ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಡಿ ಸತ್ಯಪ್ರಕಾಶ್ ನಿರ್ದೇಶಿಸಿ, ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ‘X&Y’ ಚಿತ್ರದ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರದ ಬಗ್ಗೆ ಮಾತನಾಡುವ ಸತ್ಯಪ್ರಕಾಶ್, ‘ಚಿತ್ರವು ಈಗಿನ ಕಾಲದ ಚಿತ್ರಕಥೆಯಾಗಿದ್ದು, ಅಪ್ಪ- ಅಮ್ಮ ಆದವರ, ಅಪ್ಪ- ಅಮ್ಮ ಆಗುತ್ತಿರುವವರ, ಅಪ್ಪ – ಅಮ್ಮ ಆಗಬೇಕು ಎಂದುಕೊಂಡವರ ಕತೆ. ಹಾಗೆಯೇ ಇವತ್ತಿನ ಹುಡುಗ – ಹುಡುಗಿಯರ ಕತೆ ಕೂಡ. ಇವತ್ತಿನ ಮಕ್ಕಳ ಕತೆ. ಇದೊಂದು ಕಾಮಿಡಿ ಜಾನರ್ ಸಿನಿಮಾ ಆಗಿದ್ದು ಅತಿ ಸೂಕ್ಷ್ಮ ವಿಚಾರಗಳನ್ನು ಅಷ್ಟೇ ಸರಳವಾಗಿ ನಿರೂಪಿಸುತ್ತಿದ್ದೇವೆ. ನಗುನಗುತ್ತಾ ನೋಡುವಂತಹ ಕತೆಯಾಗಿ ನಿಮ್ಮ ಮುಂದೆ ತರುತ್ತಿದ್ದೇವೆ’ ಎಂದಿದ್ದಾರೆ.
ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಯುತ್ತಿದೆ. ವಾಸುಕಿ ವೈಭವ್ ಸಂಗೀತ, ಲವಿತ್ ಛಾಯಾಗ್ರಹಣ, ಬಿ ಎಸ್ ಕೆಂಪರಾಜು ಸಂಕಲನ, ವರದರಾಜ್ ಕಾಮತ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಅಥರ್ವ ಪ್ರಕಾಶ, ಬೃಂದಾ ಆಚಾರ್ಯ, ಅಯನ, ಸುಂದರ್ ವೀಣಾ, ವೀಣಾ ಸುಂದರ್, ದೊಡ್ಡಣ್ಣ ಹೀಗೆ ಹಿರಿಯ ಮತ್ತು ಹೊಸ ಕಲಾವಿದರ ಸಂಗಮ ಚಿತ್ರದಲ್ಲಿದೆ. ‘ಇದು ನಮ್ಮ ಸಂಸ್ಥೆಯ ನಾಲ್ಕನೇ ಸಿನಿಮಾ. ಈ ಹಿಂದಿನ ಮೂರು ಚಿತ್ರಗಳಿಗೆ ನೀವು ತೋರಿದ ಪ್ರೀತಿ, ತಪ್ಪುಮಾಡಿದಾಗ ನೀವು ತಿದ್ದಿದ ರೀತಿ, ಈ ಸಿನಿಮಾದಲ್ಲೂ ಇರಬೇಕು ಎನ್ನುವ ಬೇಡಿಕೆ ನಮ್ಮದು. ಚಿತ್ರದ ಮೊದಲ ಪೋಸ್ಟರನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಾ ನಿಮ್ಮ ಅನಿಸಿಕೆಗಾಗಿ ಎದುರು ನೋಡುತ್ತಿದ್ದೇವೆ’ ಎನ್ನುತ್ತಾರೆ ಸತ್ಯಪ್ರಕಾಶ್.