ತಾಯಿ ಲೀಸಮ್ಮ ಮತ್ತು ಬಿನೋಯ್ ತಂದೆ ಚಂಡಿಚಾನ್ ಅವರವರ ಸಂಗಾತಿಗಳ ದರ್ಪ ಮತ್ತು ದರ್ಬಾರಿಗೆ ಮಣಿದು ಅವರು ಹೇಳಿದಂತೆ ಕುಣಿಯುವ ಕೈಗೊಂಬೆಗಳಾಗಿರುತ್ತಾರೆ.

ಇಲ್ಲಿರುವ ಮೂರೂ ಜೋಡಿಗಳೂ ತಮ್ಮಗಳ ನಡುವೆ ಇಷ್ಟೆಲ್ಲ ಸಂಘರ್ಷಗಳು ಇದ್ದರೂ ಹೊರಗಿನ ಪ್ರಪಂಚಕ್ಕೆ ತಮ್ಮನ್ನು ಬಿಟ್ಟರೆ ಇಲ್ಲ, ತಾವು ಬಹಳ ಸಂತೋಷವಾಗಿದ್ದೇವೆ ಎನ್ನುವ ರೀತಿ ಬಿಂಬಿಸಿಕೊಂಡಿರುತ್ತಾರೆ. ಇಲ್ಲಿ ನಿರ್ದೇಶಕರಿಗೆ ನಿರ್ವಹಿಸಲು ಸಾಕಷ್ಟು ವಿಚಾರಗಳಿದ್ದು ಅವರು ಆಯ್ಕೆ ಮಾಡಿರುವ ಚಿತ್ರಕತೆಯ ವಿನ್ಯಾಸ ಬಹಳ ಸೂಕ್ತವಾಗಿ ಮೂಡಿಬಂದಿದೆ. ರಿಯಾ ಮತ್ತು ಬಿನೋಯ್ ಇಬ್ಬರೂ ಬೇರೆ ಬೇರೆ ಪಂಗಡಗಳಿಂದ ಬಂದವರಾದರೂ ಪ್ರೀತಿಸಿ ಮದುವೆಯಾಗಿರುತ್ತಾರೆ. ತಮ್ಮ ನಡುವೆ ಸಂಬಂಧ ಗಟ್ಟಿಯಾಗಿರಬೇಕು ಎಂದರೆ ಸೂಕ್ತವಾದ ಸಂಭಾಷಣೆ ಮತ್ತು ವಿಚಾರ ವಿನಿಮಯ ಅಗತ್ಯ. ಅದಕ್ಕೇ ಹೊಡೆತ ಬಿದ್ದಾಗ ಸಮಸ್ಯೆಗಳು ಶುರುವಾಗುತ್ತವೆ.

ಇಲ್ಲಿ ರಿಯಾ ಮತ್ತು ಬಿನೋಯ್ ತಂದೆತಾಯಿಗಳನ್ನು ಗಮನಿಸಿದಾಗ ಅವರುಗಳು ಪರಸ್ಪರ ಯಾವುದೇ ರೀತಿಯ ಹೊಂದಾಣಿಕೆ ಇಲ್ಲದಿದ್ದರೂ ಸಮಾಜದ ಕಟ್ಟುಪಾಡುಗಳಿಗೆ ಹೆದರಿ ಒಬ್ಬರ ಜೊತೆಗೊಬ್ಬರು ಸುಖವಾಗಿರುವ ನಾಟಕ ಮಾಡುತ್ತಾ ಬದುಕು ಸವೆಸುತ್ತಿದ್ದಾರೆ ಎಂದು ನಿಚ್ಚಳವಾಗುತ್ತದೆ. ಆರಂಭದ ಸಂಚಿಕೆ ತುಸು ಅತಿರೇಕದ ಅಭಿನಯ ಎನ್ನಿಸಿದರೂ ಹೋಗುತ್ತಾ ಹೋಗುತ್ತಾ ಅದರ ಓಘ ವೀಕ್ಷಕರಿಗೆ ಕನೆಕ್ಟ್ ಆಗುತ್ತಾ ಹೋಗುತ್ತದೆ. ಮಕ್ಕಳ ಸಂಸಾರದ ವ್ಯಾಜ್ಯ ಬಿಡಿಸಲು ಬಂದ ದಂಪತಿಗಳಿಗೆ ತಮ್ಮದೇ ದಾಂಪತ್ಯದ ಒಳನೋಟ ದಕ್ಕುತ್ತಾ ಹೋಗುತ್ತದೆ. ತಾವು ಎಲ್ಲಿ ಎಡವಿದ್ದೇವೆ ಎಂದು ತಿಳಿಯುತ್ತದೆ. ಮೂರೂ ಜೋಡಿಗಳ ನಡುವಿನ ಸಂಬಂಧಗಳ ಮಜಲು ಸಾಮಾನ್ಯ ಜನಜೀವನದಲ್ಲಿ ನಡೆಯುವಂತದ್ದೇ ಆದ್ದರಿಂದ ವೀಕ್ಷಕ ತನ್ನನ್ನು ತಾನೇ ಕಥೆಯಲ್ಲಿ ನೋಡಿಕೊಳ್ಳುತ್ತಾ ಹೋಗುತ್ತಾನೆ.

