ಟೀವಿ ಎಂದರೆ ಎಲೆಕ್ಟ್ರಾನಿಕ್ ಗ್ಯಾಜೆಟ್ ಮಾತ್ರವಲ್ಲ, ಅದು ಜನರು ಮತ್ತು ಹೊರಜಗತ್ತನ್ನು ಬೆಸೆಯುವ ಕೊಂಡಿ. ಟೀವಿಯ ಜತೆ ನಮ್ಮ ಬಾಂಧವ್ಯವೇ ಅಂಥದ್ದು. ಮನರಂಜನೆಯ ಜತೆಗೆ ಜಗತ್ತಿನ ಆಗುಹೋಗುಗಳ ಬಗ್ಗೆ ತಿಳಿಸುವ ಟೀವಿಯ ಮಹತ್ವವನ್ನು ತಿಳಿಸಲು ‘ವಿಶ್ವ ದೂರದರ್ಶನ ದಿನ’ವನ್ನು ಆಚರಿಸಲಾಗುತ್ತದೆ.
ನಾವು ಚಿಕ್ಕವರಿದ್ದಾಗ ಟೀವಿ ರಿಮೋಟ್‌ಗಾಗಿ ಜಗಳವಾಡುತ್ತಿದ್ದೆವು. ಜೋರು ಗಾಳಿ ಮಳೆ ಬಂದರೆ ಟೀವಿ ಸರಿಯಾಗಿ ಕಾಣಿಸುತ್ತಿರಲಿಲ್ಲ. ಗಾಳಿಯ ರಭಸಕ್ಕೆ ಮನೆಯ ಟೆರೇಸ್ ಮೇಲೆ ಇದ್ದ ಆಂಟೆನಾ ಬೇರೆಲ್ಲೋ ತಿರುಗಿದರೆ ಅದನ್ನು ಸರಿಯಾಗಿ ಸಿಗ್ನಲ್ ಸಿಗುವಂತೆ ಮಾಡುವುದು ಕೂಡಾ ಒಂದು ಕೆಲಸವಾಗಿತ್ತು. ನಮ್ಮಿಷ್ಟದ ಶೋ, ಧಾರಾವಾಹಿ ಸಿನಿಮಾಗಳನ್ನು ನೋಡಲು ಟೀವಿ ಪರದೆಯ ಮುಂದೆ ಕಣ್ಣು ನೆಟ್ಟು ಕಾದು ಕುಳಿತಿರುತ್ತಿದ್ದೆವು. ಮನೆಮಂದಿಯೆಲ್ಲ ಜತೆಯಾಗಿ ಕುಳಿತುಕೊಂಡು ನೋಡುವ ಸಿನಿಮಾಗಳಿದ್ದವು, ಧಾರಾವಾಹಿಗಳಿದ್ದವು. ಕ್ರಿಕೆಟ್, ಫುಟ್ಬಾಲ್, ಒಲಂಪಿಕ್ಸ್, ಏಷ್ಯನ್ ಗೇಮ್ಸ್ ಯಾವುದೇ ಇರಲಿ ಎಲ್ಲವನ್ನೂ ನೋಡಿ ಆನಂದಿಸುತ್ತಿದ್ದೆವು. ವಿಶೇಷ ದಿನಗಳಲ್ಲಿ ಸ್ಪೆಷಲ್ ಕಾರ್ಯಕ್ರಮಗಳಿಗಾಗಿ ಎದುರು ನೋಡುತ್ತಿದ್ದೆವು. 90ರ ದಶಕದಲ್ಲಿ ಟೀವಿಯ ಮುಂದೆ ಹೆಚ್ಚಿನ ಸಮಯ ಕಳೆದವರಿಗೆ ಇದೆಲ್ಲವೂ ಸುಂದರ ನೆನಪುಗಳು. ಆಗ ರೇಡಿಯೋ ನಂತರ ಜನರನ್ನು ಅತಿಯಾಗಿ ಪ್ರಭಾವಿಸಿದ ಮಾಧ್ಯಮವಾಗಿತ್ತು ಟೀವಿ.
