ಸೆನ್ಸಾರ್ ಮಂಡಳಿ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ಆಸ್ಕರ್ ಕೃಷ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಸಲಗ’ ಚಿತ್ರದ ವಿಷಯದಲ್ಲಿ ಧಾರಾಳವಾಗಿದ್ದ ಸೆನ್ಸಾರ್ ಮಂಡಳಿ ತಮ್ಮ ಚಿತ್ರಕ್ಕೇಕೆ ತೊಂದರೆ ಮಾಡಿತು ಎನ್ನುವುದು ಅವರ ಪ್ರಶ್ನೆ. ಈ ಬಗ್ಗೆ ಅವರು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಒಂದು ಬಹಿರಂಗ ಪತ್ರ ಬರೆದಿದ್ದಾರೆ.

ಸ್ಯಾಂಡಲ್‌ವುಡ್ ನಟ, ನಿರ್ದೇಶಕ ಆಸ್ಕರ್ ಕೃಷ್ಣ ಸುದ್ದಿಯಾಗಿದ್ದಾರೆ. ಅವರು ಈ ಹಿಂದೆಯೂ ಸೆನ್ಸಾರ್ ಮಂಡಳಿಯ ನಡೆಯ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ಬಾರಿ ‘ಸಲಗ’ ಚಿತ್ರವನ್ನು ಉದಾಹರಣೆಯನ್ನಾಗಿ ತೆಗೆದುಕೊಂಡು ಪ್ರಶ್ನೆಗಳನ್ನು ಹಾಕಿದ್ದಾರೆ. ತಮ್ಮ ನಿರ್ದೇಶನದ ಇತ್ತೀಚಿನ ‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡಿಸ್ಬಿಟ್ಟ’ ಚಿತ್ರದ ಸನ್ನಿವೇಶಕ್ಕೆ ಅಗತ್ಯವಿದ್ದ ಸಂಭಾಷಣೆಯನ್ನು ವಿನಾಕಾರಣ ಕಟ್‌ ಮಾಡಿದರು ಎನ್ನುವುದು ಅವರ ದೂರು. ಕೋವಿಡ್ ನಂತರ ಸಲಗ ಮತ್ತು ಕೋಟಿಗೊಬ್ಬ 3 ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ಚೈತನ್ಯ ನೀಡಿದವು ಎಂದು ಹೇಳುತ್ತಲೇ ಅವರು ಸೆನ್ಸಾರ್‌ನ ಇಬ್ಬಗೆ ನೀತಿಯನ್ನು ಪ್ರಶ್ನಿಸುತ್ತಾರೆ. ಅವರ ಪತ್ರದ ಪೂರ್ಣ ಪಾಠ ಇಲ್ಲಿದೆ –

“ಇತ್ತೀಚೆಗೆ ‘ಸಲಗ’ ಸಿನಿಮಾ ನೋಡಿದೆ, ಪ್ರೇಕ್ಷಕರ ಪ್ರತಿಕ್ರಿಯೆ ತುಂಬಾ ಚೆನ್ನಾಗಿತ್ತು. ‘ಕೋಟಿಗೊಬ್ಬ-3’ ಹಾಗೂ ‘ಸಲಗ’ ಚಿತ್ರಗಳು ಕೊರೋನ ಎರಡನೇ ಅಲೆಯ ನಂತರ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಎಳೆದು ತರುವಲ್ಲಿ ಯಶಸ್ವಿಯಾದ ಚಿತ್ರಗಳು. ಇದು ಇಡೀ ಚಿತ್ರರಂಗಕ್ಕೆ ಖುಷಿ ಕೊಡುವಂತಾ ವಿಚಾರ. ಸಲಗ ಸಿನಿಮಾ ಯಶಸ್ಸಿನಲ್ಲಿ ಸೆನ್ಸಾರ್ ಮಂಡಳಿಯ ಪಾಲೂ ಕೂಡ ಹೆಚ್ಚಿದೆ. ಯಾಕೆಂದರೆ ಚಿತ್ರದಲ್ಲಿ ಪ್ರಾರಂಭದಿಂದ ಕೊನೆಯವರೆಗೂ ಕೇಳುವ ‘ಸೆನ್ಸಾರ್ ಆಗಬೇಕಿದ್ದ’ ಹಲವಾರು ಒರಿಜಿನಲ್ ಪದಗಳು ಜನರಿಗೆ ಹೆಚ್ಚು ಕಿಕ್ ಕೊಡುತ್ತವೆ. ಹಾಗೆಯೇ ಕತ್ತರಿಸುವ, ಚುಚ್ಚುವ, ರಕ್ತ ಹರಿಸುವ ದೃಶ್ಯಗಳೂ ಕೂಡ. ಇವುಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕದೇ ಮುಕ್ತವಾಗಿ ಬಿಟ್ಟಿರುವುದು ಚಿತ್ರಕ್ಕೆ ವರವಾಗಿದೆ. ಪರಭಾಷಾ ಚಿತ್ರಗಳಿಗೆ ಪೈಪೋಟಿ ನೀಡುವಲ್ಲಿ ಕನ್ನಡ ಚಿತ್ರಗಳಿಗೆ ಇಂತಹ ಸಡಿಲಕೆ ಸಿಕ್ಕಿದ್ದು ಖುಷಿಯ ವಿಚಾರ. ಯಾಕೆಂದರೆ ಬಹುತೇಕ ಸಂದರ್ಭಗಳಲ್ಲಿ ಸೆನ್ಸಾರ್ ಹಂತದಲ್ಲೇ ಹಲವಾರು ಚಿತ್ರಗಳಿಗೆ ಅನ್ಯಾಯವಾಗುತ್ತಿದ್ದುದು ಬಹತೇಕವಾಗಿ ನಡೆದುಹೋಗಿದೆ. ಈ ನಿಟ್ಟಿನಲ್ಲಿ ‘ಸಲಗ’ ಚಿತ್ರತಂಡ ಸೆನ್ಸಾರ್ ಮಂಡಳಿಗೆ ಆಭಾರಿಯಾಗಿರಲೇಬೇಕು. 

