ನಿನ್ನೆ ಅಭಿಷೇಕ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸೂರಿ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಝಲಕ್ ಬಿಡುಗಡೆಯಾಗಿದೆ. ಈ ಸ್ನೀಕ್‌ಪೀಕ್‌ನಲ್ಲಿ ತಂದೆ ಅಂಬರೀಶ್‌ರನ್ನು ನೆನಪಿಸುತ್ತಿದ್ದಾರೆ ಅಭಿಷೇಕ್‌.

‘ದುನಿಯಾ’ ಸೂರಿ ಅವರ ಚಿತ್ರ ಅಂದ್ರೆ ಅಲ್ಲಿ ಇರೋರೆಲ್ಲ ಬಹುತೇಕ ಬ್ಯಾಡ್ ಪೀಪಲ್. ಹಾಗಾಗಿ ಅವರ ಸಿನಿಮಾದಲ್ಲಿ ಗುಡ್ ವಿಲ್ ಅನ್ನು ನಿರೀಕ್ಷಿಸೋದು ತಪ್ಪಾಗುತ್ತೆ. ಹಾಗಾಗಿ ಈ ಬಾರಿಯೂ ಬ್ಯಾಡ್ ಮ್ಯಾನ್‌ಗಳ ಬ್ಯಾಡ್ ಮ್ಯಾನರ್ಸ್ ಅನ್ನು ತೆರೆಯ ಮೇಲೆ ತೋರಿಸಲು ಹೊರಟಿದ್ದಾರೆ ಸೂರಿ. ಅಂಬರೀಷ್ ಪುತ್ರ ಅಭಿಷೇಕ್ ಈ ಚಿತ್ರದ ನಾಯಕ. ಈಗ ಅಭಿಷೇಕ್ ಅವರ ಹುಟ್ಟುಹಬ್ಬದ ಪ್ರಯುಕ್ತ ಸೂರಿ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಸ್ನೀಕ್ ಪೀಕ್ ಬಿಡುಗಡೆ ಮಾಡಿದ್ದಾರೆ.

https://youtu.be/k2gRhh0chM8

ಸೂರಿ ನಿರ್ದೇಶನದ ಚಿತ್ರದಲ್ಲಿ ಅಭಿಷೇಕ್ ಅಭಿನಯಿಸುತ್ತಾರೆ ಅಂದಾಗಲೇ, ಸಿನಿರಸಿಕರಿಗೆ ಆಪಾರವಾದ ಕುತೂಹಲ ಮೂಡಿತ್ತು. ಆದರೆ ಈ ಚಿತ್ರದ ಬಗ್ಗೆ ಹೆಚ್ಚಿನ ವಿವರಗಳು ತಿಳಿದುಬಂದಿರಲಿಲ್ಲ. ಆದರೆ ಈಗ ಬಿಡುಗಡೆ ಆಗಿರುವ ಸ್ನೀಕ್ ಪೀಕ್ ನೋಡಿ, ಸೂರಿ ಸಿನಿಮಾ ಪ್ರಿಯರಷ್ಟೇ ಅಲ್ಲ ಅಭಿಷೇಕ್ ಪ್ರಿಯರೂ ಕೂಡ ಹುಬ್ಬೇರಿಸಿದ್ದಾರೆ. ಯಾಕಂದ್ರೆ ಈ ವಿಡಿಯೋದಲ್ಲಿ ಅಭಿಷೇಕ್ ಅವರ ಪಾತ್ರದ ಅನಾವರಣವೂ ಆಗಿದೆ. ‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಅಭಿಷೇಕ್ ಅವರದ್ದು ಪೊಲೀಸ್ ಆಫೀಸರ್ ಪಾತ್ರ ಅನ್ನೋದು ಇಲ್ಲಿ ರಿವೀಲ್ ಆಗಿದೆ. ಖಡಕ್ ಆಫೀಸರ್ ಪಾತ್ರದಲ್ಲಿ ಅಭಿಷೇಕ್ ಅವರ ಖದರ್ ಎಲ್ಲರಿಗೂ ಇಷ್ಟವಾಗಿದೆ. ಇಲ್ಲಿರುವ ಮತ್ತೊಂದು ವಿಶೇಷ ಅಂದ್ರೆ, ಅಭಿಷೇಕ್ ತಂದೆ ಅಂಬರೀಷ್ ಒಂದು ಕಾಲದಲ್ಲಿ 24 ಗಂಟೆ ಪೊಲೀಸ್ ಯೂನಿಫಾರ್ಮ್ ಅನ್ನು ಹಾಕ್ಕೊಂಡೇ ಓಡಾಡುತ್ತಿರುವಷ್ಟು. ಅದೇ ಯೂನಿಫಾರ್ಮ್‌ನಲ್ಲೇ ಮಲಗುವಷ್ಟರ ಮಟ್ಟಿಗೆ ಪೊಲೀಸ್ ಪಾತ್ರಗಳಲ್ಲಿ ಕಾಣಿಸಿಕೊಂಡು ಫೇಮಸ್ ಆದವರು. ಒಂದೇ ದಿನದಲ್ಲಿ ಮೂರು ಮೂರು ಪೊಲೀಸ್ ಪಾತ್ರಗಳಿರುವ ಚಿತ್ರಗಳ ಚಿತ್ರೀಕರಣ ಮಾಡಿದ್ದೂ ಉಂಟು.

