ಶ್ರೀಲೇಶ್ ಎಸ್ ನಾಯರ್ ನಿರ್ದೇಶನದ ‘ಪೆಪೆ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಲವರ್ ಬಾಯ್ ಇಮೇಜಿನ ಪಾತ್ರಗಳಲ್ಲಿ ನಟಿಸುತ್ತಿದ್ದ ವಿನಯ್ ರಾಜಕುಮಾರ್ ಅವರಿಗೆ ಇಲ್ಲಿ ರಗಡ್ ಪಾತ್ರವಿದೆ. ರಕ್ತ – ಸಿಕ್ತ ಸನ್ನಿವೇಶಗಳ ಟ್ರೇಲರ್ ಚಂದನವನದಲ್ಲಿ ಹೊಸ ಥರದ ಕತೆಯನ್ನೇನೋ ಹೇಳುವಂತಿದೆ.
‘ವಿನಯ್ ಮನೆಗೆ ಬಂದು ನನಗೆ ಟ್ರೇಲರ್ ತೋರಿಸಿದಾಗ ಎದ್ದು ನಿಂತು ಚಪ್ಪಾಳೆ ತಟ್ಟಿದ್ದೇನೆ. ನಾನು ಸುದೀಪ್ ಎನ್ನುವುದಕ್ಕಿಂತ ಹೆಚ್ಚಾಗಿ ಪ್ರೇಕ್ಷಕನಾಗಿ ನನಗೆ ಟ್ರೇಲರ್ ಇಷ್ಟವಾಯ್ತು ಎಂದರೆ ಅದಕ್ಕಿಂತ ಖುಷಿ ಬೇರೆ ಇಲ್ಲ. ನಾನು ಒಬ್ಬ ಆಡಿಯನ್ಸ್. ನನಗೂ ಸಿನಿಮಾ ನೋಡಬೇಕು ಎಂಬ ಆಸೆ ಇರುತ್ತದೆ. ನಾವು ಮಾಡಿರುವ ಸಿನಿಮಾಗಳನ್ನು ಎಂಜಾಯ್ ಮಾಡಲು ಆಗುವುದಿಲ್ಲ. ಪೆಪೆ ಟ್ರೇಲರ್ ನೋಡಿ ಬಹಳಷ್ಟು ಹೆಮ್ಮೆಯಾಗುತ್ತಿದೆ’ ಎಂದರು ನಟ ಸುದೀಪ್. ಮೊನ್ನೆ ‘ಪೆಪೆ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿ ಅವರು ಮಾತನಾಡಿದರು. ಶ್ರೀಲೇಶ್ ಎಸ್ ನಾಯರ್ ನಿರ್ದೇಶನದಲ್ಲಿ ವಿನಯ್ ರಾಜಕುಮಾರ್ ನಟಿಸಿರುವ ‘ಪೆಪೆ’ ಸಿನಿಮಾದ ಟ್ರೇಲರ್ ಭಿನ್ನ ಕಥಾವಸ್ತು, ನಿರೂಪಣೆಯ ಕಾರಣಕ್ಕೆ ಗಮನ ಸೆಳೆಯುತ್ತಿದೆ. ಸೌಮ್ಯ ಸ್ವಭಾವದ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದ ವಿನಯ್ ರಾಜಕುಮಾರ್ ಇಲ್ಲಿ ಸಂಪೂರ್ಣ ಭಿನ್ನ ಅವತಾರದಲ್ಲಿದ್ದಾರೆ.
ತಮ್ಮ ಸಿನಿಮಾ ಬಗ್ಗೆ ಮಾತನಾಡಿದ ವಿನಯ್ ರಾಜಕುಮಾರ್, ‘ಟ್ರೇಲರ್ ರಿಲೀಸ್ ಮಾಡಿಕೊಟ್ಟ ಸುದೀಪ್ ಸರ್‌ಗೆ ಧನ್ಯವಾದ. ಅವರ ಸಲಹೆ – ಸೂಚನೆಗಳು ನಟನಾಗಿ ನನಗೆ ನೆರವಾಗಲಿವೆ. ಅವರ ಮಾತುಗಳಿಂದ ಸಿನಿಮಾ ಕುರಿತು ಇನ್ನೂ ಹೆಚ್ಚಿನ ಕಾನ್ಫಿಡೆನ್ಸ್ ಸಿಕ್ಕಿದೆ. ಪೆಪೆ ಸಿನಿಮಾ ಎರಡು ವರ್ಷದ ಜರ್ನೀ. ಚಿತ್ರದಲ್ಲಿ ತುಂಬಾ ಸ್ಟ್ರಾಂಗ್ ಪಾತ್ರಗಳಿವೆ. ಸಿನಿಮಾ ನೋಡಿ ಹೊರ ಬರುವ ಪ್ರತಿಯೊಬ್ಬರೂ ಪಾತ್ರಗಳ ಬಗ್ಗೆ ಯೋಚನೆ ಮಾಡುತ್ತಾರೆ’ ಎನ್ನುತ್ತಾರೆ. ಎರಡು ನಿಮಿಷ, 44 ಸೆಕೆಂಡ್‌ಗಳ ಟ್ರೇಲರ್‌ನಲ್ಲಿ ಕ್ರೌರ್ಯ, ರಕ್ತ, ಮಚ್ಚು ಹಿಡಿದು ಕೊಚ್ಚುವ ಸನ್ನಿವೇಶಗಳಿವೆ. ಚಿತ್ರದ ನಾಯಕಿಯಾಗಿ ಕಾಜಲ್ ಕುಂದರ್ ನಟಿಸಿದ್ದಾರೆ. ಮಯೂರ್ ಪಟೇಲ್, ಯಶ್ ಶೆಟ್ಟಿ, ಬಲ ರಾಜ್‌ವಾಡಿ, ಮೇದಿನಿ ಕೆಳಮನೆ, ಅರುಣಾ ಬಾಲರಾಜ್, ನವೀನ್ ಡಿ. ಪಡೀಲ್ ತಾರಾಬಳಗದಲ್ಲಿದ್ದಾರೆ. ಉದಯ್ ಶಂಕರ್ ಎಸ್ ಮತ್ತು ಬಿ ಎಮ್ ಶ್ರೀರಾಮ್ ನಿರ್ಮಾಣದ ಸಿನಿಮಾ ಆಗಸ್ಟ್ 30ಕ್ಕೆ ರಿಲೀಸ್ ಆಗುತ್ತಿದೆ. ಪೂರ್ಣಚಂದ್ರ ತೇಜಸ್ವಿ ಸಂಗೀತ, ಅಭಿಷೇಕ್ ಕಾಸರಗೋಡು ಛಾಯಾಗ್ರಹಣ, ರವಿವರ್ಮ, ಚೇತನ್ ಡಿಸೋಜಾ, ಡಿಫರೆಂಟ್ ಡ್ಯಾನಿ, ನರಸಿಂಹ ಅವರ ಸಾಹಸ ಸಂಯೋಜನೆ ಚಿತ್ರಕ್ಕಿದೆ.