1930ರ ದಶಕದಲ್ಲಿ ಬ್ರಿಟನ್ ಮತ್ತು ಅಮೆರಿಕದಲ್ಲಿ ದೂರದರ್ಶನ ಪ್ರಸಾರ ಆರಂಭಿಸಿತು. ಭಾರತದಲ್ಲಿ 1959 ಸೆಪ್ಟೆಂಬರ್ 15ರಂದು ದೆಹಲಿಯ ಆಕಾಶವಾಣಿ ಭವನದ ಒಂದು ಚಿಕ್ಕ ಕೊಠಡಿಯಲ್ಲಿ ಇದು ಪ್ರಾರಂಭವಾಯಿತು. 1976ರ ಹೊತ್ತಿಗೆ ಎಂಟು ದೂರದರ್ಶನ ಕೇಂದ್ರಗಳು ತಲೆ ಎತ್ತಿದ್ದವು. ಎರಡೂವರೆ ದಶಕಗಳ ಬ್ಲಾಕ್ ಆಂಡ್ ವೈಟ್ ಪ್ರಸರಣದ ನಂತರ 15 ಆಗಸ್ಟ್ 1982ರಂದು ಭಾರತದಲ್ಲಿ ಕಲರ್ ಪ್ರಸರಣ ಬಂತು. ‘ರಾಮಾಯಣ’, ‘ಮಹಾಭಾರತ’ ಮತ್ತು ‘ಹಮ್ ಲೋಗ್’ನಂತಹ ಜನಪ್ರಿಯ ಧಾರಾವಾಹಿಗಳು ಜನರನ್ನು ಟೀವಿ ಹತ್ತಿರ ಕೂರುವಂತೆ ಮಾಡಿದವು.
‘ರಂಗೋಲಿ’ ಮತ್ತು ‘ಚಿತ್ರಹಾರ್’ ಕಾರ್ಯಕ್ರಮಕ್ಕಾಗಿ ಜನರು ಕಾದು ಕುಳಿತಿರುತ್ತಿದ್ದರು. ‘ಭಾರತ್ ಏಕ್ ಖೋಜ್’, ‘ಸುರಭಿ’, ‘ಜಂಗಲ್ ಬುಕ್’, ‘ಶಕ್ತಿಮಾನ್’ ಮೊದಲಾದ ಕಾರ್ಯಕ್ರಮಗಳನ್ನು ಮರೆಯುವುದುಂಟೇ? ತೊಂಬತ್ತರ ದಶಕದ ಆರಂಭದಲ್ಲಿ ಖಾಸಗಿ ವಾಹಿನಿಗಳು ಲಗ್ಗೆ ಇಟ್ಟವು. ಲೈವ್ ಟೆಲಿಕಾಸ್ಟ್ ಬಂದ ಮೇಲೆ ಸುದ್ದಿ ವಾಹಿನಿಗಳ ಬಗ್ಗೆ ಜನರ ಆಸಕ್ತಿಯೂ ಹೆಚ್ಚುತ್ತಾ ಹೋಯಿತು. ಪ್ರಸ್ತುತ ಭಾರತದಲ್ಲಿ 892 ಸ್ಯಾಟಲೈಟ್ ಚಾನೆಲ್‌ಗಳಿವೆ. ಇವುಗಳಲ್ಲಿ 403 ಸುದ್ದಿ ವಾಹಿನಿಗಳು ಮತ್ತು 489 ಮನರಂಜನಾ ವಾಹಿನಿಗಳು. 2023ರಲ್ಲಿ ಭಾರತೀಯ ದೂರದರ್ಶನ ಉದ್ಯಮವು ಚಂದಾದಾರಿಕೆ ಮತ್ತು ಜಾಹೀರಾತು ಆದಾಯದ ಮೂಲಕ 69,600 ಕೋಟಿ ರೂಪಾಯಿ ಗಳಿಸಿದೆ.
ಟೀವಿಯಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳನ್ನಷ್ಟೇ ನೋಡುತ್ತಿದ್ದ ಜಮಾನವಾಗಿತ್ತು ಅದು. ಆಮೇಲೆ ಕೇಬಲ್ ನೆಟ್ವರ್ಕ್ ಬಂತು. ದೂರದರ್ಶನವನ್ನು ಮಾತ್ರ ನೆಚ್ಚಿಕೊಂಡಿದ್ದ ಜನರಿಗೆ ಹತ್ತು ಹಲವು ಚಾನೆಲ್ ಗಳನ್ನು ಬದಲಿಸಿ ನೋಡುವ ಅವಕಾಶ ಸಿಕ್ಕಿತು. ಯಾವಾಗ ಇಂಟರ್ನೆಟ್ ಸುಲಭವಾಗಿ ಸಿಗಲು ಆರಂಭವಾಯಿತೋ ಇದೆಲ್ಲವೂ ಬದಲಾಗುತ್ತಾ ಬಂತು. ಸ್ಮಾರ್ಟ್ ಫೋನ್, ಓಟಿಟಿ ಬಂದ ಮೇಲೆ ಟೀವಿ ನೋಡುವ ಜನರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಲೇ ಬಂತು. ಟೀವಿಯಲ್ಲಿ ನೋಡುತ್ತಿದ್ದ ಎಲ್ಲ ಕಾರ್ಯಕ್ರಮಗಳು ಮೊಬೈಲ್‌ನಲ್ಲೇ ಸಿಕ್ಕಿಬಿಡುತ್ತವೆ. ನಮ್ಮ ಅಭಿರುಚಿಗೆ ತಕ್ಕಂತೆ ಯಾವುದೇ ಕಾರ್ಯಕ್ರಮವನ್ನು ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ ನೋಡಬಹುದು ಎಂಬ ಸ್ವಾತಂತ್ರ್ಯ ಇಲ್ಲಿತ್ತು. ಹಾಗಾಗಿ ಮನರಂಜನೆಗಾಗಿ ಜನರು ಟೀವಿ ಮುಂದೆ ಕೂರುವ ಜರೂರತ್ತು ಇರಲಿಲ್ಲ.
