ಯಜಮಾನ ಪ್ರೀಮಿಯರ್ ಲೀಗ್ ಮತ್ತೆ ಬಂದಿದೆ. ಇದು ಅಭಿಮಾನಿಗಳಿಂದ ಅಭಿಮಾನಿಗಳಿಗಾಗಿ ಅಭಿಮಾನಿಗಳಿಗೋಸ್ಕರ ನಡೆಯುವ ಕ್ರಿಕೆಟ್ ಪಂದ್ಯಾವಳಿ. ಎರಡು ದಿನಗಳ ಕಾಲ ನಡೆಯಲಿರುವ ಈ ಪಂದ್ಯಾವಳಿಯ ಜರ್ಸಿ ಬಿಡುಗಡೆಯಾಗಿದೆ.
ಮೇರು ನಟ ದಿವಂಗತ ವಿಷ್ಣುವರ್ಧನ್ ಅವರ ನೆನಪಿನಲ್ಲಿರುವ ನಡೆಯುವ ಯಜಮಾನ ಪ್ರೀಮಿಯರ್ ಲೀಗ್‌ನ (ವೈಪಿಎಲ್ -ಸೀಸನ್ 3) ಮೂರನೇ ಆವೃತ್ತಿಯ ದಿನಾಂಕ ಅನೌನ್ಸ್ ಆಗಿದೆ. ಮೇ 4 ಮತ್ತು 5ರಂದು ಎರಡು ದಿನಗಳ ಕಾಲ ಪಂದ್ಯಾವಳಿ ನಡೆಯಲಿದೆ. ಇತ್ತೀಚೆಗಷ್ಟೇ ನಡೆದ ಕಾರ್ಯಕ್ರಮದಲ್ಲಿ ತಂಡದ ಜರ್ಸಿ ಕೂಡ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ನಟ ಜಯರಾಮ್ ಕಾರ್ತಿಕ್ ವಿಶೇಷ ಅತಿಥಿಯಾಗಿದ್ದರು. ಕಳೆದೆರೆಡು ವರ್ಷಗಳಿಂದ ಯಶಸ್ವಿಯಾಗಿ ವೈಪಿಎಲ್ ನಡೆಸಿಕೊಂಡು ಬರಲಾಗುತ್ತಿದೆ. ಈ ಸಲ ಬೆಂಗಳೂರಿನ ಅಶೋಕ್ ರೈಸಿಂಗ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಪಂದ್ಯಾವಳಿ ನಡೆಯಲಿದೆ. ಈ ಬಾರಿ ISPL ಮಾದರಿಯಲ್ಲಿ ಯಜಮಾನ ಪ್ರೀಮಿಯರ್ ಲೀಗ್‌ಗೆ T10 ಟಚ್ ಕೊಡಲಾಗಿದೆ. ಪ್ರತಿ ತಂಡಗಳಿಗೂ ಮೆಂಟರ್ಸ್‌ಗಳಿದ್ದು, ಶ್ರೇಯಸ್ ಮಂಜು, ಸಿಂಪಲ್ ಸುನಿ, ರೋಷನ್ ಬಚ್ಚನ್, ಜಯರಾಮ್ ಕಾರ್ತಿಕ್ ಸೇರಿದಂತೆ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಸಾಥ್ ಕೊಟ್ಟಿದ್ದಾರೆ.