ನನ್ನ ‘ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಚಿತ್ರದಲ್ಲಿ ಪೋಲೀಸರು ಕ್ರಿಮಿನಲ್ ಒಬ್ಬನಿಂದ ಸತ್ಯ ತಿಳಿಯುವ ಸಂದರ್ಭದಲ್ಲಿ ಒಂದು ಕೆಟ್ಟ ಪದಪ್ರಯೋಗ ಮಾಡಿ ವರ್ಕ್ ಶುರು ಮಾಡುತ್ತಾರೆ. ಪೋಲೀಸರು ಕ್ರಿಮಿನಲ್‌ಗಳಿಗೆ ಬಳಸುವ ಸಾಮಾನ್ಯ ಭಾಷೆ ಅದು, ಆದರೂ ಸೆನ್ಸಾರ್ ಮಂಡಳಿ ಅದನ್ನು ಮ್ಯೂಟ್ ಮಾಡುವಂತೆ ಹೇಳಿತು. ಇನ್ನೊಂದು ಸಂದರ್ಭದಲ್ಲಿ ನಾಯಕನ ತಾಯಿ ತನಗಾದ ಅನ್ಯಾಯಕ್ಕೆ ಬೇಸತ್ತು ಹಗ್ಗದಿಂದ ನೇಣು ಹಾಕಿಕೊಳ್ಳುತ್ತಾಳೆ. ಆಗಲೂ ಕೂಡ ಸೆನ್ಸಾರ್ ನವರು ನೇಣು ಹಾಕಿಕೊಂಡಿರುವ ಶಾಟನ್ನು ಬ್ಲರ್ ಮಾಡಲು ಹೇಳಿ ಕೊನೆಗೆ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ಕೊಡುತ್ತಾರೆ. ನನಗೆ ಉರಿದು ಹೋಯಿತು ಅವರ ವರ್ತನೆ ಹಾಗೂ ಜ್ಞಾನವನ್ನು ಖಂಡಿಸಿ ಅವರ ತೀರ್ಪಿನ ವಿರುದ್ಧ ಹೋರಾಡಲು ಸಿದ್ಧನಾದರೂ ನಿರ್ಮಾಪಕರ ಮಾತಿಗೆ ಕಟ್ಟುಬಿದ್ದು ಸುಮ್ಮನಾದೆ. 

