ನಾಗಶೇಖರ್‌ ನಿರ್ದೇಶನದ ‘ಸಂಜು ವೆಡ್ಸ್‌ ಗೀತಾ 2’ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಎರಡು ಹಾಡುಗಳನ್ನು ಚಿತ್ರಿಸಿಕೊಂಡು ಬಂದಿದೆ. ಚಿತ್ರದ ನಿರ್ಮಾಪಕ ಛಲವಾದಿ ಕುಮಾರ್‌ ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡ ಮೇಕಿಂಗ್‌ ವೀಡಿಯೋ ಬಿಡುಗಡೆ ಮಾಡಿದೆ. ಇದೇ ವರ್ಷ (2024) ಏಪ್ರಿಲ್‌ 1ರಂದು ಸಿನಿಮಾ ತೆರೆಕಾಣಲಿದೆ.

ಯಶಸ್ವೀ ‘ಸಂಜು ವೆಡ್ಸ್‌ ಗೀತಾ’ ಸಿನಿಮಾದ ಸರಣಿ ‘ಸಂಜು ವೆಡ್ಸ್‌ ಗೀತಾ 2’ಗೆ ನಾಲ್ಕು ತಿಂಗಳ ಹಿಂದೆ ಚಾಲನೆ ಸಿಕ್ಕಿತ್ತು. ಇದೀಗ ಚಿತ್ರಕ್ಕೆ ಎರಡು ಹಂತದ ಚಿತ್ರೀಕರಣ ನಡೆದಿದೆ. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಎರಡು ಹಾಡುಗಳನ್ನು ಚಿತ್ರಿಸಿಕೊಂಡು ಬಂದಿದೆ ಚಿತ್ರತಂಡ. ಚಿತ್ರದ ನಿರ್ಮಾಪಕ ಛಲವಾದಿ ಕುಮಾರ್‌ ಜನ್ಮದಿನದ ಅಂಗವಾಗಿ ಅಲ್ಲಿನ ಮೇಕಿಂಗ್‌ ವೀಡಿಯೋ ಬಿಡುಗಡೆ ಮಾಡಿದ್ದಾರೆ ನಿರ್ದೇಶಕ ನಾಗಶೇಖರ್‌. ಕವಿರಾಜ್‌ ಗೀತರಚನೆಯ ಈ ಹಾಡುಗಳಿಗೆ ಶ್ರೀಧರ್‌ ವಿ ಸಂಭ್ರಮ್‌ ಸಂಗೀತ ಸಂಯೋಜನೆಯಿದೆ. ಸ್ವಿಟ್ಜರ್‌ಲ್ಯಾಂಡ್‌ನ ಸುಂದರ ಲೊಕೇಶನ್‌ಗಳನ್ನು ಸತ್ಯ ಹೆಗಡೆ ಸೆರೆಹಿಡಿದಿದ್ದಾರೆ. ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್‌ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದರೆ ರಂಗಾಯಣ ರಘು, ಅರುಣ್‌ ಸಾಗರ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ.