ಹಾಗಾಗಿ, ಈಗ ಮತ್ತೆ ಅದೇ ಖಾಕಿ ಡ್ರೆಸ್‌ನಲ್ಲಿ ಅವರ ಪುತ್ರನನ್ನು ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅವರ ಈ ಸಂತಸಕ್ಕೆ ಕಾರಣವೂ ಇದೆ. ಯಾಕಂದ್ರೆ ಅಭಿಷೇಕ್ ಇಲ್ಲಿ ಕೇವಲ ತಮ್ಮ ಪಾತ್ರದ ಮೂಲಕ ಗಮನ ಸೆಳೆಯುತ್ತಿಲ್ಲ. ಅವರನ್ನು ಖಾಕಿ ಬಟ್ಟೆಯಲ್ಲಿ ನೋಡಿದವರೆಲ್ಲ, ಅಂಬರೀಷ್ ಅವರೇ ಮತ್ತೆ ಬಂದಿದ್ದಾರೇನೋ ಎಂಬಂತೆ ರೋಮಾಂಚಿತರಾಗಿದ್ದಾರೆ. ವಿಡಿಯೋದಲ್ಲಿ ಥೇಟ್ ಅಪ್ಪನ ಪ್ರತಿರೂಪದಂತೆ ಅಭಿಷೇಕ್ ಕಂಡು ಬಂದಿರೋದು ಅದಕ್ಕೆ ಕಾರಣ. ಅದನ್ನು ನೋಡಿ, ಅಂಬರೀಷ್ ಅವರ ‘ಇನ್ಸ್ಪೆಕ್ಟರ್ ಕ್ರಾಂತಿಕುಮಾರ್’, ‘ಚಕ್ರವ್ಯೂಹ’ ಮುಂತಾದ ಅನೇಕ ಚಿತ್ರಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ ಸಿನಿ ಪ್ರೇಮಿಗಳು. ಒಟ್ಟಿನಲ್ಲಿ ಸೂರಿ ಅವರ ‘ಬ್ಯಾಡ್ ಮ್ಯಾನರ್ಸ್’ ಸ್ನೀಕ್ ಪೀಕ್, ಸದ್ಯಕ್ಕೆ ಗುಡ್ ಹವಾ ಸೃಷ್ಟಿಸಿದೆ.

LEAVE A REPLY

Connect with

Please enter your comment!
Please enter your name here