‘ಸಲಗ’ ಚಿತ್ರ ನೋಡಿದ ಸೆನ್ಸಾರ್ ಅಧಿಕಾರಿ ಶ್ರೀಮತಿ ‘ಕಿರಣ್ಮಯಿ’ ಯವರೇ ನನ್ನ ಚಿತ್ರವನ್ನೂ ನೋಡಿದ್ದರು. ಆದರೆ ನಮ್ಮ ಚಿತ್ರದ ಒಂದು ಪದಕ್ಕೆ ಕಟ್ ಹೇಳಿದ ಆ ಮಹಾತಾಯಿ ‘ಸಲಗ’ ಚಿತ್ರದ ಅಂತಹ ಬಹಳಷ್ಟು ಪದಗಳನ್ನು ಹೇಗೆ ಬಿಟ್ಟರು? ನ್ಯಾಯ ಮತ್ತು ಕಾನೂನು ಎಲ್ಲರಿಗೂ ಒಂದೇ ಅಲ್ಲವೇ? ಇದನ್ನು ಪ್ರಶ್ನಿಸಲೆಂದೇ ನಾನು ಸೆನ್ಸಾರ್ ಅಧಿಕಾರಿಯಾದ ಕಿರಣ್ಮಯಿಯವರಿಗೆ ಫೋನ್ ಮಾಡಿದೆ, ಆದರೆ ಅವರಿಗೆ ಸಮರ್ಪಕವಾಗಿ ಉತ್ತರಿಸಲು ಸಾಧ್ಯವಾಗಲಿಲ್ಲ. ಅವರ ಧ್ವನಿಯಲ್ಲಿ ಸಿಕ್ಕಿಹಾಕಿಕೊಂಡೆ ಎಂಬ ಭಾವವಿತ್ತು. ನನ್ನ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೇ ತಡಬಡಾಯಿಸುತ್ತಾ.. ನಾನು ಫೋನ್ ನಲ್ಲಿ ಯಾವುದನ್ನೂ ಮಾತನಾಡುವಂತಿಲ್ಲ ಎಂದರು, ನಾನು ಸರಿ ನಿಮ್ಮ ಅಪಾಯಿಂಟ್ ಮೆಂಟ್ ಕೊಡಿ ಅಲ್ಲೇ ಬಂದು ಮಾತನಾಡುತ್ತೇನೆ‌ ಎಂದೆ ಅದಕ್ಕೂ ಒಪ್ಪಲಿಲ್ಲ ಅವರು. ಸೆನ್ಸಾರ್ ಅಧಿಕಾರಿಯಾಗಿ  ಒಬ್ಬ ಚಿತ್ರ ನಿರ್ದೇಶಕ/ನಿರ್ಮಾಪಕನ ಪ್ರಶ್ನೆಗಳಿಗೆ ಉತ್ತರಿಸುವುದು ನಿಮ್ಮ ಕರ್ತವ್ಯ, ನನಗೆ ಕ್ಲಾರಿಫಿಕೇ಼ನ್ ಬೇಕು, ಒಂದು ವೇಳೆ ನಾವು ಮುಂದಿನ ಚಿತ್ರಗಳಲ್ಲಿ ಇಂತಹ ಪದಗಳನ್ನು ಬಳಸಿದರೆ ಅಭ್ಯಂತರ ಇಲ್ಲ ತಾನೆ? ಎಂದು ಪ್ರಶ್ನಿಸಿದೆ.  ಅದಕ್ಕೂ ಅವರು ಉತ್ತರಿಸಲಿಲ್ಲ. ಸಾರ್ ನಾನು ಯಾವುದನ್ನೂ ಫೋನಿನಲ್ಲಿ ಹೇಳಲು ಆಗುವುದಿಲ್ಲ, ನೀವು ಏನು ಕೇಳಬೇಕೋ ಅದನ್ನ ಮೇಲ್ ಮಾಡಿ ಎಂದು ಹೇಳಿ ಜವಾಬ್ದಾರಿಯಿಂದ ನುಣುಚಿಕೊಂಡರು.  ಈ ಹಿಂದೆ ನನಗೆ  ಏನೇ ಕ್ಲಾರಿಫಿಕೇಷನ್ ಬೇಕಿದ್ದರೂ ನೇರವಾಗಿ ಸೆನ್ಸಾರ್ ಅಧಿಕಾರಿಗಳಿಗೇ ಕರೆ ಮಾಡಿ ಮಾಹಿತಿ ಪಡೆದುಕೊಳ್ಳುತ್ತಿದ್ದೆ. ಒಮ್ಮೆ ಕನ್ನಡ ಭಾಷೆ ಹಾಗೂ ನಮ್ಮ ನಾಡಿನ ಸಂಸ್ಕೃತಿಯೇ ಗೊತ್ತಿಲ್ಲದ ಪರಭಾಷೆಯ  ‘ನತಾಷಾ ಡಿಸೋಜ’ ಎಂಬುವವರು ಸೆನ್ಸಾರ್ ಅಧಿಕಾರಿಯಾಗಿ ಬಂದು, ಕನ್ನಡ ಗೊತ್ತಿಲ್ಲದೇ ಕನ್ನಡ ಚಿತ್ರಗಳಿಗೆ  ಮನಬಂದಂತೆ ಪ್ರಮಾಣಪತ್ರ ನೀಡುತ್ತಿದ್ದಾಗಲೂ ಕೂಡ ನಾನು ಆ ವಿಚಾರವಾಗಿ ಧ್ವನಿ ಎತ್ತಿದ್ದೆ. ಆನಂತರ ಅವರು ಆರು ತಿಂಗಳಲ್ಲೇ ವರ್ಗವಾಗಿ ಹೋದರು. ನ್ಯಾಯ ಮತ್ತು ಕಾನೂನು ಎಲ್ಲರಿಗೂ ಒಂದೇ ರೀತಿ ಇರಲಿ. ಮುಂದೆ ಬರುವ ಕನ್ನಡದ ಎಲ್ಲ ಚಿತ್ರಗಳ ಮೇಲೂ ಸೆನ್ಸಾರ್ ಮಂಡಳಿಯ ಕರುಣೆಯ ಕಣ್ಣಿರಲಿ”.

LEAVE A REPLY

Connect with

Please enter your comment!
Please enter your name here