ಇದೇ ವೇಳೆ ಮಾತನಾಡಿದ ನಟ ಜಯರಾಮ್ ಕಾರ್ತಿಕ್, ‘ವಿಷ್ಣು ಸೇನಾ ಸಮಿತಿಗೆ ವಂದನೆಗಳು. ಇದು ಯಜಮಾನ ಪ್ರೀಮಿಯರ್ ಲೀಗ್‌ನ ಮೂರನೇ ಸೀಸನ್. ಒಂದು ಕ್ರಿಕೆಟ್ ಪಂದ್ಯಾವಳಿ ನಡೆಸುವುದು ಕಷ್ಟ. ಇದೆಲ್ಲಾ ಫ್ಯಾನ್ಸ್ ಸೇರಿಕೊಂಡು ಮೂರು ವರ್ಷದ ಹಿಂದೆ ಶುರು ಮಾಡಿದರು. ಈಗ ಮೂರನೇ ಸೀಸನ್. ನನ್ನ ಪ್ರೀತಿಯ ಅಚ್ಚುಮೆಚ್ಚಿನ ನಟ ವಿಷ್ಣು ಸರ್ ಅವರ ಹೆಸರಿನಲ್ಲಿ ಪಂದ್ಯಾವಳಿ ನಡೆಯುತ್ತಿದೆ. ಯಜಮಾನ ಪ್ರೀಮಿಯರ್ ಲೀಗ್ ಟೈಟಲ್ ಚೆನ್ನಾಗಿದೆ. ಇದು ನಮ್ಮ ಹೃದಯಕ್ಕೆ ಹತ್ತಿರವಾಗಿದೆ. ನಮಗೆ ವಿಷ್ಣು ಸರ್ ಸ್ಫೂರ್ತಿ. ವೈಪಿಎಲ್‌ನಲ್ಲಿ ಭಾಗವಹಿಸಲಿರುವ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್’ ಎಂದರು.
ಯದುನಂದನ್ ಗೌಡ ಮಾತನಾಡಿ, ‘ಯಜಮಾನ ಪ್ರೀಮಿಯರ್ ಲೀಗ್ ಅನ್ನು ಮೂರು ವರ್ಷಗಳ ಹಿಂದೆ ಪುಟ್ಟದಾಗಿ ಶುರು ಮಾಡಿದೆವು. ಪ್ರೀಮಿಯರ್, ಐಪಿಎಲ್ ಅಂತ ಕ್ರಿಕೆಟ್ ಪಂದ್ಯಾವಳಿ ಮಾಡುತ್ತಾರೆ. ನಾವು ಯಾಕೆ ವಿಷ್ಣು ಸರ್ ಹೆಸರಿನಲ್ಲಿ ಮಾಡಬಾರದು ಎಂದು ಅವರ ಹೆಸರಲ್ಲೇ ಆರಂಭಿಸಿದೆವು. ಅಭಿಮಾನಿಗಳ ನಡುವಿನ ಸ್ಟಾರ್ ವಾರ್ ನಿಲ್ಲಿಸಿ, ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ತರುವ ಕೆಲಸವನ್ನು ಯಜಮಾನ ಪ್ರೀಮಿಯರ್ ಲೀಗ್ ಮೂಲಕ ಮಾಡಲಾಗಿದೆ. ನಿಮ್ಮ ಸಹಕಾರ ಇದ್ದರೆ ಈ ಪಂದ್ಯಾವಳಿಯನ್ನು ಮುಂದುವರೆಸಿಕೊಂಡು ಹೋಗುತ್ತೇವೆ’ ಎಂದು ಹೇಳಿದರು. ಸಿನಿಮಾ ತಂಡಗಳನ್ನು ಕಟ್ಟಿಕೊಂಡು ವಿಷ್ಣು ಸದಾ ಕ್ರಿಕೆಟ್ ಆಡುತ್ತಿದ್ದರು. ವೃತ್ತಿಪರ ಕ್ರಿಕೆಟ್ ಆಟಗಾರರ ಜೊತೆಯೂ ಅವರು ಪಂದ್ಯಾವಳಿಗಳನ್ನು ಆಡಿದ್ದೂ ಇದೆ. ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಅವರ ಅಭಿಮಾನಿಗಳು ಕೂಡ ‘ಯಜಮಾನ ಪ್ರೀಮಿಯರ್ ಲೀಗ್’ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜನೆ ಮಾಡುತ್ತಾ ಬಂದಿದ್ದಾರೆ.