OTT ಮನರಂಜನೆ | ಕಳೆದ ಒಂದು ದಶಕದಲ್ಲಿ ಸ್ಟ್ರೀಮಿಂಗ್ ಸೇವೆಗಳು ನಾವು ಮನರಂಜನೆಯನ್ನು ಆಸ್ವಾದಿಸುವ ವಿಧಾನವನ್ನೇ ಬದಲಾಯಿಸಿವೆ. ನಮ್ಮಿಷ್ಟದ ಕಾರ್ಯಕ್ರಮಗಳನ್ನು ವೀಕ್ಷಿಸಲು ನಾವು ನಮ್ಮ ಟೀವಿ ಚಾನೆಲ್ ಅಥವಾ ಕೇಬಲ್ ಪೂರೈಕೆದಾರರನ್ನು ಅವಲಂಬಿಸಬೇಕಾಗಿಲ್ಲ. ನಾವು ನಮ್ಮಿಷ್ಟದಂತೆ ನಮ್ಮ ಮನೆಯಲ್ಲಿಯೇ ನಮಗೆ ಬೇಕಾದ, ನಾವು ಬಯಸುವ ಕಾರ್ಯಕ್ರಮಗಳನ್ನು ನೋಡಬಹುದು. ಜಾಗತಿಕ ಮಾರುಕಟ್ಟೆಯಲ್ಲಿ, ಓವರ್-ದಿ-ಟಾಪ್ (OTT) ಸೇವೆಗಳಲ್ಲಿ ಭಾರತವು ಮುಂಚೂಣಿಯಲ್ಲಿದ್ದು ಈ ಪ್ರವೃತ್ತಿ ಇನ್ನೂ ವೇಗವಾಗಿ ಬೆಳೆಯುತ್ತಿದೆ. ವೇಗದ ಇಂಟರ್ನೆಟ್ ಮತ್ತು ಕೈಗೆಟುಕುವ ಚಂದಾದಾರಿಕೆ ಬೆಲೆಗಳು ಇತ್ತೀಚಿನ ವರ್ಷಗಳಲ್ಲಿ ಭಾರತದ OTT ಮಾರುಕಟ್ಟೆಯಲ್ಲಿ 20% ಬೆಳವಣಿಗೆಗೆ ಕಾರಣವಾಗಿವೆ. ದೇಶದಲ್ಲಿ ಪ್ರಸ್ತುತ 42 ಕೋಟಿಗೂ ಹೆಚ್ಚು ವೀಕ್ಷಕರು ಮತ್ತು 12 ಕೋಟಿ ಓಟಿಟಿ ಚಂದಾದಾರರಿದ್ದಾರೆ,
ಟೀವಿ ಉದ್ಯಮದ ಮೇಲೆ ಪರಿಣಾಮ | OTT ಪ್ಲಾಟ್‌ಫಾರ್ಮ್‌ಗಳು ಸಾಂಪ್ರದಾಯಿಕ ಟೆಲಿವಿಷನ್ ಉದ್ಯಮದ ಮೇಲೆ ಪರಿಣಾಮ ಬೀರಿದೆ. ಭಾರತೀಯರು ಸರಾಸರಿ 70 ನಿಮಿಷಗಳನ್ನು ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಕಳೆಯುತ್ತಿದ್ದಾರೆ, ಕಳೆದ ಕೆಲವು ವರ್ಷಗಳಿಂದ ಈ ಪ್ರವೃತ್ತಿ ಹೆಚ್ಚುತ್ತಿದೆ. ಕೋವಿಡ್ ಕಾಲದಲ್ಲಿ ಜನರು ಹೆಚ್ಚಾಗಿ ಓಟಿಟಿಯಲ್ಲೇ ಹೆಚ್ಚಿನ ಕಂಟೆಂಟ್ ನೋಡಿದ್ದಾರೆ. ಓಟಿಟಿಯಲ್ಲಿ ಕಾರ್ಯಕ್ರಮ ವೀಕ್ಷಿಸುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಪ್ರಸ್ತುತ ವೀಕ್ಷಣೆ ಅವಧಿ ದಿನಕ್ಕೆ ಸರಾಸರಿ ಎರಡರಿಂದ ಮೂರು ಗಂಟೆ ಆಗಿದೆ.