ನಿರ್ದೇಶಕ ನಾಗಶೇಖರ್ ಈ ಹಿಂದೆ ‘ಸಂಜು ವೆಡ್ಸ್ ಗೀತಾ’ ಸಿನಿಮಾ ಮಾಡುವಾಗಿನ ಅನುಭವಗಳನ್ನು ಮೆಲುಕು ಹಾಕಿದರು. ‘ಈ ಚಿತ್ರ ಅದಕ್ಕಿಂತ ವೈಭವಯುತವಾಗಿ ಮೂಡಿಬರುತ್ತಿದೆ. ಸ್ವಿಟ್ಜರ್‌ಲ್ಯಾಂಡ್‌ ಚಿತ್ರೀಕರಣ ಪೂರ್ಣಗೊಂಡಿದೆ. ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ಸಿಕ್ಕ ಯಶಸ್ಸಿನಿಂದಲೇ ಭಾಗ ಎರಡು ಇಷ್ಟು ಅದ್ದೂರಿಯಾಗಿ ಮೂಡಿಬರುತ್ತಿದೆ. ಈ ಕನಸಿಗೆ ನನ್ನ ಎಂಜಿನಿಯರಿಂಗ್ ಕ್ಲಾಸ್‌ಮೇಟ್‌ ಕುಮಾರ್ ಕೈಜೋಡಿಸಿದ್ದಾರೆ. 2024ರ ಬ್ಲಾಕ್ ಬಸ್ಟರ್ ಚಿತ್ರವಾಗಿ ಸಂಜು ವೆಡ್ಸ್ ಗೀತಾ ಮೂಡಿಬರಲಿದೆ. ಮುಂದಿನ ಹಂತದ ಚಿತ್ರೀಕರಣ ಮುಂಬಯಿ, ಹೈದರಾಬಾದ್‌ನಲ್ಲಿ ನಡೆಯಲಿದೆ. 2024ರ ಏಪ್ರಿಲ್ 1ರಂದು ಚಿತ್ರವನ್ನು ರಿಲೀಸ್ ಮಾಡಲಿದ್ದೇವೆ’ ಎನ್ನುತ್ತಾರೆ ನಾಗಶೇಖರ್‌.

ನಾಯಕಿ ರಚಿತಾ ರಾಮ್, ‘ತುಂಬಾ ಶೇಡ್ಸ್ ಇರುವಂಥ ಗೀತಾ ಪಾತ್ರ ನನ್ನದು. ಸಿನಿಮಾ ಅಂದ್ರೆ ಖುಷಿ, ಕಷ್ಟ ಎರಡೂ ಇರುತ್ತೆ. ನಾವು ಹೋಗಿದ್ದೇ ಡಿಸೆಂಬರ್ ಚಳಿಯಲ್ಲಿ. ನಾಗಶೇಖರ್ ಏನು ಮಾಡಿದರೂ ಪ್ಲಾನ್ಡ್ ಆಗಿ ಮಾಡ್ತಾರೆ. ನಮಗೆ ನೇಚರ್ ಕೂಡ ತುಂಬಾ ಸಪೋರ್ಟ್ ಮಾಡಿತು. ಅಲ್ಲಿನ ಲೊಕೇಶನ್‌ಗಳನ್ನು ಛಾಯಾಗ್ರಾಹಕ ಸತ್ಯ ಹೆಗಡೆ ವಿಶಿಷ್ಟವಾಗಿ ಸೆರೆಹಿಡಿದಿದ್ದಾರೆ. ಎಮೋಷನಲ್ ಸೀನ್ಸ್ ಇನ್ಟೆನ್ಸ್ ಆಗಿ ಮೂಡಿಬಂದಿವೆ’ ಎನ್ನುತ್ತಾರೆ. ಕವಿರಾಜ್‌ ಅವರ ರಚನೆಯ ಐದು ಹಾಡುಗಳಿಗೆ ಶ್ರೀಧರ ವಿ ಸಂಭ್ರಮ್‌ ಸಂಗೀತ ಸಂಯೋಜಿಸಿದ್ದಾರೆ. ನಾಗಶೇಖರ್ ಮೂವೀಸ್ ಹಾಗೂ ಪವಿತ್ರ ಇಂಟರ್‌ನ್ಯಾಷನಲ್ ಮೂವೀ ಮೇಕರ್ಸ್ ಸಹಯೋಗದೊಂದಿಗೆ ಮಹಾನಂದಿ ಕ್ರಿಯೇಶನ್ಸ್ ನಿರ್ಮಿಸುತ್ತಿರುವ ಚಿತ್ರಕ್ಕೆ ನಾಗಶೇಖರ್ ಅವರೇ ಕಥೆ, ಚಿತ್ರಕಥೆ ರಚಿಸಿದ್ದಾರೆ.

LEAVE A REPLY

Connect with

Please enter your comment!
Please enter your name here