ಆದರೆ ಸರಣಿ ಐದೇ ಸಂಚಿಕೆಗಳಿದ್ದರೂ ಸಿಕ್ಕಾಪಟ್ಟೆ ಎಳೆದಂತೆ ಭಾಸವಾಗುತ್ತದೆ. ಕೆಲವು ಸನ್ನಿವೇಶಗಳು ಪುನರಾವರ್ತನೆ ಆದಂತೆ ಎನಿಸಿ ವೀಕ್ಷಕರ ತಾಳ್ಮೆ ಪರೀಕ್ಷೆ ಮಾಡುತ್ತದೆ. ಎಲ್ಲರ ಅಭಿನಯವೇ ಈ ಸರಣಿಯ ಜೀವಾಳ ಮತ್ತು ಎಲ್ಲ ಪಾತ್ರಧಾರಿಗಳೂ ಅವರವರ ಪಾತ್ರಗಳಿಗೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಕ ನಾಯಕಿಯ ಅಭಿನಯ ಚೆನ್ನಾಗಿದೆಯಾದರೂ ಮನಸ್ಸಲಿ ನಿಲ್ಲುವುದು ರಿಯಾ ತಂದೆ ಮತ್ತು ಬಿನೋಯ್ ತಾಯಿಯ ಅಭಿನಯ. ಈ ಎಲ್ಲ ಘಟನೆಗಳಿಗೆ ಮೂಲ ಕಾರಣರಾದ ಫಾದರ್ ಸೇವೋರಿಯಾಸ್ ಅವರ ಅಭಿನಯವಂತೂ ಅಮೋಘ. ಸಾಂದರ್ಭಿಕ ಹಾಸ್ಯ ಮತ್ತು ಅತಿರೇಕದ ನಿರೂಪಣೆ ಈ ಸರಣಿಯ ಜೀವಾಳ. ಕೆಲವು ಭಾಗಗಳು ನಗೆ ಉಕ್ಕಿಸಿದರೂ ಕೆಲವು ಬೋರ್ ಹೊಡೆಸುತ್ತವೆ. ಸಂಕಲನ ಸ್ವಲ್ಪ ಚುರುಕಾಗಿ ಇದ್ದಿದ್ದರೆ ಸರಣಿ ಬಹುಶಃ ಇನ್ನೂ ಆಸಕ್ತಿಕರವಾಗಿ ಇರುತ್ತಿತ್ತು. ಆದರೂ ‘ಮಾಸ್ಟರ್ ಪೀಸ್’ ಒಮ್ಮೆ ನೋಡಲು ಅಡ್ಡಿಯಿಲ್ಲ. ‘ಮಾಸ್ಟರ್‌ಪೀಸ್‌’ ಸರಣಿ DisneyPlus Hotstarನಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here