ಸ್ಟ್ರೀಮಿಂಗ್ ಸೇವೆಗಳು ಹೆಚ್ಚುತ್ತಿದ್ದಂತೆ ಸಾಂಪ್ರದಾಯಿಕ ಟಿವಿ ವೀಕ್ಷಕರ ಸಂಖ್ಯೆ ಕಡಿಮೆಯಾಗುತ್ತಾ ಬರುತ್ತದೆ. ಟೀವಿ ಖರೀದಿ ಮೇಲೆಯೂ ಇದು ಪ್ರಭಾವ ಬೀರಿದೆ. OTT ಪ್ಲಾಟ್‌ಫಾರ್ಮ್‌ಗಳಿರುವ ಸ್ಮಾರ್ಟ್ ಟೀವಿಯತ್ತ ಜನರು ಮುಖ ಮಾಡಿದ್ದಾರೆ. ಸಾಂಪ್ರಾದಾಯಿಕ ಟೀವಿಯನ್ನು ನೆಚ್ಚಿಕೊಂಡಿರುವ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ, ಈ ಚಾನೆಲ್‌ಗಳ ಜಾಹೀರಾತು ಆದಾಯವೂ ಇಳಿಕೆಯಾಗಿದೆ.
ಏಕತೆ ಮತ್ತು ಪ್ರಗತಿಯ ಸಂಕೇತ | ಸಹಬಾಳ್ವೆ ನಡೆಸುತ್ತಿದ್ದರೂ ತಮ್ಮದೇ ಜಗತ್ತಿನಲ್ಲಿ ಮಗ್ನರಾಗುವ ಜನರ ನಡುವೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿಯಾಗಿ ಟೀವಿ ಉಳಿದುಕೊಂಡಿದೆ. ಕ್ರೀಡೆಗಳಲ್ಲಿನ ವಿಜಯೋತ್ಸವ, ರಾಜಕೀಯ ಚರ್ಚೆ ಅಥವಾ ಜನಪ್ರಿಯ ವ್ಯಕ್ತಿಗಳ ಮರಣವಾರ್ತೆಯೇ ಆಗಿರಲಿ ಇಂಥಾ ಮಹತ್ವದ ಘಟನೆಗಳು ನಡೆದಾಗ ಜನರು ಟಿವಿ ಮುಂದೆ ಬಂದು ನಿಲ್ಲುತ್ತಾರೆ. ಚುನಾವಣೆಯ ಹೊತ್ತಲ್ಲಿ ಟಿವಿ ಮಾಧ್ಯಮಗಳು ಮಹತ್ತರ ಪಾತ್ರವನ್ನು ವಹಿಸುತ್ತವೆ. ಅಲ್ಲಿ ಇಲ್ಲಿ ವಿಷಯಗಳನ್ನು ತಿಳಿದುಕೊಂಡರೂ ಟೀವಿಯಲ್ಲೇನಿದೆ ಎಂದು ನೋಡುವ ಕುತೂಹಲ ಜನರಲ್ಲಿ ಇನ್ನೂ ಕಡಿಮೆಯಾಗಿಲ್ಲ.
ವಿಶ್ವ ದೂರದರ್ಶನ ದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಟೀವಿ ಅಂದರೆ ಕೇವಲ ಪರದೆ ಅಲ್ಲ, ಅದೊಂದು ಕ್ರಾಂತಿ. ಅದರ ಜತೆ ನಮ್ಮ ಹಲವು ನೆನಪುಗಳು ಬೆಸೆದುಕೊಂಡಿವೆ. ಇದು ನಮ್ಮ ಸಮಾಜದ ಕನ್ನಡಿ ಹಾಗೂ ಜಗತ್ತಿನೊಂದಿಗೆ ಸಂಪರ್ಕಿಸುವ ಸೇತುವೆ. ಕಾಲಕ್ಕೆ ತಕ್ಕಂತೆ ಇದು ವಿಕಸನಗೊಳ್ಳುತ್ತಿದ್ದರೂ ಈ ಡಿಜಿಟಲ್ ಯುಗದಲ್ಲೂ small screen ನಮ್ಮ ಹೃದಯದಲ್ಲಿ ದೊಡ್ಡ ಸ್ಥಾನವನ್ನು ಹೊಂದಿದೆ.